ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಆರ್ಥಿಕ ಪುನಶ್ಚೇತನ ಉಪಕ್ರಮ ಪಾರದರ್ಶಕ, ಪರಿಣಾಮಕಾರಿ ಆಗಲಿ

Last Updated 14 ಮೇ 2020, 20:56 IST
ಅಕ್ಷರ ಗಾತ್ರ

ಕೋವಿಡ್‌ ಪಿಡುಗು ಕಾಡಲು ಆರಂಭಿಸುವುದಕ್ಕೆ ಮುನ್ನವೇ ಭಾರತದ ಅರ್ಥ ವ್ಯವಸ್ಥೆಯ ಪ್ರಗತಿಯ ಗತಿಯು ನಿಧಾನಗೊಂಡಿತ್ತು. ಬ್ಯಾಂಕಿಂಗ್‌, ಮ್ಯೂಚುವಲ್‌ ಫಂಡ್‌, ರಿಯಲ್‌ ಎಸ್ಟೇಟ್‌, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು (ಎಂಎಸ್‌ಎಂಇ) ಸರ್ಕಾರದಿಂದ ಯಾವುದಾದರೂ ರೀತಿಯ ನೆರವು ಸಿಗದೇ ಇದ್ದರೆ ಪುನಶ್ಚೇತನ ಸಾಧ್ಯವಿಲ್ಲ ಎಂಬ ಸ್ಥಿತಿಯಲ್ಲಿ ಇದ್ದವು. ನಿರುದ್ಯೋಗವೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇತ್ತು. ಲಾಕ್‌ಡೌನ್‌ ಹೇರಿಕೆಯೊಂದಿಗೆ ಎಲ್ಲವೂ ಸ್ತಬ್ಧಗೊಂಡವು. ಉದ್ಯಮ, ವ್ಯಾಪಾರ, ಉದ್ಯೋಗ ಇನ್ನಿಲ್ಲದ ರೀತಿಯಲ್ಲಿ ಬಾಧಿತವಾದವು. 50 ದಿನಗಳ ಕಾಲ ಸ್ಥಗಿತಗೊಂಡ ಇವುಗಳ ಪುನರಾರಂಭ ಸುಲಭವಲ್ಲ. ಅದಕ್ಕೆ ಸರ್ಕಾರದ ಒತ್ತಾಸೆ ಬೇಕೇ ಬೇಕು.

ಜಗತ್ತಿನ ವಿವಿಧ ದೇಶಗಳು ತಮ್ಮ ಶಕ್ತಿ ಮೀರಿ ಪುನಶ್ಚೇತನ ಪ್ಯಾಕೇಜ್‌ಗಳನ್ನು ಘೋಷಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರೂ ದೇಶವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿ, ₹ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ ಮೂಲಕ ದೇಶವನ್ನು ಸ್ವಾವಲಂಬನೆಯತ್ತ ಒಯ್ಯಲಾಗುವುದು ಎಂದು ಘೋಷಿಸಿದ್ದಾರೆ. ಇದು, ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ ಹತ್ತರಷ್ಟು ಎಂದು ಅವರು ಹೇಳಿದ್ದಾರೆ. ಜಿಡಿಪಿಯ ಗಣನೀಯ ಪ್ರಮಾಣದ ಪ್ಯಾಕೇಜ್‌ ಘೋಷಿಸಿರುವ ಬಲಾಢ್ಯ ದೇಶಗಳ ಸಾಲಿಗೆ ಭಾರತವೂ ಈಗ ಸೇರಿದೆ.

ಜಪಾನ್‌ ಮತ್ತು ಅಮೆರಿಕ ಕ್ರಮವಾಗಿ ಜಿಡಿಪಿಯ ಶೇ 21 ಮತ್ತು ಶೇ 13ರಷ್ಟು ಮೊತ್ತದ ಪ್ಯಾಕೇಜ್‌ ಪ್ರಕಟಿಸಿವೆ. ಭಾರತದಲ್ಲಿ ಈಗ ಬಿಕ್ಕಟ್ಟಿಗೆ ಸಿಲುಕದೆ ಇರುವ ಉದ್ಯಮ ವಲಯ ಅಥವಾ ಜನವರ್ಗ ವಿರಳ. ಹಾಗಾಗಿ, ಪುನಶ್ಚೇತನ ಉದ್ದೇಶದ ಮತ್ತು ಪರಿಹಾರ ರೂಪದ ಈ ಪ್ಯಾಕೇಜ್‌ ಸಮಗ್ರ ದೃಷ್ಟಿಕೋನವನ್ನು ಒಳಗೊಂಡಿರಬೇಕು. ಯೋಜನೆಗಳು ಸದ್ಯದ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತಿರಬೇಕು ಮತ್ತು ಅಗತ್ಯ ಇರುವ ಎಲ್ಲರಿಗೂ ಲಭ್ಯವಾಗಬೇಕು.

ಪ್ರಧಾನಿ ಘೋಷಿಸಿದ ಪ್ಯಾಕೇಜ್‌ನಲ್ಲಿ ಏನೇನಿವೆ ಎಂಬ ವಿವರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎರಡು ಕಂತುಗಳಲ್ಲಿ ಬಹಿರಂಗಪಡಿಸಿದ್ದಾರೆ. ಇನ್ನಷ್ಟು ವಿವರಗಳು ಮುಂದಿನ ದಿನಗಳಲ್ಲಿ ಪ್ರಕಟವಾಗಬಹುದು. ಬೇಡಿಕೆ ಮತ್ತು ಪೂರೈಕೆಯು ಅರ್ಥ ವ್ಯವಸ್ಥೆಯ ಎರಡು ಚಕ್ರಗಳು ಎಂಬುದನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಆಧುನಿಕ ಅರ್ಥ ವ್ಯವಸ್ಥೆಯ ಚಟುವಟಿಕೆಗಳೆಲ್ಲವೂ ಈ ಎರಡರಲ್ಲಿ ಅಡಕವಾಗಿವೆ.

ನಿರ್ಮಲಾ ಅವರು ಬುಧವಾರ ಮತ್ತು ಗುರುವಾರ ಪ್ರಕಟಿಸಿದ ಉಪಕ್ರಮಗಳು ಈ ಎರಡರ ಸುತ್ತಲೇ ಇವೆ. ಪೂರೈಕೆ ಸರಪಣಿಯನ್ನು ಮತ್ತೆ ಚಾಲೂ ಮಾಡುವುದಕ್ಕಾಗಿ ಎಂಎಸ್‌ಎಂಇಗಳಿಗೆ ₹ 3 ಲಕ್ಷ ಕೋಟಿ ಮೊತ್ತದ ಯೋಜನೆಯನ್ನು ಪ್ರಕಟಿಸಲಾಗಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಕಿರು ಹಣಕಾಸು ಸಂಸ್ಥೆಗಳು, ಗೃಹ ಸಾಲ ಸಂಸ್ಥೆಗಳಿಗೂ ನಗದು ಲಭ್ಯವಾಗುವ ಯೋಜನೆಗಳು ಇವೆ. ಉದ್ಯೋಗಿಗಳ ಭವಿಷ್ಯ ನಿಧಿಯ ಉದ್ಯೋಗಿ ಮತ್ತು ಉದ್ಯೋಗದಾತರ ವಂತಿಗೆ ಪ್ರಮಾಣವನ್ನು ಶೇ 12ರಿಂದ ಶೇ 10ಕ್ಕೆ ಇಳಿಸುವುದು, ಟಿಡಿಎಸ್‌, ಟಿಸಿಎಸ್‌ ಪ್ರಮಾಣದಲ್ಲಿ ಇಳಿಕೆ ಮುಂತಾದವು ಬೇಡಿಕೆ ಹೆಚ್ಚಿಸುವ ಕ್ರಮಗಳು. ಮಧ್ಯಮ ವರ್ಗದ ಜನರ ಮನೆಯ ಕನಸನ್ನು ನನಸಾಗಿಸುವ ಉದ್ದೇಶದಿಂದ 2017ರಲ್ಲಿ ಜಾರಿಗೆ ತಂದ ಸಹಾಯಧನ ಯೋಜನೆಯನ್ನು ಮುಂದುವರಿಸಿರುವುದರಿಂದ ರಿಯಲ್‌ ಎಸ್ಟೇಟ್‌ ರಂಗದಲ್ಲಿ ಬೇಡಿಕೆ ಕುದುರಬಹುದು. ವಿಷಮ ಸ್ಥಿತಿಯಲ್ಲಿರುವ ಈ ವಲಯ ಚೈತನ್ಯ ಪಡೆಯಬಹುದು. ಉದ್ಯೋಗ ಖಾತರಿ ಯೋಜನೆಯ ಕೂಲಿ ಹೆಚ್ಚಳ, ನಬಾರ್ಡ್‌ ಮೂಲಕ ಸಣ್ಣ ರೈತರಿಗೆ ಸಾಲ, ಮುದ್ರಾ ಯೋಜನೆಯ ಅಡಿಯಲ್ಲಿನ ₹50 ಸಾವಿರದ ಒಳಗಿನ ಸಾಲಕ್ಕೆ ಶೇ 2ರಷ್ಟು ಬಡ್ಡಿ ಸಹಾಯಧನ ಯೋಜನೆಗಳು ಕೂಡ ಬೇಡಿಕೆ–ಪೂರೈಕೆ ಸರಪಣಿಯನ್ನು ಗಟ್ಟಿಗೊಳಿಸಲು ನೆರವಾಗಬಹುದು.

ಸರ್ಕಾರದ ಎಲ್ಲ ಉಪಕ್ರಮಗಳು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿರಬೇಕು. ಇಲ್ಲವಾದರೆ, ಅವುಗಳ ಉದ್ದೇಶ ಈಡೇರದೇ ಹೋಗಬಹುದು. ಪ್ಯಾಕೇಜ್‌‌ ಮೊತ್ತದಲ್ಲಿ ಎಷ್ಟು ಪ್ರಮಾಣದ ಹಣವನ್ನು ಸರ್ಕಾರ ನೇರವಾಗಿ ವೆಚ್ಚ ಮಾಡಲಿದೆ ಮತ್ತು ಈ ಮೊತ್ತವನ್ನು ಎಲ್ಲಿಂದ ಹೊಂದಿಸಲಿದೆ ಎಂಬ ಪ್ರಶ್ನೆಗೆ ನಿರ್ಮಲಾ ಅವರು ಉತ್ತರಿಸಿಲ್ಲ. ಎಂಎಸ್‌ಎಂಇಗಳಿಗೆ ₹3 ಲಕ್ಷ ಕೋಟಿ ಸಾಲ ನೀಡಿಕೆಗೆ ಸರ್ಕಾರದ ಖಾತರಿ ಇರುತ್ತದೆ. ಆದರೆ, ಅಗತ್ಯ ಇರುವ ಎಲ್ಲ ಎಂಎಸ್‌ಎಂಇಗಳಿಗೆ ಸಾಲ ದೊರಕುತ್ತದೆ ಎಂಬ ಖಾತರಿ ಇದೆಯೇ? ಅಂತಹ ಖಾತರಿ ಒದಗಿಸುವ ಕೆಲಸವೂ ಸರ್ಕಾರದ ಕಡೆಯಿಂದ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT