ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಜಿಡಿಪಿ ಬೆಳವಣಿಗೆ ನಿರೀಕ್ಷೆಗಿಂತ ಕಡಿಮೆ: ಚೇತರಿಕೆಗೆ ಹಣದುಬ್ಬರ ತೊಡಕು

Last Updated 5 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಕಳೆದ ವಾರ ಬಿಡುಗಡೆ ಮಾಡಿದ ಈ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ಅವಧಿಯ ಮೊದಲ ತ್ರೈಮಾಸಿಕದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ಪ್ರಮಾಣ ನಿರೀಕ್ಷೆಗಿಂತ ಬಹಳ ಕೆಳಗೆ ಇದೆ ಮತ್ತು ಇದು ದೊಡ್ಡ ನಿರಾಶೆಗೆ ಕಾರಣವಾಗಿದೆ. ಸಾಮಾನ್ಯ ಸಂದರ್ಭದಲ್ಲಿಯಾದರೆ ಶೇ 13.5ರಷ್ಟು ಬೆಳವಣಿಗೆಯನ್ನು ಅಸಾಧಾರಣ ಎಂದೇ ಬಣ್ಣಿಸ ಬಹುದಾಗಿತ್ತು. ಆದರೆ, ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಅರ್ಥ ವ್ಯವಸ್ಥೆಯು ತೀವ್ರವಾಗಿ ಕುಗ್ಗಿತ್ತು. ಪ್ರಗತಿಯ ಲೆಕ್ಕಾಚಾರವು ಅದನ್ನು ಅವಲಂಬಿಸಿರುವುದರಿಂದ ಈ ಬಾರಿಯ ಪ್ರಗತಿ ಹೇಳಿಕೊಳ್ಳುವಂತಹುದೇನೂ ಅಲ್ಲ. ಜೊತೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾಡಿದ್ದ ಅಂದಾಜಿಗಿಂತ ಬಹಳ ಕಡಿಮೆ ಇದೆ. ಶೇ 16.2ರಷ್ಟು ಬೆಳವಣಿಗೆ ದಾಖಲಾಗಬಹುದು ಎಂದು ಆರ್‌ಬಿಐ ಅಂದಾಜಿಸಿತ್ತು. ಪರೋಕ್ಷ ತೆರಿಗೆಗಳು ಮತ್ತು ಸಹಾಯಧನಗಳ ಹೊಂದಾಣಿಕೆಯ ಬಳಿಕ ಸರಕು ಮತ್ತು ಸೇವೆಗಳ ಸರಾಸರಿ ಮೌಲ್ಯವನ್ನು ಲೆಕ್ಕಕ್ಕೆ ತೆಗೆದುಕೊಂಡರೆ, 2019–20ರ ಮೊದಲ ತ್ರೈಮಾಸಿಕಕ್ಕಿಂತ ಶೇ 4.7ರಷ್ಟು ಮಾತ್ರ ಪ್ರಗತಿಯಲ್ಲಿ ಏರಿಕೆ ಆಗಿದೆ. ಕೋವಿಡ್‌ ಸಾಂಕ್ರಾಮಿಕದ ನಂತರದಲ್ಲಿ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅರ್ಥ ವ್ಯವಸ್ಥೆಯು ಬಹುತೇಕ ಚೇತರಿಸಿಕೊಂಡಿದೆ ಎಂದೇ ಪರಿಗಣಿಸಲಾಗಿತ್ತು. ರಷ್ಯಾ–ಉಕ್ರೇನ್‌ ನಡುವೆ ಯುದ್ಧದಿಂದಾಗಿ ತೊಡಕುಗಳು ಉಂಟಾಗಿದ್ದರೂ ಉತ್ತಮ ಪ್ರಗತಿಯ ನಿರೀಕ್ಷೆ ಇತ್ತು. ಆದುದರಿಂದಲೇ ಬೆಳವಣಿಗೆಯ ಕುರಿತ ಈಗಿನ ಅಂದಾಜು ಕಳವಳಕ್ಕೆ ಕಾರಣವಾಗಿದೆ.

ಪ್ರಗತಿಯು ನಿರೀಕ್ಷೆಯ ಹತ್ತಿರಕ್ಕೂ ಬಾರದಿರಲು ತಯಾರಿಕಾ ವಲಯದ ಕೊಡುಗೆ ಕಡಿಮೆಯಾಗಿರುವುದು ಒಂದು ಕಾರಣ. ತಯಾರಿಕಾ ವಲಯದ ಬೆಳವಣಿಗೆಯು ಶೇ 4.8ರಷ್ಟು ಮಾತ್ರ.ಸಾಂಕ್ರಾಮಿಕಪೂರ್ವಕ್ಕೆ ಹೋಲಿಸಿದರೆ ಬೆಳವಣಿಗೆಯು ಅತ್ಯಂತ ಕಡಿಮೆ ಎಂದೇ ಹೇಳಬೇಕಾಗುತ್ತದೆ. ಕಟ್ಟಡ ನಿರ್ಮಾಣ ಕ್ಷೇತ್ರದ ಬೆಳವಣಿಗೆಯು ಶೇ 14.7ರಷ್ಟು ದಾಖಲಾಗಿದೆ. ಹೋಟೆಲ್‌, ಸಾರಿಗೆ ಮತ್ತು ಸಂವಹನ ಸೇರಿದಂತೆ ಸೇವಾವಲಯವು ಕೂಡ ಉತ್ತಮ ಪ್ರಗತಿ ಕಂಡಿಲ್ಲ. ಕೃಷಿ ವಲಯವು ಶೇ 4.5ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು ಇದನ್ನು ಉತ್ತಮ ಎಂದೇ ಹೇಳಬಹುದು. ಆದರೆ, ದೇಶದ ಕೆಲವು ಭಾಗಗಳಲ್ಲಿ ಮುಂಗಾರು ಮಳೆಯು ವಿಚಿತ್ರವಾಗಿ ವರ್ತಿಸಿರುವುದರಿಂದ ಮುಂದಿನ ತಿಂಗಳುಗಳಲ್ಲಿ ಇದೇ ಗತಿಯನ್ನು ಕಾಯ್ದುಕೊಳ್ಳುವ ಭರವಸೆ ಇಲ್ಲ. ಹಾಗಾಗಿ, ಗ್ರಾಮೀಣ ಪ್ರದೇಶದ ಬೇಡಿಕೆಯ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಬಹುದು. ಅರ್ಥ ವ್ಯವಸ್ಥೆಯ ಚಾಲಕಶಕ್ತಿಯೇ ಆಗಿರುವ ಗ್ರಾಹಕ ವಸ್ತುಗಳ ಬೇಡಿಕೆಯು ಪುನಶ್ಚೇತನಗೊಂಡಿದೆ ಎಂಬುದು ಉತ್ತೇಜನಕಾರಿ ಅಂಶ. ಆದರೆ, ಇದು ಇನ್ನೂ ಉತ್ತಮಗೊಳ್ಳಬೇಕಿತ್ತು. ಸರ್ಕಾರದ ವೆಚ್ಚವು ಶೇ 10.4ರಷ್ಟು ಕಡಿಮೆಯಾಗಿದೆ. ಹಣದುಬ್ಬರವು ಗರಿಷ್ಠ ಮಟ್ಟಕ್ಕೆ ಹೋಗಿದೆ ಮತ್ತು ಅದೇ ಮಟ್ಟದಲ್ಲಿಯೇ ಮುಂದುವರಿದಿದೆ. ಹಾಗಾಗಿ, ಈ ವರ್ಷದ ಮುಂದಿನ ತಿಂಗಳುಗಳಲ್ಲಿ ಕೂಡ ಪ್ರಗತಿಯು ಹೆಚ್ಚುವುದು ಕಷ್ಟಕರ ಎಂಬ ಪರಿಸ್ಥಿತಿ ಇದೆ.

ಭಾರತದ ಪ್ರಗತಿಯು 2022ರಲ್ಲಿ ಶೇ 7.7ರಷ್ಟು ಇರಲಿದೆ ಎಂದು ರೇಟಿಂಗ್ ಸಂಸ್ಥೆ ಮೂಡೀಸ್‌ ಅಂದಾಜಿಸಿದೆ. ಹೆಚ್ಚುತ್ತಿರುವ ಬಡ್ಡಿದರ, ಮುಂಗಾರು ಮಳೆಯಲ್ಲಿನ ಏರಿಳಿತ ಮತ್ತು ಜಾಗತಿಕ ಮಟ್ಟದಲ್ಲಿ ಬೇಡಿಕೆ ಕುಸಿತದಿಂದಾಗಿ ಈ ಮಟ್ಟದ ಬೆಳವಣಿಗೆಯಷ್ಟೇ ಸಾಧ್ಯ ಎಂದು ಮೂಡೀಸ್‌ ವಿಶ್ಲೇಷಿಸಿದೆ. ಮೂಲಸೌಕರ್ಯ ವಲಯದಲ್ಲಿ ಪ್ರಮುಖವಾದ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಿತ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ ವಲಯಗಳ ಪ್ರಗತಿಯು ಜುಲೈ ತಿಂಗಳಲ್ಲಿ ಶೇ 4.5ರಷ್ಟಕ್ಕೆ ಕುಸಿದಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ರಫ್ತು ಕುಸಿತ ಕಂಡಿದೆ. ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಚೀನಾವು ಶೇ 0.4ರಷ್ಟು ಅತ್ಯಲ್ಪ ಪ್ರಗತಿ ದಾಖಲಿಸಿದೆ. ಭಾರತದಲ್ಲಿ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ 6.2ರಷ್ಟು ಮತ್ತು ವರ್ಷದ ಕೊನೆಯ ಎರಡು ತ್ರೈಮಾಸಿಕಗಳಲ್ಲಿ ಶೇ 4ರಷ್ಟು ಪ್ರಗತಿ ಆಗಬಹುದು ಎಂದು ಆರ್‌ಬಿಐ ಅಂದಾಜಿಸಿದೆ. ಆದರೆ, ಈ ಅಂದಾಜು ಈಗಿನ ಪರಿಸ್ಥಿತಿಯಲ್ಲಿ ಅತಿ ಆಶಾವಾದಿಯಾದುದು ಎಂದೇ ಹೇಳಬೇಕಾಗುತ್ತದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವಲ್ಲಿನ ತನ್ನ ಹೋರಾಟವನ್ನು ಆರ್‌ಬಿಐ ಮುಂದುವರಿಸಬೇಕು. ಅತಿ ಹೆಚ್ಚು ಅಗತ್ಯ ಇರುವ ವಲಯಗಳಲ್ಲಿ ಸರ್ಕಾರವು ಹೆಚ್ಚು ವೆಚ್ಚ ಮಾಡಿ ಪ್ರಗತಿಗೆ ಉತ್ತೇಜನ ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT