ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸರ್ಕಾರಿ ಆದೇಶಗಳಲ್ಲಿನ ಗೊಂದಲ; ಮುನ್ನೋಟ–ವಿವೇಚನೆಯ ಕೊರತೆ

Published 22 ಫೆಬ್ರುವರಿ 2024, 19:51 IST
Last Updated 22 ಫೆಬ್ರುವರಿ 2024, 19:51 IST
ಅಕ್ಷರ ಗಾತ್ರ

ನಾಡಗೀತೆ, ಧಾರ್ಮಿಕ ಹಬ್ಬಗಳ ಆಚರಣೆ ಹಾಗೂ ವಸತಿಶಾಲೆಗಳ ಪ್ರವೇಶ ದ್ವಾರದಲ್ಲಿನ ಘೋಷಣಾ ವಾಕ್ಯಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಆದೇಶಗಳಿಂದಾಗಿ ರಾಜ್ಯ ಸರ್ಕಾರ ಮುಜುಗರಕ್ಕೆ ಒಳಗಾಗಿದೆ. ವಾರದ ಅವಧಿಯಲ್ಲಿ ಕೈಗೊಂಡ ಮೂರು ತೀರ್ಮಾನಗಳು, ವ್ಯಾಪಕ ವಿರೋಧದ ನಂತರ ಬದಲಾಗಿರುವುದು ಸರ್ಕಾರಿ ವ್ಯವಸ್ಥೆಯಲ್ಲಿನ ವಿವೇಚನಾರಾಹಿತ್ಯ ಮನಃಸ್ಥಿತಿ ಹಾಗೂ ಗೊಂದಲಗಳನ್ನು ಸೂಚಿಸುವಂತಿದೆ.

ಕೊಂಚ ಎಚ್ಚರ ವಹಿಸಿದ್ದರೆ ತಪ್ಪಿಸಿಕೊಳ್ಳಬಹುದಾಗಿದ್ದ ಮುಖಭಂಗದ ಸಂದರ್ಭವನ್ನು ಅತ್ಯುತ್ಸಾಹ ಹಾಗೂ ವಿವೇಚನೆಯ ಕೊರತೆಯಿಂದ ಸರ್ಕಾರವೇ ಸೃಷ್ಟಿಸಿದಂತಿದೆ. ರಾಷ್ಟ್ರೀಯ ದಿನಾಚರಣೆ
ಗಳನ್ನು ಹೊರತುಪಡಿಸಿ ಯುಗಾದಿ, ರಂಜಾನ್‌, ಕ್ರಿಸ್‌ಮಸ್‌, ಈದ್‌ಮಿಲಾದ್‌ನಂತಹ ಯಾವುದೇ ಧಾರ್ಮಿಕ ಹಬ್ಬಗಳನ್ನು ವಸತಿಶಾಲೆಗಳಲ್ಲಿ ಆಚರಿಸಬಾರದು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು.

ಧಾರ್ಮಿಕ ಹಬ್ಬಗಳನ್ನು ಆಚರಿಸಿದರೆ, ಸಂಬಂಧಪಟ್ಟ ಸಂಸ್ಥೆಯ ಪ್ರಾಂಶುಪಾಲರು ಮತ್ತು ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿತ್ತು. ಈ ನಿರ್ಬಂಧಕ್ಕೆ ತಕರಾರು ವ್ಯಕ್ತವಾಗುತ್ತಿದ್ದಂತೆಯೇ ಸುತ್ತೋಲೆಯನ್ನು ಹಿಂಪಡೆಯಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ಖಾಸಗಿ–ಅನುದಾನರಹಿತ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದಲ್ಲಿ ಆದೇಶವನ್ನು ಹೊರಡಿಸುವ ಮೂಲಕ ಸರ್ಕಾರ ಮುಜುಗರಕ್ಕೀಡಾಗಿತ್ತು.

ಈ ನಿರ್ಧಾರದ ಬಗ್ಗೆ ಅಪಸ್ವರಗಳು ಕೇಳಿಬರುತ್ತಿದ್ದಂತೆಯೇ, ನಾಡಗೀತೆ ಹಾಡುವುದನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯಗೊಳಿಸಿರುವ ತಿದ್ದುಪಡಿ ಆದೇಶ ಹೊರಬಿದ್ದಿದೆ. ವಸತಿ ಶಿಕ್ಷಣ ಸಂಸ್ಥೆಗಳ ‍ಪ್ರವೇಶ ದ್ವಾರದಲ್ಲಿ ಬರೆಯಲಾಗಿದ್ದ ‘ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ಘೋಷವಾಕ್ಯವನ್ನು, ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಿಸುವ ತನ್ನ ಆದೇಶವನ್ನೂ ಪ್ರತಿಭಟನೆಯ ನಂತರ ಸರ್ಕಾರ ಹಿಂಪಡೆದಿದ್ದು, ಹಳೆಯ ಘೋಷಣೆಯನ್ನೇ ಉಳಿಸಿಕೊಂಡಿದೆ.

ಆದೇಶವೊಂದನ್ನು ಹಿಂಪಡೆಯುವುದು ಅಥವಾ ತಿದ್ದುಪಡಿ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಹಜವೇನೂ ಅಲ್ಲ. ಆದರೆ, ಇಂಥ ಬದಲಾವಣೆಗಳಿಗೆ ಜನಹಿತ ಕಾರಣವಾಗಬೇಕೇ ವಿನಾ ಕಣ್ತಪ್ಪು ಇಲ್ಲವೇ ಜಾಗರೂಕ ಪರಿಶೀಲನೆಯ ಕೊರತೆ ಕಾರಣ ಆಗಬಾರದು.

ಸರ್ಕಾರವನ್ನು ಪೇಚಿಗೆ ಸಿಲುಕಿಸಿದ ಮೂರೂ ಆದೇಶಗಳನ್ನು ಅಧಿಕಾರಿಗಳು ಹೊರಡಿಸಿರುವುದು ಗಮನಾರ್ಹ. ಬಹು ಸೂಕ್ಷ್ಮವಾದ ಸಂಗತಿಗಳನ್ನು ಚರ್ಚಿಸದೆ ಅವಸರದಲ್ಲಿ ಜಾರಿಗೆ ತರಲು ಯತ್ನಿಸಿದ ಸರ್ಕಾರದ ಪ್ರಯತ್ನಗಳಲ್ಲಿ ಬೇಜವಾಬ್ದಾರಿ ಧೋರಣೆ ಎದ್ದು ಕಾಣುತ್ತದೆ. ಸರ್ಕಾರಿ ವಲಯದಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚೆಗಳು ನಡೆಯದೇ ಅಧಿಕಾರಿಗಳು ಅತ್ಯುತ್ಸಾಹದಿಂದ ಕೈಗೊಳ್ಳುವ ನಿರ್ಧಾರವು ಸರ್ಕಾರವನ್ನು ಪೇಚಿಗೆ ಸಿಲುಕಿಸಬಹುದು ಎನ್ನುವುದನ್ನು ಅಧಿಕಾರಸ್ಥರು ಮರೆಯಬಾರದು.

ನಾಡಗೀತೆಗೆ ಸಂಬಂಧಪಟ್ಟ ಆದೇಶ ಕಣ್ತಪ್ಪಿನಿಂದಾದ ಪ್ರಮಾದ ಎನ್ನುವ ಕನ್ನಡ ಮತ್ತು ಸಂಸ್ಕೃತಿ ಸಚಿವರ
ಸಮಜಾಯಿಷಿಯನ್ನು ಒಪ್ಪುವುದು ಕಷ್ಟ. ನಿರ್ಧಾರವೊಂದನ್ನು ಕೈಗೊಳ್ಳುವ ಮೊದಲು, ಅದರ ಸಾಧಕ– ಬಾಧಕಗಳ ಬಗ್ಗೆ ಸರ್ಕಾರ ಯೋಚಿಸುವುದು ಅಗತ್ಯ. ಪರಿಣಾಮಗಳ ಬಗ್ಗೆ ಸ್ಪಷ್ಟತೆಯಿದ್ದಾಗ ತನ್ನ ನಿಲುವು ಹಾಗೂ ಚಿಂತನೆಯನ್ನು ಸಮರ್ಥಿಸಿಕೊಳ್ಳುವುದು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ವಸತಿಶಾಲೆಗಳಲ್ಲಿನ ಘೋಷವಾಕ್ಯವನ್ನು ಬದಲಿಸಲು ಮುಂದಾಗಿದ್ದ ಸರ್ಕಾರದ ನಿರ್ಧಾರವು ವೈಚಾರಿಕ ನೆಲೆಗಟ್ಟಿನಲ್ಲಿ ಸರಿಯಾದುದೇ ಆಗಿತ್ತು.

ಆದರೆ, ಪೂರ್ವಸಿದ್ಧತೆ ಹಾಗೂ ಮುನ್ನೋಟದ ಕೊರತೆಯಿಂದಾಗಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಕಲಿಕೆಯ ಬಗೆಗಿನ ಕುತೂಹಲವನ್ನು ಕಾಪಿಡುವುದಕ್ಕಾಗಿ ಹಾಗೂ ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಮಕ್ಕಳಲ್ಲಿ ಹೆಚ್ಚಿಸುವ ಕಾರಣಕ್ಕಾಗಿ, ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎನ್ನುವ ಘೋಷವಾಕ್ಯ ಬರೆಸು
ವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಇಂಥ ನಿರ್ಧಾರಗಳು ಸಾರ್ವಜನಿಕ ಚರ್ಚೆ–ಸಂವಾದಗಳ ನಂತರ ಜಾರಿಗೊಳ್ಳಬೇಕೇ ಹೊರತು ಏಕಪಕ್ಷೀಯವಾಗಿ ಅಲ್ಲ. ಅಧಿಕಾರಿಯೊಬ್ಬರ ಸಾಮಾಜಿಕ ಜಾಲತಾಣದ ಸಂದೇಶವನ್ನು ಆಧರಿಸಿ, ಬದಲಾವಣೆಯ ಪ‍್ರಯತ್ನಗಳು ನಡೆದಿದ್ದವು. ಘೋಷವಾಕ್ಯವನ್ನು ಬದಲಿಸಲು ಹೊರಟ ಸರ್ಕಾರದ ಪ್ರಯತ್ನವನ್ನು, ‘ಕವಿ ಕುವೆಂಪು ಅವರಿಗೆ ಸರ್ಕಾರ ಎಸಗಿರುವ ಅವಮಾನ’ ಎಂದು ವಿರೋಧಪಕ್ಷಗಳು ವಿಶ್ಲೇಷಿಸಿದ್ದವು.

ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವವನ್ನು ಉದ್ದೀಪಿಸುವ ಕುವೆಂಪು ಅವರ ಚಿಂತನೆಗೆ ಸರ್ಕಾರದ ನಿರ್ಧಾರ ಪೂರಕವೇ ಆಗಿತ್ತು ಎಂದು ಹೇಳುವ ಪ್ರಯತ್ನವನ್ನು ಸರ್ಕಾರ ನಡೆಸಲೇ ಇಲ್ಲ. ವಿರೋಧ ಎದುರಾದಾಗ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೇ ಮಾಡದೆ, ಯಥಾಸ್ಥಿತಿ ಕಾಪಾಡಲು ಮುಂದಾದ ರಕ್ಷಣಾತ್ಮಕ ನಿಲುವು ಆಡಳಿತ ನಡೆಸುವವರ ವಿವೇಚನಾಶಕ್ತಿಯ ಬಗ್ಗೆ ಅನುಮಾನ ಮೂಡಿಸುವಂತಹದ್ದು; ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸರ್ಕಾರದ ನೀತಿನಿರೂಪಕರಿಗೂ ವೈಚಾರಿಕತೆಯ ಅಗತ್ಯವಿದೆ ಎನ್ನುವುದನ್ನು ಸೂಚಿಸುವಂತಹದ್ದು. ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವ ಸ್ಥಿತಿಯನ್ನು ಸರ್ಕಾರ ತಂದುಕೊಳ್ಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT