ಖಾಲಿ, ಖಾಲಿ ಕುರ್ಚಿಗಳು, ಟೇಬಲ್ ಮೇಲೆ ಪೇರಿಸಿಟ್ಟ ಕಡತಗಳು, ಸಾಹೇಬರ ಭೇಟಿಗಾಗಿ ಬಾಗಿಲಲ್ಲಿಯೇ ಕಾಯುತ್ತಾ ಕುಳಿತಿರುವ ಜನಸಾಮಾನ್ಯರು... ಸರ್ಕಾರಿ ಕಚೇರಿ ಎಂದೊಡನೆ ಥಟ್ಟನೆ ಮನಸ್ಸಿನಲ್ಲಿ ಮೂಡುವಂತಹ ಬಿಂಬಗಳು ಇವು. ‘ಹೊತ್ತು ಗೊತ್ತಿಲ್ಲದಂತೆ ಚಹಾ–ಕಾಫಿ ಸೇವನೆಗಾಗಿ ತೆರಳುವುದು ಸರ್ಕಾರಿ ಸಿಬ್ಬಂದಿಗೆ ಅಂಟಿಬಿಟ್ಟಿರುವ ಒಂದು ಕೆಟ್ಟ ಚಾಳಿ. ಹೀಗಾಗಿ, ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರ ಯಾವ ಕೆಲಸವೂ ಸಕಾಲದಲ್ಲಿ ಆಗುವುದಿಲ್ಲ’ ಎಂದು ಲೋಕಾಯುಕ್ತರಾಗಿದ್ದ ಎನ್. ವೆಂಕಟಾಚಲ ಅವರು ಒಮ್ಮೆ ಹೇಳಿದ್ದರು.

ಇದೀಗ ನೌಕರರ ಅಂತಹ ವರ್ತನೆ ವಿರುದ್ಧ ಚಾಟಿ ಬೀಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಸರ್ಕಾರಿ ಕಚೇರಿಗಳಲ್ಲಿ ತೀರಾ ಅಗತ್ಯವಾಗಿದ್ದ ಕರ್ತವ್ಯಪ್ರಜ್ಞೆ ಮತ್ತು ಕೆಲಸದ ಶಿಸ್ತನ್ನು ಮೂಡಿಸಲು ಒಂದು ಉಪಕ್ರಮ ಕೈಗೊಂಡಿದೆ. ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡದಲ್ಲಿ ಕೆಲಸ ಮಾಡುವ ಸಚಿವಾಲಯದ ಸಿಬ್ಬಂದಿಗೆ ಹಲವು ನಿರ್ದೇಶನಗಳನ್ನು ನೀಡಲಾಗಿದೆ. ಇದು, ಜರೂರಾಗಿ ಆಗಬೇಕಿರುವ ಕ್ರಮವಾಗಿತ್ತು. ಈ ದಿಸೆಯಲ್ಲಿ ಇಲಾಖೆಯ ಮುಖ್ಯಸ್ಥರು ಈಗಲಾದರೂ ಎಚ್ಚೆತ್ತುಕೊಂಡಿರುವುದು ಸ್ವಾಗತಾರ್ಹ.

ದಿನದ ಯಾವುದೇ ಸಮಯದಲ್ಲಿ ಹೋದರೂ ಅಧಿಕಾರಿಗಳು ಕೈಗೆ ಸಿಗದಿರುವುದು ಮತ್ತು ‘ಸಾಹೇಬರು ಕಾಫಿಗೆ ಹೋಗಿದ್ದಾರೆ’ ಎನ್ನುವ ಸಿದ್ಧ ಉತ್ತರವೇ ಸದಾ ದೊರೆಯುವ ಕಾರಣ, ಸರ್ಕಾರಿ ಕಚೇರಿಗಳೆಂದರೆ ಜನಸಾಮಾನ್ಯರ ಪಾಲಿಗೆ ರೇಜಿಗೆ ಹುಟ್ಟಿಸುವಂತಹ ತಾಣಗಳೇ ಆಗಿಬಿಟ್ಟಿವೆ. ಹಿರಿಯ ಅಧಿಕಾರಿಗೆ ಕಚೇರಿ ವೇಳೆಯಲ್ಲಿ ಹೊರಗೆ ಅಡ್ಡಾಡುವ ಚಾಳಿ ಅಂಟಿದ್ದರಂತೂ ಮುಗಿದೇಹೋಯಿತು. ‘ಮೀಟಿಂಗ್’ ನೆಪವನ್ನು ಕೆಳಹಂತದ ಸಿಬ್ಬಂದಿ ಮುಂದಿಡುತ್ತಾರೆ. ‘ಕರ್ತವ್ಯ ನಿರ್ವಹಣೆಯಲ್ಲಿ, ಕಾರ್ಯಕ್ಷಮತೆ ತೋರುವಲ್ಲಿ ಸರ್ಕಾರಿ ಸಿಬ್ಬಂದಿ ಉಡಾಫೆಯ ಮನೋಭಾವ ತೋರುತ್ತಾರೆ’ ಎನ್ನುವುದು ಅವರ ಮೇಲಿರುವ ಸಾಮಾನ್ಯ ದೂರು. ರಾಜಕೀಯ ಹಾಗೂ ಜಾತಿ ಪ್ರಭಾವ ಬಳಸಿಕೊಂಡು ಆಯಕಟ್ಟಿನ ಸ್ಥಾನದಲ್ಲಿ ಕೂರುವ ಕೆಲವು ಅಧಿಕಾರಿಗಳು, ಭ್ರಷ್ಟಾಚಾರದಲ್ಲಿ ಮುಳುಗೇಳುವುದರಿಂದ ಸರ್ಕಾರಿ ಕಚೇರಿಗಳ ಕಾರ್ಯದಕ್ಷತೆಯು ಪಾತಾಳ ಕಾಣುವಂತಾಗಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲದೇ ಇಲ್ಲ.

ಸೇವಾ ಭದ್ರತೆ ಎನ್ನುವುದು ಕೆಲಸದ ಉಮೇದನ್ನು ಹೆಚ್ಚಿಸಬೇಕೇ ವಿನಾ ಕರ್ತವ್ಯಪ್ರಜ್ಞೆಯಿಂದ ದೂರವಾಗಿ ಕಾಲಹರಣ ಮಾಡಲು ಉತ್ತೇಜನ ನೀಡುವಂತೆ ಆಗಬಾರದು. ಸರ್ಕಾರಿ ಕೆಲಸವೆಂದರೆ ಅದು ಜನಸಾಮಾನ್ಯರ ಸೇವೆಗೆ ಸಿಕ್ಕ ಅವಕಾಶ ಎಂಬ ಮೂಲ ಆಶಯವನ್ನೇ ಮರೆತವರಿಂದ ಇಂತಹ ಎಡವಟ್ಟುಗಳು ಆಗುತ್ತಿವೆ. ದುರದೃಷ್ಟವಶಾತ್ ಇಂಥವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಇಡೀ ನೌಕರ ವಲಯಕ್ಕೆ ಕಳಂಕ ಅಂಟಿಕೊಂಡಿದೆ.

ಆಡಳಿತ ಸುಧಾರಣೆ ಎನ್ನುವುದು ಜರಡಿಯಿಂದ ಬೀಳುವ ನೀರಿನಂತೆ ಎಲ್ಲ ಹಂತಗಳಲ್ಲೂ ಹರಡಬೇಕು. ಹಿರಿಯ ಅಧಿಕಾರಿಗಳು ತೋರುವ ಕಾರ್ಯಕ್ಷಮತೆ ಮತ್ತು ಸಮಯಪ್ರಜ್ಞೆಯು ಕಚೇರಿಯ ಎಲ್ಲ ಸಿಬ್ಬಂದಿಯನ್ನೂ ಸರಿದಾರಿಗೆ ತರಬಲ್ಲುದು. ಆದರೆ, ಹಾಗೆ ಮಾದರಿಯಾಗಿ ವರ್ತಿಸುವವರ ಸಂಖ್ಯೆ ತೀರಾ ಕಡಿಮೆ. ಅಧಿಕಾರಿಗಳು ಕೆಲಸದ ಸ್ಥಳ ಬಿಟ್ಟು ಹೋಗುವಾಗ ಇನ್ನುಮುಂದೆ ಚಲನವಲನ ವಹಿಯಲ್ಲಿ ದಾಖಲಿಸಬೇಕು, ಮೇಲಧಿಕಾರಿಗಳ ಅನುಮತಿ ಇಲ್ಲದೆ ಕಚೇರಿ ಬಿಟ್ಟು ತೆರಳಬಾರದು, ಚಲನವಲನ ವಹಿಯಲ್ಲಿ ಮಾಹಿತಿ ದಾಖಲಿಸದೇ ಹೋದರೆ ಅದನ್ನು ಅನಧಿಕೃತ ಗೈರು ಎಂದು ಭಾವಿಸಬೇಕು, ಹಿರಿಯ ಅಧಿಕಾರಿಗಳು ಆಗಾಗ ಪರಿವೀಕ್ಷಣೆ ನಡೆಸಬೇಕು ಎಂದು ನಿರ್ದೇಶನಗಳನ್ನು ನೀಡಲಾಗಿದೆ.

ರಾಜ್ಯ ಸರ್ಕಾರದ ಈಗಿನ ಮುಖ್ಯ ಕಾರ್ಯದರ್ಶಿಯವರು ಈಹಿಂದೆ ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ಇಂತಹ ಸೂಚನೆಗಳನ್ನು ಪಾಲಿಕೆಯ ಎಲ್ಲ ವಿಭಾಗಗಳಿಗೆ ನೀಡಿದ್ದರು. ಆದರೆ, ಆ ಸೂಚನೆಗಳಿಂದ ಹೆಚ್ಚಿನ ಬದಲಾವಣೆ ಆಗಲಿಲ್ಲ. ಸುತ್ತೋಲೆಗಳನ್ನು ಹೊರಡಿಸಿ ಸುಮ್ಮನಾದರೆ ಶಿಸ್ತು ಮೂಡುವುದಿಲ್ಲ. ಮೇಲಧಿಕಾರಿಗಳು ಇದನ್ನು ಮೊದಲು ಪಾಲನೆ ಮಾಡಬೇಕು. ತಮ್ಮ ಅಧೀನ ಸಿಬ್ಬಂದಿಯೂ ಅನುಸರಿಸುವಂತೆ ನಿರಂತರ ನಿಗಾ ವಹಿಸಬೇಕು. ಅಶಿಸ್ತಿನ ನಡವಳಿಕೆಗಳು ಅಧಿಕಾರಿ–ಸಿಬ್ಬಂದಿಯ ಸೇವಾಪುಸ್ತಕದಲ್ಲಿ ನಮೂದಾಗಬೇಕು. ದಕ್ಷತೆಗೆ ಉತ್ತೇಜನ ಸಿಗಬೇಕು. ಅಶಿಸ್ತಿಗೆ ಶಾಸ್ತಿಯೂ ಆಗಬೇಕು. ಆಗಮಾತ್ರ ಉತ್ತಮ ಆಡಳಿತದ ಫಲ ನಾಗರಿಕರಿಗೆ ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.