ರಾಜಕೀಯ ಪಕ್ಷಗಳಿಗೆ ದೇಣಿಗೆ ಪಾರದರ್ಶಕವಾಗಿರಲಿ

ಶುಕ್ರವಾರ, ಮಾರ್ಚ್ 22, 2019
21 °C

ರಾಜಕೀಯ ಪಕ್ಷಗಳಿಗೆ ದೇಣಿಗೆ ಪಾರದರ್ಶಕವಾಗಿರಲಿ

Published:
Updated:
Prajavani

ಚುನಾವಣಾ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದ ಚರ್ಚೆಗಳು ಬಹಳ ವರ್ಷಗಳಿಂದ ನಡೆಯುತ್ತಿವೆ. ಹಣ ಮತ್ತು ಮದ್ಯದ ಪ್ರಭಾವ ತಗ್ಗಿಸಿ, ಚುನಾವಣೆಗಳನ್ನು ಮುಕ್ತ ಮತ್ತು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಪ್ರಯತ್ನಿಸುತ್ತಿದ್ದರೂ ಒಂದಿಷ್ಟೂ ಪ್ರಗತಿ ಆಗಿಲ್ಲ ಎನ್ನುವುದು ಅಕ್ಷರಶಃ ಸತ್ಯ.

ಚುನಾವಣೆಗಳಲ್ಲಿ ಅಭ್ಯರ್ಥಿಗಳು ಮಾಡುವ ವೆಚ್ಚಕ್ಕೆ ಕಡಿವಾಣ ಹಾಕಿದ್ದರೂ ಹಣದ ಹೊಳೆಯೇ ಹರಿಯುತ್ತಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಮಾಡಬಹುದಾದ ವೆಚ್ಚವನ್ನು ಕ್ರಮವಾಗಿ ₹ 70 ಲಕ್ಷ  ಹಾಗೂ ₹ 28 ಲಕ್ಷಕ್ಕೆ ಮಿತಿಗೊಳಿಸಿದ್ದರೂ ವಾಸ್ತವ ಸ್ಥಿತಿ ಬೇರೆಯೇ ಇದೆ. ಇದಕ್ಕಿಂತ ಹಲವು ಪಟ್ಟು ಅಧಿಕ ಹಣ ಖರ್ಚು ಮಾಡಿ, ಆಯೋಗಕ್ಕೆ ಮತ್ತು ಆದಾಯ ತೆರಿಗೆ ಇಲಾಖೆಗೆ ಸುಳ್ಳು ಲೆಕ್ಕ ಸಲ್ಲಿಸುತ್ತಿರುವುದು ಎಲ್ಲರೂ ಬಲ್ಲ ಸತ್ಯ. 2009ರ ಲೋಕಸಭೆ ಚುನಾವಣೆಯಲ್ಲಿ ಮಿತಿಗಿಂತ ಶೇ 41ರಷ್ಟು ಕಡಿಮೆ ವೆಚ್ಚ ಮಾಡಿರುವುದಾಗಿ ಬಹಳಷ್ಟು ಅಭ್ಯರ್ಥಿಗಳು ಘೋಷಿಸಿದ್ದರು.

ಚುನಾಯಿತ ಪ್ರತಿನಿಧಿಗಳು ಕೊಟ್ಟಿರುವ ಲೆಕ್ಕ ಸತ್ಯಕ್ಕೆ ದೂರವಾದುದು ಅಂತ ಗೊತ್ತಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗದೆ ಚುನಾವಣಾ ಆಯೋಗ ಅಸಹಾಯಕವಾಗಿರುವುದು ವಿಷಾದನೀಯ.

ಚುನಾವಣೆಗಳ ಹೆಸರಿನಲ್ಲಿ ಸಂಗ್ರಹಿಸುತ್ತಿರುವ ದೇಣಿಗೆ ವಿಷಯದಲ್ಲೂ ರಾಜಕೀಯ ಪಕ್ಷಗಳು ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಬಿಡಿಸಿ ಹೇಳಬೇಕಾಗಿಲ್ಲ. 2017– 18ನೇ ಸಾಲಿನಲ್ಲಿ ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸಿರುವ ಒಟ್ಟು ದೇಣಿಗೆಯಲ್ಲಿ ಅರ್ಧದಷ್ಟು ಹಣದ ಮೂಲ ಯಾವುದು ಎಂಬುದು ಬಹಿರಂಗಗೊಂಡಿಲ್ಲ. ಚುನಾವಣಾ ವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಮತ್ತೊಂದಿಲ್ಲ.

‘ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌’ (ಎಡಿಆರ್‌) ಮಾಹಿತಿ ಪ್ರಕಾರ, ಬಿಜೆಪಿ ಸೇರಿದಂತೆ ಆರು ರಾಷ್ಟ್ರೀಯ ಪಕ್ಷಗಳು ವಿವಿಧ ಮೂಲಗಳಿಂದ ಸಂಗ್ರಹಿಸಿರುವ ₹ 1,293 ಕೋಟಿಯಲ್ಲಿ, ₹ 689 ಕೋಟಿ ಬಂದಿರುವುದು ಅನಾಮಧೇಯ ಮೂಲಗಳಿಂದ. ಇದರಲ್ಲಿ ₹ 215 ಕೋಟಿಯನ್ನು ಚುನಾವಣಾ ಬಾಂಡ್‌ಗಳಿಂದ ಸಂಗ್ರಹಿಸಲಾಗಿದೆ. ಬಾಂಡ್‌ಗಳು ಆಡಳಿತ ಪಕ್ಷಕ್ಕೆ ಅನುಚಿತವಾದ ಲಾಭ ಮಾಡಿಕೊಟ್ಟಿವೆ ಎಂಬುದು ನಿರ್ವಿವಾದ. ಬಾಂಡ್‌ಗಳ ಮೂಲಕ ₹ 20 ಸಾವಿರಕ್ಕಿಂತ ಕಡಿಮೆ ದೇಣಿಗೆ ಕೊಡುವ ವ್ಯಕ್ತಿ ಅಥವಾ ಸಂಘಟನೆಗಳ ಹೆಸರನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂಬ ನಿಯಮ, ರಾಜಕೀಯ ಪಕ್ಷಗಳಿಗೆ ದೊಡ್ಡ ವರವಾಗಿ ಪರಿಣಮಿಸಿದೆ. ಪಕ್ಷಗಳು ಹಾಗೂ ಅವುಗಳ ನಾಯಕರನ್ನು ಬೀಸೋ ದೊಣ್ಣೆಯಿಂದ ಪಾರು ಮಾಡುವ ಉದ್ದೇಶದಿಂದಲೇ ರೂಪಿಸಿದ ತಂತ್ರ ಇದು ಎನ್ನಲು ಅಡ್ಡಿಯಿಲ್ಲ.

ಕಾರ್ಪೊರೇಟ್‌ ಕಂಪನಿಗಳಿಂದ ಬರುವ ದೊಡ್ಡ ಮೊತ್ತವನ್ನು ₹ 20 ಸಾವಿರದೊಳಗಿನ ಮೊತ್ತವಾಗಿ ವಿಂಗಡಿಸಿ ದೇಣಿಗೆಯಾಗಿ ಕೊಡುವ ಉದ್ದೇಶದಿಂದಲೇ ಈ ನಿಯಮ ರೂಪಿಸಲಾಗಿದೆಯೇನೋ ಎಂಬ ಅನುಮಾನ ದಟ್ಟವಾಗಿದೆ. ಆಡಳಿತ ಪಕ್ಷವೇ ಇರಲಿ, ವಿರೋಧ ಪಕ್ಷವೇ ಆಗಿರಲಿ ತನಗೆ ದೇಣಿಗೆಯಾಗಿ ಬರುವ ಪ್ರತಿ ರೂಪಾಯಿಗೂ ಉತ್ತರದಾಯಿತ್ವ ಹೊಂದಿರಬೇಕು. ಯಾರು ಎಷ್ಟು ಹಣ ಕೊಟ್ಟರು, ಯಾಕೆ ಕೊಟ್ಟರು ಎಂದು ಜನರಿಗೆ ಹೇಳಬೇಕು.

ಅದನ್ನು ಕೇಳುವ ಅಧಿಕಾರವೂ ಜನರಿಗೆ ಇರಬೇಕು. ಇಂತಹ ಪಾರದರ್ಶಕ ವ್ಯವಸ್ಥೆ ಜಾರಿಗೆ ಬರದಿದ್ದರೆ ಚುನಾವಣೆ ಅಕ್ರಮ ತಡೆ ಅಸಾಧ್ಯದ ಮಾತು. ಚುನಾವಣೆ ವ್ಯವಸ್ಥೆ ಸುಧಾರಣೆಯೂ ಬರೀ ಘೋಷಣೆಯಾಗಿ ಉಳಿಯಲಿದೆ. ಕಪ್ಪು ಹಣ ಬಳಕೆಗೂ ಕಡಿವಾಣ ಹಾಕುವುದು ಕಷ್ಟವಾಗಲಿದೆ. ದೇಣಿಗೆ ಸಂಗ್ರಹದಲ್ಲಿ ಬಿಜೆಪಿ ಬಹಳ ಮುಂದಿದೆ. ರಾಜಕೀಯ ಪಕ್ಷಗಳಿಗೆ ಯಾರೂ ಸುಖಾಸುಮ್ಮನೆ ಹಣ ಕೊಡುವುದಿಲ್ಲ. ಅದರ ಹಿಂದೆ ಬೇರೆಯದೇ ಉದ್ದೇಶ ಇರುತ್ತದೆ.

ಅಧಿಕಾರದಲ್ಲಿರುವ ಪಕ್ಷದ ಬಾಲ ಬಡಿಯುವುದು ‘ಕಾರ್ಪೊರೇಟ್‌ ಸಂಸ್ಥೆಗಳ ಸಂಸ್ಕೃತಿ’. ಒಟ್ಟಿನಲ್ಲಿ ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಜವಾಬ್ದಾರಿಯೂ ಇದೆ. ಮತದಾರರ ಹೊಣೆಗಾರಿಕೆಯೂ ಇದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !