ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಸುದ್ದಿ ಪೋರ್ಟಲ್‌ ಮೇಲೆ ದಾಳಿ: ವಾಕ್‌ ಸ್ವಾತಂತ್ರ್ಯ ದಮನದ ಕ್ರಮ

Last Updated 16 ಸೆಪ್ಟೆಂಬರ್ 2021, 19:33 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆ‍ಪಿಯನ್ನು ವಿಮರ್ಶೆಗೆ ಅಥವಾ ಟೀಕೆಗೆ ಒಳಪಡಿಸುವವರ ವಿರುದ್ಧ ಕೇಂದ್ರದ ಕಾನೂನು ಜಾರಿ ಸಂಸ್ಥೆಗಳನ್ನು ಛೂ ಬಿಟ್ಟು, ಅವರನ್ನು ಹದ್ದುಬಸ್ತಿನಲ್ಲಿ ಇರಿಸಲು ಯತ್ನಿಸಲಾಗುತ್ತಿದೆ ಎಂಬ ಆರೋಪ ಕೆಲ ವರ್ಷಗಳಿಂದ ವ್ಯಾಪಕವಾಗಿ ಕೇಳಿಬರುತ್ತಿದೆ. ಅದರ ನಡುವೆಯೇ, ನ್ಯೂಸ್‌ಕ್ಲಿಕ್‌ ಮತ್ತು ನ್ಯೂಸ್‌ಲಾಂಡ್ರಿ ಎಂಬ ಸುದ್ದಿ ಪೋರ್ಟಲ್‌ಗಳ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಶುಕ್ರವಾರ ‘ಸಮೀಕ್ಷೆ’ ನಡೆಸಿದ್ದಾರೆ. ಆದಾಯ ತೆರಿಗೆ ಇಲಾಖೆ ಅಥವಾ ಇನ್ನಾವುದೇ ಕಾನೂನು ಜಾರಿ ಸಂಸ್ಥೆಯು ನಡೆಸುವ ದಾಳಿಯನ್ನು ಯಾವುದೇ ಹೆಸರಿನಲ್ಲಿ ಕರೆದರೂ ಅದು ದಾಳಿಯೇ ಹೌದು. ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ‘ಸಮೀಕ್ಷೆ’ಯು ಸುಮಾರು 12 ತಾಸು ದೀರ್ಘವಾಗಿತ್ತು ಮತ್ತು ದಾಳಿಯೊಂದರ ಎಲ್ಲ ಗುಣಲಕ್ಷಣಗಳನ್ನೂ ಹೊಂದಿತ್ತು. ಸಮೀಕ್ಷೆ ನಡೆಯುತ್ತಿದ್ದಾಗ ತಮ್ಮ ವಕೀಲರು ಅಥವಾ ಅಕೌಂಟೆಂಟ್‌ಗೆ ದೂರವಾಣಿ ಕರೆ ಮಾಡುವುದಕ್ಕೂ ಅಧಿಕಾರಿಗಳು ಅವಕಾಶ ಕೊಡಲಿಲ್ಲ ಎಂದು ನ್ಯೂಸ್‌ಲಾಂಡ್ರಿಯ ಸಹ ಸಂಸ್ಥಾಪಕ ಅಭಿನಂದನ್‌ ಸೇಖ್ರಿ ಹೇಳಿದ್ದಾರೆ. ಸಂಸ್ಥೆಯ ಸಿಬ್ಬಂದಿಯ ಫೋನ್‌ಗಳನ್ನು ಸಮೀಕ್ಷೆಗೆ ಬಂದವರು ಪಡೆದುಕೊಂಡಿದ್ದರು. ತಮ್ಮ ಕಂಪ್ಯೂಟರ್‌ ಮತ್ತು ಫೋನ್‌ ಅನ್ನು ಕೂಡ ಅಧಿಕಾರಿಗಳು ಪಡೆದುಕೊಂಡರು, ಅದರಲ್ಲಿದ್ದ ಮಾಹಿತಿಗಳನ್ನು ತಮ್ಮ ಆಕ್ಷೇಪದ ನಡುವೆಯೇ ನಕಲು (ಕಾಪಿ) ಮಾಡಿಕೊಂಡರು ಎಂದೂ ಅಭಿನಂದನ್ ಹೇಳಿದ್ದಾರೆ. ಇದು ಖಾಸಗಿತನದ ಹಕ್ಕಿನ ಉಲ್ಲಂಘನೆ. ಅಭಿನಂದನ್‌ ಅವರು ಹೇಳಿದಂತೆ, ಕಂಪ್ಯೂಟರ್‌ ಮತ್ತು ಫೋನ್‌ಗಳಲ್ಲಿ ವೈಯಕ್ತಿಕ ಮಾಹಿತಿ ಇರುತ್ತದೆ. ಸುದ್ದಿಯ ಮೂಲಗಳು, ವರದಿಗಾರಿಕೆಯ ಯೋಜನೆ ಮತ್ತು ಇತರ ವೃತ್ತಿಪರ ಮಾಹಿತಿಯೂ ಇರುತ್ತವೆ. ಸರ್ಕಾರದಲ್ಲಿ ಇರುವವರು ಅಥವಾ ಇತರರ ಕೈಗೆ ಈ ಮಾಹಿತಿ ಸಿಕ್ಕರೆ ಅದು ಸೋರಿಕೆಯಾಗಿ, ವ್ಯಕ್ತಿ ಅಥವಾ ಸಂಸ್ಥೆಗೆ ತೊಂದರೆ ಆಗಬಹುದು.

ಭಾರತೀಯ ಸಂಪಾದಕರ ಕೂಟವು ಹೇಳಿದಂತೆ, ಇಂತಹ ನಡವಳಿಕೆ ಮತ್ತು ಕ್ರಿಯೆಯನ್ನು ‘ಸಮೀಕ್ಷೆ’ ಎಂದು ಕರೆಯಲಾಗದು; ಸ್ವತಂತ್ರ ಮಾಧ್ಯಮಕ್ಕೆ ಕೊಟ್ಟ ಕಿರುಕುಳ ಮತ್ತು ಹಾಕಿದ ಬೆದರಿಕೆ ಎಂದೇ ಇದನ್ನು ಪರಿಗಣಿಸಬೇಕು. ಸರ್ಕಾರ ಮತ್ತು ಅದರ ನೀತಿಯ ಬಗ್ಗೆ ಎರಡೂ ವೆಬ್‌ಸೈಟ್‌ಗಳು ವಿಮರ್ಶಾತ್ಮಕವಾಗಿದ್ದವು ಮತ್ತು ಈ ಹಿಂದೆಯೂ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದವು. ನ್ಯೂಸ್‌ಲಾಂಡ್ರಿ ವೆಬ್‌ಸೈಟ್‌ನ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜೂನ್‌ನಲ್ಲಿ ಕೂಡ ದಾಳಿ ನಡೆಸಿದ್ದರು. ನ್ಯೂಸ್‌ಕ್ಲಿಕ್‌ ವೆಬ್‌ಸೈಟ್‌ನ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಫೆಬ್ರುವರಿಯಲ್ಲಿ ದಾಳಿ ನಡೆಸಿದ್ದರು. ನಂತರದಲ್ಲಿ, ನ್ಯೂಸ್‌ಕ್ಲಿಕ್‌ನ ಪ್ರಧಾನ ಸಂಪಾದಕ ಪ್ರಬೀರ್‌ ಪುರಕಾಯಸ್ಥ ಅವರ ವಿರುದ್ಧ ದಂಡನಾತ್ಮಕ ಕ್ರಮ
ಕೈಗೊಳ್ಳುವುದರಿಂದ ದೆಹಲಿ ಹೈಕೋರ್ಟ್‌ ರಕ್ಷಣೆ ನೀಡಿತ್ತು. ನ್ಯೂಸ್‌ಲಾಂಡ್ರಿ ಮತ್ತು ನ್ಯೂಸ್‌ಕ್ಲಿಕ್‌ ವೆಬ್‌ಸೈಟ್‌ ಕಚೇರಿಗಳ ಮೇಲಿನ ದಾಳಿಯು ಪತ್ರಕರ್ತರ ಹಕ್ಕುಗಳ ಮೇಲೆ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಎಂದು ಸಂಪಾದಕರ ಕೂಟವು ಹೇಳಿದೆ. ಇಂತಹ ತನಿಖೆಗಳನ್ನು ನಡೆಸುವಾಗ ಜಾಗರೂಕತೆ ವಹಿಸಬೇಕು ಮತ್ತು ಸಂವೇದನಾಶೀಲವಾಗಿರಬೇಕು. ಆ
ಮೂಲಕ ಸಂವಿಧಾನವು ಖಾತರಿಪಡಿಸಿದ ಹಕ್ಕುಗಳು ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು.

ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳನ್ನು ಬೆದರಿಸುವ ಮತ್ತು ದಂಡಿಸುವ ಕ್ರಮಗಳು ಹೆಚ್ಚುತ್ತಲೇ ಇವೆ. ಹಿಂದಿಯ ಪ್ರಮುಖ ದಿನಪತ್ರಿಕೆ ದೈನಿಕ್‌ ಭಾಸ್ಕರ್‌ ಮತ್ತು ಸುದ್ದಿವಾಹಿನಿ ಭಾರತ್‌ ಸಮಾಚಾರ್‌ ಕಚೇರಿಗಳ ಮೇಲೆ ಜುಲೈನಲ್ಲಿ ದಾಳಿ ಆಗಿತ್ತು. ಸರ್ಕಾರದ ಟೀಕಾಕಾರರ ಮೇಲೆ ಮಾತ್ರವೇ ಇಂತಹ ದಾಳಿಗಳು ನಡೆಯುತ್ತಿವೆ ಎಂಬುದೇ ಈ ದಾಳಿಗಳ ಹಿಂದಿರುವ ಉದ್ದೇಶ ಏನು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸರ್ಕಾರದ ನೀತಿಗಳು ಮತ್ತು ಕಾರ್ಯನಿರ್ವಹಣೆಯನ್ನು ವಿಮರ್ಶೆಗೆ ಒಳಪಡಿಸುವುದೇ ಅಪಾಯಕಾರಿ ಕೆಲಸವಾಗುತ್ತಿದೆ. ಸರ್ಕಾರವನ್ನು ಟೀಕಿಸುವುದು ಸಂವಿಧಾನವು ಖಾತರಿ ನೀಡಿರುವ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ಹಾಗಿದ್ದರೂ ಪತ್ರಕರ್ತರ ಮೇಲೆ ದಾಳಿಗಳಾಗಿವೆ ಮತ್ತು ಅವರನ್ನು ಬೆದರಿಸಲಾಗಿದೆ. ಹಲವು ಪತ್ರಕರ್ತರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರು ಕೆಲಸ ಮಾಡುವ ಸಂಸ್ಥೆಗಳಿಗೆ ಬೆದರಿಕೆ ಹಾಕಲಾಗಿದೆ, ಅವುಗಳ ಮೇಲೆ ಒತ್ತಡ ಹೇರಲಾಗಿದೆ. ಇವೆಲ್ಲವೂ ವಾಕ್‌ ಸ್ವಾತಂತ್ರ್ಯದ ಮೇಲಿನ ದಾಳಿಗಳೇ ಆಗಿವೆ. ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನವು ಬಹಳ ಕೆಳಮಟ್ಟದಲ್ಲಿ ಇದೆ. ಸರ್ಕಾರ, ಅದರ ಸಂಸ್ಥೆಗಳು ಮತ್ತು ಇತರರು ಮಾಧ್ಯಮದ ಮೇಲೆ ನಡೆಸುತ್ತಿರುವ ದಾಳಿಗಳು ಹೀಗೆಯೇ ಮುಂದುವರಿದರೆ ಭಾರತದ ಸ್ಥಾನವು ಇನ್ನಷ್ಟು ಕೆಳಕ್ಕೆ ಕುಸಿಯುತ್ತದೆ. ಮಾಧ್ಯಮ ಸಂಸ್ಥೆಗಳನ್ನು ದಂಡಿಸುವ ಕ್ರಮಗಳು, ಮಾಧ್ಯಮ ವಲಯದಲ್ಲಿ ಭೀತಿ ಹುಟ್ಟಿಸುವ ಉದ್ದೇಶವನ್ನು ಹೊಂದಿವೆ. ಇಂತಹ ದಂಡನಾ ಕ್ರಮಗಳು ನಿಲ್ಲಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT