ಸೌಹಾರ್ದ ಇರಲಿ, ರೈತರಹಿತವೇ ಮುಖ್ಯವಾಗಲಿ

7

ಸೌಹಾರ್ದ ಇರಲಿ, ರೈತರಹಿತವೇ ಮುಖ್ಯವಾಗಲಿ

Published:
Updated:
vvv

ಕೇಂದ್ರ ಸರ್ಕಾರ ಇತ್ತೀಚೆಗೆ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಈಗಾಗಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನೂ ರಚಿಸಲಾಗಿದೆ. ಸುಪ್ರೀಂ ಕೋರ್ಟ್‌ನಿಂದ ಪರಿಷ್ಕೃತವಾಗಿರುವ ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪನ್ನು ಜಾರಿಗೆ ತರಲು ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ರಚನೆಯ ಅಧಿಸೂಚನೆ ಹೊರಡಿಸಿದ್ದಾಗಿ ಕೇಂದ್ರ ಸರ್ಕಾರ ಹೇಳಿದೆ. ಪ್ರಾಧಿಕಾರ ರಚಿಸಿ ಹೊರಡಿಸಲಾದ ಅಧಿಸೂಚನೆಯಲ್ಲಿ ರಾಜ್ಯಕ್ಕೆ ಮಾರಕವಾದ ಅಂಶಗಳು ಇವೆ ಎಂದು ಕರ್ನಾಟಕ ಪ್ರತಿಭಟನೆ ವ್ಯಕ್ತಪಡಿಸಿತ್ತು. ಅದನ್ನು ಲೆಕ್ಕಿಸದೇ ಸಮಿತಿ ರಚಿಸಿದ್ದರಿಂದ ಕೇಂದ್ರ ಸರ್ಕಾರದ ಜೊತೆಗೆ ಸಂಘರ್ಷದ ಹಾದಿ ತುಳಿಯುವ ಮಾತುಗಳನ್ನೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಡಿದ್ದರು. ಆದರೆ ಹಿರಿಯರಾದ ಎಚ್.ಡಿ. ದೇವೇಗೌಡ ಅವರ ಸಲಹೆಯಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಮತ್ತು ಸಮಿತಿಗೆ ಸದಸ್ಯರ ಹೆಸರನ್ನು ಕಳುಹಿಸಿಕೊಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಇದು ಉತ್ತಮ ಬೆಳವಣಿಗೆ. ಕಾವೇರಿ ವಿವಾದ ಶತಮಾನದಷ್ಟು ಹಳೆಯದು. ಹೋರಾಟ, ಪ್ರತಿಭಟನೆ, ಕಾನೂನು ಹೋರಾಟ ಎಲ್ಲವೂ ಈಗ ಮುಗಿದಿವೆ. ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ಆದೇಶವೂ ಬಂದಿದೆ. ಈಗ ಮತ್ತೆ ವಿವಾದವನ್ನು ಬೆಳೆಸುವುದರಲ್ಲಿ ಅರ್ಥವಿಲ್ಲ. ಸಂಘರ್ಷದ ಹಾದಿಯನ್ನು ಬಿಟ್ಟು ಮಾತುಕತೆಯ ಮೂಲಕ ಸೌಹಾರ್ದವಾಗಿ ಎಲ್ಲವನ್ನೂ ಬಗೆಹರಿಸಿಕೊಳ್ಳುವುದು ಉತ್ತಮ. ಕಾವೇರಿ ದಡದಲ್ಲಿರುವ ಎಲ್ಲ ರಾಜ್ಯಗಳ ರೈತರಿಗೆ ಅನುಕೂಲವಾಗುವಂತಹ ವಾತಾವರಣವನ್ನು ಸೃಷ್ಟಿಸುವುದು ಈಗಿನ ತುರ್ತು. ಅದಕ್ಕೆ ತಕ್ಕಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆದುಕೊಳ್ಳಬೇಕು.

ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ನೂರು ವರ್ಷಗಳ ಮಾಹಿತಿ ಒಳಗೊಂಡ ಹೊತ್ತಗೆ ಸಿದ್ಧಪಡಿಸಬೇಕು. ಅದನ್ನು ಕೇಂದ್ರ ಸರ್ಕಾರ ಹಾಗೂ ತಮಿಳುನಾಡಿನ ಎಲ್ಲ ಸಂಸತ್ ಸದಸ್ಯರಿಗೆ ನೀಡಬೇಕು. ಸುಪ್ರೀಂ ಕೋರ್ಟ್ ತೀರ್ಪು ಮುಂದಿಟ್ಟುಕೊಂಡು ರಾಜ್ಯದ ಸ್ಥಿತಿಗತಿಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದೂ ದೇವೇಗೌಡರು ಸಲಹೆ ನೀಡಿರುವುದು ಸರಿಯಾದುದು. ಕಾವೇರಿ ಅಚ್ಚುಕಟ್ಟಿನ ರೈತರು ಪ್ರತಿವರ್ಷ ಇಂತಹುದೇ ಬೆಳೆಯನ್ನು ಬೆಳೆಯುವಂತೆ ಪ್ರಾಧಿಕಾರ ಷರತ್ತು ವಿಧಿಸುವುದು, ರೈತರ ಹೊಲ ಗದ್ದೆಗಳಿಗೆ ಪ್ರತಿ ಹತ್ತು ದಿನಗಳಿಗೊಮ್ಮೆ ಮಾತ್ರ ನೀರು ಬಿಡಬೇಕು, ಹತ್ತು ದಿನಗಳಿಗೊಮ್ಮೆ ನಮ್ಮ ಜಲಾಶಯಗಳಲ್ಲಿ ನೀರಿನ ಲಭ್ಯತೆ ಅಳತೆ ಮಾಡಬೇಕು ಮುಂತಾದ ಅಂಶಗಳ ಬಗ್ಗೆ ರಾಜ್ಯ ಸರ್ಕಾರ ವ್ಯಕ್ತಪಡಿಸಿರುವ ಆತಂಕದಲ್ಲಿಯೂ ತರ್ಕವಿದೆ. ‘ರಾಜ್ಯದ ಆತಂಕದ ಬಗ್ಗೆ ಗಮನ ಹರಿಸಲಾಗುವುದು’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದರು. ಅದನ್ನು ತಕ್ಷಣವೇ ಪೂರೈಸಬೇಕು. ಕಾವೇರಿ ನಿರ್ವಹಣಾ ಪ್ರಾಧಿಕಾರ ಮತ್ತು ಸಮಿತಿಯ ಕಾರ್ಯನಿರ್ವಹಣೆಯಲ್ಲಿ ಯಾವುದೇ ರಾಜ್ಯಕ್ಕೂ ಅನ್ಯಾಯವಾಗಬಾರದು. ರೈತರು ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ಇರಬಾರದು. ಪ್ರಾಧಿಕಾರ ಮತ್ತು ಸಮಿತಿ ರಚನೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕಿತ್ತು ಎಂದು ಕೇಂದ್ರ ಸಚಿವ ಅನಂತಕುಮಾರ ಹೇಳಿರುವುದೂ ಒಪ್ಪತಕ್ಕ ವಿಷಯ. ಆದರೆ ಈಗ ಸಮಿತಿ ರಚನೆಯಾಗಿದೆ. ಒಕ್ಕೂಟ ವ್ಯವಸ್ಥೆಗೆ ಮತ್ತು ಪ್ರಜಾಪ್ರಭುತ್ವ ಮೌಲ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಂಡು ಹೋಗಬೇಕಾದ ಅನಿವಾರ್ಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ. ಯಾವುದೇ ತೀರ್ಮಾನ ಕೈಗೊಳ್ಳುವುದಕ್ಕೂ ರೈತರ ಹಿತವೇ ಮುಖ್ಯವಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !