ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಸಿಇಟಿ: ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಆಗಿರುವ ಲೋಪಕ್ಕೆ ಹೊಣೆ ಯಾರು?

ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಆದ ಲೋಪಕ್ಕೆ ಹೊಣೆಗಾರರು ಯಾರು ಎಂಬುದನ್ನು ಗುರುತಿಸಿ, ತಪ್ಪು ಮಾಡಿದವರನ್ನು ಶಿಕ್ಷಿಸುವ ಕೆಲಸ ಆಗಬೇಕು
Published 1 ಮೇ 2024, 21:55 IST
Last Updated 1 ಮೇ 2024, 21:55 IST
ಅಕ್ಷರ ಗಾತ್ರ

ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಮತ್ತೆ ನಡೆಸದೆ ಇರುವ ತೀರ್ಮಾನ ಕೈಗೊಳ್ಳುವ ಮೂಲಕ ರಾಜ್ಯ ಸರ್ಕಾರವು ಒಳ್ಳೆಯ ಕೆಲಸವನ್ನೇ ಮಾಡಿದೆ. ಮತ್ತೆ ಪರೀಕ್ಷೆ ನಡೆಸುವ ಬದಲು, ಈಚೆಗೆ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಇದ್ದ ಪಠ್ಯಕ್ರಮದ ಆಚೆಗಿನ ಪ್ರಶ್ನೆಗಳನ್ನು ಮೌಲ್ಯಮಾಪನದ ಸಂದರ್ಭದಲ್ಲಿ ಪರಿಗಣಿಸದೇ ಇರಲು ತೀರ್ಮಾನಿಸಲಾಗಿದೆ. ಆದರೆ, ಇದನ್ನು ಕಾರ್ಯರೂಪಕ್ಕೆ ತರುವುದು ಹೇಗೆ, ಇಂತಹ ಪ್ರಕ್ರಿಯೆಯು ನ್ಯಾಯಸಮ್ಮತ ಎಂದು ಪರಿಗಣಿತವಾಗುತ್ತದೆಯೇ ಎಂಬ ಪ್ರಶ್ನೆಗಳು ಉಳಿದುಕೊಂಡಿವೆ. ಅಲ್ಲದೆ, ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಆದ ಲೋಪಕ್ಕೆ ಹೊಣೆಗಾರರು ಯಾರು ಎಂಬುದನ್ನು ಗುರುತಿಸುವ, ತಪ್ಪು ಮಾಡಿದವರನ್ನು ಶಿಕ್ಷಿಸುವ ಕೆಲಸ ಬಾಕಿ ಇದೆ. ಸಿಇಟಿ ಪರೀಕ್ಷೆಯನ್ನು ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬರೆದಿದ್ದರು. ಪಠ್ಯಕ್ರಮಕ್ಕೆ ಹೊರತಾದ ಪ್ರಶ್ನೆಗಳನ್ನು ಪ್ರಶ್ನೆಪತ್ರಿಕೆಯಲ್ಲಿ ಕಂಡ ಅವರು ಗೊಂದಲಕ್ಕೆ, ಆತಂಕಕ್ಕೆ ಒಳಗಾಗಿದ್ದರು. ಸಿಇಟಿ ಪರೀಕ್ಷೆಯು ರಾಜ್ಯದ ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವಲ್ಲಿ ವಿದ್ಯಾರ್ಥಿಗಳ ಅರ್ಹತೆಯನ್ನು ನಿರ್ಧರಿಸುತ್ತದೆ. ಬಹುತೇಕ ಪ್ರಶ್ನೆಗಳು ಸುಲಭವಾಗಿಯೇ ಇದ್ದವು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಆದರೆ ತಾವು ಓದಿದ ಪಠ್ಯದಲ್ಲಿ ಇಲ್ಲದ ವಿಷಯಗಳೂ ಪ್ರಶ್ನೆಪತ್ರಿಕೆಗಳಲ್ಲಿ ಇದ್ದಿದ್ದು ಅವರಿಗೆ ಆಘಾತ ಉಂಟುಮಾಡಿತ್ತು. ಈ ಪ್ರಶ್ನೆಗಳಿಗೆ ಉತ್ತರಿಸಲು ಹಲವರಿಗೆ ಸಾಧ್ಯವಾಗಿರಲಿಲ್ಲ. ಪರಿಸ್ಥಿತಿಯನ್ನು ಆರಂಭದಲ್ಲಿ ಇನ್ನಷ್ಟು ಸಂಕೀರ್ಣಗೊಳಿಸಿದ್ದಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ), ಪಠ್ಯಕ್ರಮಕ್ಕೆ ಹೊರತಾದ ಪ್ರಶ್ನೆಗಳು ಇರಲಿಲ್ಲ ಎಂದು ವಾದಿಸಿತ್ತು. ಪಠ್ಯಕ್ರಮದ ಆಚೆಗಿನ ಪ್ರಶ್ನೆಗಳು ಪ್ರಶ್ನೆಪತ್ರಿಕೆ
ಯಲ್ಲಿ ನುಸುಳಿದ್ದಕ್ಕೆ ನಿರ್ಲಕ್ಷ್ಯವೇ ಕಾರಣ. ಏಕೆಂದರೆ, ಪರಿಷ್ಕೃತ ಪಠ್ಯಕ್ರಮವು ಪದವಿಪೂರ್ವ ಶಿಕ್ಷಣ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಿತ್ತು. ಲೋಪ ಆಗಿದೆ ಎಂಬುದನ್ನು ಕೆಇಎ ಒಪ್ಪಿಕೊಂಡ ನಂತರ ಮರುಪರೀಕ್ಷೆಯ ಸಾಧ್ಯತೆಯ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಹಾಗೆ ಮಾಡಿದಲ್ಲಿ ವಿದ್ಯಾರ್ಥಿಗಳ ಮೇಲೆ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಏಕೆಂದರೆ ವಿದ್ಯಾರ್ಥಿಗಳು ಇನ್ನೂ ಹಲವು ಪ್ರವೇಶ ಪರೀಕ್ಷೆಗಳಿಗೆ ಸಿದ್ಧರಾಗಬೇಕಿದೆ.

ಮರುಪರೀಕ್ಷೆಯು ಶೈಕ್ಷಣಿಕ ವರ್ಷದ ಇತರ ಚಟುವಟಿಕೆಗಳ ಮೇಲೆಯೂ ಕೆಟ್ಟ ಪರಿಣಾಮ ಉಂಟುಮಾಡುತ್ತದೆ. ಕೃಪಾಂಕ ನೀಡಬೇಕು ಎಂಬ ಪ್ರಸ್ತಾವವನ್ನು ತಿರಸ್ಕರಿಸಲಾಯಿತು. ಏಕೆಂದರೆ ಹಾಗೆ ಮಾಡಿದರೆ, ಅಂತಹ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸಿದ ಹಾಗೂ ಯತ್ನಿಸದೇ ಇದ್ದ ವಿದ್ಯಾರ್ಥಿ
ಗಳೆಲ್ಲರಿಗೂ ಸಮಾನವಾಗಿ ಕೃಪಾಂಕ ನೀಡುವುದು ನ್ಯಾಯಸಮ್ಮತ ಆಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ, ಯಾವುದೇ ವಿಷಯದಲ್ಲಿ ಗರಿಷ್ಠ ಆರು ಕೃಪಾಂಕಗಳನ್ನು ಮಾತ್ರ ನೀಡಲು ನಿಯಮಗಳಲ್ಲಿ ಅವಕಾಶ ಇದೆ.

ಮರುಪರೀಕ್ಷೆ ನಡೆಸದೆ ಇರುವ ಹಾಗೂ ಕೃಪಾಂಕ ನೀಡದೆ ಇರುವ ತೀರ್ಮಾನ ಕೈಗೊಳ್ಳುವ ಮೂಲಕ ಸರ್ಕಾರವು ಸರಿಯಾದ ಕೆಲಸ ಮಾಡಿದೆ. ‘ತಜ್ಞರ ಸಮಿತಿಯ ವರದಿ ಪರಿಗಣಿಸಿ, ವಿದ್ಯಾರ್ಥಿಗಳ ಹಿತವನ್ನು ಕಾಯುವುದನ್ನು ಮನಸ್ಸಿನಲ್ಲಿ ಇರಿಸಿಕೊಂಡು, ಪಠ್ಯಕ್ರಮದ ಹೊರಗಿನ ಪ್ರಶ್ನೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದೇ ಇರಲು, ಇನ್ನುಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಮಾತ್ರ ಮೌಲ್ಯ‍ಮಾಪನ ಮಾಡಲು ಕೆಇಎಗೆ ಸೂಚಿಸಲಾಗಿದೆ’ ಎಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ಹೇಳಿದೆ. ಇದನ್ನೇ ಇನ್ನೊಂದು ಮಾತಿನಲ್ಲಿ ಹೇಳಬೇಕು ಎಂದಾದರೆ, ಮೌಲ್ಯಮಾಪನದ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಉತ್ತರಿಸಲು ಯತ್ನಿಸಿದ್ದರೂ ಯತ್ನಿಸಿರದೇ ಇದ್ದರೂ ಪಠ್ಯಕ್ರಮಕ್ಕೆ ಹೊರತಾಗಿದ್ದ ಪ್ರಶ್ನೆಗಳನ್ನು ಪರಿಗಣಿಲಾಗುವುದಿಲ್ಲ. ಈಗಿನ ಸಂದರ್ಭದಲ್ಲಿ ಇದೇ ಸೂಕ್ತವಾದ ಕ್ರಮ.

ಸರಿಯಾದ ನಿಗಾ ಇಲ್ಲದೆ, ಪ್ರಶ್ನೆಪತ್ರಿಕೆಗಳನ್ನು ಅದೆಷ್ಟು ನಿರುತ್ಸಾಹದಿಂದ ಸಿದ್ಧಪಡಿಸಲಾಗುತ್ತದೆ ಎಂಬುದನ್ನು ಈ ಪ್ರಕರಣವು ತೋರಿಸಿದೆ. ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೊದಲು ಹಿರಿಯ ಅಧಿಕಾರಿಗಳು ಯಾರೂ ಗಮನಿಸಿಯೇ ಇರಲಿಲ್ಲ ಎಂಬುದು ಬಹಳ ವಿಚಿತ್ರವಾದ ಸಂಗತಿ. ಮುಂದೆ ಇಂತಹ ಪ್ರಸಂಗ ಎದುರಾಗುವುದನ್ನು ತಡೆಯಲು, ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವಾಗ ಪರೀಕ್ಷಾ ಪ್ರಾಧಿಕಾರವು ಪ್ರಮಾಣಿತ ಕಾರ್ಯಾಚರಣೆ ವಿಧಾನವೊಂದನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಇದು ಸ್ವಾಗತಾರ್ಹವೇ ಆದರೂ ಈಗ ಆಗಿರುವ ಲೋಪಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಸಿಇಟಿ ಪರೀಕ್ಷೆಯು ತಮ್ಮ ಜೀವನದಲ್ಲಿ ಮಹತ್ವದ್ದು ಎಂದು ಪರಿಗಣಿಸಿದ್ದ ಲಕ್ಷಾಂತರ ವಿದ್ಯಾರ್ಥಿಗಳು, ಈ ಬೇಜವಾಬ್ದಾರಿ ನಡೆಯ ಕಾರಣದಿಂದಾಗಿ ಇನ್ನಷ್ಟು ಒತ್ತಡಕ್ಕೆ ಒಳಗಾಗಿದ್ದರು ಎಂಬುದನ್ನು ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT