ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Editorial | ಬಿಬಿಎಂಪಿ ಚುನಾವಣೆ ವಿಳಂಬ ಸಲ್ಲದು: ದಿಟ್ಟತನ ತೋರಲಿ ಚುನಾವಣಾ ಆಯೋಗ

Published : 17 ಸೆಪ್ಟೆಂಬರ್ 2024, 0:16 IST
Last Updated : 17 ಸೆಪ್ಟೆಂಬರ್ 2024, 0:16 IST
ಫಾಲೋ ಮಾಡಿ
Comments

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಚುನಾಯಿತ ಪ್ರತಿನಿಧಿಗಳಿಲ್ಲದೇ ನಾಲ್ಕು ವರ್ಷ ಪೂರೈಸಿದೆ. ಈ ವಿಚಾರದಲ್ಲಿ ಪಾಲಿಕೆಯು ಹೊಸ ದಾಖಲೆ ನಿರ್ಮಿಸಿದೆ. ರಾಜ್ಯ ಸರ್ಕಾರವು ಒಂದಿಲ್ಲೊಂದು ಕಾರಣವನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಮುಂದೂಡುತ್ತಲೇ ಬಂದಿದೆ. ವಾರ್ಡ್‌ಗಳ ಪುನರ್‌ ವಿಂಗಡಣೆ ಮತ್ತು ವಾರ್ಡ್‌ವಾರು ಮೀಸಲಾತಿ ನಿಗದಿ ಪ್ರಕ್ರಿಯೆಯಲ್ಲಿನ ಲೋಪಗಳು ಚುನಾವಣೆ ಮುಂದೂಡಿಕೆಗೆ ಪ್ರಮುಖ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ. ಸ್ಥಳೀಯ ಸಂಸ್ಥೆಗಳಲ್ಲಿ ನೇರವಾಗಿ ಜನರಿಂದ ಚುನಾಯಿತರಾದ ಸದಸ್ಯರ ಅನುಪಸ್ಥಿತಿಯು ಆಡಳಿತದಲ್ಲಿ ನಿರ್ವಾತವನ್ನು ಸೃಷ್ಟಿಸುತ್ತದೆ. ನಾಲ್ಕು ವರ್ಷಗಳಿಂದಲೂ ಚುನಾಯಿತ ಸದಸ್ಯರ ಕೌನ್ಸಿಲ್‌ ರಚನೆಯಾಗದಂತೆ ಮಾಡಿರುವುದು ಆಡಳಿತ ವಿಕೇಂದ್ರೀಕರಣದ ಆಶಯಗಳಿಗೆ ವಿರುದ್ಧವಾದ ನಡೆ. 2006ರಲ್ಲಿ ಆಗಿನ ಸರ್ಕಾರವು ಬೆಂಗಳೂರು ಮಹಾನಗರ ಪಾಲಿಕೆಯ ಜೊತೆಗೆ ಸುತ್ತಲಿನ 110 ಹಳ್ಳಿಗಳು, ಏಳು ನಗರಸಭೆಗಳು ಮತ್ತು ಒಂದು ಪುರಸಭೆಯನ್ನು ಸೇರಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಅಸ್ತಿತ್ವಕ್ಕೆ ತಂದಿತು. ಆಗ, ಇದೇ ಕಾರಣವನ್ನು ಮುಂದಿಟ್ಟುಕೊಂಡು ಮೂರೂವರೆ ವರ್ಷಗಳ ಕಾಲ ಬಿಬಿಎಂಪಿಗೆ ಚುನಾವಣೆ ನಡೆಸಿರಲಿಲ್ಲ. ಬಿಬಿಎಂಪಿಯ ಈ ಹಿಂದಿನ ಚುನಾಯಿತ ಕೌನ್ಸಿಲ್‌ನ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಕೊನೆಗೊಂಡಿತ್ತು. ಆ ಬಳಿಕ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದ ಎಲ್ಲರೂ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ತಂತ್ರ
ಗಾರಿಕೆಯನ್ನು ಮುಂದುವರಿಸಿಕೊಂಡು ಬರುತ್ತಲೇ ಇದ್ದಾರೆ. ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆಯಡಿಯಲ್ಲೇ ಬಿಬಿಎಂಪಿ ಆಡಳಿತ ನಿರ್ವಹಣೆ ನಡೆಯುತ್ತಿತ್ತು. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ
ಆಗಿದ್ದಾಗ ಬಿಬಿಎಂಪಿ ಆಡಳಿತ ನಿರ್ವಹಣೆಗಾಗಿ ಪ್ರತ್ಯೇಕ ಬಿಬಿಎಂಪಿ ಕಾಯ್ದೆಯನ್ನು ತಂದರು. ಪಾಲಿಕೆಯ ಆಡಳಿತದ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡದೆ, ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 225ಕ್ಕೆ ಹೆಚ್ಚಿಸಿದರು. ಇದು ಚುನಾವಣೆ ವಿಳಂಬಕ್ಕೆ ನಾಂದಿಯಾಯಿತು. 2023ರಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಪಾಲಿಕೆಗೆ ಚುನಾವಣೆ ನಡೆಸಬೇಕೆಂಬ ಒತ್ತಡ ಹೆಚ್ಚಾಗಿತ್ತು. ಆಗ, ಸರ್ಕಾರವು ಬೆಂಗಳೂರಿನ ಸ್ಥಳೀಯ ಆಡಳಿತ ನಿರ್ವಹಣೆಗೆ ಹೊಸದೊಂದು ಮಾದರಿಯನ್ನು ಪ್ರಸ್ತಾಪಿಸಿತ್ತು. ಈಗ ಬಿಬಿಎಂಪಿಯನ್ನು ಹಲವು ಪಾಲಿಕೆಗಳನ್ನಾಗಿ ವಿಭಜಿಸಿ ಆಡಳಿತಕ್ಕೆ ಹೊಸ ಸ್ವರೂಪ ನೀಡುವ ಮತ್ತು ಪಾಲಿಕೆಯ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಸ್ತಾವವುಳ್ಳ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ–2024’ ಅನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಂಡಿಸಿದ್ದಾರೆ. ವಿರೋಧ ಪಕ್ಷಗಳ ವಿರೋಧದ ಕಾರಣದಿಂದ ಈ ಮಸೂದೆಯನ್ನು ಪರಿಶೀಲನೆಗಾಗಿ ಸದನದ 14 ಸದಸ್ಯರ ಜಂಟಿ ಪರಿಶೀಲನಾ ಸಮಿತಿಗೆ ಒಪ್ಪಿಸಲಾಗಿದೆ.

ಬಿಬಿಎಂಪಿ ಚುನಾವಣೆ ನಡೆಸದೇ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಪ್ರಶ್ನಿಸಿ ಹಲವರು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸಿದ್ದಾರೆ. ಆದರೆ, ವಾರ್ಡ್‌ಗಳ ಪುನರ್‌ ವಿಂಗಡಣೆ, ವಾರ್ಡ್‌ವಾರು ಮೀಸಲಾತಿ ನಿಗದಿಯಂತಹ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ರಾಜ್ಯ ಸರ್ಕಾರವು ನ್ಯಾಯಾಲಯಗಳಲ್ಲೂ ಪಾರಾಗುತ್ತಿದೆ. ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸುವುದು ಕಡ್ಡಾಯ, ಸಾಂವಿಧಾನಿಕ ಆಶಯಗಳನ್ನು ಉಲ್ಲಂಘಿಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೇ ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ನಡೆಸುವ ಅಧಿಕಾರವು ಅಧಿಕಾರಿಗಳಿಗೆ ಇಲ್ಲ ಎಂದೂ ನ್ಯಾಯಾಲಯ ಹೇಳಿದೆ. ವಾರ್ಡ್‌ಗಳ ಪುನರ್‌ವಿಂಗಡಣೆ ಅಥವಾ ಅಂತಹ ಯಾವುದೇ ‍ಪ್ರಕ್ರಿಯೆಯನ್ನು ನಡೆಸುವ ಇಚ್ಛೆಯನ್ನು ರಾಜ್ಯ ಸರ್ಕಾರ ಹೊಂದಿದ್ದಲ್ಲಿ ಅದನ್ನು ಸ್ಥಳೀಯ ಸಂಸ್ಥೆಯ ಚುನಾವಣೆ ಬಳಿಕವೂ ನಡೆಸಬಹುದು ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆ ಸ್ಪಷ್ಟವಾಗಿ ಅಭಿಪ್ರಾಯ ನೀಡಿದೆ. ಆದರೂ ಚುನಾವಣೆಗೆ ಇನ್ನೂ ಕಾಲ ಕೂಡಿಬಂದಿಲ್ಲ.

ಬಿಬಿಎಂಪಿ ಚುನಾವಣೆಯನ್ನು ಅನಿರ್ದಿಷ್ಟ ಕಾಲ ಮುಂದೂಡುವುದನ್ನು ನಗರವನ್ನು ಪ್ರತಿನಿಧಿಸುವ ಎಲ್ಲ ಶಾಸಕರೂ ಪಕ್ಷಾತೀತವಾಗಿ ಬೆಂಬಲಿಸುತ್ತಾರೆ. ಈ ಕಾರಣಕ್ಕಾಗಿಯೇ ರಾಜ್ಯ ಸರ್ಕಾರಕ್ಕೆ ಅನುಕೂಲಕರ ಪರಿಸ್ಥಿತಿ ಇದೆ. ಚುನಾಯಿತ ಕೌನ್ಸಿಲ್‌ ಅನುಪಸ್ಥಿತಿಯಿಂದಾಗಿ ನಗರದ ಶಾಸಕರು, ಅದರಲ್ಲೂ ಮುಖ್ಯವಾಗಿ ಸಚಿವರು ಬಿಬಿಎಂಪಿ ಆಡಳಿತದ ಮೇಲೆ ಹೆಚ್ಚು ಹಿಡಿತ ಹೊಂದಿದ್ದಾರೆ. ಬಿಬಿಎಂಪಿಗೆ ಚುನಾವಣೆ ನಡೆದು ಚುನಾಯಿತ ಸದಸ್ಯರ ಆಡಳಿತವು ಸ್ಥಾಪನೆಯಾದರೆ ಪಾಲಿಕೆಯ ಮೇಲಿನ ತಮ್ಮ ಹಿಡಿತ ಸಡಿಲವಾಗಬಹುದು ಮತ್ತು ಒಂದಿಷ್ಟು ತೊಡಕುಗಳು ಎದುರಾಗಬಹುದು ಎಂಬ ಭಯ ಶಾಸಕರಲ್ಲಿದೆ. ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸಬೇಕಾದ ಸಾಂವಿಧಾನಿಕ ಜವಾಬ್ದಾರಿ ರಾಜ್ಯ ಚುನಾವಣಾ ಆಯೋಗದ ಮೇಲಿದೆ. ರಾಜ್ಯ ಸರ್ಕಾರವು ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡುವ ಮೂಲಕ ಸುಪ್ರೀಂ ಕೋರ್ಟ್‌ ಆದೇಶಗಳನ್ನು ಉಲ್ಲಂಘಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಜ್ಯ ಚುನಾವಣಾ ಆಯೋಗವು ತಕ್ಷಣವೇ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕು. ಚುನಾವಣೆ ನಡೆಸುವಂತೆ ನಿರ್ದೇಶನ ನೀಡುವಂತೆಯೂ ಕೋರಬೇಕು. ಸೂಕ್ತ ಕಾರಣಗಳನ್ನು ಮುಂದಿಟ್ಟು ನ್ಯಾಯಾಲಯಕ್ಕೆ ವಾಸ್ತವಿಕ ಸ್ಥಿತಿಯನ್ನು ಮನವರಿಕೆ ಮಾಡಿ, ನ್ಯಾಯಾಲಯದ ಆದೇಶ ಪಡೆದು ಬಿಬಿಎಂಪಿಗೆ ಚುನಾವಣೆ ನಡೆಸುವ ದಿಟ್ಟತನವನ್ನು ಸಾಂವಿಧಾನಿಕ ಸಂಸ್ಥೆಯಾಗಿರುವ ರಾಜ್ಯ ಚುನಾವಣಾ ಆಯೋಗ ಪ್ರದರ್ಶಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT