ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ‘ಇಂಡಿಯಾ’ ಮೈತ್ರಿಕೂಟದ ವಿಳಂಬ ಧೋರಣೆ; ಮೈಮರೆತರೆ ದೋಷ ಹೊರಬೇಕಾದೀತು

Published 17 ಜನವರಿ 2024, 21:35 IST
Last Updated 17 ಜನವರಿ 2024, 21:35 IST
ಅಕ್ಷರ ಗಾತ್ರ

ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ರೂಪ ಪಡೆದು ಆರು ತಿಂಗಳಿಗೂ ಹೆಚ್ಚು ಕಾಲ ಸಂದಿದೆ. ಈ ಮೈತ್ರಿಕೂಟವು ಲೋಕಸಭಾ ಚುನಾವಣೆಗೆ ಸಜ್ಜಾಗಲು ಇನ್ನು ಮೂರು ತಿಂಗಳಿಗೂ ಕಡಿಮೆ ಅವಧಿ ಇದೆ. ಆದರೆ ಮೈತ್ರಿಕೂಟದ ನಾಯಕತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಮೈತ್ರಿಕೂಟದ ಕಾರ್ಯಸೂಚಿ ರೂಪಿಸುವ ಕೆಲಸವು ಇನ್ನಷ್ಟೇ ಆಗಬೇಕಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಒಗ್ಗಟ್ಟಿನಿಂದ ಎದುರಿಸಬೇಕು ಎಂಬ ತೀರ್ಮಾನ ಹೊರತುಪಡಿಸಿದರೆ, ಮೈತ್ರಿಕೂಟದ ಪ್ರಮುಖರು ತಮ್ಮ ಕಾರ್ಯಸೂಚಿ ಅಂತಿಮಗೊಳಿಸುವ ವಿಚಾರವಾಗಿ ಹೆಚ್ಚು ಮುಂದೆ ಸಾಗಿಲ್ಲ. ಮೈತ್ರಿಕೂಟದ ಪಕ್ಷಗಳ ನಡುವೆ ಸೀಟು ಹಂಚಿಕೆ ಸೂತ್ರ ಅಂತಿಮಗೊಂಡಿಲ್ಲ. ಇಂತಹ ಎಲ್ಲ ವಿಚಾರಗಳಿಗೆ ಸಂಬಂಧಿಸಿದ ಕೆಲವು ಕೆಲಸಗಳು ಈಗಷ್ಟೇ ಆರಂಭ ಆಗಿವೆ. ಪ್ರತಿ ವಿಚಾರದಲ್ಲಿಯೂ ಮೈತ್ರಿಕೂಟದ ಪಕ್ಷಗಳ ನಡುವೆ ಬಹಳ ಜಾಣತನದ ಮೌನವೊಂದು ಇದೆ ಅಥವಾ ಒಂದಲ್ಲ ಒಂದು ಪಕ್ಷದ ವಿರೋಧ ಇದೆ. ವಿಭಿನ್ನ ಸಿದ್ಧಾಂತಗಳು, ವಿಭಿನ್ನ ಹಿತಾಸಕ್ತಿಗಳು ಹಾಗೂ ವಿಭಿನ್ನ ಮತದಾರ ಸಮೂಹದ ಬೆಂಬಲವನ್ನು ಹೊಂದಿರುವ 28 ಪಕ್ಷಗಳ ಒಂದು ಒಕ್ಕೂಟದಲ್ಲಿ ಇವೆಲ್ಲ ಸಹಜ ಎಂಬುದು ನಿಜ. ಆದರೆ ಮಹತ್ವದ ವಿಚಾರಗಳನ್ನು ಅಂತಿಮಗೊಳಿಸುವಲ್ಲಿ ಆಗಿರುವ ವಿಳಂಬವು ವಿಶ್ವಾಸವರ್ಧಿಸುವಂತೆ ಇಲ್ಲ. ಮೈತ್ರಿಕೂಟವು ಚುನಾವಣೆಗೂ ಮೊದಲು ಎಲ್ಲವನ್ನೂ ಅಂತಿಮಗೊಳಿಸಿಕೊಂಡು, ಪೂರ್ಣ ಬಲದೊಂದಿಗೆ ಚುನಾವಣೆ ಎದುರಿಸುತ್ತದೆ ಎಂದು ಖಚಿತವಾಗಿ ಹೇಳುವಂತಹ ವಾತಾವರಣ ಸೃಷ್ಟಿಯಾಗಿಲ್ಲ. 

ಮೈತ್ರಿಕೂಟದ ಪಕ್ಷಗಳು ಇತ್ತೀಚೆಗೆ ವರ್ಚುವಲ್ ವೇದಿಕೆಯ ಮೂಲಕ ಸಭೆಯೊಂದನ್ನು ನಡೆಸಿವೆ. ಒಂದು ಹೆಜ್ಜೆ ಮುಂದೆ ಇರಿಸಿ, ಇನ್ನೊಂದು ಹೆಜ್ಜೆ ಮುಂದಕ್ಕಿಡಲು ಹಿಂದೆಮುಂದೆ ನೋಡುವ ಮೈತ್ರಿಕೂಟದ ಪ್ರವೃತ್ತಿಯು ಇಲ್ಲಿಯೂ ಪುನರಾವರ್ತನೆ ಕಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೈತ್ರಿಕೂಟದ ಅಧ್ಯಕ್ಷರನ್ನಾಗಿಸಲು ಸಭೆಯಲ್ಲಿ ಸಹಮತ ಮೂಡಿದೆ ಎಂದು ವರದಿಯಾಗಿದೆ. ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ಸಿಗೆ ಈ ಸ್ಥಾನವನ್ನು ಕೇಳುವ ಅಧಿಕಾರ ಇದೆ. ಆದರೆ, ನಾಯಕತ್ವಕ್ಕೆ ಒಪ್ಪಿಗೆ ಸಿಕ್ಕಿದ್ದರೂ, ಅವರನ್ನು ಮೈತ್ರಿಕೂಟವು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತದೆಯೇ ಎಂಬುದು ಖಚಿತವಾಗಿಲ್ಲ. ಮೈತ್ರಿಕೂಟದ ಸಂಚಾಲಕ ಸ್ಥಾನಕ್ಕೆ ಜೆಡಿಯು ನಾಯಕ ಹಾಗೂ ಬಿಹಾರದ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ಹೆಸರು ಪ್ರಸ್ತಾಪ ಆಯಿತಾದರೂ, ಅವರು ಅದನ್ನು ಒಪ್ಪಲಿಲ್ಲ ಎಂದು ವರದಿಯಾಗಿದೆ. ಆ ಸ್ಥಾನಕ್ಕೆ ನಿತೀಶ್ ಅವರು ಆಕಾಂಕ್ಷಿ ಅಲ್ಲ ಎಂದು ಜೆಡಿಯು ಹೇಳಿದೆ. ಸಂಚಾಲಕ ಸ್ಥಾನದ ವಿಚಾರವಾಗಿ ತೀರ್ಮಾನ ಇನ್ನಷ್ಟೇ ಘೋಷಣೆ ಆಗಬೇಕಿದೆ. ಸೀಟು ಹಂಚಿಕೆಯ ವಿಚಾರವಾಗಿ ಆರಂಭಿಕ ಮಾತುಕತೆಗಳು ಆರಂಭವಾಗಿದ್ದರೂ, ಅದರ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ಮೈತ್ರಿಕೂಟದ ಸದಸ್ಯ ಪಕ್ಷಗಳು ಕೇರಳ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್‌ನಂತಹ ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೆ ಎದುರಾಳಿಗಳೂ ಹೌದು. ಇಲ್ಲಿ ಸೀಟು ಹಂಚಿಕೆ ವಿಚಾರವಾಗಿ ಸಮಸ್ಯೆ ತಲೆದೋರಬಹುದು.

ಆದರೆ, ಬಿಜೆಪಿಗೆ ಎದುರಾಗಿ ವಿಶ್ವಾಸಾರ್ಹ ಪ್ರತಿರೋಧ ಒಡ್ಡಬೇಕು ಎಂದಾದರೆ, ಮೈತ್ರಿಕೂಟದ ಪಕ್ಷಗಳು ಸವಾಲು ಸ್ವೀಕರಿಸಲು ಸಜ್ಜಾಗಲೇಬೇಕಿದೆ. ಬಿಜೆಪಿಯ ಬತ್ತಳಿಕೆಯಲ್ಲಿ ಎಲ್ಲವೂ ಇವೆ. ಬಿಜೆಪಿಯು ಬಲಿಷ್ಠ ನಾಯಕತ್ವವನ್ನು ಹೊಂದಿದೆ, ಅದು ರಾಜಕೀಯ ಹಾಗೂ ಚುನಾವಣಾ ತಂತ್ರಗಾರಿಕೆಗಳನ್ನು ಸಜ್ಜುಗೊಳಿಸಿ ಇರಿಸಿದೆ. ಪಕ್ಷಕ್ಕೆ ಪೂರಕವಾಗಿ ರಾಮ ಮಂದಿರದ ವಿಚಾರದಲ್ಲಿ ದೇಶದಾದ್ಯಂತ ಸಂಭ್ರಮದ ಅಲೆಯೊಂದನ್ನು ಸೃಷ್ಟಿಸಿಕೊಂಡಿದೆ. ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವ ದಿನ ಪಕ್ಷವು ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಚಾಲನೆ ಕೂಡ ನೀಡಲಿದೆ. ಮೈತ್ರಿಕೂಟದ ಸದಸ್ಯ ಪಕ್ಷಗಳು ಲಗುಬಗೆಯಿಂದ ಹೆಜ್ಜೆಹಾಕದೇ ಇದ್ದಲ್ಲಿ, ದೋಷವನ್ನು ಕೊನೆಗೆ ಅವೇ ಹೊರಬೇಕಾಗುತ್ತದೆ.
ಈಚೆಗೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಕಾಲಹರಣದ ಕೆಲಸ ಮಾಡಿತು. ಚುನಾವಣೆಯ ನಂತರದಲ್ಲಿ ತನಗೆ ಹೆಚ್ಚಿನ ಸೀಟುಗಳನ್ನು ಕೇಳುವ ತಾಕತ್ತು ಬರಬಹುದು ಎಂಬ ಕಾಂಗ್ರೆಸ್ಸಿನ ಲೆಕ್ಕಾಚಾರವು ತಲೆಕೆಳಗಾಗಿದೆ. ಮೈತ್ರಿಕೂಟದಲ್ಲಿ ಇರುವ ಹಲವು ಪಕ್ಷಗಳು, ಮೈತ್ರಿಕೂಟದ ಮೂಲಕ ತಮಗಾಗುವ ಲಾಭವನ್ನು ಹೆಚ್ಚಿಸಿಕೊಳ್ಳುವ ಉದ್ದೇಶ ಹೊಂದಿವೆ; ಎಲ್ಲರೂ ಒಗ್ಗೂಡಿ ಕೊಡು–ಕೊಳ್ಳುವ ಮೂಲಕ ಮೈತ್ರಿಕೂಟಕ್ಕೆ ಹೆಚ್ಚಿನ ಲಾಭ ಸಿಗಲಿ ಎಂಬ ಉದ್ದೇಶ ಅವರಲ್ಲಿ ಇಲ್ಲ. ಈಗಿನ ಸಂದರ್ಭ ಹಾಗೂ ಹಲವು ಸನ್ನಿವೇಶಗಳು ಮೈತ್ರಿಕೂಟಕ್ಕೆ ಪೂರಕವಾಗಿರುವಂತೆ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT