ಶಾಲೆಗಳಲ್ಲಿ ಈಗ ಜಾರಿಯಲ್ಲಿ ಇರುವ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಪ್ರಧಾನ ಮಂತ್ರಿ ಪೋಷಣ ಯೋಜನೆಗೆ ಬೆಳಗಿನ ತಿಂಡಿಯನ್ನೂ ಸೇರಿಸುವ ಸ್ವಾಗತಾರ್ಹ ಪ್ರಸ್ತಾವವನ್ನು ರಾಜಸ್ಥಾನ, ಕೇರಳ, ಛತ್ತೀಸಗಢ, ಗುಜರಾತ್, ದೆಹಲಿ ಸೇರಿದಂತೆ ಕೆಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸರ್ಕಾರದ ಮುಂದೆ ಇರಿಸಿವೆ. ಬಿಸಿಯೂಟ ಯೋಜನೆಯು ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಒದಗಿಸುತ್ತಿದೆ. ಈ ಯೋಜನೆಯನ್ನು 12ನೇ ತರಗತಿಯವರೆಗೂ ವಿಸ್ತರಣೆ ಮಾಡಬೇಕು ಎಂಬ ಪ್ರಸ್ತಾವವನ್ನು ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಕೇಂದ್ರದ ಮುಂದಿರಿಸಿವೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯು ಬೆಳಗಿನ ತಿಂಡಿಯನ್ನೂ ಒಳಗೊಳ್ಳಬೇಕು ಎಂಬ ಶಿಫಾರಸು ಹೊಸದೇನೂ ಅಲ್ಲ. ಈ ಪ್ರಸ್ತಾವವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್ಇಪಿ) ಇದೆ. ಪೌಷ್ಟಿಕಾಂಶಯುಕ್ತ ಬೆಳಗಿನ ತಿಂಡಿಯು ಮಕ್ಕಳಿಗೆ ಹೆಚ್ಚು ಅನುಕೂಲಕರವಾಗುತ್ತದೆ ಎಂಬ ವಾದ ಇದೆ. 2021–22ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಧಾನ ಮಂತ್ರಿ ಪೋಷಣ ಯೋಜನೆಯಲ್ಲಿ ತಿಂಡಿಯನ್ನೂ ಸೇರಿಸಬೇಕು ಎಂಬ ಪ್ರಸ್ತಾವ ಸಿದ್ಧಪಡಿಸಿತ್ತು. ಆದರೆ, ಇದನ್ನು ಕೇಂದ್ರ ಹಣಕಾಸು ಸಚಿವಾಲಯವು ಒಪ್ಪಿರಲಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯು ತನ್ನ ವರದಿಯೊಂದರಲ್ಲಿ ಈ ಪ್ರಸ್ತಾವದ ಕುರಿತು ಉಲ್ಲೇಖಿಸಿದೆ, ವಿಷಯವನ್ನು ಪರಿಗಣಿಸಲಾಗಿದೆ ಎಂದು ಹೇಳಿದೆ.

ಮಕ್ಕಳ ಆರೋಗ್ಯದ ಕಾಳಜಿಗಾಗಿ ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲು ನೀತಿಯೊಂದನ್ನು ರೂಪಿಸಿ, ಅದನ್ನು ಅನುಷ್ಠಾನಕ್ಕೆ ತರುವ ವಿಚಾರದಲ್ಲಿ ಭಾರತದ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಒಂದು ಮೈಲಿಗಲ್ಲು ಎಂಬುದರಲ್ಲಿ ಎರಡು ಮಾತಿಲ್ಲ. ಈ ಯೋಜನೆಯಿಂದಾಗಿ ಮಕ್ಕಳ ಮೇಲೆ ಹಾಗೂ ಸಮಾಜದ ಮೇಲೆ ಆಗಿರುವ ಧನಾತ್ಮಕ ಪರಿಣಾಮವು ಅಗಾಧ. ಯೋಜನೆಯ ಭಾಗವಾಗಿ ತಿಂಡಿಯನ್ನೂ ನೀಡುವುದರಿಂದ ಬಹಳಷ್ಟು ಮಕ್ಕಳ ನಿತ್ಯದ ಪೌಷ್ಟಿಕಾಂಶದ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತದೆ. 2025ರ ‘ವಿಶ್ವ ಹಸಿವಿನ ಸೂಚ್ಯಂಕ’ದಲ್ಲಿ 123 ದೇಶಗಳ ಪೈಕಿ ಭಾರತವು 102ನೆಯ ಸ್ಥಾನದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಈ ಯೋಜನೆಯ ಭಾಗವಾಗಿ ಬೆಳಗಿನ ತಿಂಡಿಯನ್ನು ಮಕ್ಕಳಿಗೆ ನೀಡುವುದರಿಂದ ದೇಶದ ಕೋಟ್ಯಂತರ ಬಡ ಕುಟುಂಬಗಳಿಗೆ ಆಗುವ ಪ್ರಯೋಜನವನ್ನು ಪದಗಳಲ್ಲಿ ವಿವರಿಸುವುದು ಸುಲಭದಲ್ಲಿ ಆಗುವ ಕೆಲಸವಲ್ಲ. ಭಾರತದಲ್ಲಿ ಮಕ್ಕಳಲ್ಲಿನ ಪೌಷ್ಟಿಕಾಂಶದ ಕೊರತೆ, ದೈಹಿಕ ಬೆಳವಣಿಗೆಯ ಕೊರತೆಯ ಸಮಸ್ಯೆಯು ಬಹಳ ತೀವ್ರವಾಗಿದೆ. ಮಕ್ಕಳಿಗೆ ಬೆಳಗಿನ ತಿಂಡಿಯನ್ನು ಕೊಡುವ ಪ್ರಸ್ತಾವವನ್ನು ಅಗತ್ಯವಿರುವ ಜನವರ್ಗದ ಕಲ್ಯಾಣಕ್ಕೆ ರೂಪಿಸುವ ಯೋಜನೆಯಾಗಿ ಕಾಣಬೇಕು; ಅಂತಹ ಒಂದು ಯೋಜನೆಯ ಪ್ರಯೋಜನವು ಸರ್ಕಾರಗಳು ನೀಡುವ ಹಲವು ಕೊಡುಗೆಗಳ ಒಟ್ಟು ಮೊತ್ತಕ್ಕಿಂತ ಹೆಚ್ಚು ಮೌಲ್ಯಯುತವಾಗಿರುತ್ತದೆ.

ಬೆಳಗಿನ ತಿಂಡಿಯನ್ನು ಕೊಡಲು ಅಂದಾಜು ₹4,000 ಕೋಟಿ ವೆಚ್ಚವಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯವು ಲೆಕ್ಕಹಾಕಿದೆ ಎಂಬ ವರದಿಗಳಿವೆ. ದೇಶದ ವಾರ್ಷಿಕ ಬಜೆಟ್ ವೆಚ್ಚಗಳ ಮೊತ್ತವು ₹50 ಲಕ್ಷ ಕೋಟಿಗೂ ಹೆಚ್ಚು. ಹೀಗಿರುವಾಗ ಬೆಳಗಿನ ತಿಂಡಿಗೆ ಬೇಕಾಗಬಹುದಾದ ಮೊತ್ತವು ನಗಣ್ಯ. ಬೆಳಗಿನ ತಿಂಡಿಯ ಹೆಸರಿನಲ್ಲಿ ಮಕ್ಕಳ ಭವಿಷ್ಯದ ಮೇಲೆ ಮಾಡುವ ಹೂಡಿಕೆಯು, ದೇಶದಲ್ಲಿ ಮುಂದೆ ಬಹಳ ದೊಡ್ಡದಾದ ಹಾಗೂ ಪರಿವರ್ತನೀಯ ಪ್ರಯೋಜನವನ್ನು ತಂದುಕೊಡುವ ಸಾಧ್ಯತೆಯನ್ನು ಹೊಂದಿದೆ. ಬೆಳಗಿನ ತಿಂಡಿಯನ್ನು ಒದಗಿಸಲು ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಇತರ ಮೂಲಸೌಕರ್ಯವು ಶಾಲೆಗಳಲ್ಲಿ ಇದೆ. ಹೀಗಾಗಿ ಪ್ರಸ್ತಾವವನ್ನು ಕಾರ್ಯರೂಪಕ್ಕೆ ತರಲು ಹೆಚ್ಚು ಕಷ್ಟ ಆಗಲಿಕ್ಕಿಲ್ಲ. ತಮಿಳುನಾಡು ಮತ್ತು ತೆಲಂಗಾಣದ ಶಾಲೆಗಳು ಮಕ್ಕಳಿಗೆ ತಿಂಡಿ ನೀಡಲು ಆರಂಭಿಸಿವೆ. ಸ್ಥಳೀಯ ಸಂಸ್ಥೆಗಳು, ಶಿಕ್ಷಕ–ಪೋಷಕರ ಸಂಘಗಳು, ಎನ್ಜಿಒಗಳು ಕೇರಳದ ಕೆಲವೆಡೆ ಇಂತಹ ಸೌಲಭ್ಯ ನೀಡುತ್ತಿವೆ. ಪ್ರಧಾನ ಮಂತ್ರಿ ಪೋಷಣ ಯೋಜನೆಯ ಭಾಗವಾಗಿ ಕರ್ನಾಟಕದಲ್ಲಿ ಮಕ್ಕಳಿಗೆ ಹಾಲು ಕೊಡಲಾಗುತ್ತಿದೆ, ಆಂಧ್ರಪ್ರದೇಶದಲ್ಲಿ ರಾಗಿ ಮಾಲ್ಟ್ ನೀಡಲಾಗುತ್ತಿದೆ. ಇವನ್ನೆಲ್ಲ ಗಮನಿಸಿದಾಗ, ಮಕ್ಕಳಿಗೆ ಬೆಳಗಿನ ತಿಂಡಿ ಕೊಡುವುದನ್ನು ಶಾಲಾ ಶಿಕ್ಷಣ ವ್ಯವಸ್ಥೆಯ ಭಾಗವಾಗಿಸುವುದರ ಅಗತ್ಯ ಎದ್ದು ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.