ಶುಕ್ರವಾರ, ಜೂನ್ 5, 2020
27 °C

ಸಂಪಾದಕೀಯ | ದಿಗ್ಬಂಧನ ವಿಸ್ತರಣೆ ಅವಧಿಯಲ್ಲಿ ಜೀವ, ಜೀವನದ ರಕ್ಷಣೆ ಆದ್ಯತೆಯಾಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣು ಪಿಡುಗು ಜಗತ್ತಿನಾದ್ಯಂತ ಜನರ ಜೀವನವನ್ನು ಸ್ತಬ್ಧಗೊಳಿಸಿದೆ. ಮಾನವ ಕುಲಕ್ಕೆ ಹೊಸದಾಗಿರುವ ಈ ವೈರಾಣುವಿನ ಬಗ್ಗೆ ವಿಜ್ಞಾನಿಗಳಿಗೆ, ವೈದ್ಯರಿಗೆ ತಿಳಿದಿರುವ ವಿಚಾರಗಳು ಕಡಿಮೆ. ಹಾಗಾಗಿಯೇ, ಈ ಪೀಡೆಯನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಸ್ಪಷ್ಟವಾದ ದಾರಿಗಳಿಲ್ಲ. ವ್ಯಕ್ತಿ ವ್ಯಕ್ತಿಗಳ ನಡುವೆ ಸಂಪರ್ಕ ಇಲ್ಲದಂತೆ ಮಾಡುವುದೊಂದೇ ಈಗ ಇರುವ ಏಕೈಕ ದಾರಿ ಎಂಬುದು ಇಡೀ ಜಗತ್ತು ತಿಳಿದುಕೊಂಡಿರುವ ಪರಿಹಾರ. ಹಾಗಾಗಿಯೇ, ಈ ಸೋಂಕು ಮೊದಲು ಕಾಣಿಸಿಕೊಂಡ ನಂತರದ ನೂರು ದಿನಗಳಲ್ಲಿ ಹಲವು ದೇಶಗಳು ಜನರ ಓಡಾಟಕ್ಕೆ, ವ್ಯಾಪಾರ– ವಹಿವಾಟುಗಳಿಗೆ ದಿಗ್ಬಂಧನ ಹೇರಿಕೊಂಡಿವೆ. ಭಾರತದಲ್ಲಿ 21 ದಿನಗಳ ಲಾಕ್‌ಡೌನ್‌ ಘೋಷಣೆಯಾಗಿ ಈಗ 19 ದಿನಗಳಾಗಿವೆ. ಅಮೆರಿಕ, ಇಟಲಿ, ಸ್ಪೇನ್‌ನಂತಹ ದೇಶಗಳಲ್ಲಿ ಕೊರೊನಾ ವೈರಾಣು ಸಾವಿನ ರುದ್ರನರ್ತನ ನಡೆಸಿದೆ. ಜಗತ್ತಿನಾದ್ಯಂತ ಸತ್ತವರ ಸಂಖ್ಯೆ 1.10 ಲಕ್ಷಕ್ಕೆ ಏರಿಕೆಯಾಗಿದೆ. ಸುಮಾರು 18 ಲಕ್ಷ ಜನರಲ್ಲಿ ರೋಗ ದೃಢಪಟ್ಟಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಸೋಂಕಿನ ಹರಡುವಿಕೆಯ ವೇಗಕ್ಕೆ ಕಡಿವಾಣ ಬಿದ್ದಿದೆ; ಆರಂಭದಲ್ಲಿಯೇ ಜನರ ಓಡಾಟಕ್ಕೆ ತಡೆ ಒಡ್ಡಿದ್ದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಹಾಗಾಗಿಯೇ, ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳ ಜತೆಗೆ ನಡೆಸಿದ ವಿಡಿಯೊ ಸಂವಾದದಲ್ಲಿ ದಿಗ್ಬಂಧನವನ್ನು ಕನಿಷ್ಠ ಇನ್ನೆರಡು ವಾರ ಮುಂದುವರಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಈ ಸಭೆಯಲ್ಲಿ ಮೂಡಿದ ಸಹಮತಕ್ಕೆ ಅನುಗುಣವಾಗಿ, ದಿಗ್ಬಂಧನವನ್ನು ಇನ್ನೆರಡು ವಾರ ವಿಸ್ತರಿಸುವ ನಿರ್ಧಾರವನ್ನು ಪ್ರಧಾನಿ ತೆಗೆದುಕೊಳ್ಳಲಿದ್ದಾರೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಆದ್ದರಿಂದ, ದಿಗ್ಬಂಧನ ಮುಂದುವರಿಕೆ ನಿಚ್ಚಳವಾಗಿದೆ.

ಅಗೋಚರ ಶತ್ರುವಿನ ವಿರುದ್ಧದ ಹೋರಾಟದಲ್ಲಿ ಅತಿ ಹೆಚ್ಚು ಮುನ್ನೆಚ್ಚರಿಕೆ ಅಗತ್ಯ. ಹಾಗಾಗಿ, ಲಾಕ್‌ಡೌನ್‌ ವಿಸ್ತರಣೆ ಮಾಡುವುದು ಸ್ವಾಗತಾರ್ಹ. ಮುಖ್ಯಮಂತ್ರಿಗಳ ಜತೆ ನಡೆಸಿದ ಸಂವಾದದಲ್ಲಿ ಪ್ರಧಾನಿ ಹೇಳಿದ ಮಾತಿನ ಆಂತರ್ಯವನ್ನು ತಳಮಟ್ಟದವರೆಗಿನ ಅಧಿಕಾರ ಸ್ಥಾನದಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕು. ಜನರ ಜೀವ ಮಾತ್ರವಲ್ಲ, ಅವರ ಜೀವನದ ಬಗ್ಗೆಯೂ ಗಮನ ಕೇಂದ್ರೀಕರಿಸಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ. 130 ಕೋಟಿಗೂ ಹೆಚ್ಚು ಜನ ಇರುವ ದೇಶ ನಮ್ಮದು. ಇವರಲ್ಲಿ ಬಹುಪಾಲು ಮಂದಿ ದುಡಿಯುವವರು. ಆದರೆ, ವೈರಾಣುವೊಂದು ಬಂದು ದುಡಿಯುವ ಕೈಗಳನ್ನು ಕಟ್ಟಿಹಾಕಿದೆ. ಸಂಘಟಿತ ಮತ್ತು ಅಸಂಘಟಿತ ವಲಯದ ನೌಕರರು, ಅಂದಂದಿನ ಅನ್ನವನ್ನು ಅಂದೇ ಗಳಿಸುವವರು, ವ್ಯಾಪಾರಸ್ಥರು ಎಲ್ಲರೂ ಹೈರಾಣಾಗಿದ್ದಾರೆ. ಮೂರು ವಾರ ಎಲ್ಲವನ್ನೂ ಸ್ಥಗಿತಗೊಳಿಸಿ ಮನೆಯಲ್ಲಿ ಇರುವುದು ಇವರ್‍ಯಾರಿಗೂ ಸುಲಭವೇನಲ್ಲ. ಈಗ ನಮ್ಮಲ್ಲಿ ಕೊಯ್ಲಿನ ದಿನಗಳು. ಬೆಳೆದ ಬೆಳೆ ಹೊಲದಲ್ಲಿ ನಾಶವಾಗಿ ಹೋದರೆ ಅದನ್ನು ಭರಿಸುವ ಶಕ್ತಿ ರೈತನಿಗೆ ಖಂಡಿತ ಇಲ್ಲ. ದಿಗ್ಬಂಧನವನ್ನು ಇನ್ನೆರಡು ವಾರ ಮುಂದುವರಿಸಿದರೆ ಕೃಷಿ ಮತ್ತಿತರ ಚಟುವಟಿಕೆಗಳಿಗೆ ಹೊಡೆತ ಬೀಳದು ಎಂದು ಸರ್ಕಾರ ಹೇಳಿದೆ. ಆದರೆ, ತರಕಾರಿ ಬೆಳೆಯುವ ರೈತರಿಗೆ ಲಾಕ್‌ಡೌನ್‌ ಈಗಾಗಲೇ ದೊಡ್ಡ ಪೆಟ್ಟು ಕೊಟ್ಟಿದೆ. ಹಣ್ಣು, ತರಕಾರಿಗಳನ್ನು ಅವರು ಚರಂಡಿಗೆ ಸುರಿಯುವ ಸುದ್ದಿ, ಚಿತ್ರಗಳು ಪ್ರಕಟವಾಗಿವೆ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ‘ಹಸಿರು ಪಾಸ್‌’ ನೀಡುವುದಾಗಿ ಕರ್ನಾಟಕ ಸರ್ಕಾರ ಪ್ರಕಟಿಸಿತ್ತು. ಆದರೆ, ಅಂತಹ ಪಾಸ್‌ ಹೆಚ್ಚಿನವರಿಗೆ ಸಿಕ್ಕಿಲ್ಲ. ಹಾಗಾಗಿ, ಜನರ ಜೀವದ ಜತೆಗೆ ಜೀವನೋಪಾಯವನ್ನೂ ಉಳಿಸುವ ದಿಸೆಯಲ್ಲಿ ಅಧಿಕಾರ ಸ್ಥಾನದಲ್ಲಿ ಇರುವವರು ಯೋಚಿಸಬೇಕು. ಜನಪರ ಎಂದು ತೋರುವ ನಿರ್ಧಾರಗಳಷ್ಟೇ ಸಾಲದು, ಅದೇ ಕಾಳಜಿಯಲ್ಲಿ ಅವುಗಳ ಅನುಷ್ಠಾನವೂ ಆಗುವಂತೆ ನೋಡಿಕೊಳ್ಳಬೇಕು. ಜೀವಿಸುವುದಕ್ಕೆ ದಾರಿ ಇಲ್ಲದೆ ಬರೀ ಜೀವವಷ್ಟೇ ಉಳಿದರೆ ಅದು ಇನ್ನೊಂದು ದುರಂತಕ್ಕೆ ಕಾರಣವಾದೀತು. ಲಾಕ್‌ಡೌನ್‌ ಎಂಬುದು ಶಾಶ್ವತವಾದ ಪರಿಹಾರ ಅಲ್ಲ. ರೋಗವು ವಿಕೋಪಕ್ಕೆ ಹೋದರೆ, ಅದನ್ನು ನಿಭಾಯಿಸಲು ಬೇಕಾದ ಮೂಲಸೌಕರ್ಯ, ಔಷಧ, ಸಲಕರಣೆಗಳು ಮತ್ತು ಅರಿವನ್ನು ಹೊಂದಿಸಿಕೊಳ್ಳಲು ದೊರೆಯುವ ಸಮಯ. 586 ಆಸ್ಪತ್ರೆಗಳು, ಒಂದು ಲಕ್ಷಕ್ಕೂ ಹೆಚ್ಚು ಪ್ರತ್ಯೇಕಿಸಲಾದ ಹಾಸಿಗೆಗಳು, 11 ಸಾವಿರಕ್ಕೂ ಹೆಚ್ಚು ಐಸಿಯುಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಕೇಂದ್ರ ಹೇಳಿದೆ. ರೋಗ ವಿಪರೀತಕ್ಕೆ ಹೋದರೆ ಇವು ಸಾಲವು ಎಂಬುದು ಬೇರೆ ದೇಶಗಳು ನಮಗೆ ಕಲಿಸಿರುವ ಪಾಠ. ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗಲಿದ ಹಲವು ವರದಿಗಳು ಬಂದಿವೆ. ವೈದ್ಯರು, ನರ್ಸ್‌ಗಳನ್ನು ರಕ್ಷಿಸಿಕೊಳ್ಳಲು ಬೇಕಾದ ಸುರಕ್ಷಾ ಸಾಧನಗಳ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಈ ದಿಸೆಯಲ್ಲಿ ಗಮನ ಹರಿಸಬೇಕಾಗಿರುವುದು ತಮ್ಮ ಹೊಣೆ ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮರೆಯಬಾರದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು