ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳ ವಿರುದ್ಧದ ಪ್ರಕರಣ ರಾಜಕೀಯ ಬಣ್ಣ ಪಡೆಯದಿರಲಿ

Last Updated 4 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಕರ್ನಾಟಕದ ಕಾಂಗ್ರೆಸ್‌ ಮುಖಂಡ, ಕನಕಪುರ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದೆಹಲಿಯಲ್ಲಿ ಬಂಧಿಸಿರುವ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. 2017ರ ಆಗಸ್ಟ್‌ನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಮತ್ತು ದೆಹಲಿಯಲ್ಲಿ ಶಿವಕುಮಾರ್‌ ನಿವಾಸ ಮತ್ತು ಇತರ ಆಸ್ತಿಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದಾಳಿಯ ವೇಳೆ ಅವರ ದೆಹಲಿ ನಿವಾಸದಿಂದ ‘ಲೆಕ್ಕಪತ್ರ ಇಲ್ಲದ’ ₹ 8.59 ಕೋಟಿ ಹಣವನ್ನೂ ಜಪ್ತಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ, ತೆರಿಗೆ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪ ಹೊರಿಸಿ ಶಿವಕುಮಾರ್‌ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿದ್ದರು. ಆ ಎಫ್‌ಐಆರ್‌ ಆಧಾರದ ಮೇಲೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು2018ರ ಫೆಬ್ರುವರಿಯಲ್ಲಿ ನೋಟಿಸ್‌ ಜಾರಿ ಗೊಳಿಸಿತ್ತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿ ಮೊಕದ್ದಮೆ ದಾಖಲಿಸಿತ್ತು. ಅದಾಗಿ ಒಂದು ವರ್ಷದ ಬಳಿಕ ಈಗ, ಆಗಸ್ಟ್‌ 30ರಂದು ಶಿವಕುಮಾರ್‌ ಅವರನ್ನು ವಿಚಾರಣೆಗಾಗಿ ದೆಹಲಿಗೆ ಕರೆಸಿಕೊಂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಾಲ್ಕು ದಿನಗಳ ಕಾಲ ತೀವ್ರ ವಿಚಾರಣೆ ನಡೆಸಿದರು. ಈ ಮಧ್ಯೆ, ಗಣೇಶ ಹಬ್ಬದ ದಿನ ತಮ್ಮ ತಂದೆಗೆ ಎಡೆ ಇಡುವ ಕಾರ್ಯಕ್ಕೆ ತೆರಳಲೂ ಅವರಿಗೆ ಅವಕಾಶ ನೀಡಲಿಲ್ಲ. ಮಂಗಳವಾರ ರಾತ್ರಿ ಅವರ ಬಂಧನದ ಸುದ್ದಿ ಹೊರಬಿತ್ತು. ಈ ತಿಂಗಳ 13ರವರೆಗೆ ಅವರನ್ನು ಇ.ಡಿ ಕಸ್ಟಡಿಗೆ ನೀಡಲಾಗಿದೆ.

ಇದು, ಆರ್ಥಿಕ ಅವ್ಯವಹಾರಗಳಿಗೆ ಸಂಬಂಧಿ ಸಿದ ಸಹಜ ತನಿಖಾ ವಿಧಾನ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈ ವಿದ್ಯಮಾನದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಈ ಎರಡರ ನಡುವಿನ ಗೆರೆ ತೀರಾ ತೆಳುವು ಎಂಬುದನ್ನು ರಾಜಕೀಯ ವ್ಯಕ್ತಿಗಳ ಪ್ರಕರಣಗಳಿಗೆ ಸಂಬಂಧಿಸಿ ತನಿಖಾ ಸಂಸ್ಥೆಗಳ ನಡೆಗಳು ತೋರಿಸುತ್ತಿವೆ.‘ಬಿಜೆಪಿಯ ರಾಜಕೀಯ ತಂತ್ರಗಳಿಗೆ ತಡೆಗೋಡೆಯಾಗಿ ನಿಂತಿರುವ ವಿರೋಧ ಪಕ್ಷಗಳ ನಾಯಕರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಹೂಡಿ ಅವರ ಧ್ವನಿ ಅಡಗಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿವಿಧ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಕಾಂಗ್ರೆಸ್‌ ದೂರಿದೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ ಅವರನ್ನು ಎರಡು ವಾರಗಳ ಹಿಂದೆ ನಾಟಕೀಯವಾಗಿ ಬಂಧಿಸಲಾಗಿತ್ತು. ಈಗ ಶಿವಕುಮಾರ್‌ ಸರದಿ. ಈ ಎರಡೂ ಪ್ರಕರಣಗಳ ಹಿಂದೆ ದ್ವೇಷ ರಾಜಕಾರಣವೇ ಕೆಲಸ ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ಕರ್ನಾಟಕದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸಿದ ‘ಆಪರೇಷನ್‌ ಕಮಲ’ದ ತಂತ್ರಗಳು ಮತ್ತು ಆ ತಂತ್ರಗಳನ್ನು ವಿಫಲಗೊಳಿಸಲು ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಪ್ರತಿತಂತ್ರಗಳನ್ನು ಗಮನದಲ್ಲಿ ಇರಿಸಿಕೊಂಡು ವಿಶ್ಲೇಷಿಸಿದರೆ, ವಿರೋಧ ಪಕ್ಷಗಳ ಆರೋಪ ಸಂಪೂರ್ಣವಾಗಿ ನಿರಾಧಾರ ಎಂದು ಹೇಳಲಿಕ್ಕೆ ಆಗದು. ಇದಕ್ಕೆ ಪೂರಕವೆಂಬಂತೆ, ಶಿವಕುಮಾರ್ ಬಂಧನದ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ನೀಡಿದ ಹೇಳಿಕೆಗಳನ್ನು ಗಮನಿಸಿದರೆ, ಪ್ರಕರಣಕ್ಕೆ ರಾಜಕೀಯದ ಬಣ್ಣ ಅಂಟಿಕೊಂಡಿರುವುದು ಗೊತ್ತಾಗುತ್ತದೆ.ಆರ್ಥಿಕ ಅವ್ಯವಹಾರಗಳ ಆರೋಪಗಳನ್ನು ಎದುರಿಸು ತ್ತಿರುವ ನಾಯಕರು ಬಹುಪಾಲು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದ್ದಾರೆ. ಆದರೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ, ಇ.ಡಿ ಮತ್ತು ಆದಾಯ ತೆರಿಗೆ ಇಲಾಖೆಯು ವಿರೋಧ ಪಕ್ಷಗಳ ನಾಯಕರ ವಿರುದ್ಧದ ಪ್ರಕರಣಗಳನ್ನೇ ಕೈಗೆತ್ತಿಕೊಂಡರೆ, ಅವುಗಳ ವಿಶ್ವಾಸಾರ್ಹತೆಗೆ ಧಕ್ಕೆ ಬರುವುದು ಖಂಡಿತ. ಸ್ವತಂತ್ರ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಾದ ತನಿಖಾ ಸಂಸ್ಥೆಗಳು, ಆಳುವ ಪಕ್ಷದ ಒತ್ತಡಕ್ಕೆ ಮಣಿದು ಆಯ್ದ ಪ್ರಕರಣಗಳ ವಿಚಾರಣೆ ನಡೆಸಿದರೆ, ಇಂತಹ ವಿಚಾರಣೆಗಳ ಫಲಶ್ರುತಿಯ ಬಗ್ಗೆ ಜನ ಸಿನಿಕತನ ತೋರುವಂತಾಗುತ್ತದೆ. ಇದೇ ವೇಳೆ, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ತನಿಖಾ ಸಂಸ್ಥೆಗಳ ಕ್ರಮವನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ, ಬಂದ್‌ ನಡೆಸುವುದು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಸರಿಯಾದ ಕ್ರಮವಲ್ಲ. ಕಾನೂನು ಹೋರಾಟಕ್ಕೆ ದಾರಿ ಮುಕ್ತವಾಗಿದೆ. ಹೀಗಿರುವಾಗ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT