ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಸ್ವಾಯತ್ತೆ; ವಿಳಂಬ ಸಲ್ಲದು

Last Updated 1 ಜೂನ್ 2020, 20:00 IST
ಅಕ್ಷರ ಗಾತ್ರ

ಕನ್ನಡ ಭಾಷೆಯ ಶಾಸ್ತ್ರೀಯ ನೆಲೆಗಟ್ಟನ್ನು ಬಲಗೊಳಿಸಲು ಮಹತ್ವದ ಪಾತ್ರ ವಹಿಸಬೇಕಿದ್ದ ‘ಭಾರತೀಯ ಭಾಷಾ ಸಂಸ್ಥಾನ’ (ಸಿಐಐಎಲ್), ಅಧ್ಯಯನ- ಸಂಶೋಧನೆಗೆ ಹೊರತಾದ ಕಾರಣ ಗಳಿಗೆ ಸುದ್ದಿಯಲ್ಲಿರುವುದು ವಿಷಾದಕರ. ಸಿಐಐಎಲ್‌ನ ನಿರ್ದೇಶಕರ ಕಾರ್ಯವೈಖರಿಯ ಬಗ್ಗೆ ಸಾಹಿತಿಗಳು ಹಾಗೂ ಸಚಿವರು ಧ್ವನಿ ಎತ್ತಿರುವುದು ಗಮನಾರ್ಹ.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತೆ ದೊರಕಿಸಿಕೊಡುವಲ್ಲಿ ವಿಳಂಬನೀತಿ ಅನುಸರಿಸುತ್ತಿರುವ ಸಿಐಐಎಲ್ ನಿರ್ದೇಶಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದಾರೆ. ನಿರ್ದೇಶಕರ ಕಾರ್ಯನಿರ್ವಹಣೆ ಕುರಿತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ- ಕೇಂದ್ರ ಸಚಿವರ ಅಸಮಾಧಾನಕ್ಕೆ ಪೂರಕವೆನ್ನುವಂತೆ ನಾಡಿನ ಹಿರಿಯ ಸಾಹಿತಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತೆ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರವು ಸ್ವಾಯತ್ತೆ ಪಡೆಯುವಷ್ಟು ಅಭಿವೃದ್ಧಿ ಹೊಂದಿಲ್ಲ ಎಂದು ಕೇಂದ್ರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎನ್ನುವ ಆರೋಪ ಸಿಐಐಎಲ್ ನಿರ್ದೇಶಕರ ಮೇಲಿದೆ.

ಈ ಆರೋಪ ನಿಜವೇ ಆಗಿದ್ದಲ್ಲಿ, ಕನ್ನಡದ ಹಿತಾಸಕ್ತಿ ರಕ್ಷಿಸಲು ಪ್ರಯತ್ನಿಸಬೇಕಿದ್ದ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಹೊಣೆಗೇಡಿತನ ಪ್ರದರ್ಶಿಸುತ್ತಿದ್ದಾರೆ ಎಂದೇ ಹೇಳಬೇಕಾಗಿದೆ. ನಿರ್ದೇಶಕರು ಇತ್ತೀಚೆಗೆ ಹೊರಡಿಸಿರುವ ನೇಮಕಾತಿ ಅಧಿಸೂಚನೆಯೂ ವಿವಾದಕ್ಕೊಳಗಾಗಿದೆ. ಅಧ್ಯಯನ ಕೇಂದ್ರದ ಸಿಬ್ಬಂದಿಯ ಸೇವಾವಧಿ ಮುಗಿಯುವ ಮೊದಲೇ ಯೋಜನಾ ನಿರ್ದೇಶಕರು ಹಾಗೂ ಸಂಶೋಧನಾ ಸಿಬ್ಬಂದಿಯ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವ ಕ್ರಮವು ಸಾಂಸ್ಕೃತಿಕ ವಲಯದ ವಿರೋಧಕ್ಕೆ ಗುರಿಯಾಗಿದೆ. ಈ ವಿರೋಧದ ಹಿನ್ನೆಲೆಯಲ್ಲಿ ಅಧಿಸೂಚನೆಯನ್ನು ಹಿಂಪಡೆಯುವುದಾಗಿ ಹೇಳಿದ್ದ ನಿರ್ದೇಶಕರು, ತಮ್ಮ ಕ್ರಮವನ್ನು ಸರಿಪಡಿಸಿಕೊಳ್ಳುವ ಬದಲು ಅರ್ಜಿ ಸಲ್ಲಿಸುವ ದಿನಾಂಕವನ್ನು ಮೂರು ಬಾರಿ ವಿಸ್ತರಿಸಿದ್ದಾರೆ.

ಶಾಸ್ತ್ರೀಯ ಅಧ್ಯಯನ ಕೇಂದ್ರ ಹೇಗಿರಬೇಕು ಎನ್ನುವುದಕ್ಕೆ ತಮಿಳುನಾಡಿನಲ್ಲಿನ ಕೇಂದ್ರ ಮಾದರಿಯಂತಿದೆ. ಶಾಸ್ತ್ರೀಯ ತಮಿಳು ಅತ್ಯುನ್ನತ ಅಧ್ಯಯನ ಕೇಂದ್ರವು ಅಲ್ಪಾವಧಿಯಲ್ಲಿಯೇ ಸ್ವಾಯತ್ತೆ ಗಳಿಸಿಕೊಂಡು, ತಮಿಳಿನ ಶಾಸ್ತ್ರೀಯ ನೆಲೆಗಟ್ಟನ್ನು ವಿಸ್ತರಿಸುವ ಕೆಲಸದಲ್ಲಿ ಸಕ್ರಿಯವಾಗಿದೆ. ಆ ಕೇಂದ್ರದ ಆಶ್ರಯದಲ್ಲಿ ನೂರಾರು ಭಾಷಾ ವಿಜ್ಞಾನಿಗಳು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ.

ತಮಿಳು ಭಾಷೆಗಾಗಿ ದುಡಿದ ಸಾಧಕರನ್ನು ಗೌರವಿಸಲು ಕೇಂದ್ರ ಸರ್ಕಾರವು 2005-06ರಿಂದಲೇ ಆರ್ಥಿಕ ನೆರವು ನೀಡುತ್ತಿದೆ. ಆದರೆ, ಕನ್ನಡಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಗಮನಸೆಳೆಯುವಂತಹ ಚಟುವಟಿಕೆಗಳು ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದಂತಿಲ್ಲ. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವ್ಯಕ್ತಿಸಿದ ಸಾಧಕರನ್ನು ಗೌರವಿಸುವ ಪ್ರಯತ್ನಗಳೂ ನಡೆದಿಲ್ಲ.

ಅಧ್ಯಯನ ಕೇಂದ್ರ ಆರಂಭಗೊಂಡು ಹತ್ತು ವರ್ಷಗಳಾಗಿದ್ದರೂ ಸ್ವಾಯತ್ತೆ ಗಳಿಸಿಕೊಳ್ಳುವ ದಿಸೆಯಲ್ಲಿ ಪರಿಣಾಮಕಾರಿ ಪ್ರಯತ್ನಗಳು ನಡೆದಿಲ್ಲ. ಆ ಪ್ರಯತ್ನಗಳನ್ನು ನಡೆಸಬೇಕಾಗಿದ್ದ ಸಿಐಐಎಲ್ ನಿರ್ದೇಶಕರು ಆಡಳಿತಾತ್ಮಕ ವೈಫಲ್ಯ ಅನುಭವಿಸಿರುವುದಕ್ಕೆ ಪ್ರಸಕ್ತ ವಿವಾದವು ಉದಾಹರಣೆಯಂತಿದೆ. ಕನ್ನಡ ಕಟ್ಟುವ ಕೆಲಸದಲ್ಲಿ ವಿದ್ವಾಂಸರನ್ನು, ಅದರಲ್ಲೂ ಸ್ಥಳೀಯ ವಿದ್ವಾಂಸರನ್ನು ಸಿಐಐಎಲ್ ನಿರ್ದೇಶಕರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಆದರೆ, ಅವರು ಕನ್ನಡದ ಕೆಲಸವನ್ನು ವೈಯಕ್ತಿಕ ಕೆಲಸ ಎಂದು ಭಾವಿಸಿದಂತಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮನ್ನಣೆ ದೊರೆಯುವ ದಿಸೆಯಲ್ಲಿ ದೊಡ್ಡದೊಂದು ಹೋರಾಟವೇ ನಡೆದಿತ್ತು.

ಆ ಹೋರಾಟಕ್ಕೆ ಪ್ರತಿಫಲವಾಗಿ ದೊರೆತ ಮನ್ನಣೆ- ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ತಕ್ಕ ಪ್ರಯತ್ನಗಳು ನಡೆದಿಲ್ಲ ಎನ್ನುವ ಅತೃಪ್ತಿ ವಿದ್ವತ್ ವಲಯದಲ್ಲಿತ್ತು. ಆ ಅಸಮಾಧಾನ ಈಗ ಸಿಐಐಎಲ್ ನಿರ್ದೇಶಕರ ಕಾರ್ಯವೈಖರಿಗೆ ವಿರೋಧದ ನೆಪದಲ್ಲಿ ವ್ಯಕ್ತಗೊಂಡಿದೆ.

ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತೆ ದೊರಕಿಸಿಕೊಡುವ ದಿಸೆಯಲ್ಲಿ ಮತ್ತೊಂದು ಹೋರಾಟ ನಡೆಯುವಂತಹ ಸನ್ನಿವೇಶ ಸೃಷ್ಟಿಯಾಗುವುದಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಬಾರದು. ದಶಕದ ನಂತರವಾದರೂ ಕನ್ನಡ ನುಡಿಗೆ ಸಂಬಂಧಿಸಿದ ಸಂಶೋಧನೆ- ಅಧ್ಯಯನಗಳು ದೊಡ್ಡ ಪ್ರಮಾಣದಲ್ಲಿ ವಿಳಂಬವಿಲ್ಲದೆ ನಿರಂತರವಾಗಿ ನಡೆಯುತ್ತಿರಬೇಕೆಂಬ ಕನ್ನಡಿಗರ ಅಪೇಕ್ಷೆಗೆ ವಿರುದ್ಧವಾಗಿ ನಡೆಯುವ ಯಾವ ಪ್ರಯತ್ನವನ್ನೂ ರಾಜ್ಯ ಸರ್ಕಾರ ಸಹಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT