ಬುಧವಾರ, ಜೂನ್ 3, 2020
27 °C

ಮೇಲ್ಜಾತಿ ಬಡವರಿಗೆ ಮೀಸಲಾತಿ ಅನುಷ್ಠಾನ ಹಾದಿಯಲ್ಲಿ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿಂದಿ ಸೀಮೆಯ ಹೃದಯ ಭಾಗದ ರಾಜ್ಯಗಳು ಎಂದೇ ಬಣ್ಣಿಸಲಾಗಿರುವ ಮಧ್ಯಪ್ರದೇಶ, ಛತ್ತೀಸಗಡ ಹಾಗೂ ರಾಜಸ್ಥಾನದ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಎದುರಿಸಿದ ಸೋಲು ನರೇಂದ್ರ ಮೋದಿ ಮತ್ತು ಅವರ ಸಂಗಾತಿಗಳ ನಿದ್ದೆ ಕೆಡಿಸಿದೆ ಎಂಬ ಮಾತಿಗೆ ಪುರಾವೆಗಳು ಹೊರಬೀಳತೊಡಗಿವೆ.

ಲೋಕಸಭಾ ಚುನಾವಣೆ ಕದ ಬಡಿಯುತ್ತಿರುವ ಹೊತ್ತಿನಲ್ಲಿ ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಜನರಿಗೆ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸುವ ಧಾವಂತ ಈ ಪುರಾವೆಗಳ ಪೈಕಿ ಮೊದಲನೆಯದು. ಚುನಾವಣೆ ಗೆಲ್ಲಲು ಮೋದಿ- ಶಾ ಜೋಡಿಯ ಇಂದ್ರಜಾಲದ ಜೋಳಿಗೆಯಿಂದ ಮುಂಬರುವ ದಿನಗಳಲ್ಲಿ ಯಾವ್ಯಾವ ಅಚ್ಚರಿಗಳು ಹೊರಜಿಗಿಯಲಿವೆ ಎಂದು ಊಹಿಸುವುದು ಕಠಿಣ. ಮೋದಿಯವರ ಈ ಹಠಾತ್ ನಡೆಯನ್ನು ಚುನಾವಣಾ ರಾಜಕಾರಣದ ‘ಮಾಸ್ಟರ್ ಸ್ಟ್ರೋಕ್’ ಎಂದು ವ್ಯಾಖ್ಯಾನಿಸುವವರು ಇದ್ದಾರೆ. ಆದರೆ ಕಾರ್ಯಕಾರಣಗಳು- ಸ್ಥಿತಿಗತಿಗಳು ಹಾಗೂ ಚುನಾವಣೆಗೆ ಮುನ್ನ ಇಟ್ಟಿರುವ ಈ ಹೆಜ್ಜೆಯ ಅಂತರಂಗ ಭೇದಿಸಿದರೆ ಒಳಗೆ ಕಾಣುವುದು ಹತಾಶೆಯಲ್ಲದೆ ಇನ್ನೇನೂ ಅಲ್ಲ.

ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಸಂಸತ್ತಿನ ಮೂರನೆಯ ಎರಡರಷ್ಟು ಬಹುಮತ ಅಗತ್ಯ. ಆನಂತರ ದೇಶದ ಒಟ್ಟು ವಿಧಾನಸಭೆಗಳ ಪೈಕಿ ಶೇ 50ರಷ್ಟು ವಿಧಾನಸಭೆಗಳ ಅನುಮೋದನೆ ಬೇಕೇ ಬೇಕು. ಜೊತೆಗೆ ಕಾನೂನು ಪರೀಕ್ಷೆಯ ಸವಾಲನ್ನು ಹಾದು ಹೊರಬೀಳಬೇಕು. ಸಂವಿಧಾನದ ಮೂಲ ಸ್ವರೂಪವನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವ ತಿದ್ದುಪಡಿಗೆ ಅವಕಾಶ ಇಲ್ಲ. ಮೀಸಲಾತಿಯ ಕ್ರಮವು ಏಳುಬೀಳಿನ ಈ ಹಾದಿಯನ್ನು ಕೆಲವೇ ತಿಂಗಳುಗಳಲ್ಲಿ ಹಾದು ಜಾರಿಗೆ ಬರುವುದು ಪವಾಡವೇ ಸರಿ. ಈ ಮೀಸಲಾತಿ ಕ್ರಮವನ್ನು ಬಹುತೇಕ ಪ್ರತಿಪಕ್ಷಗಳು ಸ್ವಾಗತಿಸಿವೆ. ಆದರೆ ಇದನ್ನು ಜಾರಿಗೊಳಿಸಲು ಆಡಳಿತಾರೂಢರು ಹೊಂದಿರುವ ಬದ್ಧತೆ ಕುರಿತು ಸಂದೇಹ ವ್ಯಕ್ತಪಡಿಸಿವೆ.

ಚುನಾವಣೆ ಹೊಸ್ತಿಲಲ್ಲಿ ಮತದಾರರ ಮೂಗಿಗೆ ಹಚ್ಚಿರುವ ತುಪ್ಪವಿದು ಎಂದು ಟೀಕಿಸಿವೆ. ಮೇಲ್ಜಾತಿಗಳ ಬಡವರಿಗೆ ಮೀಸಲು ಕಲ್ಪಿಸುವ ಪ್ರಾಮಾಣಿಕ ಇರಾದೆ ಮೋದಿ ನೇತೃತ್ವದ ಸರ್ಕಾರಕ್ಕೆ ಇದ್ದಿದ್ದರೆ ನಾಲ್ಕೂವರೆ ವರ್ಷಗಳ ಕಾಲ ಯಾಕೆ ಕಾಯಬೇಕಿತ್ತು ಎಂದು ಪ್ರಶ್ನಿಸಿವೆ. ಭಾರತದ ಧನಿಕರು ವಿದೇಶಗಳಲ್ಲಿ ಬಚ್ಚಿಟ್ಟಿರುವ ಕಪ್ಪುಹಣವನ್ನು ವಾಪಸು ತಂದು ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ ತಲಾ ₹ 15 ಲಕ್ಷ ಹಾಕುವುದಾಗಿ ಮೋದಿಯವರು ತೋರಿದ್ದ ಕನ್ನಡಿಯ ಗಂಟಿನ ಕತೆಯ ಪುನರಾವರ್ತನೆ ಇದು ಎಂದೂ ಅವರ ರಾಜಕೀಯ ವಿರೋಧಿಗಳು ಮೂಗು ಮುರಿದಿದ್ದಾರೆ. ಈವರೆಗಿನ ಮೋದಿ ಆಡಳಿತವನ್ನು ಪರಿಶೀಲನೆಗೆ ಒಡ್ಡಿದರೆ ಪ್ರತಿಪಕ್ಷಗಳ ಈ ಪ್ರಶ್ನೆ-ಸಂದೇಹ ನಿರಾಧಾರ ಅಲ್ಲ ಅನಿಸುತ್ತದೆ.

ಪರಿಶಿಷ್ಟ ಜಾತಿ- ಪಂಗಡಗಳ ಜನರ ಮೇಲೆ ದೌರ್ಜನ್ಯ ತಡೆ ಕಾಯ್ದೆಗೆ ಅಗತ್ಯ ತಿದ್ದುಪಡಿ ಮೂಲಕ ಮೋದಿ ನೇತೃತ್ವದ ಸರ್ಕಾರ ಇತ್ತೀಚೆಗೆ ಪುನಃ ಬಲ ತುಂಬಿತ್ತು. ಸರ್ಕಾರದ ಈ ಕ್ರಮವು ವಿಶೇಷವಾಗಿ ಹಿಂದಿ ರಾಜ್ಯಗಳಲ್ಲಿ ಮೇಲ್ಜಾತಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಮಧ್ಯಪ್ರದೇಶ, ಛತ್ತೀಸಗಡ ಹಾಗೂ ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಸೋಲಿಗೆ ಈ ಅಂಶವೂ ಕಾರಣ ಎಂಬುದು ಪಕ್ಷದ ಅಂತರಂಗದ ಅನಿಸಿಕೆ. ಅಯೋಧ್ಯೆಯ ಬಾಬರಿ ಮಸೀದಿ ನೆಲಸಮ ಆದ ಜಾಗದಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಿಸುವ ಧಾರ್ಮಿಕ ಧ್ರುವೀಕರಣಕ್ಕೂ ಮತದಾರ ಸ್ಪಂದಿಸಿರುವ ಸೂಚನೆಗಳಿಲ್ಲ. ನೋಟು ರದ್ದತಿ ಕ್ರಮವನ್ನು ಕ್ರಾಂತಿಕಾರಕ ಎಂದು ಸಾರಲಾಗಿತ್ತು. ಬೆಟ್ಟ ಅಗೆಯಲಾಯಿತು, ಆದರೆ ಇಲಿಯೂ ಸಿಗಲಿಲ್ಲ ಎಂಬ ಕಹಿಸತ್ಯ ಜನಮನಕ್ಕೆ ಇಳಿಯತೊಡಗಿದೆ.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯು ಆಂಶಿಕವಾಗಿಯೂ ಈಡೇರಿಲ್ಲ. ರಫೇಲ್ ವಿಮಾನಗಳ ಖರೀದಿಯಲ್ಲಿ ಏನೋ ಎಡವಟ್ಟು ನಡೆದಿದೆ ಎಂಬ ಅನುಮಾನದ ಬೀಜ ಮೊಳೆಯತೊಡಗಿದೆ. ನಾಲ್ಕೂವರೆ ವರ್ಷಗಳ ಹಿಂದೆ ಮತದಾರರ ಕಣ್ಣ ಮುಂದೆ ಹೆಣೆಯಲಾಗಿದ್ದ ‘ಅಚ್ಛೇ ದಿನ’ಗಳ ಕನಸು ಈಗಲೂ ನನಸಾಗಿಲ್ಲ. ಆದರೆ ಮೋದಿಯವರಿಗೆ ಎದುರಾಗಿ ಮಜಬೂತಾದ ರಾಜಕೀಯ ಪರ್ಯಾಯವನ್ನು ಕಟ್ಟಿ ನಿಲ್ಲಿಸಲು ವಿರೋಧ ಪಕ್ಷಗಳು ಈ ಹಂತದಲ್ಲೂ ಸಫಲ ಆಗಿಲ್ಲ. ಮೋದಿಯವರು ಸೊರಗಿರಬಹುದು, ಆದರೆ ಸೋತಿದ್ದಾರೆ, ನಿರ್ಗಮನದ ಹಾದಿಯಲ್ಲಿದ್ದಾರೆ ಎನ್ನುವುದು ಶಕ್ತಿ ರಾಜಕಾರಣದಲ್ಲಿ ಅವಸರದ ನಿರ್ಣಯ ಆದೀತು.

ಎಲ್ಲ ಸಮುದಾಯಗಳಿಗೂ ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಗಲಿ ಎಂಬ ವಾದವಿದೆ. ಅಸಮಾನ ಸಮಾಜದಲ್ಲಿ ಮೀಸಲಾತಿಯ ಮೂಲ ಆಶಯವನ್ನು ಲಘುವಾಗಿಸುವವರು ಈ ವಾದವನ್ನು ಗಮನಿಸಬೇಕು. ಉದ್ಯೋಗಾವಕಾಶಗಳ ತೀವ್ರ ಬರಗಾಲದ ದಿನಗಳಲ್ಲಿ ಮೇಲ್ಜಾತಿಗಳ ಬಡವರಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವದ ಹಿಂದೆ ಪ್ರಧಾನವಾಗಿ ಕೆಲಸ ಮಾಡಿರುವುದು ರಾಜಕೀಯ ಲಾಭದ ಲೆಕ್ಕಚಾರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು