ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಚುನಾವಣಾ ಆಯುಕ್ತರ ರಾಜೀನಾಮೆ: ಚುನಾವಣೆ ಹೊತ್ತಲ್ಲಿ ಕಳವಳದ ನಡೆ

Published 12 ಮಾರ್ಚ್ 2024, 0:07 IST
Last Updated 12 ಮಾರ್ಚ್ 2024, 0:07 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳು ಶುರುವಾಗಲು ಕೆಲವೇ ದಿನಗಳು ಇರುವ ಹೊತ್ತಿನಲ್ಲಿ ಕೇಂದ್ರ ಚುನಾವಣಾ ಆಯೋಗದ ಉನ್ನತ ಹಂತದಲ್ಲಿ ಇಬ್ಬರು ಚುನಾವಣಾ ಆಯುಕ್ತರು ಇಲ್ಲದಂತೆ ಆಗಿರುವುದು ಕಳವಳ ಮೂಡಿಸುವ ಸಂಗತಿ. ಚುನಾವಣಾ ಆಯೋಗವು ಇನ್ನು ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಬೇಕಿದೆ. ಈ ಹೊತ್ತಿನಲ್ಲಿ ಚುನಾವಣಾ ಆಯುಕ್ತ ಸ್ಥಾನಕ್ಕೆ ಅರುಣ್ ಗೋಯಲ್ ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣೆಗೆ ಅಗತ್ಯವಿರುವ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಆಯೋಗವು ಕೆಲಸಗಳನ್ನು ಶುರುಮಾಡಿದೆ, ವಿವಿಧ ಭಾಗೀದಾರರ ಜೊತೆ ಸಮಾಲೋಚನೆಯಲ್ಲಿ ತೊಡಗಿದೆ. ಈ ಹೊತ್ತಿನಲ್ಲಿ ಅವರು ಹಠಾತ್ತನೆ ರಾಜೀನಾಮೆ ನೀಡಿರುವುದು ಆಶ್ಚರ್ಯ ಮೂಡಿಸುವಂತೆ ಇದೆ. ಗೋಯಲ್ ಅವರು ಮುಖ್ಯ ಚುನಾವಣಾ ಆಯುಕ್ತ (ಸಿ.ಇ.ಸಿ) ರಾಜೀವ್ ಕುಮಾರ್ ಅವರ ಜೊತೆಗೂಡಿ ಸಮಾಲೋಚನೆಗಾಗಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಕ್ಕೆ ತೆರಳಿದ್ದರು. ಅಲ್ಲಿಂದ ಅವರು ಇದ್ದಕ್ಕಿದ್ದಂತೆ ವಾಪಸಾಗಿದ್ದರು. ನಂತರ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ರವಾನಿಸಿದರು. ರಾಜೀನಾಮೆ ನೀಡುತ್ತಿರುವ ಬಗ್ಗೆ ಅವರು ಸಿ.ಇ.ಸಿ. ಕುಮಾರ್ ಅವರಿಗೆ ಮಾಹಿತಿ ನೀಡಿರಲಿಲ್ಲ ಎಂದು ವರದಿಯಾಗಿದೆ. ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಲಾಯಿತು. ಗೋಯಲ್ ಅವರು ತೆಗೆದುಕೊಂಡ ತೀರ್ಮಾನದ ಸಂದರ್ಭ, ಹಠಾತ್ತನೆ ಅವರು ತೆಗೆದುಕೊಂಡ ತೀರ್ಮಾನ ಹಾಗೂ ಅದರ ಸುತ್ತಲಿನ ಗೋಪ್ಯತೆಯು ಹಲವು ಪ್ರಶ್ನೆಗಳು ಹಾಗೂ ಊಹಾಪೋಹಗಳು ಮೂಡಲು ಕಾರಣವಾಗಿವೆ.

ಮೂವರು ಸದಸ್ಯರು ಇರುವ ಚುನಾವಣಾ ಆಯೋಗದಲ್ಲಿ ಈಗ ಸಿ.ಇ.ಸಿ. ಮಾತ್ರ ಇದ್ದಾರೆ. ಆಯೋಗವು ಒಬ್ಬರೇ ಸದಸ್ಯರನ್ನು ಇಟ್ಟುಕೊಂಡು ಈ ಹಿಂದೆ ಕೆಲಸ ಮಾಡಿದೆ ಎಂಬುದು ನಿಜ. ಆಗ ಚುನಾವಣೆ
ಗಳನ್ನು ಅದು ಸಮರ್ಥವಾಗಿ ನಡೆಸಿದೆ ಎಂಬುದು ಕೂಡ ನಿಜ. ಆದರೆ, ಈ ವಿವರಣೆಯು ಗೋಯಲ್ ಅವರ ಹಠಾತ್ ರಾಜೀನಾಮೆಗೆ ‍ಸಂಬಂಧಿಸಿದ ಪ್ರಶ್ನೆಗಳು ಹಾಗೂ ಇನ್ನೊಬ್ಬ ಚುನಾವಣಾ ಆಯುಕ್ತರು ಫೆಬ್ರುವರಿ
ಯಲ್ಲಿ ನಿವೃತ್ತರಾದ ನಂತರ ಅವರ ಸ್ಥಾನವನ್ನು ತುಂಬಲು ತ್ವರಿತವಾಗಿ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ. ಈಗ ಕೇಂದ್ರ ಸರ್ಕಾರವು ಹೊಸ ಚುನಾವಣಾ ಆಯುಕ್ತರ ನೇಮಕಕ್ಕೆ ಮುಂದಡಿ ಇರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು
ಮಾರ್ಚ್ 15ರ ಸುಮಾರಿಗೆ ಸಭೆ ಸೇರಲಿದೆ. ಸಮಿತಿಯಲ್ಲಿ ಕೇಂದ್ರ ಸರ್ಕಾರದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ, ನೇಮಕಾತಿಯಲ್ಲಿ ಅವರು ಹೇಳಿದ್ದೇ ಅಂತಿಮವಾಗಲಿದೆ ಎಂಬುದು ಗೊತ್ತಿರುವ ಸಂಗತಿ. ಕೇಂದ್ರವು ಚುನಾವಣಾ ಆಯುಕ್ತರ ನೇಮಕಕ್ಕೆ ಹೊಸ ಕಾನೂನನ್ನು ಕಳೆದ ವರ್ಷ ರೂಪಿಸಿದೆ. ನೇಮಕ ಪ್ರಕ್ರಿಯೆಯಲ್ಲಿ ಪಕ್ಷಪಾತದ ಧೋರಣೆ ಇರಬಾರದು, ಅಲ್ಲಿ ವಿಶ್ವಾಸಾರ್ಹತೆ ಹೆಚ್ಚಿನ ಮಟ್ಟದಲ್ಲಿ ಇರಬೇಕು ಎಂಬ ಉದ್ದೇಶದಿಂದ ಸುಪ್ರೀಂ ಕೋರ್ಟ್‌ ರೂಪಿಸಿದ್ದ ಪ್ರಕ್ರಿಯೆಯೊಂದಕ್ಕೆ ವಿರುದ್ಧವಾದ ಪ್ರಕ್ರಿಯೆಯನ್ನು ಕೇಂದ್ರವು ರೂಪಿಸಿದೆ.

ಗೋಯಲ್ ಅವರು ವೈಯಕ್ತಿಕ ಕಾರಣಗಳಿಗಾಗಿ ಅಥವಾ ಆರೋಗ್ಯದ ಸಮಸ್ಯೆಯಿಂದಾಗಿ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ಹೇಳುತ್ತವೆ. ಆದರೆ ಇದನ್ನು ಪೂರ್ಣ ಸತ್ಯವೆಂದು ಭಾವಿಸಲಾಗದು. ಗೋಯಲ್ ಅವರ ಸೇವಾ ಅವಧಿಯು ಇನ್ನೂ ದೀರ್ಘವಾಗಿತ್ತು. ಅವರು ಸಿ.ಇ.ಸಿ. ಆಗುವ ಸಾಧ್ಯತೆ ಹೆಚ್ಚಿತ್ತು. ಗೋಯಲ್ ಅವರನ್ನು 2022ರಲ್ಲಿ ಬಹಳ ಅವಸರದಲ್ಲಿ, ಒಂದೇ ದಿನದಲ್ಲಿ ನೇಮಕ ಮಾಡಲಾಗಿತ್ತು. ಅವರು ಈಗ ರಾಜೀನಾಮೆಯನ್ನೂ ಬಹಳ ಅವಸರದಲ್ಲಿ ನೀಡಿದಂತಿದೆ. ಗೋಯಲ್ ಅವರು ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಸಿ.ಇ.ಸಿ. ಜೊತೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂಬ ಊಹಾಪೋಹಗಳು ಇವೆ. ರಾಜೀನಾಮೆ ಸಲ್ಲಿಸುವಂತೆ ಅವರ ಮೇಲೆ ಒತ್ತಡ ಸೃಷ್ಟಿಯಾಗಿರಬಹುದು ಎಂಬ ಅಭಿಪ್ರಾಯಗಳೂ ಇವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗಕ್ಕೆ ಬಹಳ ಮಹತ್ವದ ಸ್ಥಾನ ಇರುವ ಕಾರಣ ಗೋಯಲ್ ಅವರ ರಾಜೀನಾಮೆಗೆ ಕಾರಣಗಳು ಏನಿದ್ದವು, ಅವರು ರಾಜೀನಾಮೆ ನೀಡಿದ ಸಂದರ್ಭ ಏನಿತ್ತು ಎಂಬುದನ್ನು ಬಹಿರಂಗಪಡಿಸಬೇಕಿದೆ. ಆಯೋಗದ ಕಾರ್ಯವಿಧಾನಗಳ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಇರುತ್ತದೆ. ಹೀಗಾಗಿ, ಆಯೋಗವು ಪಾರದರ್ಶಕವಾಗಿ ಇರಬೇಕು, ವಿಶ್ವಾಸಾರ್ಹವಾಗಿ ಇರಬೇಕು. ಹಠಾತ್ ನೇಮಕ, ಹಠಾತ್ ರಾಜೀನಾಮೆಯಂತಹ ಬೆಳವಣಿಗೆಗಳು ಅದರ ವಿಶ್ವಾಸಾರ್ಹತೆಯನ್ನು ಕುಗ್ಗಿಸಬಲ್ಲವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT