ಸೋಮವಾರ, ಮಾರ್ಚ್ 30, 2020
19 °C

ಅಪರಾಧಮುಕ್ತ ರಾಜಕಾರಣ: ಪಕ್ಷಗಳಿಂದ ನೈತಿಕ ಗಟ್ಟಿತನ ನಿರೀಕ್ಷಿಸಬಹುದೇ?

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

‘ಸಭ್ಯರು ರಾಜಕೀಯಕ್ಕೆ ಬರಬೇಕು. ಅಪರಾಧ ಹಿನ್ನೆಲೆ ಉಳ್ಳ ವ್ಯಕ್ತಿಗಳನ್ನು ರಾಜಕೀಯದಿಂದ ದೂರ ಇರಿಸಬೇಕು’ ಎನ್ನುವ ಆಶಯದ ವಿಚಾರದಲ್ಲಿ ಜನಸಾಮಾನ್ಯರಲ್ಲಿ ತಕರಾರೇನೂ ಇರಲಾರದು. ಅತ್ಯಂತ ಗಂಭೀರ ಸ್ವರೂಪದ ಅಪರಾಧ ಎಸಗಿದ ಆರೋಪ ಎದುರಿಸುತ್ತಿರುವವರು ಕೂಡ ಜನಪ್ರತಿನಿಧಿಗಳಾಗಿ ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಕುಳಿತು ಶಾಸನ ರಚಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದನ್ನು ಕಂಡಾಗ ಸಾತ್ವಿಕರ ಮನಸ್ಸಿನಲ್ಲಿ ಕಸಿವಿಸಿ ಉಂಟಾಗುವುದು ಸಹಜ. ಆದರೆ, ಸುಪ್ರೀಂ ಕೋರ್ಟ್‌ ಈಚಿನ ಒಂದು ತೀರ್ಪಿನಲ್ಲಿ ಗುರುತಿಸಿರುವಂತೆ, ಅಪರಾಧ ಎಸಗಿದ ಆರೋಪ ಎದುರಿಸುತ್ತಿರುವವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿರುವುದರ ಪ್ರಮಾಣ ಕಳೆದ ನಾಲ್ಕು ಲೋಕಸಭಾ ಚುನಾವಣೆಗಳ ಅವಧಿಯಲ್ಲಿ ಹೆಚ್ಚುತ್ತಲೇ ಇದೆ.

2004ರಲ್ಲಿ ಲೋಕಸಭೆಯ ಶೇಕಡ 24ರಷ್ಟು ಸದಸ್ಯರು ಕ್ರಿಮಿನಲ್ ಅಪರಾಧ ಎಸಗಿದ ಆರೋಪ ಎದುರಿಸುತ್ತಿದ್ದರು. 2009ರಲ್ಲಿ ಇಂತಹ ಆರೋಪಿ ಸ್ಥಾನದಲ್ಲಿರುವ ಲೋಕಸಭಾ ಸದಸ್ಯರ ಪ್ರಮಾಣ ಶೇಕಡ 30ರಷ್ಟಕ್ಕೆ ಹೆಚ್ಚಿತು. ಇದು, 2014ರಲ್ಲಿ ಶೇಕಡ 34ರಷ್ಟಕ್ಕೆ ಹಾಗೂ 2019ರಲ್ಲಿ ಶೇಕಡ 43ರಷ್ಟಕ್ಕೆ ಬಂದು ತಲುಪಿದೆ. ತಾವು ಮಾಡುವುದೆಲ್ಲವೂ ಜನರಿಗಾಗಿ ಮತ್ತು ಅವರ ಒಳಿತಿಗಾಗಿ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳು, ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವವರನ್ನು ಕಣಕ್ಕಿಳಿಸಬಾರದು ಎಂಬ ತಾತ್ವಿಕ ನಿಲುವು ತಾಳದಿದ್ದುದು ಕಣ್ಣಿಗೆ ರಾಚುವ ವಿರೋಧಾಭಾಸ.

ರಾಜಕೀಯದಿಂದ ಅಪರಾಧಿಗಳನ್ನು ದೂರ ಇರಿಸಬೇಕು ಎಂಬ ಜನಸಾಮಾನ್ಯರ ಆಶಯಕ್ಕೆ ಸ್ಪಂದಿಸುತ್ತಾ ಬಂದಿರುವ ಸಂಸ್ಥೆಗಳ ಪೈಕಿ ಸಂಸತ್ತು ಹಾಗೂ ರಾಜಕೀಯ ಪಕ್ಷಗಳಿಗಿಂತಲೂ ಎತ್ತರದ ಸ್ಥಾನವನ್ನು ದೇಶದ ನ್ಯಾಯಾಂಗ ಪಡೆದುಕೊಂಡಿದೆ. ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳಿಗೆ ಟಿಕೆಟ್ ನಿರಾಕರಿಸುವ ಮೂಲಕ, ರಾಜಕೀಯವನ್ನು ಅಪರಾಧಮುಕ್ತಗೊಳಿಸುವ ಆಶಯವನ್ನು ಸಾಕಾರಗೊಳಿಸುವ ಹೊಣೆಯನ್ನು ರಾಜಕೀಯ ಪಕ್ಷಗಳೇ ವಹಿಸಿಕೊಳ್ಳಬೇಕಿತ್ತು. ಆದರೆ, ಅವು ಈ ಕೆಲಸ ಮಾಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂಬುದನ್ನು ಹೇಳಲು ಹೆಚ್ಚಿನ ಸಂಶೋಧನೆ ಬೇಕಾಗಿಲ್ಲ.

ರಾಜಕೀಯವನ್ನು ಅಪರಾಧಮುಕ್ತಗೊಳಿಸುವ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ ಈಗ ನೀಡಿರುವ ಕೆಲವು ನಿರ್ದೇಶನಗಳು ಇನ್ನಷ್ಟು ನೆರವು ನೀಡುತ್ತವೆ ಎಂಬ ನಿರೀಕ್ಷೆ ಹೊಂದಬಹುದು. ‘ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ವಿಸ್ತೃತ ವಿವರವನ್ನು ತಮ್ಮ ವೆಬ್‌ಸೈಟ್‌ ಮೂಲಕ ಪ್ರಕಟಿಸುವುದು ಕಡ್ಡಾಯ. ಅಪರಾಧದ ಸ್ವರೂಪ ಏನು, ಆ ಅಪರಾಧದ ಆರೋಪಕ್ಕೆ ಸಂಬಂಧಿಸಿದಂತೆ ದೋಷಾರೋಪ ನಿಗದಿ ಆಗಿದೆಯೇ, ಯಾವ ನ್ಯಾಯಾಲಯದಲ್ಲಿ ಅದು ವಿಚಾರಣೆಯ ಹಂತದಲ್ಲಿ ಇದೆ, ಪ್ರಕರಣದ ಸಂಖ್ಯೆ ಏನು ಎಂಬ ಮಾಹಿತಿಯನ್ನೂ ಪ್ರಕಟಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು ಏಕೆ, ಅಂತಹ ಆರೋಪಕ್ಕೆ ಒಳಗಾಗದವರನ್ನು ಏಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಿಲ್ಲ ಎಂಬುದನ್ನೂ ಪಕ್ಷಗಳು ಸಾರ್ವಜನಿಕರಿಗೆ ತಿಳಿಸಬೇಕು ಎನ್ನುವ ಸೂಚನೆಯನ್ನು ಕೋರ್ಟ್‌ ನೀಡಿದೆ. ಅಭ್ಯರ್ಥಿಯ ಸಾಧನೆ, ಅರ್ಹತೆ ಏನು ಎಂಬುದನ್ನು ಪಕ್ಷಗಳು ಸಾರ್ವಜನಿಕರಿಗೆ ತಿಳಿಸಬೇಕು. ಕೋರ್ಟ್‌ ನೀಡಿರುವ ಈ ಸೂಚನೆಗಳನ್ನು ಪಕ್ಷಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಬೇಕು. ಜೊತೆಯಲ್ಲೇ, ಈ ಸೂಚನೆಗಳ ಭಾವಾರ್ಥವನ್ನೂ ಅರಿಯಲು ಅವು ಪ್ರಯತ್ನ ಮಾಡಬೇಕು.

ಕ್ರಿಮಿನಲ್ ಅಪರಾಧದ ಆರೋಪ ಹೊತ್ತ ಅಭ್ಯರ್ಥಿಯ ವಿವರವನ್ನು ಬಹಿರಂಗಪಡಿಸಿ ‘ನಮ್ಮ ಕೆಲಸ ಆಯಿತು’ ಎಂದು ಭಾವಿಸುವ ಬದಲು, ರಾಜಕೀಯವನ್ನು ಶುದ್ಧವಾಗಿ ಇರಿಸಬೇಕು ಎಂಬ ಕೋರ್ಟ್‌ನ ಆಶಯವನ್ನು ಅವು ಅರ್ಥ ಮಾಡಿಕೊಳ್ಳಬೇಕು; ಆ ಆಶಯಕ್ಕೆ ಪೂರಕವಾಗಿ ಸ್ಪಂದಿಸಬೇಕು. ರಾಜಕಾರಣಿಗಳ ವಿರುದ್ಧ ದಾಖಲಾಗುವ ಪ್ರಕರಣಗಳಲ್ಲಿ ಕೆಲವು ರಾಜಕೀಯಪ್ರೇರಿತ ಆಗಿರುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಎಲ್ಲ ಪ್ರಕರಣಗಳು ಮತ್ತು ಆರೋಪಗಳು ರಾಜಕೀಯಪ್ರೇರಿತ ಆಗಿರುವುದಿಲ್ಲ.

ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಔಚಿತ್ಯಪ್ರಜ್ಞೆಯಿಂದ, ವಿವೇಕದಿಂದ ವರ್ತಿಸಿ, ಟಿಕೆಟ್ ನೀಡುವ ಸಂದರ್ಭದಲ್ಲೇ ‘ಅಪರಾಧ ಹಿನ್ನೆಲೆಯವರನ್ನು’ ದೂರ ಇರಿಸಬೇಕು. ತಮ್ಮ ನೈತಿಕ ಗಟ್ಟಿತನವನ್ನು ಪರೀಕ್ಷೆಗೆ ಒಡ್ಡುವ ಇಂತಹ ತೀರ್ಮಾನ ತೆಗೆದುಕೊಳ್ಳುವುದು ಪಕ್ಷಗಳಿಗೆ ಸಾಧ್ಯವಾದರೆ, ರಾಜಕೀಯದ ಅಪರಾಧೀಕರಣ ತಡೆಯುವ ದಿಸೆಯಲ್ಲಿ ಬಹುದೊಡ್ಡ ಹೆಜ್ಜೆ ಇರಿಸಿದಂತೆ ಆಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು