ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಅಂಕೆಗೆ ಸಿಗುತ್ತಿಲ್ಲ ಹಣದುಬ್ಬರ– ನಿಯಂತ್ರಣಕ್ಕೆ ಬೇಕು ದೃಢ ಹೆಜ್ಜೆ

Last Updated 14 ಏಪ್ರಿಲ್ 2022, 20:15 IST
ಅಕ್ಷರ ಗಾತ್ರ

ದೇಶದಲ್ಲಿ ಹಣದುಬ್ಬರ ಪ್ರಮಾಣ ಜಾಸ್ತಿ ಆಗುತ್ತಿದೆ ಎಂದು ಹೇಳುವುದಕ್ಕೆ ಈಗ ಸರ್ಕಾರವು ತಿಂಗಳಿಗೆ ಒಮ್ಮೆ ಬಿಡುಗಡೆ ಮಾಡುವ ಅಂಕಿ–ಅಂಶಗಳ ನೆರವಿನ ಅಗತ್ಯ ಇಲ್ಲ. ದಿನನಿತ್ಯದ ಖರ್ಚುಗಳ ಮೇಲೆ ಸ್ವಲ್ಪಮಟ್ಟಿಗೆ ಕಣ್ಣಿಟ್ಟರೂ, ಅಗತ್ಯ ವಸ್ತುಗಳ ಬೆಲೆಯು ಹೆಚ್ಚಾಗುತ್ತಿರುವುದು ಯಾರಿಗೇ ಆದರೂ ಅರ್ಥ ಆಗುತ್ತದೆ. ಹಣದುಬ್ಬರ ಪ್ರಮಾಣವು ದೇಶದಲ್ಲಿ ಮಿತಿಯನ್ನು ಮೀರಿ ಬೆಳೆಯುತ್ತಿರುವುದು ವಾಸ್ತವ. ಜನವರಿಯ ನಂತರದಲ್ಲಿ ದೇಶದ ಹಣದುಬ್ಬರ ದರವು ಶೇಕಡ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದಿದೆ. ಮಾರ್ಚ್‌ ತಿಂಗಳಲ್ಲಿ ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6.95ಕ್ಕೆ ತಲುಪಿದೆ. ಇದು 17 ತಿಂಗಳ ಗರಿಷ್ಠ ಮಟ್ಟ. ಹಿಂದಿನ ವರ್ಷದ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 6.30ರಷ್ಟು ಇತ್ತು. ಅದಾದ ನಂತರದಲ್ಲಿ ಹಣದುಬ್ಬರ ಪ್ರಮಾಣ ತಗ್ಗುತ್ತಾ ಬಂತು. ಸೆಪ್ಟೆಂಬರ್‌ನಲ್ಲಿ ಶೇ 4.35ಕ್ಕೆ ಇಳಿಕೆ ಕಂಡ ಹಣದುಬ್ಬರ ಪ್ರಮಾಣವು ನಂತರದ ತಿಂಗಳುಗಳಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಚಿಲ್ಲರೆ ಹಣದುಬ್ಬರ ದರವನ್ನು ಶೇ 4ಕ್ಕೆ ಮಿತಿಗೊಳಿಸಬೇಕು ಎನ್ನುವುದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಗುರಿ. ಇದು ಗರಿಷ್ಠ ಶೇ 6ಕ್ಕೆ ತಲುಪಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ಹಣದುಬ್ಬರ ಹೋಗಬಾರದು. ಆದರೆ, ಈ ವರ್ಷದ ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳುಗಳಲ್ಲಿ ಹಣದುಬ್ಬರ ಪ್ರಮಾಣವು
ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದುಕೊಂಡಿದೆ. ಸತತ ಮೂರು ತಿಂಗಳುಗಳಿಂದ ಹಣದುಬ್ಬರ ಮಿತಿಯನ್ನು ಮೀರಿ ಬೆಳೆದು ನಿಂತಿರುವುದು, ಆರ್ಥಿಕವಾಗಿ ದುರ್ಬಲರಾಗಿರುವವರ ಪಾಲಿಗೆ ಕಷ್ಟಗಳನ್ನು ದುಪ್ಪಟ್ಟುಗೊಳಿಸಿದಂತೆ ಆಗಿದೆ. ಲಾಕ್‌ಡೌನ್‌ ಜಾರಿಗೆ ಬಂದ ನಂತರದಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯು ಹಲವು ಕಾರಣಗಳಿಂದಾಗಿ ಹೆಚ್ಚಳ ಕಂಡಿದೆ. ಪೂರೈಕೆ ವ್ಯವಸ್ಥೆಗೆ ಬಿದ್ದ ಏಟಿನಿಂದಾಗಿ, ಕಾರ್ಮಿಕರ ಕೊರತೆಯಿಂದಾಗಿ, ವ್ಯವಸ್ಥೆಯಲ್ಲಿ ಹೆಚ್ಚಿನ ನಗದು ಹರಿವಿನಿಂದಾಗಿ ಹಣದುಬ್ಬರ ಹೆಚ್ಚಳ ಕಂಡಿದೆ. ಈಗ ರಷ್ಯಾ–ಉಕ್ರೇನ್ ಯುದ್ಧದ ಪರಿಣಾಮಗಳಿಂದಾಗಿಯೂ
ಹಣದುಬ್ಬರವು ಏರಿಕೆ ಆಗುತ್ತಿದೆ.

ಎರಡು ವರ್ಷಗಳ ಅವಧಿಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಆರ್‌ಬಿಐ ಹೆಚ್ಚಿನ ಆದ್ಯತೆ ನೀಡಲಿಲ್ಲ. ಅದರ ಬದಲಿಗೆ, ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಿಸಿ, ಆರ್ಥಿಕ ಪುನಶ್ಚೇತನಕ್ಕೆ ಅದು ಜಾಸ್ತಿ ಗಮನ ನೀಡಿತು. ಇದರ ಪರಿಣಾಮವಾಗಿ ಸಾಲವು ಕಡಿಮೆ ಬಡ್ಡಿಗೆ ದೊರೆಯಿತಾದರೂ ಹಣದುಬ್ಬರ ಹೆಚ್ಚಳಕ್ಕೆ ಇದು ಕೂಡ ಕಾರಣವಾಗಿದೆ. ಆದರೆ ಇನ್ನು ಮುಂದೆ ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುತ್ತದೆ ಎನ್ನುವ ಮಾತನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈಚೆಗೆ ನಡೆದ ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಹೇಳಿದ್ದಾರೆ. ಈ ಮಾತು ಸ್ವಾಗತಾರ್ಹ. ಆದರೆ ಈ ಕೆಲಸವನ್ನು ಆರ್‌ಬಿಐ ಮೊದಲೇ ಮಾಡಬೇಕಿತ್ತು. ಹಣದುಬ್ಬರ ಪ್ರಮಾಣ ಇನ್ನಷ್ಟು ಹೆಚ್ಚಾಗಲು ಅವಕಾಶ ನೀಡಿದರೆ, ಮಾರುಕಟ್ಟೆಯಲ್ಲಿ ಈಗ ಕಾಣಿಸುತ್ತಿರುವ ಆರ್ಥಿಕ ಚಟುವಟಿಕೆಗಳ ಚೇತರಿಕೆಯು ಮಂಕಾಗುತ್ತದೆ. ಬೇಡಿಕೆ ಕಡಿಮೆ ಆಗಿ, ಆರ್ಥಿಕ ಪುನಶ್ಚೇತನದ ಆರ್‌ಬಿಐ ಉದ್ದೇಶ ಅಡಿಮೇಲಾಗುತ್ತದೆ. ಹಣದುಬ್ಬರದ ಭೂತವು ಏಪ್ರಿಲ್‌ನಲ್ಲಿ ಇನ್ನಷ್ಟು ಹೆಚ್ಚಳ ಕಾಣುವ ಸಾಧ್ಯತೆಗಳು ಜಾಸ್ತಿ ಇವೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವನ್ನು ಮಾರ್ಚ್ 21ರ ನಂತರದಲ್ಲಿ ಪುನರಾರಂಭಿಸಿದವು. ಅಲ್ಲಿಂದ ಇದುವರೆಗೆ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯು ತಲಾ ಶೇ 10ರಷ್ಟು ಹೆಚ್ಚಾಗಿದೆ. ಇದರಿಂದಾಗಿ ಹಣದುಬ್ಬರದ ಮೇಲೆ ಆಗಿರುವ ಪರಿಣಾಮಗಳು ಏಪ್ರಿಲ್‌ ತಿಂಗಳ ಅಂಕಿ–ಅಂಶಗಳಲ್ಲಿ ಗೊತ್ತಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈಗಿರುವ ಮಟ್ಟದಲ್ಲಿಯೇ ಉಳಿದರೆ ಅಥವಾ ಇನ್ನೂ ಜಾಸ್ತಿ ಆದರೆ ಹಣದುಬ್ಬರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದ್ಯತೆ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಹಾಗೂ ಮೌಲ್ಯವರ್ಧಿತ ತೆರಿಗೆ ಪ್ರಮಾಣ ತಗ್ಗಿಸಬೇಕು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹ ಆಗುತ್ತಿರುವ ವರಮಾನವು ದೊಡ್ಡ ಮಟ್ಟದಲ್ಲಿ ಇರುವ ಕಾರಣ, ಸರ್ಕಾರಗಳು ತೈಲೋತ್ಪನ್ನಗಳ ಮೇಲಿನ ಸುಂಕ, ತೆರಿಗೆ ತಗ್ಗಿಸಿ ಜನಸಾಮಾನ್ಯರ ಮೇಲಿನ ಹೊರೆಯನ್ನು ಇಳಿಸುವತ್ತ ಗಮನ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT