ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಾಯಿಬಾಬಾ ಕೊನೆಗೂ ದೋಷಮುಕ್ತ: ನ್ಯಾಯಕ್ಕಾಗಿ ತೆತ್ತಿದ್ದು ಭಾರಿ ಬೆಲೆ

Published 15 ಮಾರ್ಚ್ 2024, 0:01 IST
Last Updated 15 ಮಾರ್ಚ್ 2024, 0:01 IST
ಅಕ್ಷರ ಗಾತ್ರ

ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ಜಿ.ಎನ್. ಸಾಯಿಬಾಬಾ ಅವರ ಜೀವನದ ಕಥೆಯು ಸರ್ಕಾರಗಳು ಅಮಾಯಕ ವ್ಯಕ್ತಿಯೊಬ್ಬನನ್ನು ಗುರಿಯಾಗಿಸಿಕೊಂಡು ನಡೆಸಿದ ಅನ್ಯಾಯಕ್ಕೆ ಬಹಳ ದೊಡ್ಡ ನಿದರ್ಶನ. ಸಾಯಿಬಾಬಾ ಅವರಿಗೆ ನ್ಯಾಯವು ಬಹಳ ತಡವಾಗಿ ದೊರೆತಿದೆ. ಅವರ ಜೀವನದ ಬಹುದೊಡ್ಡ ಭಾಗವು ವ್ಯರ್ಥವಾಗಿದೆ, ಅದನ್ನು ಇನ್ನು ಸರಿಪಡಿಸಲು ಸಾಧ್ಯವೇ ಇಲ್ಲ. ಮಾವೊವಾದಿಗಳ ಜೊತೆ ನಂಟು ಹೊಂದಿದ್ದ ಆರೋಪಕ್ಕೆ ಗುರಿಯಾಗಿದ್ದ, ದೇಶದ ಅತ್ಯಂತ ಕಠಿಣವಾದ ಒಂದು ಕಾನೂನಿನ ಅಡಿಯಲ್ಲಿ ಪ್ರಕರಣ ಎದುರಿಸಿದ್ದ ಸಾಯಿಬಾಬಾ ಮತ್ತು ಇತರ ಐವರನ್ನು ಬಾಂಬೆ ಹೈಕೋರ್ಟ್ ಈಚೆಗೆ ದೋಷಮುಕ್ತಗೊಳಿಸಿದೆ. ಸಾಯಿಬಾಬಾ ಮತ್ತು ಇತರರು ಜೈಲಿನಲ್ಲಿ 10 ವರ್ಷ ಕಾಲ ಸವೆಸಿದ ನಂತರದಲ್ಲಿ ಈ ಆದೇಶ ಹೊರಬಿದ್ದಿದೆ. ಸಾಯಿಬಾಬಾ ಅವರು ಗಾಲಿಕುರ್ಚಿಯ ಮೇಲೆ ಕುಳಿತು ಜೀವನ ಸಾಗಿಸುತ್ತಿದ್ದಾರೆ. ಸಾಯಿಬಾಬಾ ಅವರನ್ನು 2014ರಲ್ಲಿ ಬಂಧಿಸಲಾಗಿತ್ತು, ಇತರರ ಮೇಲೆ 2013ರಲ್ಲಿ ಆರೋಪ ಹೊರಿಸಲಾಗಿತ್ತು. ಅವರೆಲ್ಲರೂ ಅಂದಿನಿಂದ ಜೈಲಿನಲ್ಲಿ ಇದ್ದರು. ಆರೋಪಕ್ಕೆ ಗುರಿಯಾಗಿದ್ದ
ವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ವಿಚಾರಣಾ ನ್ಯಾಯಾಲಯವು ಎಲ್ಲ ಆರೋಪಿಗಳು ತಪ್ಪಿತಸ್ಥರು ಎಂದು ಆದೇಶಿಸಿತ್ತು. ಆರೋಪಿಗಳ ಪೈಕಿ ಐವರನ್ನು ಜೀವಾವಧಿ ಶಿಕ್ಷೆಗೆ, ಇನ್ನೊಬ್ಬರನ್ನು 10 ವರ್ಷಗಳ ಸೆರೆವಾಸಕ್ಕೆ ಗುರಿಪಡಿಸಿತ್ತು. ಹೈಕೋರ್ಟ್‌ ಇವರನ್ನು 2022ರಲ್ಲಿ ಕಾನೂನಿನ ಪ್ರಕ್ರಿಯೆಗಳ ಆಧಾರದಲ್ಲಿ ದೋಷಮುಕ್ತಗೊಳಿಸಿತ್ತು. ಆದರೆ ಈ ಆದೇಶಕ್ಕೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್, ಪ್ರಕರಣದ
ಸತ್ಯಾಸತ್ಯತೆಯ ಆಧಾರದಲ್ಲಿ ಹೊಸದಾಗಿ ವಿಚಾರಣೆ ನಡೆಸಬೇಕು ಎಂದು ಸೂಚಿಸಿತ್ತು.

ಪ್ರಾಸಿಕ್ಯೂಷನ್ ವಾದವನ್ನು ಬಾಂಬೆ ಹೈಕೋರ್ಟ್‌ ಸಂಪೂರ್ಣವಾಗಿ ತಿರಸ್ಕರಿಸಿದೆ. ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸಲು ಮಹಾರಾಷ್ಟ್ರ ಸರ್ಕಾರ ನೆಚ್ಚಿಕೊಂಡ ಸಾಕ್ಷ್ಯಾಧಾರಗಳು
ಸಾಕಾಗುವುದಿಲ್ಲ ಎಂದು ಹೇಳಿದೆ. ಅಲ್ಲದೆ, ಆರೋಪಿಗಳಿಗೂ ಭಯೋತ್ಪಾದಕ ಕೃತ್ಯಕ್ಕೂ ಪಿತೂರಿಗೂ ಅಥವಾ ಯಾವುದೇ ಮಾವೊವಾದಿ ಸಂಘಟನೆಗೂ ನಂಟು ತೋರಿಸುವಂಥದ್ದು ಏನೂ ಇಲ್ಲ ಎಂದು ಹೈಕೋರ್ಟ್ ಹೇಳಿದೆ. ಸರ್ಕಾರದ ವಿರೋಧಿ ಪಿತೂರಿಯಲ್ಲಿ ಸಾಯಿಬಾಬಾ ಅವರು ಭಾಗಿಯಾಗಿದ್ದರು ಎಂದು ಹೇಳಲು ಯಾವ ಸಾಕ್ಷ್ಯವೂ ಇಲ್ಲ ಎಂದು ಕೂಡ ಹೇಳಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಕ್ರಮ ಜರುಗಿಸಲು ನೀಡಿದ ಅನುಮತಿಯನ್ನು ಮಾನ್ಯ ಮಾಡಲು ಆಗದು ಎಂದು ಹೇಳಿದೆ. ಪ್ರಾಧಿಕಾರದ ಅನುಮತಿ ಸಿಗುವ ಮೊದಲೇ ವಿಚಾರಣಾ ನ್ಯಾಯಾಲಯವು ಆರೋಪಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಕೆಲಸ ಮಾಡಿತ್ತು. ಇವೆಲ್ಲವುಗಳನ್ನು ಗಮನಿಸಿದಾಗ ಅನ್ನಿಸುವುದು ಏನೆಂದರೆ, ಬಡವರು ಹಾಗೂ ದುರ್ಬಲ ವರ್ಗಗಳ ಹಕ್ಕುಗಳಿಗಾಗಿ ದನಿ ಎತ್ತಿದ, ಪಾರ್ಶ್ವವಾಯುವಿಗೆ ತುತ್ತಾಗಿರುವ ವ್ಯಕ್ತಿಯ ವಿರುದ್ಧ ಅತ್ಯಂತ ಕಠಿಣವಾದ ಭಯೋತ್ಪಾದನಾ ವಿರೋಧಿ ಕಾನೂನನ್ನು ಬಳಕೆ ಮಾಡಿಕೊಳ್ಳಲಾಯಿತು. ಅವರ ನಿಲುವು ಹಾಗೂ ಅವರ ಚಟುವಟಿಕೆಗಳು ಸರ್ಕಾರಕ್ಕೆ ಇಷ್ಟವಾಗುತ್ತಿರಲಿಲ್ಲ ಎಂಬ ಒಂದೇ ಕಾರಣಕ್ಕೆ ಹೀಗೆ ಮಾಡಲಾಯಿತು.

ಇಡೀ ಪ್ರಕರಣದಲ್ಲಿ ಅನುಸರಿಸಿದ ಕಾನೂನಿನ ಪ್ರಕ್ರಿಯೆ ಹಾಗೂ ಸಾಯಿಬಾಬಾ ವಿರುದ್ಧ
ಹಾಜರುಪಡಿಸಿದ್ದ ಸಾಕ್ಷ್ಯಗಳು ಆರೋಪಗಳಿಗೆ ಪೂರಕವಾಗಿ ಇರಲಿಲ್ಲ. ಮಹಾರಾಷ್ಟ್ರ ರಾಜ್ಯ ಸರ್ಕಾರವು ಪೂರ್ವಗ್ರಹಪೀಡಿತವಾಗಿ, ಹಗೆ ತೀರಿಸಿಕೊಳ್ಳುವ ಉದ್ದೇಶದಿಂದ ಕೆಲಸ ಮಾಡಿತು. ಕೆಲವು ವ್ಯಕ್ತಿಗಳನ್ನು
ಒಂದಿಷ್ಟು ವರ್ಷಗಳವರೆಗೆ ಕಿರುಕುಳಕ್ಕೆ ಗುರಿಪಡಿಸುವ ಉದ್ದೇಶದಿಂದ ಹೀಗೆ ಮಾಡಿತು. ನ್ಯಾಯಕ್ಕೆ ಕಣ್ಣಿಲ್ಲ ಎಂಬುದು ನಿಜ. ಆದರೆ ಈ ಪ್ರಕರಣವು ನ್ಯಾಯದಾನದ ಪ್ರಕ್ರಿಯೆಗಳ ಮೇಲೆ ನಿಯಂತ್ರಣ ಇರುವ ವ್ಯಕ್ತಿಗಳು ಅಸಹಾಯಕ ವ್ಯಕ್ತಿಗಳ ವಿರುದ್ಧ ಕುರುಡಾಗಿ ವರ್ತಿಸಿದರು ಎಂಬುದನ್ನು ತೋರಿಸಿದೆ. ಕಾನೂನುಗಳು ಮಾನವೀಯವಾಗಿರಬೇಕು. ಆದರೆ ಇಲ್ಲಿ ಕಾನೂನನ್ನು ಅತ್ಯಂತ ಅಮಾನವೀಯವಾಗಿ ಬಳಕೆ ಮಾಡಲಾಯಿತು. ಸಾಯಿಬಾಬಾ ಮತ್ತು ಇತರರು ಜೈಲಿನಲ್ಲಿ 10 ವರ್ಷ ಕಳೆದಿದ್ದಾರೆ. ಅವರಿಗೆ ಆ ದಿನಗಳನ್ನು ಮತ್ತೆ ಉಪಯುಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಇನ್ನು ಅವಕಾಶ ಸಿಗುವುದೇ ಇಲ್ಲ. ವೈಯಕ್ತಿಕ ಸ್ವಾತಂತ್ರ್ಯವು ಎಲ್ಲ ಪ್ರಜೆಗಳಿಗೆ ಸಂವಿಧಾನ ನೀಡಿರುವ ಹಕ್ಕು. ಇದನ್ನು ಇಷ್ಟು ಸಲೀಸಾಗಿ ಹತ್ತಿಕ್ಕಲು ಅವಕಾಶ ಇರಬಾರದು. ಈ ಪ್ರಕರಣದಲ್ಲಿ ಕೊನೆಗೂ ನ್ಯಾಯ ಸಿಕ್ಕಿದೆ. ಆದರೆ ಆ ನ್ಯಾಯಕ್ಕಾಗಿ ತೆರಬೇಕಾಗಿಬಂದ ಬೆಲೆ ಭಾರಿ ದೊಡ್ಡದು. ಇದಕ್ಕೆ ಪ್ರಭುತ್ವವೇ ಹೊಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT