ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೆಸಾರ್ಟ್‌ ರಾಜಕಾರಣ’ ಭೂಷಣವಲ್ಲ ಬೇಕು ಹೊಣೆಯರಿತ ನಡೆ

Last Updated 20 ಜನವರಿ 2019, 20:16 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕಷ್ಟದ ಸ್ಥಿತಿ ಇದೆ. ಮಳೆ ಕೊರತೆ, ಬೆಳೆ ವೈಫಲ್ಯ, ಮಂಗನ ಕಾಯಿಲೆ, ಮೀನುಗಾರರ ನಾಪತ್ತೆಯಂತಹ ಸಂಕಷ್ಟದ ಸಂದರ್ಭದಲ್ಲಿ ಜನಪ್ರತಿನಿಧಿಗಳ ಜವಾಬ್ದಾರಿ ಹೆಚ್ಚು. ಆದರೆ, ಈ ಹೊಣೆ ನಿರ್ವಹಿಸಬೇಕಾದ ಶಾಸಕರು ತಮಗೂ ಜನರ ಸಂಕಷ್ಟಗಳಿಗೂ ಸಂಬಂಧವೇ ಇಲ್ಲ ಎಂಬಂತೆ ‘ರೆಸಾರ್ಟ್‌ ರಾಜಕೀಯ’ದಲ್ಲಿ ಮುಳುಗೇಳುತ್ತಿರುವುದು ನಾಚಿಕೆಗೇಡಿನ ಸಂಗತಿ.

ರಾಜ್ಯದ ಮೂರೂ ಪ್ರಧಾನ ಪಕ್ಷಗಳು ಅಧಿಕಾರವೊಂದನ್ನೇ ಪರಮ ಧ್ಯೇಯವಾಗಿಸಿಕೊಂಡಂತೆ ವರ್ತಿಸುತ್ತಿವೆ. ಹೇಗಾದರೂ ಅಧಿಕಾರ ಹಿಡಿಯಬೇಕು ಎಂದು ಬಿಜೆಪಿ ಚಡಪಡಿಸುತ್ತಿದ್ದರೆ, ದಕ್ಕಿದ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎಲ್ಲ ಬಗೆಯ ರಾಜಿಗೂ ಓಗೊಡುತ್ತಿವೆ. ಕಾಂಗ್ರೆಸ್‌ ಪಕ್ಷದ ವರಿಷ್ಠರಂತೂ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಶಾಸಕರ ಮುಂದೆ ಮಂಡಿಯೂರಿದ್ದಾರೆ. ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಕ್ಷಣದಿಂದಲೇ ಈ ಮೇಲಾಟ ಆರಂಭವಾಯಿತು. ಏಳು ತಿಂಗಳಾದರೂ ಅದು ನಿಂತಿಲ್ಲ. ಇದರ ಕರಿನೆರಳು, ದೈನಂದಿನ ಆಡಳಿತದ ಮೇಲೆ ಆವರಿಸಿದೆ.

ಬೆರಳೆಣಿಕೆಯಷ್ಟು ಶಾಸಕರ ಕೊರತೆಯಿಂದ ಅಧಿಕಾರ ಕಳೆದುಕೊಂಡ ಬಿಜೆಪಿ, ‘ಆಪರೇಷನ್‌ ಕಮಲ’ ಎಂಬ ಹಳೆಯ ಚಾಳಿಗೆ ಅಂಟಿಕೊಂಡಿದೆ. ಆಡಳಿತಾರೂಢ ಮೈತ್ರಿಕೂಟದ ಸಂಖ್ಯಾಬಲ ಕುಗ್ಗಿಸಿ, ಅಧಿಕಾರ ಹಿಡಿಯುವ ಹವಣಿಕೆಯಲ್ಲಿದೆ. ಅದರ ತಂತ್ರವನ್ನು ವಿಫಲಗೊಳಿಸುವ ಕೆಲಸವೇ ಮಿತ್ರಪಕ್ಷಗಳಿಗೆ ಆದ್ಯತೆಯಾಗಿ ಪರಿಣಮಿಸಿದೆ. ಸೆಳೆಯುವ ಇಲ್ಲವೇ ರಕ್ಷಿಸಿಕೊಳ್ಳುವ ಈ ಆಟಕ್ಕೆ ರೆಸಾರ್ಟ್‌ಗಳು ಆಡುಂಬೊಲ ಆಗಿವೆ. ಇದು ನೈತಿಕ ಅಧಃಪತನದ ವಿಕರಾಳ ರೂಪ. ಬಿಜೆಪಿ ನಾಯಕರು ತಮ್ಮ ಪಕ್ಷದ ಶಾಸಕರನ್ನು ಹರಿಯಾಣದ ಗುರುಗ್ರಾಮದಲ್ಲಿ ಕೂಡಿಹಾಕಿದ್ದರು. ಕಾಂಗ್ರೆಸ್‌ ನಾಯಕರು ಬಿಡದಿ ಬಳಿಯ ರೆಸಾರ್ಟ್‌ಗೆ ದೂಡಿದರು. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಈ ನಡೆ ಜನರಿಗೆ ಮತ್ತು ಜನತಂತ್ರ ವ್ಯವಸ್ಥೆಗೆ ಮಾಡಿದ ಅವಮಾನ.

ಜನರ ಸಮಸ್ಯೆಗಳಿಗೆ ಬೆನ್ನು ತಿರುಗಿಸಿದ್ದಲ್ಲದೆ, ಚುನಾವಣೆ ವೇಳೆ ನೀಡಿದ ಭರವಸೆಗಳನ್ನೂ ಗಾಳಿಗೆ ತೂರಿ ಹೊಣೆಗೇಡಿಗಳಂತೆ ವರ್ತಿಸುತ್ತಿರುವುದು ಅಕ್ಷಮ್ಯ. ‘ರೋಮ್‌ ಹೊತ್ತಿ ಉರಿಯುವಾಗ ನೀರೊ ಪೀಟಿಲು ನುಡಿಸುತ್ತಿದ್ದ’ ಎಂಬ ಮಾತು ಈ ನಾಯಕರ ವರ್ತನೆಗೆ ನೂರಕ್ಕೆ ನೂರರಷ್ಟು ಒಪ್ಪುತ್ತದೆ. ಸರ್ಕಾರ ರಚನೆ, ಸಚಿವ ಸಂಪುಟ ಪುನರ್‌ರಚನೆ, ನಿಗಮ– ಮಂಡಳಿಗಳಿಗೆ ನೇಮಕ... ಇವುಗಳನ್ನಷ್ಟೇ ಕೆಲಸಗಳು ಎಂದು ಆಡಳಿತಾರೂಢರು ಭಾವಿಸುವಂಥ ಸ್ಥಿತಿ ಒದಗಿರುವುದು ದುರದೃಷ್ಟಕರ. ಜನರ ನೋವು– ಸಂಕಷ್ಟಗಳಿಗೆ ಮಿಡಿಯಬೇಕಿದ್ದ ಪಕ್ಷಗಳು ಸಂವೇದನೆಯನ್ನೇ ಕಳೆದುಕೊಂಡಂತೆ ವರ್ತಿಸುತ್ತಿವೆ ಎಂಬ ಅನುಮಾನ ದಟ್ಟವಾಗುತ್ತಿದೆ.

ಸುಸಂಸ್ಕೃತ ರಾಜಕಾರಣಕ್ಕೆ ಕರ್ನಾಟಕ ಹೆಸರಾಗಿತ್ತು. ಈಗ ಅದು ನೆನಪಷ್ಟೇ. ಶಾಸಕರ ಖರೀದಿಯಾಗಿಬಿಡಬಹುದು ಎಂಬ ಆತಂಕ ಮೂರು ಪಕ್ಷಗಳಿಗೂ ಇದೆ ಎಂಬುದೇ ರಾಜ್ಯದ ರಾಜಕಾರಣದ ನೈತಿಕತೆ ಯಾವ ಮಟ್ಟಿಗೆ ಕುಸಿದಿದೆ ಎಂಬುದನ್ನು ಹೇಳುತ್ತದೆ. ಇದು ಪಕ್ಷಗಳಿಗೆ ಸೀಮಿತವಾದ ವಿಚಾರ ಅಲ್ಲ. ಜನಪ್ರತಿನಿಧಿಯು ಹಣ ಅಥವಾ ಇನ್ನಾವುದೋ ಆಮಿಷಕ್ಕೆ ಬಲಿಯಾಗಿ ಪಕ್ಷ ಬದಲಾಯಿಸುವುದು ಅಥವಾ ವಿರೋಧ ಪಕ್ಷಕ್ಕೆ ರಾಜಕೀಯ ಲಾಭ ತಂದುಕೊಡಲು ರಾಜೀನಾಮೆ ನೀಡುವುದು ಪ್ರಜಾಪ್ರಭುತ್ವಕ್ಕೆ ಎಸಗುವ ದ್ರೋಹ, ಜನರಿಗೆ ಮಾಡುವ ವಂಚನೆ. ಅಂಥವರು ಜನಪ್ರತಿನಿಧಿಗಳಾಗಿರಲು ಯೋಗ್ಯರಲ್ಲ. ಈ ರೀತಿ ಮಾಡುವವರು ಮತ್ತೆಂದೂ ಸ್ಪರ್ಧಿಸಲು ಸಾಧ್ಯವಾಗದಂತಹ ನಿಯಮ ನಮ್ಮಲ್ಲಿ ಇಲ್ಲ. ಆದರೆ, ಇಂಥ ನಾಯಕರಿಗೆ ಅಂಕುಶ ಹಾಕುವ ಅಧಿಕಾರ ಜನರ ಕೈಯಲ್ಲಿ ಇದೆ.

ಮತ್ತೆಂದೂ ಈ ಮಂದಿ ಜನಪ್ರತಿನಿಧಿಗಳಾಗದಂತೆ ಅವರು ನೋಡಿಕೊಳ್ಳಬೇಕು. ಲೋಕಸಭಾ ಚುನಾವಣೆ ಬಾಗಿಲು ಬಡಿಯುತ್ತಿದೆ. ಲೋಕಸಭೆಯ ಚುನಾವಣಾ ವಿಚಾರಗಳು ರಾಜ್ಯಕ್ಕೆ ಸೀಮಿತವಾದವುಗಳು ಅಲ್ಲದೇ ಇರಬಹುದು. ಆದರೆ, ಈ ಏಳು ತಿಂಗಳ ಅವಧಿಯಲ್ಲಿ ಮಾಡಿದ್ದನ್ನೂ ಜನರ ಮುಂದಿಟ್ಟು ಮತ ಕೇಳಬೇಕಾಗುತ್ತದೆ. ಜನರ ಮುಂದೆ ಹೇಳಿಕೊಳ್ಳಲು ಸಮ್ಮಿಶ್ರ ಸರ್ಕಾರಕ್ಕೆ ಏನೂ ಇರಬಾರದು ಎಂಬ ತಂತ್ರವನ್ನು ಬಿಜೆಪಿ ಮಾಡಿದಂತೆ ಕಾಣಿಸುತ್ತಿದೆ. ಪ್ರತಿದಿನವೂ ಒಂದಿಲ್ಲೊಂದು ಆತಂಕದಲ್ಲಿಯೇ ಸರ್ಕಾರ ಇರುವಂತೆ ನೋಡಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದರೆ ಅಧಿಕೃತ ವಿರೋಧ ಪಕ್ಷದ ಈ ನಡೆಯಿಂದ ನಷ್ಟ ಆಗಿರುವುದು ಮಾತ್ರ ಜನರಿಗೆ.

ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರಲು ಇನ್ನು ಐದಾರು ವಾರಗಳಷ್ಟೇ ಬಾಕಿ ಇವೆ. ಈಗಲಾದರೂ ಎಚ್ಚೆತ್ತುಕೊಳ್ಳದೇ ಹೋದರೆ ಅಧಿಕಾರದಲ್ಲಿರುವ ಪಕ್ಷಗಳ ಮುಖಂಡರಿಗೆ ಜನರ ಮುಖ ನೋಡುವ ಧೈರ್ಯ ಹೇಗೆ ಬರುತ್ತದೆ? ತಾನೇ ಸೃಷ್ಟಿಸಿದ ಪರಿಸ್ಥಿತಿ ಬಿಜೆಪಿಗೂ ಅಪಾಯಕಾರಿಯೇ ಆಗಿದೆ. ತಂತ್ರದಲ್ಲಿ ಬಿಜೆಪಿ ಯಶಸ್ವಿಯಾದಂತೆ ಕಾಣುತ್ತಿದೆ. ಆದರೆ, ಸರ್ಕಾರವೊಂದು ಕೆಲಸ ಮಾಡದಂತೆ ಮಾಡುವುದು ಹೊಣೆಯರಿತ ವಿರೋಧ ಪಕ್ಷಕ್ಕೆ ಭೂಷಣವಲ್ಲ. ಅದು ವಿರೋಧ ಪಕ್ಷದ ಕರ್ತವ್ಯವೂ ಅಲ್ಲ. ಸರ್ಕಾರವೊಂದು ಕೆಲಸ ಮಾಡುವಂತೆ ಒತ್ತಡ ಹೇರುವುದೇ ವಿರೋಧ ಪಕ್ಷದ ಜವಾಬ್ದಾರಿ. ತಮ್ಮ ತಮ್ಮ ಹೊಣೆಯನ್ನು ಈ ಮೂರೂ ಪಕ್ಷಗಳು ಈಗಲಾದರೂ ಅರಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT