ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರಾಜ್ಯದಲ್ಲಿನ ನೇಮಕಾತಿ ಹಗರಣಗಳು; ಕೋರ್ಟ್‌ ನೇತೃತ್ವದ ತನಿಖೆ ಸೂಕ್ತ

Last Updated 16 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಇನ್ನೊಂದು ನೇಮಕಾತಿ ಹಗರಣ ಹೊರಬಿದ್ದಿದೆ. ಇದು, ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ ನಡೆದಿದ್ದು, ಶಿಕ್ಷಕರ ಹುದ್ದೆಯನ್ನು ₹ 10 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಇದೆ. 2012 ಹಾಗೂ 2015ರಲ್ಲಿ ಪ್ರತ್ಯೇಕವಾಗಿ ಹೊರಡಿಸಲಾದ ಎರಡು ಅಧಿಸೂಚನೆಗಳ ಅನ್ವಯ ಆಗಿರುವ ನೇಮಕಾತಿಯಲ್ಲಿ ಈ ಹಗರಣ ನಡೆದಿದೆ ಎನ್ನಲಾಗಿದೆ. 2015ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು, ಕಿಮ್ಮನೆ ರತ್ನಾಕರ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಅರ್ಹತೆ ಇಲ್ಲದಿದ್ದರೂ 12 ಜನರನ್ನು ಶಿಕ್ಷಕರನ್ನಾಗಿ ಈ ರೀತಿ ನೇಮಕ ಮಾಡಲಾಗಿದೆ ಎಂಬುದನ್ನು ಈವರೆಗೆ ಪತ್ತೆ ಮಾಡಿದೆ. ವಾಸ್ತವದಲ್ಲಿ ಇವರಲ್ಲಿ ಕೆಲವರು ಹುದ್ದೆಗಳಿಗೆ ಅರ್ಜಿಯನ್ನೇ ಸಲ್ಲಿಸಿರಲಿಲ್ಲ, ಅರ್ಹತಾ ಪರೀಕ್ಷೆಗಳಿಗೂ ಹಾಜರಾಗಿರಲಿಲ್ಲ. ಆದರೂ ನೇಮಕಗೊಂಡಿದ್ದಾರೆ! ಅಕ್ರಮ ನೇಮಕಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಕೆ.ಎಸ್‌. ಪ್ರಸಾದ್‌ ಹಾಗೂ 12 ಸಹಶಿಕ್ಷಕರನ್ನುಸಿಐಡಿ ಇದುವರೆಗೆ ಬಂಧಿಸಿದೆ.

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ತನ್ನ ಮೇಲೆ ಹಗೆ ತೀರಿಸಿಕೊಳ್ಳಲು ಈ ಹಗರಣವನ್ನು ಕೆದಕಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈಗಿನ ಬಿಜೆಪಿ ನೇತೃತ್ವದ ಆಡಳಿತದ ಅವಧಿಯಲ್ಲಿ ಒಂದಾದ ನಂತರ ಒಂದರಂತೆ ಹೊರಬಂದಿರುವ ಹಗರಣಗಳ ಆರೋಪಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಹೀಗೆ ಮಾಡಲಾಗಿದೆ ಎಂದೂ ಕಾಂಗ್ರೆಸ್ ಹೇಳಿದೆ. ಅದೇನೇ ಇದ್ದರೂ ರಾಜ್ಯದಲ್ಲಿನ ನೇಮಕಾತಿ ಗಳಲ್ಲಿ ಹಗರಣ ನಡೆಯುವುದು ಹೊಸದೇನೂ ಅಲ್ಲ. ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳಿಗೆ ನಡೆದ ನೇಮಕಾತಿ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಹಾಗೂ ಡಿವೈಎಸ್‌ಪಿ ಹುದ್ದೆಗಳಿಗೆ ಶೇಕಡ 15ರಷ್ಟು ಅಭ್ಯರ್ಥಿಗಳು ₹ 50 ಲಕ್ಷದಿಂದ ₹ 1.50 ಕೋಟಿವರೆಗೆ ಲಂಚ ಕೊಟ್ಟಿದ್ದರು ಎಂದು ಸಿಐಡಿ ಕೆಲವು ವರ್ಷಗಳ ಹಿಂದೆ ಪತ್ತೆ ಮಾಡಿತ್ತು. ಈಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮೂಗಿನ ಅಡಿಯಲ್ಲಿ ನಡೆದಿರುವ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ನೇಮಕಾತಿಯಬಹುಕೋಟಿ ಮೊತ್ತದ ಹಗರಣದಲ್ಲಿ ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್ ಅವರನ್ನು ಬಂಧಿಸಲಾಗಿದೆ. ಪೌಲ್ ಅವರು ಎಡಿಜಿಪಿ ಶ್ರೇಣಿಯ ಅಧಿಕಾರಿ. ಈ ವರ್ಷದ ಆಗಸ್ಟ್‌ನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಕೆಲವು ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಅಕ್ರಮಗಳು ಆಗಿರುವುದು ಬೆಳಕಿಗೆ ಬಂದಿವೆ. ಈ ಸಂಬಂಧ ಕೆಲವರನ್ನು ಬಂಧಿಸಲಾಗಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿ, ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇಮಕಾತಿ ಪ್ರಕ್ರಿಯೆ ಗಳಲ್ಲಿ ಅಕ್ರಮ ಸುಳಿಯುತ್ತದೆ ಎಂಬುದು ಈ ಎಲ್ಲವುಗಳಿಂದ ಗೊತ್ತಾಗುವ ಅಂಶ.

ಶಿಕ್ಷಣ ಇಲಾಖೆ ಕೂಡ ಈ ಬಗೆಯ ಭ್ರಷ್ಟಾಚಾರದಿಂದ ಹೊರತಾಗಿಲ್ಲ ಎಂಬುದು ತೀರಾ ದುರದೃಷ್ಟಕರ. ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟವೊಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಚೆಗೆ ದೂರು ಸಲ್ಲಿಸಿದೆ. ಬಿ.ಸಿ. ನಾಗೇಶ್ ಅವರನ್ನು ಶಿಕ್ಷಣ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಅದು ಕೋರಿತ್ತು. ಬೇರೆ ಬೇರೆ ನೇಮಕಾತಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿಚಾರಣೆ ಸ್ವಾಗತಾರ್ಹವೇ ಆದರೂ, ಹಗರಣಗಳ ಪ್ರಮುಖ ಸೂತ್ರಧಾರರು ಹಾಗೂ ದೊಡ್ಡ ಫಲಾನುಭವಿಗಳನ್ನು ಕಾನೂನಿನ ಕೈ ತಲುಪುತ್ತಿರುವಂತೆ ಕಾಣುತ್ತಿಲ್ಲ. ಇದು ವಿಷಾದಕರ. ಸರ್ಕಾರಕ್ಕೆ ನೇರವಾಗಿ ವರದಿ ಮಾಡಿಕೊಳ್ಳುವ ಸಿಐಡಿ, ಅಕ್ರಮಗಳ ಹಿಂದಿನ ಪೂರ್ಣ ಸತ್ಯವನ್ನು ಅನಾವರಣ ಮಾಡುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ಕಷ್ಟ. ವಿವಿಧನೇಮಕಾತಿ ಅಕ್ರಮಗಳ ಕುರಿತು ಹೈಕೋರ್ಟ್‌ ಉಸ್ತುವಾರಿಯಲ್ಲಿ ಅಥವಾ ಲೋಕಾಯುಕ್ತ ಸಂಸ್ಥೆಯ ಮೂಲಕ ಸ್ವತಂತ್ರ ವಿಚಾರಣೆಯೊಂದನ್ನು ನಡೆಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT