ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪರಿಶಿಷ್ಟ ಬಾಲಕನ ಮೇಲೆ ಹಲ್ಲೆ- ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ

Last Updated 21 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ಪರಿಶಿಷ್ಟ ಜಾತಿಯ ಬಾಲಕನ ಮೇಲೆ ನಡೆದಿರುವ ಹಲ್ಲೆ ಮತ್ತು ಸಂತ್ರಸ್ತನ ಕುಟುಂಬಕ್ಕೆ ಒಡ್ಡಲಾಗಿರುವ ಸಾಮಾಜಿಕ ಬಹಿಷ್ಕಾರದ ಬೆದರಿಕೆಯು ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ವಿದ್ಯಮಾನ. ಗ್ರಾಮದೇವತೆ ಭೂತಮ್ಮನ ಮೆರವಣಿಗೆಯ ಸಂದರ್ಭದಲ್ಲಿ ದೇವತೆಯ ಗುಜ್ಜುಕೋಲನ್ನು ಚೇತನ್‌ ಎನ್ನುವ ಬಾಲಕ ಮುಟ್ಟಿರುವುದು ಊರಿನ ಪ್ರಬಲ ಸಮುದಾಯಕ್ಕೆ ಸೇರಿದ ಕೆಲವರ ಅಸಹನೆಗೆ ಕಾರಣವಾಗಿದೆ. ಪರಿಶಿಷ್ಟ ಜಾತಿಯವರ ಸ್ಪರ್ಶದಿಂದ ದೈವಕ್ಕೆ ಅಪಚಾರವಾಯಿತು ಎಂದು ಆಪಾದಿಸಿ, ಬಾಲಕನ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ. ದೇವರಿಗೆ ಮೈಲಿಗೆಯಾದ ಕಾರಣಕ್ಕೆ ದೇವಸ್ಥಾನಕ್ಕೆ ಬಣ್ಣ ಬಳಿಸಲು ₹ 60 ಸಾವಿರ ದಂಡ ತೆರುವಂತೆ ಬಾಲಕನ ಕುಟುಂಬವನ್ನು ಒತ್ತಾಯಿಸಲಾಗಿದೆ. ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಾಲಕನ ತಾಯಿ ದಂಡದ ಹಣ ಹೊಂದಿಸಲು ವಿಫಲರಾಗಿ, ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ. ದಂಡದ ಹಣ ಪಾವತಿಸದೆ ಹೋದರೆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಬೆದರಿಸ
ಲಾಗಿದ್ದು, ಪ್ರಕರಣದ ಕುರಿತು ಗ್ರಾಮದ ಹೊರಗೆ ತಿಳಿಸದಂತೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಸಮಾಜದಲ್ಲಿ ಹೆಪ್ಪುಗಟ್ಟಿರುವ ಜಾತೀಯ ಮನೋಭಾವ ಮತ್ತು ಅದರ ಪರಿಣಾಮವಾದ ಕ್ರೌರ್ಯದ ಅಭಿವ್ಯಕ್ತಿಯಂತಿರುವ ಈ ಪ್ರಕರಣವು ಸಮ ಸಮಾಜಕ್ಕಾಗಿ ಹಂಬಲಿಸುವವರನ್ನು ಕಳವಳಕ್ಕೆ ದೂಡುವಂತಹದ್ದು. ಮಕ್ಕಳನ್ನು ದೇವರ ರೂಪದಲ್ಲಿ ನೋಡುವ ಸಮಾಜದಲ್ಲಿ, ಬಾಲಕನೊಬ್ಬನ ಸ್ಪರ್ಶದಿಂದ ದೇವರಿಗೆ ಮೈಲಿಗೆಯಾಗುತ್ತದೆ ಎಂದು ಕಲ್ಪಿಸಿಕೊಳ್ಳುವುದೇ ಅಸಹನೀಯ. ಪ್ರೇಮ ಮತ್ತು ಮಾನವೀಯತೆಯ ಸಂವಹನಕ್ಕೆ ಕಾರಣವಾಗುವ ಸ್ಪರ್ಶದಲ್ಲಿ ರೋಗಗ್ರಸ್ತ ಮನಸ್ಸುಗಳಿಗಷ್ಟೇ ಮೈಲಿಗೆ ಕಾಣಿಸಲು ಸಾಧ್ಯ.

ಉಳ್ಳೇರಹಳ್ಳಿಯಲ್ಲಿ ದೌರ್ಜನ್ಯಕ್ಕೆ ತುತ್ತಾದ ಬಾಲಕ ಹತ್ತನೇ ತರಗತಿಯ ವಿದ್ಯಾರ್ಥಿ. ಜಾತಿ ಕಾರಣದಿಂದಾಗಿ ಅವಮಾನಕ್ಕೆ ಗುರಿಯಾಗುವ ಘಟನೆಗಳು ಎಳೆಯ ಮಕ್ಕಳ ಮನಸ್ಸಿನ ಮೇಲೆ ಮಾಡಬಹುದಾದ ಗಾಯವನ್ನು ಊಹಿಸಿಕೊಳ್ಳುವುದೂ ಕಷ್ಟ. ಮಕ್ಕಳ ಮನಸ್ಸಿನಲ್ಲಿ ಪ್ರೇಮ ಮತ್ತು ಸಹಬಾಳ್ವೆಗೆ ಅವಕಾಶವಿರುವ ಸಮಾಜದ ಚಿತ್ರಣವನ್ನು ಮೂಡಿಸಬೇಕೇ ಹೊರತು, ಒಡಕಿನ ಬಿಂಬಗಳನ್ನಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿಯ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಜಾತೀಯತೆಯನ್ನು ಆಚರಿಸುವ ಮೂಲಕ ಸಾಮಾಜಿಕ ಸೌಹಾರ್ದವನ್ನು ಕದಡುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜಕ್ಕೆ ಅನಿಷ್ಟವಾದ ಆಚರಣೆಗಳಿಗೆ ಅವಕಾಶವಿಲ್ಲ. ಇಂತಹ ಶಕ್ತಿಗಳ ವಿರುದ್ಧ ಕಾನೂನು ಪ್ರಹಾರದ ಜೊತೆಗೆ, ಸಮಾಜವನ್ನು ಮಾನವೀಯಗೊಳಿಸುವ ಪ್ರಯತ್ನಗಳೂ ವ್ಯಾಪಕವಾಗಿ ನಡೆಯಬೇಕು. ಜಾತಿ ಶ್ರೇಷ್ಠತೆಯ ವ್ಯಸನಕ್ಕೊಳಗಾದವರು ಕಾನೂನನ್ನು ಕೈಗೆ ತೆಗೆದುಕೊಂಡು ದುರ್ಬಲ ವರ್ಗದವರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಸಾಮಾಜಿಕ ಬಹಿಷ್ಕಾರ ಹಾಕುವ ಹಾಗೂ ದಂಡ ವಿಧಿಸುವ ಸರ್ವಾಧಿಕಾರ ಮನಃಸ್ಥಿತಿ ಸಾಂವಿಧಾನಿಕ ವ್ಯವಸ್ಥೆಗೆ ವಿರುದ್ಧವಾದುದು. ಇಂಥ ನಡವಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ದೇಶದ ವಿವಿಧ ಭಾಗಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಕನಿಷ್ಠ ಲಜ್ಜೆಯೂ ಇಲ್ಲದೆ ನಡೆಯುವ ಈ ಘಟನೆಗಳು ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಜಾತೀಯತೆಯನ್ನು ಮತ್ತೆ ಮತ್ತೆ ನೆನ‍ಪು ಮಾಡುವಂತಿವೆ. ಕುಡಿಯುವ ನೀರು, ಆಹಾರ, ಮಾಡುವ ವೃತ್ತಿ ಸೇರಿದಂತೆ ಬೇರೆ ಬೇರೆ ಸಂದರ್ಭಗಳಲ್ಲಿ ಜಾತಿಯನ್ನು ಹೆಸರಿಸಿ ಸಾರ್ವಜನಿಕವಾಗಿ ಅವಮಾನಿಸುವ ಘಟನೆಗಳು ಪುನರಾವರ್ತನೆಗೊಳ್ಳುತ್ತಿವೆ. ಮಕ್ಕಳಿಗೆ ಸಮಾನತೆಯನ್ನು ಕಲಿಸಬೇಕಾದ ಶಾಲೆಗಳು ಕೂಡ ಜಾತಿಯ ತರತಮಗಳಿಂದ ಮುಕ್ತವಾಗಿಲ್ಲ. ಕುಡಿಯುವ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ವಿದ್ಯಾರ್ಥಿಯ ಮೇಲೆ, ಸಮವಸ್ತ್ರ ಧರಿಸದ ಕಾರಣಕ್ಕೆ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆದ ಘಟನೆಗಳು ಇತ್ತೀಚೆಗಷ್ಟೇ ವರದಿಯಾಗಿವೆ. ಈ ಘಟನೆಗಳು ಭಾರತದ ಸಂವಿಧಾನ ಪ್ರತಿಪಾದಿಸುವ ಜಾತ್ಯತೀತ ಸ್ವರೂಪವನ್ನು ಅಣಕ ಮಾಡುವಂತಿವೆ. ಜಾತೀಯತೆಯನ್ನು ತೊಡೆದುಹಾಕುವುದು ಸ್ವಾತಂತ್ರ್ಯಾನಂತರದ ಎಪ್ಪತ್ತೈದು ವರ್ಷಗಳ ನಂತರವೂ ಸಾಧ್ಯವಾಗದಿರುವುದು ದುರದೃಷ್ಟಕರ. ಜಾತಿರೋಗದಿಂದ ನರಳುವ ಮನಸ್ಸುಗಳು ಸಮಾಜವನ್ನು ಮತ್ತೆ ಮತ್ತೆ ಗಾಯಗೊಳಿಸುತ್ತಿವೆ. ಇಂಥ ಪ್ರಯತ್ನಗಳು ಸಾಮಾಜಿಕ ಆರೋಗ್ಯಕ್ಕೆ ಧಕ್ಕೆ ತರುವುದು ಮಾತ್ರವಲ್ಲ, ದೇಶದ ಅಭಿವೃದ್ಧಿಗೂ ಮಾರಕ. ಜಾತೀಯತೆಯನ್ನು ಹೋಗಲಾಡಿಸುವ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಶಾಲೆಗಳು ಮಕ್ಕಳ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಬೇಕು. ಚಿವುಟಿದಷ್ಟೂ ಚಿಗುರುವ ವಿಷವೃಕ್ಷವನ್ನು ಬೇರುಸಮೇತ ನಿರ್ಮೂಲಗೊಳಿಸುವ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಮನಸ್ಸುಗಳನ್ನು ಬೆಸೆಯುವ ಆಂದೋಲನದಲ್ಲಿ ಇಡೀ ಸಮಾಜವೇ ಶಾಲೆಯ ಸ್ವರೂಪ ಪಡೆದುಕೊಳ್ಳುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT