ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಟಿಕಾಯತ್‌ ಮೇಲೆ ಹಲ್ಲೆ ರಾಜ್ಯದ ವರ್ಚಸ್ಸಿಗೆ ಮಸಿ

ಹಲ್ಲೆ ಬಳಿದ ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ
Last Updated 31 ಮೇ 2022, 19:30 IST
ಅಕ್ಷರ ಗಾತ್ರ

ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ರಾಕೇಶ್ ಟಿಕಾಯತ್ ಅವರ ಮೇಲೆ ಹಲ್ಲೆ ಮಾಡಿ, ಮಸಿ ಎರಚಿರುವುದು ಪ್ರತಿಯೊಬ್ಬರೂ ಖಂಡಿಸಬೇಕಾದ ಘಟನೆ. ಈ ಕುಕೃತ್ಯವನ್ನು ಯಾವುದೇ ದೃಷ್ಟಿಕೋನದಿಂದಲೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಜನರೂ ಇದನ್ನು ಒಪ್ಪುವುದಿಲ್ಲ. ಕರ್ನಾಟಕ ರಾಜ್ಯದ ವರ್ಚಸ್ಸಿಗೇ ಮಸಿ ಬಳಿಯುವಂತಹ ಕೆಲಸವಿದು. ಇದರಿಂದ ಕರ್ನಾಟಕದ ಘನತೆ, ಗೌರವಕ್ಕೆ ಕುಂದುಂಟಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ನಂಬಿಕೆ ಇಟ್ಟುಕೊಂಡಿರುವ ಎಲ್ಲರೂ ಇದನ್ನು ಖಂಡಿಸಬೇಕಾಗಿದೆ. ರಾಜ್ಯ ಸರ್ಕಾರ ಯಾವುದೇ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ. ರಾಕೇಶ್ ಟಿಕಾಯತ್ ಅವರು ದೇಶದ ಪ್ರಮುಖ ರೈತ ನಾಯಕ. ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಬಳಿ ಬೃಹತ್ ಹೋರಾಟ ಸಂಘಟಿಸಿ, ಆ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ರೈತರ ಪರವಾದ ನಿರಂತರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ರಾಜ್ಯದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಕುರಿತಂತೆ ಚರ್ಚೆ ನಡೆಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತ ಮುಖಂಡರು ಬೆಂಗಳೂರಿನ ಗಾಂಧಿಭವನದಲ್ಲಿ ಆತ್ಮಾವಲೋಕನ ಮತ್ತು ಸ್ಪಷ್ಟೀಕರಣ ಸಭೆ ಆಯೋಜಿಸಿದ್ದರು. ರಾಜ್ಯದ ರೈತ ನಾಯಕರಲ್ಲದೆ ರಾಷ್ಟ್ರಮಟ್ಟದ ರೈತ ಮುಖಂಡರೂ ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿ ‘ಭಾರತ ರಕ್ಷಣಾ ವೇದಿಕೆ’ ಕಾರ್ಯಕರ್ತರು ಟಿಕಾಯತ್ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಮೇಲೆ ಮಸಿ ಎರಚಿದ್ದಾರೆ. ಹಲ್ಲೆ ನಡೆಸಿದ ಈ ವೇದಿಕೆಯ ಅಧ್ಯಕ್ಷ ಭರತ್ ಶೆಟ್ಟಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೆಲವು ಆರೋಪಿಗಳು ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ಹಾಗೂ ಆರೋಪಿಗಳ ನಡುವೆ ಮಾರಾಮಾರಿ ಕೂಡ ನಡೆದಿದೆ. ಆರೋಪಿಗಳು ‘ಮೋದಿ... ಮೋದಿ’ ಎಂಬ ಘೋಷಣೆಯನ್ನು ಕೂಗುತ್ತಿದ್ದರು ಎಂದೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಟಿಕಾಯತ್ ಮೇಲೆ ಹಲ್ಲೆ ನಡೆಸಿ ರುವುದಕ್ಕೆ ನಿಖರವಾದ ಕಾರಣ ಏನು? ಈ ಸಂಚಿನ ಹಿಂದೆ ಇರುವ ಶಕ್ತಿಗಳು ಯಾವುವು ಎಂಬುದನ್ನು ಪತ್ತೆ ಮಾಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕಾಗಿದೆ. ಟಿಕಾಯತ್‌ ಅವರು ರೈತ ಹೋರಾಟದ ಮೂಲಕ ಕೇಂದ್ರ ಸರ್ಕಾರವನ್ನು ಮಣಿಸಿದ್ದನ್ನು ಜೀರ್ಣಿಸಿಕೊಳ್ಳಲಾಗದ ಶಕ್ತಿಗಳು ಈ ಕೃತ್ಯದ ಹಿಂದಿರಬಹುದು ಎಂಬ ಅನುಮಾನಗಳು ಇವೆ. ಈ ಬಗ್ಗೆಯೂ ನಿಷ್ಪಕ್ಷಪಾತ ತನಿಖೆ ನಡೆಯಲಿ.

ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಅವರ ಮುಖಕ್ಕೂ ಮಸಿ ಬಳಿಯಲಾಗಿತ್ತು. ಅದಕ್ಕೆ ಕಾರಣರಾದವರಿಗೆ ಸೂಕ್ತ ಶಿಕ್ಷೆಯಾಗಿದ್ದರೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ. ಯಾವುದೇ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಇದ್ದರೆ ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಅದನ್ನು ಬಿಟ್ಟು ಯಾವುದೇ ವ್ಯಕ್ತಿಗೆ ಮಸಿ ಬಳಿಯುವುದು, ಹಲ್ಲೆ ನಡೆಸುವುದು ಅಕ್ಷಮ್ಯ. ಟಿಕಾಯತ್ ಅವರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಇರಲಿಲ್ಲ. ಸ್ಥಳದಲ್ಲಿದ್ದ ಪೊಲೀಸರೂ ಮೂಕಪ್ರೇಕ್ಷಕರಾಗಿದ್ದರು ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಈ ಬಗ್ಗೆ ಕೂಡ ಸೂಕ್ತ ತನಿಖೆಯಾಗಬೇಕು. ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ರೈತ ನಾಯಕರು ಸಭೆ ನಡೆಸುತ್ತಿದ್ದಾರೆ ಹಾಗೂ ಈ ಸಭೆಯಲ್ಲಿ ರಾಷ್ಟ್ರಮಟ್ಟದ ರೈತ ಮುಖಂಡರೂ
ಭಾಗಿಯಾಗುತ್ತಿದ್ದಾರೆ ಎನ್ನುವುದು ಪೊಲೀಸರಿಗೆ ತಿಳಿದಿದ್ದರೂ ಸೂಕ್ತ ಬಂದೋಬಸ್ತ್ ಮಾಡದೇ ಇದ್ದುದು ಗಂಭೀರ ಲೋಪ. ಅಲ್ಲದೆ, ರಾಷ್ಟ್ರಮಟ್ಟದ ರೈತ ಮುಖಂಡರ ಮೇಲೆ ಹಲ್ಲೆ ನಡೆಯಬಹುದಾದ ಸಾಧ್ಯತೆಯ ಕುರಿತು ಮಾಹಿತಿ ಸಂಗ್ರಹಿಸಿ, ದಾಳಿ ತಡೆಗೆ ಮುನ್ನೆಚ್ಚರಿಕೆ ನೀಡದೇ ಇದ್ದುದು ಗುಪ್ತಚರ ಇಲಾಖೆಯ ವೈಫಲ್ಯ. ಈ ಬಗ್ಗೆ ಕೂಡ ರಾಜ್ಯ ಸರ್ಕಾರ ಗಮನ ಹರಿಸಬೇಕಾಗಿದೆ. ಹೋರಾಟಗಾರರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ
ನಿರ್ಮಾಣವಾಗುವುದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಭೂಷಣವಲ್ಲ. ಯಾವುದೇ ಕಾರಣಕ್ಕೂ ಇಂತಹ ಗೂಂಡಾಗಿರಿಗೆ ಅವಕಾಶ ನೀಡಬಾರದು. ಘಟನೆಯ ಬಗ್ಗೆ ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು. ಆ ಮೂಲಕ ತಂಟೆಕೋರರಿಗೆ ಪ್ರಬಲವಾದ ಸಂದೇಶವನ್ನು ರವಾನಿಸಬೇಕು. ಜೊತೆಗೆ ರಾಜ್ಯದ ಘನತೆ, ಗೌರವವನ್ನು ಉಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT