ಶುಕ್ರವಾರ, ಜೂನ್ 5, 2020
27 °C

ಕಾರ್ಖಾನೆಗಳ ಪುನರಾರಂಭದ ಹೊತ್ತಲ್ಲಿ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಕ್ಕಳು, ಮಹಿಳೆಯರು ನಿಂತಲ್ಲೇ ಕುಸಿದು ಬೀಳುತ್ತಿದ್ದರು. ಓಡುತ್ತಿದ್ದವರು ಕುಸಿದುಬಿಡುತ್ತಿದ್ದರು. ಕೆಲವರು ಚರಂಡಿಗಳಿಗೆ ಬಿದ್ದರು, ಕೆಲವರು ಕಟ್ಟಡದಿಂದ ಕೆಳಗೆ ಬಿದ್ದು ಜೀವ ಕಳೆದುಕೊಂಡರು. ಮನ ಕಲಕುವ ಘೋರ ದೃಶ್ಯಗಳು ಇವು. ಇದು, ವಿಶಾಖಪಟ್ಟಣ ಸಮೀಪದಲ್ಲಿರುವ ವೆಂಕಟಾಪುರದ ಗುರುವಾರ ಬೆಳಗಿನ ಜಾವದ ಚಿತ್ರಣ. ಅಲ್ಲಿ ಸುಮಾರು 60 ವರ್ಷಗಳಿಂದ ಇರುವ ಎಲ್‌.ಜಿ.ಪಾಲಿಮರ್ಸ್‌ ಕಾರ್ಖಾನೆಯಿಂದ ಸ್ಟೈರೀನ್‌ ಎಂಬ ಅನಿಲ ಸೋರಿಕೆಯಾದ ಪರಿಣಾಮ ಇದು. ಜನರೆಲ್ಲ ಗಾಢ ನಿದ್ದೆಯಲ್ಲಿದ್ದ ಬೆಳಗಿನ ಜಾವದ 2.30ಕ್ಕೆ ವಿಷಾನಿಲ ಸೋರಿಕೆಯಾಗಿದೆ.

ಸುತ್ತಲಿನ ಮೂರ್ನಾಲ್ಕು ಹಳ್ಳಿಗಳ ಜನರು ಉಸಿರಾಡುವ ಗಾಳಿಗೆ ವಿಷಾನಿಲ ಸೇರಿದೆ. ಉಸಿರಾಡಲು ಆಗದೆ, ಕಣ್ಣು, ಚರ್ಮ ಉರಿಯೆದ್ದು ಜನರು ಕಂಗಾಲಾಗಿದ್ದಾರೆ. ಈ ವಿಷಾನಿಲದಿಂದಾಗಿ 12 ಜನರು ಮೃತಪಟ್ಟಿದ್ದಾರೆ. ನೂರಾರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಾನಿಲ ಸೋರಿಕೆಯ ಪ್ರತಿಕೂಲ ಪರಿಣಾಮವು ಸುತ್ತಮುತ್ತಲ ಗ್ರಾಮಗಳ ಜನರ ಮೇಲೆ ಉಂಟಾಗಿದೆ. ಕಾರ್ಖಾನೆ ಇರುವ ಸ್ಥಳದಲ್ಲಿ ಮತ್ತು ಸುತ್ತಮುತ್ತಲಲ್ಲಿ ಜನದಟ್ಟಣೆ ಕಡಿಮೆ ಇದೆ. ಹಾಗಾಗಿ, ಸಾವು– ನೋವಿನ ಸಂಖ್ಯೆ ಕಡಿಮೆ ಎಂಬುದು ದುರಂತದ ನಡುವೆಯೂ ಸಮಾಧಾನಕರ ಅಂಶ. ಸಂಖ್ಯೆ ಕಡಿಮೆ ಎಂಬುದು ಸಾವು–ನೋವನ್ನು ಅಳೆಯುವ ಮಾನದಂಡ ಅಲ್ಲ.

ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಆ ನಷ್ಟವು ಜೀವನಪರ್ಯಂತ ಕಾಡುತ್ತದೆ ಎಂಬ ಬಗ್ಗೆ ಕಾರ್ಖಾನೆ ನಡೆಸುವವರಿಗೆ, ಅವುಗಳ ಸುರಕ್ಷತೆಯ ಮೇಲೆ ನಿಗಾ ಇರಿಸುವ ಸರ್ಕಾರಗಳಿಗೆ ಅರಿವಿರಬೇಕು. ಮನುಷ್ಯನ ನಿರ್ಲಕ್ಷ್ಯದಿಂದ ಆಗುವ ಇಂತಹ ದುರಂತಗಳು ಅಕ್ಷಮ್ಯ. ಕೇಂದ್ರ ಸರ್ಕಾರವು ಬರೀ ನಾಲ್ಕು ತಾಸು ಅವಕಾಶ ಕೊಟ್ಟು ಲಾಕ್‌ಡೌನ್‌ ಹೇರಿದ ಬಳಿಕ ಎಲ್ಲ ಕಾರ್ಖಾನೆಗಳು ಮುಚ್ಚಿದ್ದವು. ಎಲ್‌.ಜಿ. ಪಾಲಿಮರ್ಸ್‌ ಕಾರ್ಖಾನೆಯನ್ನು ಕೂಡ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ಬಂದ್‌ ಮಾಡಲಾಗಿತ್ತು ಎಂಬ ವರದಿಗಳಿವೆ. ಅಪಾಯಕಾರಿ ಮತ್ತು ವಿಷಕಾರಿಯಾದ ಅನಿಲ ಮತ್ತು ಇತರ ಧಾತುಗಳನ್ನು ನಿರ್ವಹಿಸುವ ಕಾರ್ಖಾನೆಗಳು ಯಾವುದೇ ಕಾರಣಕ್ಕೂ ಎಚ್ಚರ ಕಳೆದುಕೊಳ್ಳಬಾರದು. ಲಾಕ್‌ಡೌನ್‌ ಅವಧಿಯಲ್ಲಿಯೂ ಅನಿಲ ಮತ್ತು ಇತರ ಧಾತುಗಳನ್ನು ಸುರಕ್ಷಿತವಾಗಿ ಇರಿಸುವ ಹೊಣೆ ಕಾರ್ಖಾನೆಗಳದ್ದೇ ಆಗಿರುತ್ತದೆ.

ದೇಶದಾದ್ಯಂತ ಹೇರಿದ್ದ ದಿಗ್ಬಂಧನಕ್ಕೆ ಈಗ ಬಹಳಷ್ಟು ವಿನಾಯಿತಿ ನೀಡಲಾಗಿದೆ. ಕಾರ್ಖಾನೆಗಳ ಪುನರಾರಂಭಕ್ಕೆ ಹಸಿರು ನಿಶಾನೆ ತೋರಲಾಗಿದೆ. ಸುಮಾರು ಒಂದೂವರೆ ತಿಂಗಳು ಮುಚ್ಚಿದ್ದ ಕಾರ್ಖಾನೆಗಳು ಮತ್ತೆ ಕೆಲಸ ಮಾಡಲು ಅಣಿಯಾಗುತ್ತಿವೆ. ಕಾರ್ಖಾನೆಗಳೆಂದರೆ ಅಲ್ಲಿ ವಿದ್ಯುತ್‌, ಯಂತ್ರಗಳು, ರಾಸಾಯನಿಕಗಳು ಎಲ್ಲವೂ ಇರುತ್ತವೆ. ಹಲವಾರು ದಿನ ಸ್ಥಗಿತಗೊಂಡು, ಮತ್ತೆ ಅವುಗಳನ್ನು ಚಾಲೂ ಮಾಡುವಾಗ ಅಥವಾ ಬಳಸುವಾಗ ಅವು ಹಿಂದೆ ಇದ್ದ ಸ್ಥಿತಿಯಲ್ಲಿಯೇ ಇರಬೇಕು ಎಂದೇನಿಲ್ಲ. ಹಾಗಿದ್ದರೂ, ಪುನರಾರಂಭಕ್ಕೆ ಮೊದಲು ಏನೆಲ್ಲ ಎಚ್ಚರ ವಹಿಸಬೇಕು ಎಂಬ ಮಾರ್ಗಸೂಚಿಯನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಹೊರಡಿಸಿದ್ದರ ಬಗ್ಗೆ ಯಾವುದೇ ವರದಿ ಇಲ್ಲ. ಇಂತಹುದೊಂದು ಹೊಣೆ ಸರ್ಕಾರಕ್ಕೆ ಇದೆ. ಯಾಕೆಂದರೆ, ಇಡೀ ದೇಶದಲ್ಲಿರುವ ಬಹುತೇಕ ಕಾರ್ಖಾನೆಗಳು ಇಷ್ಟೊಂದು ದೀರ್ಘ ಅವಧಿಗೆ ಹೀಗೆ ಸ್ಥಗಿತಗೊಂಡಿದ್ದು ಇದೇ ಮೊದಲು.

ದೀರ್ಘಾವಧಿಗೆ ಸ್ಥಗಿತಗೊಂಡಿದ್ದ ಯಂತ್ರಗಳು ಅಥವಾ ಶೇಖರಣೆ ಸ್ವರೂಪದಲ್ಲಿದ್ದ ರಾಸಾಯನಿಕಗಳು ಹೇಗೆ ವರ್ತಿಸಬಹುದು ಎಂಬ ಬಗ್ಗೆ ಎಚ್ಚರಿಕೆ ವಹಿಸಬೇಕು. ವಿಷಾನಿಲ ಸೋರಿಕೆಯಂತಹ ದುರಂತಗಳು ತಕ್ಷಣ ಉಂಟು ಮಾಡುವ ಹಾನಿಯ ಜತೆಗೆ ದೀರ್ಘಾವಧಿಯಲ್ಲಿಯೂ ಅಪಾರ ಕಷ್ಟ ನಷ್ಟಕ್ಕೆ ಕಾರಣವಾಗಬಹುದು. ಭೋಪಾಲ್‌ ಅನಿಲ ದುರಂತ ಘಟಿಸಿ 35 ವರ್ಷಗಳು ಕಳೆದಿವೆ. ಪರಿಣಾಮ ಈಗಲೂ ಇದೆ. ಆಗ ತೊಂದರೆಗೆ ಒಳಗಾದವರಿಗೆ ಪೂರ್ಣ ಪ್ರಮಾಣದ ನಷ್ಟ ಪರಿಹಾರ ನೀಡುವ ಕೆಲಸ ಇನ್ನೂ ಆಗಿಲ್ಲ. ‘ಬಡವರ ಜೀವಕ್ಕೆ ಬೆಲೆ ಇಲ್ಲ’ ಎಂಬ ಮಾತನ್ನು ನಮ್ಮ ಜನರು ಸದಾ ಆಡುತ್ತಿರುತ್ತಾರೆ. ಆ ಮಾತು ಸರಿಯಲ್ಲ ಎಂಬ ರೀತಿಯಲ್ಲಿ ಸರ್ಕಾರಗಳು ನಡೆದುಕೊಳ್ಳಬೇಕು.

ವೆಂಕಟಾಪುರದಲ್ಲಿನ ಜನರಿಗೆ ಈಗ ಆಗಿರುವ ನಷ್ಟ ಮತ್ತು ತೊಂದರೆ ಹಾಗೂ ಭವಿಷ್ಯದಲ್ಲಿ ಅವರು ಅನುಭವಿಸಬಹುದಾದ ಸಮಸ್ಯೆಗಳಿಗೆ ತಕ್ಕ ಪರಿಹಾರ ಒದಗಿಸಬೇಕು. ನಮ್ಮ ರಾಜ್ಯದಲ್ಲಿಯೂ ಅನಿಲ ಮತ್ತು ರಾಸಾಯನಿಕಗಳನ್ನು ನಿರ್ವಹಿಸುವ ಹಲವು ಕಾರ್ಖಾನೆಗಳು ಇವೆ. ಅವುಗಳ ಪುನರಾರಂಭದ ಹೊತ್ತಲ್ಲಿ ಎಲ್ಲ ಎಚ್ಚರಿಕೆ ವಹಿಸಲಾಗಿದೆ ಎಂಬುದನ್ನು ಸರ್ಕಾರ ಖಾತರಿಪಡಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು