ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ತಾಯಿ, ಅವಳಿ ಹಸುಗೂಸು ಸಾವು ರಾಜ್ಯ ತಲೆ ತಗ್ಗಿಸುವಂಥ ದುರಂತ

Last Updated 5 ನವೆಂಬರ್ 2022, 6:27 IST
ಅಕ್ಷರ ಗಾತ್ರ

ಮಗುವೊಂದರ ಆಗಮನಕ್ಕೆ ಎದುರು ನೋಡುತ್ತಾ ಹೆರಿಗೆ ಬೇನೆಗೆ ಒಳಗಾಗಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಸೂಕ್ತ ಆರೈಕೆ ನೀಡಿ, ಸಂತೈಸಿ ಹೆರಿಗೆ ಮಾಡಿಸಬೇಕಾಗಿದ್ದ ತುಮಕೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯೆ ಮತ್ತು ಶುಶ್ರೂಷಕಿಯರು ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣಕ್ಕೆ ಅವಳಿ ಹಸುಗೂಸುಗಳ ಜತೆಗೆ ತಾಯಿಯೂ ಮರಣ ಹೊಂದಿದ ಹೃದಯವಿದ್ರಾವಕ ಪ್ರಕರಣ ಕರ್ನಾಟಕವೇ ತಲೆ ತಗ್ಗಿಸುವಂಥ ದುರಂತ. ಆಧಾರ್ ಕಾರ್ಡ್‌, ತಾಯಿ ಕಾರ್ಡ್ ಇಲ್ಲ ಎಂಬ ನೆವ ಹೇಳಿ ಅನಾಥ ತಾಯಿಯನ್ನು ಸಾಗಹಾಕಿದ್ದಲ್ಲದೇ, ಕಣ್ಣುಬಿಡುವ ಮೊದಲೇ ಹಸುಗೂಸುಗಳು ಸಾಯುವಂತೆ ಮಾಡಿದ್ದು ವ್ಯವಸ್ಥೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿ. ಈ ವೈಫಲ್ಯದ ಹೊಣೆಯನ್ನು ಇಲಾಖೆಯ ಮುಖ್ಯಸ್ಥರು ಹೊರಬೇಕು, ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಖಚಿತ ಮಾತು ಕೊಡಬೇಕು. ನೋವು–ನರಳಿಕೆಯಿಂದ ಆಸ್ಪತ್ರೆಗೆ ಬರುವವರಿಗೆ ಮಮತೆಯಿಂದ ಉಪಚರಿಸಿ, ನೋವು ಶಮನ ಮಾಡುವುದು ವೈದ್ಯರು, ಶುಶ್ರೂಷಕರಿಗೆ ಕಲಿಸುವ ಮೊದಲ ಪಾಠ. ಅದರಲ್ಲೂ ತುಂಬು ಗರ್ಭಿಣಿ ನೋವಿನಿಂದ ನರಳುತ್ತಾ ಆಸ್ಪತ್ರೆಗೆ ಬಂದಾಗ, ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯರು, ಶುಶ್ರೂಷಕಿಯರು ತಾವೂ ಇಂತಹ ಹಿಗ್ಗಿನ ನೋವನ್ನು ಅನುಭವಿಸಿರುತ್ತೇವೆ ಅಥವಾ ಮುಂದಾದರೂ ಅನುಭವಕ್ಕೆ ಬರಲಿದೆ ಎಂಬ ಭಾವನೆಯಿಂದಲಾದರೂ ಸಂತೈಸಬೇಕಾಗಿತ್ತು. ಗರ್ಭಿಣಿಯನ್ನು ಕರೆತಂದವರು ಪರಿಪರಿಯಾಗಿ ಬೇಡಿಕೊಂಡರೂ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯ ಮನ ಕರಗಲಿಲ್ಲ ಎಂಬುದು ಈ ವ್ಯವಸ್ಥೆ ಎಷ್ಟು ಕ್ರೌರ್ಯದತ್ತ, ಅಮಾನುಷದತ್ತ ಸಾಗಿದೆ ಎಂಬುದಕ್ಕೆ ಸಾಕ್ಷಿಯಾಗುವಂತಿದೆ. ತಾವು ಹೆಣ್ಣೆಂಬುದನ್ನು ಮರೆತು ಅನಾಥ ಮಹಿಳೆಯನ್ನು ನಿರ್ದಯವಾಗಿ, ನಿಕೃಷ್ಟವಾಗಿ ನಡೆಸಿಕೊಂಡ ಈ ಮಹಿಳಾ ಸಿಬ್ಬಂದಿಯು ಆರೋಗ್ಯ ಸೇವೆಯಲ್ಲಿ ಮುಂದುವರಿಯಲು ಅರ್ಹರಲ್ಲ.

ಎಲ್ಲರಿಗೂ ಸಕಾಲಕ್ಕೆ ಆರೋಗ್ಯ ಸೇವೆ ಸಿಗಬೇಕು ಎಂಬ ಕಾರಣಕ್ಕೆ ‘ಆರೋಗ್ಯ ಕರ್ನಾಟಕ’ ಯೋಜನೆ ಜಾರಿಗೆ ತರಲಾಗಿತ್ತು. ಇದನ್ನೇ ಮತ್ತಷ್ಟು ಪರಿಷ್ಕರಿಸಿದ ಕೇಂದ್ರ ಸರ್ಕಾರ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ದುಬಾರಿ ದರ ತೆತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಇರುವವರಿಗೆ ಉತ್ತಮ ಚಿಕಿತ್ಸೆ ನೀಡುವುದು ಇದರ ಉದ್ದೇಶ. ದುಡ್ಡಿಲ್ಲದ ಕಾರಣಕ್ಕೆ ಜೀವವೇ ಹೋಗಬಾರದು ಎಂಬುದು ಸರ್ಕಾರದ ಆಶಯ. ಅದಕ್ಕಾಗಿ, ಆಯುಷ್ಮಾನ್ ಕಾರ್ಡ್‌ ರೂಪಿಸಲಾಗಿದೆ. ಕಾರ್ಡ್‌ ಇಲ್ಲದ ಕಾರಣಕ್ಕೆ, ಅನಾಥ ಮಹಿಳೆ, ಹೆತ್ತಕೂಸುಗಳೊಂದಿಗೆ ದಾರುಣವಾಗಿ ಮೃತಪಟ್ಟಿರುವುದು ಕರುಳು ಕಿತ್ತುಬರುವ ವ್ಯಥೆಯ ಪ್ರಕರಣ. ‘ರಾಜ್ಯವು ದೇಶದಲ್ಲೇ ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಹೊಂದಿದೆ’ ಎಂದು ಕರ್ನಾಟಕ ಸರ್ಕಾರ ಪದೇ ಪದೇ ಹೇಳಿಕೊಳ್ಳುತ್ತದೆ. ಆರೋಗ್ಯ ಸೇವೆಗಳಿಗೆ ಕರ್ನಾಟಕ ಸೂಕ್ತ ತಾಣ ಎಂದು ಕೊಚ್ಚಿಕೊಳ್ಳುತ್ತದೆ. ಪಾಕಿಸ್ತಾನ, ಅಫ್ಗಾನಿಸ್ತಾನ, ಶ್ರೀಲಂಕಾದ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಾರೆ ಎಂಬಷ್ಟರಮಟ್ಟಿಗೆ ಕರ್ನಾಟಕ ಪ್ರಖ್ಯಾತಿ ಪಡೆದಿದೆ. ಇನ್ನೊಂದೆಡೆ, ಅನಾಥ ತಾಯಿಯ ವಿಚಾರದಲ್ಲಿ ಕೆಟ್ಟ ನಿರ್ಲಕ್ಷ್ಯ ತೋರುವಂಥ ಸ್ಥಿತಿಯೂ ಇದೆ. ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಸುಧಾರಣೆಯಾಗಬೇಕು ಎಂಬ ಬೇಡಿಕೆ ಹೊಸತಲ್ಲ. ಕೋವಿಡ್ ತಂದಿತ್ತ ಆರೋಗ್ಯ
ಬಿಕ್ಕಟ್ಟು ಆಳುವ ಸರ್ಕಾರಕ್ಕೆ ಪಾಠವಾಗಬೇಕಾಗಿತ್ತು. ಆಗಲೂ ಕೆಲವರು ಹೀಗೆಯೇ ಹಾಸಿಗೆ, ಆಮ್ಲಜನಕ ಸಿಗದೆ ಸತ್ತೇಹೋದರು. ಕೋವಿಡ್‌ನಿಂದ ಸರ್ಕಾರ ಪಾಠ ಕಲಿತಂತೆ ಕಾಣಿಸುತ್ತಿಲ್ಲ. ಇಲಾಖೆಯ ದಯನೀಯ ಸ್ಥಿತಿಗೆ ಅದನ್ನು ಆವರಿಸಿಕೊಂಡಿರುವ ಭ್ರಷ್ಟಾಚಾರವೂ ಒಂದು ಪ್ರಮುಖ ಕಾರಣ. ಇದನ್ನು ಮೊದಲು ನಿವಾರಿಸಬೇಕಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ, ಗರ್ಭಿಣಿಯರಿಗೆ, ವೃದ್ಧರಿಗೆ ಸೂಕ್ತ ಆರೈಕೆ ಮತ್ತು ಸಾಂತ್ವನ ಸಿಗುವಂತೆ ಮಾಡಬೇಕಾದುದು ಸರ್ಕಾರದ ಹೊಣೆಗಾರಿಕೆ. ನಾಡಿಗೆ ನಾಡೇ ನಾಚಿಕೆಯಿಂದ ತಲೆತಗ್ಗಿಸುವಂತಹ ಪ್ರಕರಣ ಬೆಳಕಿಗೆ ಬಂದ ಮೇಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ. ಈ ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಗ್ಯ ವ್ಯವಸ್ಥೆಯ ನ್ಯೂನತೆಗಳನ್ನು ಸರಿಪಡಿಸಿ, ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವ ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT