ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ತಕ್ಷಣ ಕಾರ್ಯತತ್ಪರವಾಗಲಿ

Published 8 ಜುಲೈ 2024, 23:33 IST
Last Updated 8 ಜುಲೈ 2024, 23:33 IST
ಅಕ್ಷರ ಗಾತ್ರ

ಹದಿನೈದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇರುವ ವರದಿಯನ್ನು ಕಂದಾಯ ಇಲಾಖೆಯು ಮುಖ್ಯಮಂತ್ರಿಯವರು ಸೋಮವಾರ ನಡೆಸಿದ ಸಭೆ ಮುಂದೆ ಮಂಡಿಸಿದೆ. ಈ ಅಂಕಿ ಅಂಶವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು, ‘ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಒದಗಿಸುವಲ್ಲಿ ವಿಳಂಬ ಸಲ್ಲದು. ರೈತರ ಸಭೆ ನಡೆಸಿ, ಅವರಲ್ಲಿ ಜಾಗೃತಿ ಹಾಗೂ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಬೇಕಿದೆ’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದು ಸಕಾಲಿಕವಾದ ಕ್ರಮ. ಆದರೆ, ಕೃಷಿಕರು ಹೀಗೆ ಸಾಲುಸಾಲಾಗಿ ಸಾವಿನತ್ತ ಮುಖ ಮಾಡಿರುವುದು ಅಭಿವೃದ್ಧಿಪಥದಲ್ಲಿ ಮುಂಚೂಣಿಯಲ್ಲಿರುವುದಾಗಿ ಬಿಂಬಿತವಾಗಿರುವ ನಾಡಿಗೆ ಶೋಭೆ ತರುವ ಸಂಗತಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಐದು ‘ಗ್ಯಾರಂಟಿ’ಗಳನ್ನು ಅನುಷ್ಠಾನ ಮಾಡುವತ್ತ ಹೆಜ್ಜೆ ಇಟ್ಟಿತು. ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಹಾಗೂ ಇನ್ನು 5 ಕೆ.ಜಿ. ಅಕ್ಕಿಯ ಮೌಲ್ಯದ ನಗದು, 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌, ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ₹2 ಸಾವಿರ, ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತವಾಗಿ ಸಿಕ್ಕಿತು. ಇದರಿಂದಾಗಿ, ಕುಟುಂಬ ನಿರ್ವಹಣೆಯ ಹೊರೆ ದೊಡ್ಡಮಟ್ಟದಲ್ಲಿ ಕಡಿಮೆಯಾಯಿತು ಎಂದು ಸರ್ಕಾರವೇ ಅನೇಕ ಬಾರಿ ಹೇಳಿಕೊಂಡಿದೆ. ‘ಗ್ಯಾರಂಟಿ’ಗಳು ಜಾರಿಯಾದ ಬಳಿಕವೂ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದಾದರೆ ಆಳುವವರು ಎಚ್ಚರಗೊಳ್ಳಬೇಕಾದ ತುರ್ತು ಇದೆ ಎಂದು ಅರ್ಥ. ಮಳೆ ಕೈಕೊಟ್ಟಿದ್ದ
ರಿಂದಾಗಿ ಬಿತ್ತಿದ ಬೀಜ ಹಾಗೂ ಸುರಿದ ಗೊಬ್ಬರಕ್ಕೆ ಮಾಡಿದ್ದ ವೆಚ್ಚದ ಹೊರೆ, ಕೆಲವೆಡೆ ಬೆಳೆ ಕೈಗೆ ಬಂದರೂ ಸಿಗದ ಉತ್ತಮ ಬೆಲೆಯಿಂದಾಗಿ ಸಾಲ ತೀರಿಸಲಾಗದ ದುರ್ದಿನಗಳನ್ನು ನೆನೆದು ಆತ್ಮಹತ್ಯೆ ಕಡೆ ರೈತರು ಮುಖ ಮಾಡಿದ್ದಾರೆ ಎಂದರೆ ಅದು ಸಾವುಗಳಿಗೆ ನೀಡುವ ಸರಳ ಕಾರಣವಾದೀತು. ಪ್ರದೇಶವಾರು ಸಾವಿನ ವಿವರಗಳನ್ನು ಗಮನಿಸಿದರೆ ತೀವ್ರ ಬರದಿಂದ ಕಂಗೆಟ್ಟ ಜಿಲ್ಲೆಗಳಲ್ಲಿ ಆತ್ಮಹತ್ಯೆ ಸಂಖ್ಯೆ ಕಡಿಮೆ ಇದೆ. ನೀರಾವರಿ ಸೌಕರ್ಯವಿರುವ ಬೆಳಗಾವಿ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲೇ ಮರಣಕ್ಕೆ ಶರಣಾದ ರೈತರ ಸಂಖ್ಯೆ ತಲಾ 100ಕ್ಕೂ ಮಿಗಿಲಾಗಿದೆ. ಇದನ್ನು ಅವಲೋಕಿಸಿದರೆ ಆತ್ಮಹತ್ಯೆಗೆ ಬರ ಮಾತ್ರ ಕಾರಣವಲ್ಲ; ಸಾವಿನ ಮನೆಯಲ್ಲಿ ಅದರಾಚೆಗಿನ ಅಂದಾಜಿಗೂ ನಿಲುಕದ ಸಮಸ್ಯೆಗಳ ಸುಳಿ ಇರುವುದು ಸ್ಪಷ್ಟ. 

ರೈತರ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರ ಕ್ರಮಗಳನ್ನು ಕೈಗೊಳ್ಳದ ವಿನಾ ಆತ್ಮಹತ್ಯೆಗಳನ್ನು ತಡೆಯುವುದು ಕಷ್ಟಸಾಧ್ಯ. ರೈತರ ಆತ್ಮಹತ್ಯೆಯ ಪ್ರಕರಣಗಳಲ್ಲಿ ನಗದು ರೂಪದಲ್ಲಿ ನೀಡುವ ಪರಿಹಾರಕ್ಕಿಂತ, ಆತ್ಮಹತ್ಯೆಗೆ ನಿಖರ ಕಾರಣಗಳನ್ನು ಪತ್ತೆಹಚ್ಚಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಆದ್ಯತೆಯಾಗಬೇಕಿದೆ. ಅಲ್ಲದೆ, ನೊಂದ ರೈತರನ್ನು ಜೀವನ್ಮುಖಿಗಳಾಗಿಸುವತ್ತ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡುವ ಕೆಲಸ ಕೃಷಿ, ಕಂದಾಯ ಇಲಾಖೆಗಳು ಹಾಗೂ ಕೃಷಿ–ತೋಟಗಾರಿಕೆ ವಿಶ್ವವಿದ್ಯಾಲಯಗಳಿಂದ ಆಗಬೇಕಾಗಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ₹3 ಲಕ್ಷದವರೆಗೆ ಬೆಳೆಸಾಲ ನೀಡುವ ಯೋಜನೆ ಜಾರಿಯಲ್ಲಿದೆ. ಸಾಲದ ಗರಿಷ್ಠ ಮಿತಿಯನ್ನು ₹5 ಲಕ್ಷದವರೆಗೆ ವಿಸ್ತರಿಸುವ ಘೋಷಣೆ ಮಾಡಲಾಗಿದೆಯಾದರೂ ಅದು ಅನುಷ್ಠಾನವಾಗಿಲ್ಲ. ಸರ್ಕಾರ ಹೇಳುವಂತೆ ₹3 ಲಕ್ಷದವರೆಗೆ ಶೂನ್ಯ ಬಡ್ಡಿದರಲ್ಲಿ ಸಾಲ ಸಿಗುತ್ತದೆ ಎಂದಾದರೆ, ಸಾಲದ ಬಾಧೆಯಿಂದ ಮರಣಕ್ಕೆ ಕೊರಳೊಡ್ಡುವ ದುಃಸ್ಥಿತಿ ರೈತಾಪಿ ವರ್ಗಕ್ಕೆ ಏಕೆ ಬಂತು? ಅಂದರೆ, ಸಾಲ ನೀಡುವಾಗಲೂ ಜಾತಿ, ಪಕ್ಷದ ಪ್ರಭಾವ ‍ಪ್ರಧಾನ
ವಾಗುತ್ತವೆಯೇ ವಿನಾ ಅರ್ಹ ರೈತರಿಗೆ ಸಾಲ ಸಿಗುತ್ತಿಲ್ಲ ಎಂಬ ದೂರಿನಲ್ಲಿ ಸತ್ಯಾಂಶ ಇದ್ದಂತಿದೆ. ಸಾಲಕ್ಕೆ ದುಬಾರಿ ಬಡ್ಡಿ ಹಾಕುವವರನ್ನು ಶಿಕ್ಷೆಗೆ ಗುರಿಪಡಿಸಲು ಕಾನೂನುಗಳೇನೋ ಇವೆ. ಅವುಗಳ ಪರಿಣಾಮಕಾರಿ ಅನುಷ್ಠಾನದ ಕೊರತೆಯೂ ರೈತರ ಪಾಲಿಗೆ ಉರುಳಾಗುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು. ಸಾವಿನ ಸಂಖ್ಯೆಯನ್ನು ಮುಂದಿಟ್ಟು ರಾಜಕೀಯ ಲಾಭಕ್ಕಾಗಿ ಮೇಲಾಟ ನಡೆಸುವುದರ ಬದಲಿಗೆ ಆಡಳಿತ–ವಿರೋಧ ಪಕ್ಷಗಳು ಕೂಡಿ ರೈತರ ಸಂಕಷ್ಟಗಳನ್ನು ವಿಧಾನಮಂಡಲದಲ್ಲಿ ಚರ್ಚಿಸಿ, ಶಾಶ್ವತ ಪರಿಹಾರ ಸೂತ್ರವನ್ನು ರೂಪಿಸಬೇಕಾಗಿದೆ. ಕಾಂಗ್ರೆಸ್ ನೇತೃತ್ವದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಅವರು, ರೈತರೊಂದಿಗೆ ಆಪ್ತ ಸಮಾಲೋಚನೆ ನಡೆಸಲು ಸಹಾಯ ವಾಣಿಯನ್ನು ತಮ್ಮ ಇಲಾಖೆಯ ಅಧೀನದಲ್ಲಿ ಆರಂಭಿಸಿದ್ದರು. ದಿಕ್ಕುಗಾಣದೆ ಹತಾಶೆಯಲ್ಲಿದ್ದ ರೈತರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ನಡೆದಿತ್ತು. ಆಪ್ತ ಸಮಾಲೋಚನೆಯಂತಹ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು ಅಗತ್ಯ. ಆತ್ಮಹತ್ಯೆಗೆ ದೂಡುವ ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕ ಆಯಾಮಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ, ರೈತರನ್ನು ಸಾವಿನ ದವಡೆಯಿಂದ ಹೊರತರುವ ಸಂಕಲ್ಪವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದರೆ, ರೈತರ ಬಗೆಗಿನ ಕಳಕಳಿ ಒಣ ಭಾಷಣ, ಕಾಗದದ ಮೇಲಷ್ಟೇ ಉಳಿಯುವ ಆದೇಶಗಳಿಗೆ ಸೀಮಿತವಾಗಿಬಿಡುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT