ಗುರುವಾರ , ಡಿಸೆಂಬರ್ 12, 2019
26 °C

ಬಿಜೆಪಿಗೆ ಪಾಠ: ಚೇತರಿಕೆಹಾದಿಯಲ್ಲಿ ಕಾಂಗ್ರೆಸ್

Published:
Updated:

ಪಂಚ ರಾಜ್ಯಗಳ ಮತದಾರರು ಭಾರತೀಯ ಜನತಾ ಪಕ್ಷವನ್ನು ತಿರಸ್ಕರಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ‍ಪಕ್ಷ ಗೆಲುವು ಪಡೆದಿದ್ದರೂ, ಮಧ್ಯಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕೊನೆ ಕ್ಷಣದವರೆಗೂ ಭಾರಿ ಹಣಾಹಣಿ ನಡೆಸಿದೆ. ಛತ್ತೀಸಗಡದಲ್ಲಿ ಅನಿರೀಕ್ಷಿತವಾಗಿ ಗೆದ್ದು, ಅಚ್ಚರಿ ಮೂಡಿಸಿದೆ.

ಹಿಂದಿ ಭಾಷಿಕ ಮೂರು ಪ್ರಮುಖ ರಾಜ್ಯಗಳ ಜನ ಕಾಂಗ್ರೆಸ್‌ ಪರ ಒಲವು ತೋರಿದ್ದಾರೆ ಎನ್ನುವುದಕ್ಕಿಂತ ಗ್ರಾಮೀಣ ಸಂಕಷ್ಟ, ಕೃಷಿ ಬಿಕ್ಕಟ್ಟು, ಮೂಲಸೌಕರ್ಯ ಮತ್ತು ನಿರುದ್ಯೋಗ ಸಮಸ್ಯೆಗಳಿಂದ ಬೇಸತ್ತು ತೀರ್ಪು ನೀಡಿದ್ದಾರೆ ಎನ್ನುವುದು ಸ್ಪಷ್ಟ. ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಸೂಚಿಗಳಾದ ಹಿಂದುತ್ವ ಮತ್ತು ರಾಮಮಂದಿರಕ್ಕಿಂತಲೂ ಇವು ಮಹತ್ವದ ವಿಷಯಗಳು ಎಂಬ ಸಂದೇಶವನ್ನು ಮತದಾರರು ರವಾನಿಸಿದ್ದಾರೆ.

ಅಭಿವೃದ್ಧಿ ಮಂತ್ರ ಜಪಿಸುತ್ತಾ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಅವರ ವರ್ಚಸ್ಸು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮಸುಕಾದಂತೆ ಕಾಣುತ್ತಿದೆ. ಬಿಜೆಪಿಗೆ ಸುಲಭವಾಗಿ ಮತಗಳನ್ನು ಸೆಳೆಯಬಲ್ಲ ಏಕೈಕ ಜನಪ್ರಿಯ ನಾಯಕ ಎಂಬ ನಂಬಿಕೆಯೂ ಈ ಚುನಾವಣೆಯಲ್ಲಿ ಹುಸಿಯಾದಂತಿದೆ. ಈ ಫಲಿತಾಂಶದಿಂದ ಎಚ್ಚೆತ್ತುಕೊಂಡು ಆಡಳಿತದ ರೀತಿನೀತಿಗಳನ್ನು ಬದಲಾಯಿಸಿಕೊಳ್ಳದಿದ್ದರೆ ಮುಂದಿನ ಚುನಾವಣೆ ಗೆಲ್ಲುವುದು ಕಷ್ಟ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಈ ಚುನಾವಣೆ ಬಳಿಕ ರಾಹುಲ್‌ ಗಾಂಧಿ ನಾಯಕತ್ವ ಕೊಂಚ ಭರವಸೆ ಹುಟ್ಟಿಸಿದೆ. ಕಾಂಗ್ರೆಸ್‌ ಕೂಡಾ ಚೇತರಿಕೆ ಹಾದಿಯಲ್ಲಿದೆ ಎನ್ನಲು ಅಡ್ಡಿಯಿಲ್ಲ. ಕರ್ನಾಟಕ ಒಳಗೊಂಡಂತೆ ಇತ್ತೀಚೆಗೆ ನಡೆದಿರುವ ಚುನಾವಣೆಗಳಲ್ಲಿ ಈ ಪಕ್ಷ ಸೋತು ಸೊರಗಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ಇಂಥದೊಂದು ಗೆಲುವಿನ ಅಗತ್ಯವಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎಗೆ ಪರ್ಯಾಯವಾಗಿ ಕಟ್ಟಲು ಯತ್ನಿಸುತ್ತಿರುವ ಮಹಾಮೈತ್ರಿಗೆ ಇದರಿಂದ ಅನುಕೂಲವಾಗಬಹುದು. ಆದರೆ, ಕಾಂಗ್ರೆಸ್‌ ಮತ್ತಿತರ ಪಕ್ಷಗಳ ನಾಯಕರು ತಮ್ಮ ಸ್ವಾರ್ಥ ರಾಜಕಾರಣವನ್ನು ಬದಿಗೊತ್ತಿ ಒಗ್ಗೂಡಿದರೆ ಅದು ಸಾಧ್ಯವಾಗಬಹುದು.

ರಾಜಸ್ಥಾನದಲ್ಲಿ ಭಾರಿ ಅಂತರದಲ್ಲಿ ಕಾಂಗ್ರೆಸ್‌ ಗೆಲ್ಲಬಹುದು ಎಂದು ಊಹಿಸಲಾಗಿತ್ತು. ಆದರೆ, ಹಾಗಾಗಲಿಲ್ಲ. 2013ರಲ್ಲಿ 163 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿಯನ್ನು 72 ಕ್ಷೇತ್ರಗಳಿಗೆ ಸೀಮಿತಗೊಳಿಸಿದ್ದು ಕೂಡ ಸುಲಭದ ಕೆಲಸವೇನಲ್ಲ. ಈ ನಿಟ್ಟಿನಲ್ಲಿ ಅಲ್ಲಿನ ಕಾಂಗ್ರೆಸ್‌ ನಾಯಕರಾದ ಸಚಿನ್‌ ಪೈಲಟ್‌, ಅಶೋಕ್‌ ಗೆಹ್ಲೋಟ್‌ ಸಾಕಷ್ಟು ಶ್ರಮ ಹಾಕಿದ್ದಾರೆ. ಸಾಮಾನ್ಯರ ಜೊತೆ ಬೆರೆಯದೆ, ‘ಅರಮನೆ’ಯೊಳಗೇ ಕುಳಿತು ಕಾರುಬಾರು ಮಾಡಿದ ಮುಖ್ಯಮಂತ್ರಿ, ಗ್ವಾಲಿಯರ್‌ ರಾಜಮನೆತನದ ವಸುಂಧರರಾಜೇ ಭಾರಿ ಬೆಲೆ ತೆತ್ತಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಜನಪ್ರಿಯ ನಾಯಕರಾಗಿದ್ದರೂ ಅವರ ಸಂಪುಟದ ಅನೇಕ ಸಚಿವರು, ಹಿರಿಯ ನಾಯಕರು ಸೋತಿದ್ದಾರೆ. ಕೆಲವು ವರ್ಷಗಳಿಂದ ಸದ್ದು ಮಾಡುತ್ತಿರುವ ‘ವ್ಯಾಪಂ’ ಹಗರಣ ಹಾಗೂ ರೈತರ ಆತ್ಮಹತ್ಯೆ ಪ್ರಕರಣಗಳ ಬಿಸಿ ಅವರಿಗೆ ತಟ್ಟಿದೆ. ರಾಜ್ಯದಲ್ಲಿ ಪುನಃ ಅಧಿಕಾರಕ್ಕೆ ಬರಲು ಹರಸಾಹಸ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್‌ ಗೆಲುವಿನ ಹಾದಿಯನ್ನೂ ಕಠಿಣಗೊಳಿಸಿದ್ದಾರೆ. ಛತ್ತೀಸಗಡದಲ್ಲಿ ಬಿಜೆಪಿ ಭಾರಿ ಮುಖಭಂಗ ಅನುಭವಿಸಬಹುದು ಎಂದು ಯಾರೂ ಭಾವಿಸಿರಲಿಲ್ಲ. ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರಿಗೆ ಜನವಿರೋಧಿ ಹಣೆಪಟ್ಟ ಇರಲಿಲ್ಲ. ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಪ್ರತ್ಯೇಕ ಪಕ್ಷ ಕಟ್ಟಿ, ಬಿಎಸ್‌ಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೂ ಕಾಂಗ್ರೆಸ್‌ ಛತ್ತೀಸಗಡದಲ್ಲಿ ಭಾರಿ ಗೆಲುವು ಪಡೆದಿದೆ. ಈ ಬಗ್ಗೆ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

ತೆಲಂಗಾಣದಲ್ಲಿ ನಿರೀಕ್ಷೆಯಂತೆ ತೆಲಂಗಾಣ ರಾಷ್ಟ್ರೀಯ ಸಮಿತಿ ದೊಡ್ಡ ಗೆಲುವು ಪಡೆದಿದೆ. ಕಾಂಗ್ರೆಸ್‌ ನೇತೃತ್ವದ ಮಹಾಮೈತ್ರಿ ಭಾರಿ ಹಿನ್ನಡೆ ಕಂಡಿದೆ. ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡಿದ್ದ ಕೆ. ಚಂದ್ರಶೇಖರರಾವ್‌ ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಪಾಡಿದ್ದಾರೆ. ಸಾಕಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಎಲ್ಲ ವರ್ಗಗಳನ್ನು ಸಂತೃಪ್ತಿಗೊಳಿಸಿದ್ದಾರೆಂಬ ಭಾವನೆಯೇ ಅವರ ಗೆಲುವಿನ ಗುಟ್ಟು ಎನ್ನಬಹುದು. ಪುಟ್ಟ ರಾಜ್ಯ ಮಿಜೋರಾಂನಲ್ಲಿ ಎಂಎನ್ಎಫ್‌ ಕೂಡಾ ಇಂತಹದೇ ಗೆಲುವು ದಾಖಲಿಸಿದೆ. ಪ್ರಾದೇಶಿಕ ಪಕ್ಷಗಳಿಗೂ ಮಹತ್ವ ತಂದುಕೊಟ್ಟಿದೆ ಈ ಚುನಾವಣೆ. ಮಧ್ಯ ಪ್ರದೇಶದಲ್ಲಿ ಯಾರೇ ಸರ್ಕಾರ ರಚಿಸಿದರೂ ಸಣ್ಣಪುಟ್ಟ ಪಕ್ಷಗಳ ಬೆಂಬಲ ಪಡೆಯುವ ಅನಿವಾರ್ಯ ಸ್ಥಿತಿ ಸೃಷ್ಟಿಯಾಗಿದೆ.

ಒಟ್ಟಿನಲ್ಲಿ ಐದು ರಾಜ್ಯಗಳ ಚುನಾವಣೆ ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣ ಮಾಡುವ ಬಿಜೆಪಿ ಕನಸನ್ನು ಛಿದ್ರಗೊಳಿಸಿದೆ. ಇದೊಂದು ಎಚ್ಚರಿಕೆ ಗಂಟೆ ಎಂಬುದನ್ನು ಆ ಪಕ್ಷದ ನಾಯಕರು ಮರೆಯಬಾರದು. ಗೆಲುವಿನ ಭ್ರಮೆಯಲ್ಲಿ ಕಾಂಗ್ರೆಸ್‌ ಮೈಮರೆಯಬಾರದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು