ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕುಡಿಯುವ ನೀರಿನ ಬವಣೆ ನಿವಾರಣೆಗೆ ಸಿಗಲಿ ಆದ್ಯತೆ

Last Updated 18 ಏಪ್ರಿಲ್ 2023, 23:15 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಬೇಸಿಗೆಯ ಧಗೆ ಈ ಸಲ ವಿಪರೀತಕ್ಕೆ ಹೋದಂತೆ ಭಾಸವಾಗುತ್ತಿದೆ. ಕುಡಿಯುವ ನೀರಿನ ಕೊರತೆಯ ಜೊತೆಗೆ ಬಿಸಿಗಾಳಿಯ ಅಟಾಟೋಪವೂ ಹೆಚ್ಚಾಗಿದೆ. ಮಧ್ಯಾಹ್ನದ ಕೆಂಡದಂತಹ ಬಿಸಿಲಿಗೆ ಬಯಲುಸೀಮೆ, ಮಲೆನಾಡು ಎನ್ನುವ ಭೇದವಿಲ್ಲದೆ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ರಾಜ್ಯದ 14 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದೂ ವರದಿಯಾಗಿದೆ. ಕಲ್ಯಾಣ ಕರ್ನಾಟಕ ಹಾಗೂ ಬಯಲುಸೀಮೆಯ ಬಹುತೇಕ ಜಲಮೂಲಗಳು ಬತ್ತಿ ಹೋಗಿದ್ದರಿಂದ ಕುಡಿಯುವ ನೀರಿಗೆ ತತ್ವಾರ ಎದ್ದಿದೆ. ನೀರಿಗಾಗಿ ಜನಸಾಮಾನ್ಯರು ತಾಪತ್ರಯ ಅನುಭವಿಸುತ್ತಿರುವ ಈ ಹಂತದಲ್ಲಿ ಇಡೀ ಆಡಳಿತ ವ್ಯವಸ್ಥೆಯು ತನ್ನೆಲ್ಲ ಗಮನವನ್ನು ಚುನಾವಣೆಯತ್ತ ಕೇಂದ್ರೀಕರಿಸಿದೆ.

ಸಂಶಯವೇ ಇಲ್ಲ, ಚುನಾವಣೆಯಂತಹ ಮಹತ್ತರ ಕಾರ್ಯದಲ್ಲಿ ಆಡಳಿತ ಯಂತ್ರ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಅನಿವಾರ್ಯ ಕೂಡ. ಆದರೆ, ಆ ಭರಾಟೆಯಲ್ಲಿ ಕುಡಿಯುವ ನೀರಿನ ಕೊರತೆಯಂತಹ ಸಮಸ್ಯೆಯನ್ನು ಕಡೆಗಣಿಸಲು ಆಗದು. ಕಲ್ಯಾಣ ಕರ್ನಾಟಕದ ಕೆರೆಗಳೆಲ್ಲ ಬರಿದಾಗಿವೆ. ಮಲೆನಾಡಿನ ನದಿಗಳೂ ತಳಕಂಡಿವೆ. ಹಲವೆಡೆ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಟ್ಯಾಂಕರ್‌ ನೀರು ದುಬಾರಿ ಬೆಲೆಗೆ ಬಿಕರಿಯಾಗುತ್ತಿದೆ. ರಾಜ್ಯದ ನೂರಾರು ಗ್ರಾಮಗಳ ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಬರ ಎದುರಾಗಿರುವುದು ಪರಿಸ್ಥಿತಿಯ ಗಾಂಭೀರ್ಯವನ್ನು ಸೂಚಿಸುತ್ತದೆ. ಜಾನುವಾರುಗಳಿಗೆ ಮೇವಿನ ಕೊರತೆಯೂ ತೀವ್ರವಾಗಿ ಬಾಧಿಸುತ್ತಿರುವ ಕುರಿತು ವರದಿಗಳಿವೆ. ಎಲ್ಲೆಲ್ಲಿ ಅಗತ್ಯವೋ ಅಲ್ಲಿ ಗೋಶಾಲೆಗಳನ್ನು ತೆರೆಯುವ ಕೆಲಸವೂ ಆಗಿಲ್ಲ ಎನ್ನುವುದು ರೈತರ ಅಳಲು.

ನೀರು, ಮೇವಿಲ್ಲದೆ ಕಟ್ಟಿಹಾಕಿದ ಗೂಟದ ಸುತ್ತ ಗಿರಕಿ ಹೊಡೆಯುವ ದನಗಳ ಸ್ಥಿತಿ ನೆನಪಿಸಿಕೊಂಡರೆ ಕರುಳು ಚುರ್‌ ಎನ್ನುತ್ತದೆ. ಯಾವ, ಯಾವ ಪ್ರದೇಶದಲ್ಲಿ ನೀರಿನ ಕೊರತೆ ಇದೆ ಎಂಬ ಮಾಹಿತಿಯು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶದ ಬಳಿ ಇದ್ದೇ ಇರುತ್ತದೆ. ಅದಕ್ಕೆ ತಕ್ಕಂತೆ ಮುಂಚಿತವಾಗಿ ಕ್ರಿಯಾಯೋಜನೆಯನ್ನು ರೂಪಿಸದೆ ಕಾಲಹರಣ ಮಾಡಿರುವುದು ಪ್ರಮಾದ. ನೀರಿನ ಕೊರತೆಯಂತಹ ಸಮಸ್ಯೆಗಳನ್ನು ಬೇಗ ಪರಿಹರಿಸದೆ ಚುನಾವಣೆ ಮುಗಿಯಲಿ ಎಂದು ಮುಂದೆ ಹಾಕಲು ಸಾಧ್ಯವೇ ಇಲ್ಲ.

ನಮ್ಮ ರಾಜ್ಯವು ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಗೆ ಸಾಕ್ಷಿಯಾದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬರ ಉಂಟಾಗಿರುವುದು ವೈರುಧ್ಯ. ಜಲಾಶಯಗಳಲ್ಲಿ ತಕ್ಕಮಟ್ಟಿಗೆ ನೀರಿನ ಲಭ್ಯತೆ ಉಂಟಾದರೂ ಅದರಿಂದ ಮೈಮರೆಯುವ ಹಾಗಿಲ್ಲ ಮತ್ತು ಕೊರತೆ
ಯನ್ನೆಲ್ಲ ಅದರಿಂದ ನಿವಾರಿಸಲೂ ಸಾಧ್ಯವಿಲ್ಲ. ಬೇಸಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಪ್ರತಿಯೊಂದು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿರುತ್ತದೆ. ಮಳೆಗಾಲ ಶುರುವಾಗುವ ವರೆಗೆ ಎಲ್ಲೆಲ್ಲಿ ನೀರಿನ ಕೊರತೆ ಇದೆಯೋ ಅಲ್ಲಲ್ಲಿ ಸಮರ್ಪಕವಾಗಿ ಪೂರೈಕೆ ಮಾಡಬೇಕಾದ ಜವಾಬ್ದಾರಿ ಯನ್ನು ಈ ಕಾರ್ಯಪಡೆಗಳು ಹೊತ್ತಿರುತ್ತವೆ. ಇಂತಹ ಕಾರ್ಯಪಡೆಗಳು ಈ ಸಲ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳಿವೆ.

ಈ ವಿಷಯದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮುತುವರ್ಜಿ ವಹಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಚುನಾವಣೆ ಮುಖ್ಯವಾದರೂ ಜನರಿಗೆ ಜೀವಜಲ ಒದಗಿಸುವುದು ಅಷ್ಟೇ ಮುಖ್ಯ ಎನ್ನುವುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ದಶಕಗಳಿಂದ ನೂರಾರು ಗ್ರಾಮಗಳಿಗೆ ಪ್ರತೀ ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕವೇ ನೀರು ಪೂರೈಸುತ್ತಿದ್ದರೂ ಅದಕ್ಕೊಂದು ಶಾಶ್ವತವಾದ ವ್ಯವಸ್ಥೆ ಮಾಡಬೇಕು ಎಂಬ ದೂರಾಲೋಚನೆಯು ನಮ್ಮ ಆಡಳಿತ ವ್ಯವಸ್ಥೆಗೆ ಇದುವರೆಗೆ ಹೊಳೆಯದಿರುವುದು ದುರ್ದೈವ. ಮಹತ್ವಾಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರಾಜ್ಯದಾದ್ಯಂತ ಅನುಷ್ಠಾನಕ್ಕೆ ಬಂದರೂ ಯೋಜನೆಯ ವ್ಯಾಪ್ತಿಗೆ ಒಳಪಟ್ಟ ಬಹುತೇಕ ಗ್ರಾಮಗಳು ನೀರಿನ ಸಮಸ್ಯೆಯಿಂದ ಹೊರತಾಗಿಲ್ಲ ಎನ್ನುವುದು ಕಟುವಾಸ್ತವ. ನಮ್ಮ ಯೋಜನೆಗಳು ಹೇಗೆ ಅನುಷ್ಠಾನಗೊಳ್ಳುತ್ತವೆ ಎಂಬುದಕ್ಕೂ ಈಗಿನ ಪರಿಸ್ಥಿತಿ ಕನ್ನಡಿ ಹಿಡಿಯುತ್ತದೆ. ಬೇಸಿಗೆಯ ನೀರು, ಮೇವಿನ ಕೊರತೆಯನ್ನು ಆ ಋತುವಿನ ತಾತ್ಕಾಲಿಕ ಸಮಸ್ಯೆ ಎಂದುಕೊಂಡು, ತಾತ್ಕಾಲಿಕ ಪರಿಹಾರಕ್ಕೆ ಮಾತ್ರ ಮೊರೆಹೋಗುತ್ತಿರುವುದು ಸಮಸ್ಯೆ ಹಾಗೇ ಉಳಿದುಕೊಂಡು ಬರಲು ಕಾರಣವಾಗಿದೆ.

ಗ್ರಾಮಗಳು ಮಾತ್ರವಲ್ಲ, ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲೂ ಕುಡಿಯುವ ನೀರಿನ ಕೊರತೆ ಇದೆ. ಮಳೆನೀರು ಸಂಗ್ರಹ, ಸಂಸ್ಕರಿತ ತ್ಯಾಜ್ಯ ನೀರಿನ ಮರುಬಳಕೆಯಂತಹ ಕ್ರಮಗಳ ಕಡೆಗೂ ಗಮನಹರಿಸಬೇಕಿದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ತರುವುದು ಆದ್ಯತೆಯಾಗಬೇಕಿದೆ. ಆದರೆ, ಇಂತಹ ಆದ್ಯತೆಗಳು ಸರ್ಕಾರದ ಮಹತ್ವದ ಕೆಲಸಗಳ ಪಟ್ಟಿಯಿಂದ ಜಾರಿ ನೇಪಥ್ಯಕ್ಕೆ ಸರಿಯುತ್ತಿರುವುದು ದುರದೃಷ್ಟಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT