ಆಯೋಗದ ವಿಶ್ವಾಸಾರ್ಹತೆಗೆ ಬಲವಾದ ಪೆಟ್ಟು ಕೊಟ್ಟ ಚುನಾವಣೆ

ಭಾನುವಾರ, ಜೂನ್ 16, 2019
29 °C

ಆಯೋಗದ ವಿಶ್ವಾಸಾರ್ಹತೆಗೆ ಬಲವಾದ ಪೆಟ್ಟು ಕೊಟ್ಟ ಚುನಾವಣೆ

Published:
Updated:

ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಕೊನೆಗೊಂಡಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಗಿದೆ. ಅತಿದೊಡ್ಡ ಪ್ರಜಾಪ್ರಭುತ್ವದ ಈ ಬಾರಿಯ ಚುನಾವಣಾ ಪ್ರಕ್ರಿಯೆಯಲ್ಲಿ ಅತಿಹೆಚ್ಚು ಗಾಸಿಗೊಂಡಿದ್ದು ಚುನಾವಣೆಗಳನ್ನು ನಡೆಸುವ ಹೊಣೆಗಾರಿಕೆ ಹೊತ್ತಿರುವ ಕೇಂದ್ರ ಚುನಾವಣಾ ಆಯೋಗ. ಆಯೋಗವು ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಆಯೋಗದ ಸ್ವಾತಂತ್ರ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡಿವೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯು ಪ್ರಜಾತಂತ್ರದ ಉಸಿರಿದ್ದಂತೆ. ಈ ರೀತಿ ಚುನಾವಣೆ ನಡೆಸಬೇಕಿರುವುದು ಆಯೋಗದ ಜವಾಬ್ದಾರಿ. ಚುನಾವಣೆಯು ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆದಿದೆ ಎಂಬುದು ಇತರರಿಗೆ ಗೊತ್ತಾಗುವಂತೆಯೂ ಇರಬೇಕು. ಈ ಜವಾಬ್ದಾರಿ ನಿಭಾಯಿಸುವಲ್ಲಿ ಆಯೋಗ ಸೋತಿದೆ. ಚುನಾವಣೆಗೆ ಸಂಬಂಧಿಸಿದ ತಕರಾರುಗಳ ಕುರಿತು ಆಯೋಗ ಕೈಗೊಂಡ ಹಲವು ತೀರ್ಮಾನಗಳಲ್ಲಿ ಹಾಗೂ ಆ ತೀರ್ಮಾನಗಳ ವಿಚಾರದಲ್ಲಿ ಆಯೋಗದ ಒಳಗೆ ವ್ಯಕ್ತವಾದ ಭಿನ್ನಾಭಿಪ್ರಾಯಗಳಲ್ಲಿ ಅದರ ಸೋಲು ಎದ್ದು ಕಾಣುತ್ತಿದೆ. ಆಯೋಗ ಕೈಗೊಂಡ ಕೆಲವು ತೀರ್ಮಾನಗಳ ವಿಚಾರದಲ್ಲಿ ತಾವು ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ದಾಖಲಿಸಿಕೊಂಡಿಲ್ಲ ಎಂದು ಆಯೋಗದ ಸದಸ್ಯರಲ್ಲಿ ಒಬ್ಬರಾದ ಅಶೋಕ್ ಲವಾಸಾ ಅವರು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಮತ್ತು ಆಯೋಗದ ಮೂರನೆಯ ಸದಸ್ಯ ಸುಶೀಲ್ ಚಂದ್ರ ಅವರಲ್ಲಿ ಪ್ರತಿಭಟನೆ ದಾಖಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ದೂರುಗಳಿಗೆ ಸಂಬಂಧಿಸಿದ ತೀರ್ಮಾನಗಳು ಅವು. ಇತರೆಲ್ಲ ಸದಸ್ಯರಷ್ಟೇ ಅಧಿಕಾರ ಹೊಂದಿರುವ ಒಬ್ಬ ಸದಸ್ಯ, ಪ್ರತಿಭಟಿಸುವ ತೀರ್ಮಾನ ತೆಗೆದುಕೊಂಡಿರುವುದು ಹಾಗೂ ಚುನಾವಣಾ ದೂರುಗಳಿಗೆ ಸಂಬಂಧಿಸಿದ ಮುಂದಿನ ಸಭೆಗಳಿಂದ ದೂರ ಉಳಿಯುವುದಾಗಿ ಹೇಳಿರುವುದು ಆಯೋಗದ ಕೆಲಸದ ಸ್ವರೂಪಕ್ಕೆ ಹಿಡಿದ ಕನ್ನಡಿ.

ಚುನಾವಣೆ ವೇಳಾಪಟ್ಟಿ ಘೋಷಿಸಿದ ದಿನದಿಂದ, ಕೊನೆಯ ಹಂತದ ಮತದಾನಕ್ಕೆ ಮೊದಲು ಪಶ್ಚಿಮ ಬಂಗಾಳದಲ್ಲಿ ಬಹಿರಂಗ ಪ್ರಚಾರದ ಅವಧಿಯನ್ನು ಮೊಟಕುಗೊಳಿಸಿದ್ದರವರೆಗೆ ಆಯೋಗ ಕೈಗೊಂಡ ಅನೇಕ ತೀರ್ಮಾನಗಳು ಟೀಕೆಗಳಿಗೆ, ವಿವಾದಗಳಿಗೆ ಕಾರಣವಾದವು. ಈ ತೀರ್ಮಾನಗಳ ಹಿಂದೆ ನಿಷ್ಪಕ್ಷಪಾತ ಧೋರಣೆಯ ಕೊರತೆ ಕಾಣುತ್ತಿತ್ತು. ಈ ತೀರ್ಮಾನಗಳು ಪ್ರಧಾನಿ ಮೋದಿ ಹಾಗೂ ಬಿಜೆಪಿಯ ಪರ ಇರುವಂತೆ ಕಾಣುತ್ತಿದ್ದವು. ಚುನಾವಣಾ ಪ್ರಕ್ರಿಯೆಯನ್ನು ಏಳು ಹಂತಗಳಲ್ಲಿ, ಎರಡು ತಿಂಗಳಿಗೂ ಹೆಚ್ಚಿನ ಅವಧಿಗೆ ವಿಸ್ತರಿಸಲು ಸಮರ್ಥನೆಗಳು ಇರಲಿಲ್ಲ. ಬಿಜೆಪಿಯು ಒಂದಿಷ್ಟು ಹೆಚ್ಚುವರಿ ಸೀಟುಗಳನ್ನು ಗೆದ್ದುಕೊಳ್ಳಬಹುದು ಎಂಬ ನಿರೀಕ್ಷೆ ಇರುವ ರಾಜ್ಯಗಳಲ್ಲಿ ಹಲವು ಹಂತಗಳಲ್ಲಿ ಮತದಾನ ನಡೆಯಿತು. ಚುನಾವಣಾ ಅಭಿಯಾನದ ಸಂದರ್ಭದಲ್ಲಿ ರಾಜಕೀಯ ನಾಯಕರ ಭಾಷೆ ತೀರಾ ಕೆಳಮಟ್ಟಕ್ಕೆ ಕುಸಿಯಲು ಈ ದೀರ್ಘ ಅವಧಿ ಕೂಡ ಒಂದು ಕಾರಣ ಎಂಬ ವಾದ ಇದೆ. ಆಯೋಗವು ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂಬುದು ತೀರಾ ಎದ್ದುಕಾಣುವಂತೆ ಆಗಿದ್ದು ಮೋದಿ ಮತ್ತು ಶಾ ಅವರ ವಿರುದ್ಧ ದಾಖಲಾದ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ನಿಭಾಯಿಸಿದ ರೀತಿಯಲ್ಲಿ. ಮೋದಿ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ 11 ದೂರುಗಳು ದಾಖಲಾದವು. ಅಷ್ಟರಲ್ಲೂ ಆಯೋಗವು ಮೋದಿ ಅವರು ‘ನಿರ್ದೋಷಿ’ ಎಂದು ಹೇಳಿತು. ಆದರೆ ಮೋದಿ ಅವರು ನೀತಿ ಸಂಹಿತೆ ಉಲ್ಲಂಘಿಸಿರುವುದು ಚುನಾವಣೆಯನ್ನು ನಿಷ್ಪಕ್ಷಪಾತ ಮನಸ್ಸಿನಿಂದ ಗಮನಿಸಿದವರಿಗೆ ಅರ್ಥವಾಗುವಂತಿತ್ತು. ಉಪಗ್ರಹ ನಿರೋಧಕ ಕ್ಷಿಪಣಿ ಪ್ರಯೋಗದ ಯಶಸ್ಸು ತಮ್ಮ ಹೆಗ್ಗಳಿಕೆ ಎಂದು ಮೋದಿ ಅವರು ಬಿಂಬಿಸಲು ಯತ್ನಿಸಿದ್ದು ನೀತಿ ಸಂಹಿತೆಯ ಉಲ್ಲಂಘನೆ ಅಲ್ಲ ಎಂದು ಆಯೋಗವು ತಾಂತ್ರಿಕ ಅಂಶಗಳನ್ನು ಮಾತ್ರ ಪರಿಗಣಿಸಿ ಹೇಳಿತು. ಮೊದಲ ಬಾರಿ ಮತ ಚಲಾವಣೆ ಮಾಡುವವರು ತಮ್ಮ ಮತವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದವರಿಗೆ ಸಮರ್ಪಿಸಬೇಕು ಎಂದು ಮೋದಿ ಹೇಳಿದ್ದು, ರಾಹುಲ್ ಗಾಂಧಿ ಸ್ಪರ್ಧಿಸಿರುವ ವಯನಾಡಿನಲ್ಲಿ ‘ಬಹುಸಂಖ್ಯಾತರೇ ಅಲ್ಪಸಂಖ್ಯಾತರು’ ಎಂದು ಹೇಳಿದ್ದು ಕೂಡ ನೀತಿ ಸಂಹಿತೆಯ ಉಲ್ಲಂಘನೆಯೇ ಆಗಿದ್ದವು. ಚುನಾವಣಾ ಅಭಿಯಾನದಲ್ಲಿ ಧರ್ಮವನ್ನು, ಸಶಸ್ತ್ರ ಪಡೆಗಳ ಹೆಸರನ್ನು ಬಳಕೆ ಮಾಡುವುದು ನೀತಿ ಸಂಹಿತೆಯ ಉಲ್ಲಂಘನೆ ಆಗಿದ್ದರೂ ಆಯೋಗಕ್ಕೆ ಅದು ತಪ್ಪೆಂದು ಕಾಣಿಸಲಿಲ್ಲ. ಆಯೋಗವು ಕೆಲವು ನಾಯಕರ ವಿರುದ್ಧ ಕ್ರಮ ಕೈಗೊಂಡಿತಾದರೂ, ಆ ನಾಯಕರು ಮಾಡಿದಷ್ಟೇ ತೀವ್ರವಾದ ತಪ್ಪು ಮಾಡಿದ್ದ ಮೋದಿ ಮತ್ತು ಶಾ ಅವರನ್ನು ದೋಷಮುಕ್ತಗೊಳಿಸಿತು. ಈ ಚುನಾವಣೆಯಲ್ಲಿ ಆಯೋಗದ ಕಾರ್ಯವೈಖರಿಯು ಗಂಭೀರ ಕಳವಳಕ್ಕೆ ಕಾರಣವಾಗಿದೆ. ಎಲ್ಲ ಪಕ್ಷಗಳನ್ನು, ಎಲ್ಲ ಪಕ್ಷಗಳ ನಾಯಕರನ್ನು ಸಮಾನವಾಗಿ ಕಾಣುವ ಹೊಣೆಗಾರಿಕೆಯಲ್ಲಿ ಆಯೋಗ ಸೋತಿರುವಂತೆ ಕಂಡುಬಂದಿದೆ. ಚುನಾವಣೆಗಳನ್ನು ನಡೆಸುವುದು ಹೆಚ್ಚು ಸಂಕೀರ್ಣವೂ, ತ್ರಾಸದಾಯಕವೂ ಆಗುತ್ತಾ ಬಂದಿರಬಹುದು. ಆದರೆ, ಈ ಪ್ರಕ್ರಿಯೆಯಲ್ಲಿ ಆಯೋಗವು ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವ ಬದಲು ತಾನೇ ಸಮಸ್ಯೆಯ ಭಾಗವಾಗಿದೆ. ಇದು ತೀರಾ ದುರದೃಷ್ಟಕರ. ತೀರ್ಪುಗಾರನ ಸ್ಥಾನದಲ್ಲಿ ಇರುವವನು ತಟಸ್ಥ ನಿಲುವು ಹೊಂದಿರಬೇಕು. ಆದರೆ ಆತನೇ ಪಕ್ಷಪಾತಿ ಆಗಿಬಿಟ್ಟರೆ ಆಟಗಾರರು, ಆಟವನ್ನು ನೋಡಲು ಬರುವವರು ಆಟದ ಮೇಲೆಯೇ ನಂಬಿಕೆ ಕಳೆದುಕೊಳ್ಳುತ್ತಾರೆ. ‍ಪ್ರಜಾತಂತ್ರವನ್ನು ಕಾಪಾಡುವುದು ಸ್ವತಂತ್ರ ಸಂಸ್ಥೆಗಳ ಹೊಣೆ. ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಆಯೋಗವು ಕಾನೂನಾತ್ಮಕ ಅಧಿಕಾರಕ್ಕಿಂತಲೂ ಹೆಚ್ಚಿನ ನೈತಿಕ ಶಕ್ತಿಯನ್ನು ಸಂಪಾದಿಸಿತ್ತು. ಆದರೆ, ಅದೇ ಆಯೋಗ ಈಗ ದೇಶದ ಜನರನ್ನು ನಿರಾಸೆಗೊಳಿಸಿದಂತೆ ಕಂಡುಬಂದಿರುವುದು ದುರ್ದೈವದ ಸಂಗತಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 39

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !