ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಕೇಂದ್ರಕ್ಕೆ ನುಗ್ಗಿಬಂದ ಕೆಸರುನೀರು ಮಹಾಮಳೆಯ ಜಲಧಾರೆಗೆ ದಾರಿ ತೋರುವರಾರು?

Last Updated 25 ನವೆಂಬರ್ 2021, 20:32 IST
ಅಕ್ಷರ ಗಾತ್ರ

ಹವಾಮಾನದ ಏರುಪೇರಿನಿಂದಾಗುವ ಅನಾಹುತಗಳ ಬಗ್ಗೆ ವಿಜ್ಞಾನಿಗಳು ಪದೇ ಪದೇ ಹೇಳುತ್ತಿರುವ ಈ ಹೊತ್ತಿನಲ್ಲೇ ಅತಿಮಳೆಯಿಂದಾಗಿ ಬೆಂಗಳೂರಿನ ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಯೇ ಗಂಭೀರ ನಷ್ಟವನ್ನು ಅನುಭವಿಸಬೇಕಾಗಿ ಬಂದಿದೆ. ಜಕ್ಕೂರಿನಲ್ಲಿರುವ ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಆವರಣಕ್ಕೆ (ಜೆಎನ್‌ಸಿಎಎಸ್‌ಆರ್‌) ಅಧಿಕ ಪ್ರಮಾಣದಲ್ಲಿ ಪ್ರವಾಹ ನುಗ್ಗಿದ್ದರಿಂದ ಪ್ರಯೋಗಶಾಲೆಯ ಉಪಕರಣಗಳು, ಸಂರಕ್ಷಿತ ಮಾದರಿಗಳು, ಎಲೆಕ್ಟ್ರಾನಿಕ್‌ ಸಾಧನಗಳು ಮತ್ತು ದತ್ತಾಂಶಗಳು ನೀರುಪಾಲಾಗಿವೆ.

ಒಂದೆರಡು ದಿನಗಳಲ್ಲಿ ನೆರೆ ತಗ್ಗಿದರೂ ಅಲ್ಲಿ ಮಡುಗಟ್ಟಿದ ಕೆಸರುಹೂಳು ಮತ್ತು ಚರಂಡಿ ರೊಚ್ಚೆಯಿಂದಾಗಿ ಬಹುಪಾಲು ಸಂಶೋಧನಾ ಸಾಧನಗಳು ನಿರುಪಯುಕ್ತವಾಗಿರುತ್ತವೆ. ಈ ವರ್ಷದ ಮಳೆಗಾಲದ ಆರ್ಭಟಕ್ಕೆ ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ರಾಜ್ಯದಾದ್ಯಂತ ಆಸ್ತಿಪಾಸ್ತಿ, ಕೃಷಿಫಸಲು, ಸಂಪರ್ಕ ಸಾಧನಗಳ ನಷ್ಟ ಸಂಭವಿಸಿದ್ದು, ಪರಿಹಾರದ ಅಂದಾಜು ಮಾಡುವುದೂ ಸವಾಲಿನ ಪ್ರಶ್ನೆಯಾಗಿದೆ. ಅವುಗಳ ಮಧ್ಯೆ ಭಾರತದ ಶ್ರೇಷ್ಠ ವೈಜ್ಞಾನಿಕ ಸಂಶೋಧನಾ ತಾಣಗಳಲ್ಲೊಂದೆಂಬ ಹೆಗ್ಗಳಿಕೆ ಪಡೆದ ಜೆಎನ್‌ಸಿಎಎಸ್‌ಆರ್‌ ಆವರಣದ ಹಾನಿಯಂತೂ ಅಂದಾಜಿಗೂ ಸಿಗಲಾರದು.

ಕೋಟಿಗಟ್ಟಲೆ ರೂಪಾಯಿ ಬೆಲೆಬಾಳುವ ಎಲೆಕ್ಟ್ರಾನಿಕ್‌ ಮೈಕ್ರೊಸ್ಕೋಪ್‌ಗಳು, ಅತಿಶೀತಕ ಯಂತ್ರಗಳು, ಕಂಪ್ಯೂಟರ್‌ ಮತ್ತಿತರ ದುಬಾರಿ ಸಲಕರಣೆಗಳಿಗೇನೊ ಬೆಲೆ ಕಟ್ಟಬಹುದು; ರಿಪೇರಿಯೂ ಕೆಲಮಟ್ಟಿಗೆ ಸಾಧ್ಯವಾಗಬಹುದು. ಆದರೆ ದೇಶವಿದೇಶಗಳಿಂದ ಬರುವ ಸಂಶೋಧಕರ ಬಳಕೆಗೆಂದು ಹತ್ತಿಪ್ಪತ್ತು ವರ್ಷಗಳಿಂದ ಜತನವಾಗಿ ಕಾದಿರಿಸಿದ್ದ ಅಪರೂಪದ ಜೀವಕೋಶಗಳು, ಆಕರಕೋಶಗಳು, ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ ಮಿದುಳಿನ ನರಕೋಶಗಳು, ವಂಶವಾಹಿ ಡಿಎನ್‌ಎ ಮಾದರಿಗಳು ಜಾಗತಿಕ ಆಸ್ತಿಗಳಾಗಿದ್ದು, ಅವು ನಷ್ಟವಾಗಿದ್ದರೆ ಎಷ್ಟೇ ಹಣ ಕೊಟ್ಟರೂ ಅವುಗಳ ಮರುಭರ್ತಿಯಾಗಲೀ
ಮರುಸೃಷ್ಟಿಯಾಗಲೀ ಸಾಧ್ಯವಿಲ್ಲ. ವಿಜ್ಞಾನ ಪ್ರಪಂಚದಲ್ಲಿ ಮುಂಚೂಣಿಯಲ್ಲಿದ್ದ ಸಂಶೋಧನಾ ಸಂಸ್ಥೆಯು ದಶಕಗಳ ಹಿನ್ನಡೆ ಅನುಭವಿಸಬೇಕಾದೀತು.

ಅತಿವೃಷ್ಟಿಯ ಆತಂಕಗಳ ಬಗ್ಗೆ ವಿಜ್ಞಾನಿಗಳಿಗೇ ಮುನ್ಸೂಚನೆಗಳಿರಲಿಲ್ಲವೆ, ಇದ್ದರೂ ಅದಕ್ಕೆ ತಕ್ಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲವೆ ಎಂಬ ಉದ್ಗಾರ ಈ ಪ್ರಸಂಗದಲ್ಲಿ ಏಳಬಹುದಾದರೂ ಬೆಂಗಳೂರಿನ ನಗರ ನಿರ್ಮಾಣದ ಅಧ್ವಾನಗಳು ಎಂಥ ತಜ್ಞರನ್ನೂ ದಿಕ್ಕೆಡಿಸಬಲ್ಲವು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿ ನಿಲ್ಲುತ್ತದೆ. ಜಕ್ಕೂರು ಕೆರೆ ಮತ್ತು ರಾಚೇನಹಳ್ಳಿ ಕೆರೆಗಳ ಕೆಳದಂಡೆಯಲ್ಲಿ 32 ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಈ ಸಂಶೋಧನಾ ಸಂಸ್ಥೆಗೆ ಮೊದಲ ಒಂದೆರಡು ದಶಕಗಳಲ್ಲಿ ಪ್ರವಾಹದ ಆತಂಕವೇನೂ ಇರಲಿಲ್ಲ.

ಆದರೆ ಕ್ರಮೇಣ ನೀರಿನ ಹರಿವಿಗೆ ಅಡ್ಡಲಾಗಿ, ಅಡ್ಡಾದಿಡ್ಡಿಯಾಗಿ ಕಟ್ಟಡಗಳು ತಲೆ ಎತ್ತಿದ್ದು, ಬಿಡಿಎ ಬಡಾವಣೆ ರೂಪುಗೊಂಡಿದ್ದು ವಿಜ್ಞಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಸಂಸ್ಥೆಯ ಪ್ರಗತಿಯ ವೀಕ್ಷಣೆಗೆ ಬಂದಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರು ತಮ್ಮ ದುಗುಡವನ್ನು ಹೇಳಿದ್ದರು ಕೂಡ. ಆದರೆ ಆಪತ್ತಿನ ಮುನ್ಸೂಚನೆ ತಿಂಗಳು ಮೊದಲೇ ಸಿಕ್ಕರೂ ಯಾರೂ ಏನೂ ಮಾಡಲಾಗದಂಥ ಹತಾಶ ಸ್ಥಿತಿಗೆ ಬೆಂಗಳೂರು ಬಂದಿದ್ದಾದರೂ ಹೇಗೆ? ನಗರ ಯೋಜನೆಗಳನ್ನು ರೂಪಿಸುವಾಗ ಭೂರಚನೆಯ
ಏರಿಳಿತಗಳನ್ನು ಗಮನಿಸಿ, ದೂರದ ಆವರಣಗಳಿಗೂ ದೂರಭವಿಷ್ಯದ ವಿಸ್ತರಣೆಗೂ ಕಂಟಕ ಒದಗದಂತೆ ನೀಲನಕ್ಷೆಯನ್ನು ಸಿದ್ಧಪಡಿಸಬೇಕಿತ್ತು. ಅಷ್ಟೇ ಅಲ್ಲ, ಅಂಥ ನೀಲನಕ್ಷೆಯನ್ನು ಯಾರೂ ಧಿಕ್ಕರಿಸದಂತೆ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕಿತ್ತು. ಹಾಗೆ ಮಾಡದಿದ್ದರೆ ಏನೇನು ಅಧ್ವಾನಗಳಾಗುತ್ತವೆ ಎಂಬುದು ಚೆನ್ನೈ, ಹೈದರಾಬಾದ್‌, ಗುರುಗ್ರಾಮದ ನೆರೆಹಾವಳಿಯ ಸಂದರ್ಭಗಳಲ್ಲಿ ನಮಗೆ ಗೊತ್ತಾಗಿದೆ. ಅಷ್ಟೇಕೆ, ಬೆಂಗಳೂರಿನಲ್ಲೂ ಹಿಂದೆ ಇಸ್ರೊ ಅಂತರಿಕ್ಷ ಭವನದ ನೆಲಮಾಳಿಗೆಗೆ ನೀರು ನುಗ್ಗಿದ್ದು, ಎಲೆಕ್ಟ್ರಾನಿಕ್‌ ಸಿಟಿಯ ಪಿಇಎಸ್‌ ಕಾಲೇಜಿನ ವಿದ್ಯಾರ್ಥಿಗಳನ್ನು ದೋಣಿಯ ಮೂಲಕ ಪಾರುಮಾಡಬೇಕಾಗಿ ಬಂದಿದ್ದು ಸುಲಭಕ್ಕೆ ಮರೆಯುವಂಥ ಘಟನೆಗಳೇನಲ್ಲ. ವಾಸ್ತುಶಿಲ್ಪದ ನೆಲೆಗಟ್ಟನ್ನೇ ಕಡೆಗಣಿಸಿ ನೆಲನಕ್ಷೆಯನ್ನು ರೂಪಿಸಿದರೆ ಅದು ವಿಜ್ಞಾನವನ್ನೇ ಹಿಮ್ಮೆಟ್ಟಿಸೀತು ಎಂಬುದು ಈಗಿನ ಜೆಎನ್‌ಸಿಎಎಸ್‌ಆರ್‌ ಘಟನೆಯಲ್ಲಿ ಘಂಟಾಘೋಷವಾದಂತಾಗಿದೆ.

ಅತಿವೃಷ್ಟಿಯಿಂದ ನಲುಗುವ ನಗರಗಳ ಸಂಖ್ಯೆ ಈಚಿನ ವರ್ಷಗಳಲ್ಲಿ ಜಗತ್ತಿನ ಎಲ್ಲೆಡೆ ಹೆಚ್ಚುತ್ತಿದೆ. ನಮ್ಮಲ್ಲಂತೂ ಈ ಸಂಕಟಗಳನ್ನು ದ್ವಿಗುಣವೊಳಿಸುವಂತೆ ಪರಿಸರ ಸಮತೋಲ ಕುರಿತ ನಿಷ್ಕಾಳಜಿಯೂ ಹೆಚ್ಚುತ್ತಿದೆ. ನಿಸರ್ಗದ ಸಹನಾ ಸಾಮರ್ಥ್ಯವನ್ನು ಮೀರಿ ಬೆಳೆಯಬೇಕೆಂಬ ನಮ್ಮ ಧಾರ್ಷ್ಟ್ಯವನ್ನು ಬದಿಗಿಟ್ಟು ಅದರ ನಿಯಮಗಳಿಗೆ ಪೂರಕವಾಗಿ ನಗರಗಳನ್ನು ಮರುರೂಪಿಸಬೇಕಾದ ಅನಿವಾರ್ಯ ದಿನದಿನಕ್ಕೆ ಹೆಚ್ಚುತ್ತಿದೆ. ಎಂಥ ಮಹಾಮಳೆ ಬಂದರೂ ಯಾರಿಗೂ ಕಂಟಕ ಒಡ್ಡದಂಥ, ಮಳೆನೀರೆಲ್ಲ ನಗರದ ಸಂಪತ್ತಾಗಿ ಇಂಗುವಂಥ ‘ಸ್ಪಾಂಜ್‌ ಸಿಟಿ’ ಯೋಜನೆಯನ್ನು ಚೀನಾದ 30 ನಗರಗಳಲ್ಲಿ ಜಾರಿಗೆ ತರಲಾಗುತ್ತಿದೆ.

ಕೆರೆಗಳ ಹೂಳೆತ್ತಿ, ಭೂಗತ ಜಲಾಶಯಗಳನ್ನು ನಿರ್ಮಿಸಿ, ಮಳೆನೀರು ಸಂಗ್ರಹದ ಸೌರಸೂರುಗಳನ್ನು ನಿರ್ಮಿಸಿ, ಹಸಿರು ಉದ್ಯಾನಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಬೆಂಗಳೂರು ನಗರ ಅಂಥದ್ದೊಂದು ಪರಿಕಲ್ಪನೆಯನ್ನು ಜಾರಿಗೆ ತರಲು ಪ್ರಶಸ್ತ ನಗರವೆನಿಸಿದೆ. ತರಲು ಬೇಕಾದ ವೈಜ್ಞಾನಿಕ ಪರಿಜ್ಞಾನ ಮತ್ತು ರಾಜಕೀಯ ಕಟಿಬದ್ಧತೆ ಮೂಡಬೇಕಾಗಿದೆಯಷ್ಟೆ. ವಿಜ್ಞಾನ ಸಂಶೋಧನೆಗಳ ರಾಜಧಾನಿಯಲ್ಲಿ ವಿಜ್ಞಾನಿಗಳ ಅಂಗಳಕ್ಕೇ ನೀರು ನುಗ್ಗಿದಾಗಲೂ ನಾವು ಆ ತುರ್ತನ್ನು ಅರಿಯದಿದ್ದರೆ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT