ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ:RBIನಿಂದ ಹೆಚ್ಚಿನ ಡಿವಿಡೆಂಡ್: ಕೇಂದ್ರ ಸರ್ಕಾರಕ್ಕೆ ಅನಿರೀಕ್ಷಿತ ನೆರವು

ಆರ್‌ಬಿಐ ಕಡೆಯಿಂದ ಸಿಕ್ಕಿರುವ ಹೆಚ್ಚಿನ ಮೊತ್ತವು ಮುಂದೆ ರಚನೆ ಆಗಲಿರುವ ಸರ್ಕಾರಕ್ಕೆ ಹಣಕಾಸಿನ ದೃಷ್ಟಿಯಿಂದ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಿಕೊಡಲಿದೆ.
Published 30 ಮೇ 2024, 0:22 IST
Last Updated 30 ಮೇ 2024, 0:22 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೇಂದ್ರ ಸರ್ಕಾರಕ್ಕೆ ಡಿವಿಡೆಂಡ್ ರೂಪದಲ್ಲಿ ಭಾರಿ ಮೊತ್ತವನ್ನು ವರ್ಗಾವಣೆ ಮಾಡಲು ತೀರ್ಮಾನಿಸಿದೆ. ಕೇಂದ್ರೀಯ ಬ್ಯಾಂಕ್‌ ಈ ಬಾರಿ ₹ 2.11 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಿದೆ. ಇಷ್ಟು ಮೊತ್ತವನ್ನು ಆರ್‌ಬಿಐ ಹಿಂದೆಂದೂ ಡಿವಿಡೆಂಡ್ ರೂಪದಲ್ಲಿ ನೀಡಿದ್ದ ನಿದರ್ಶನ ಇಲ್ಲ. ಇಷ್ಟು ದೊಡ್ಡ ಮೊತ್ತವು ಕೇಂದ್ರ ಸರ್ಕಾರದ ಪಾಲಿಗೆ ಅನಿರೀಕ್ಷಿತವೇ ಹೌದು. ಕೇಂದ್ರಕ್ಕೆ ಹಣದ ಅಗತ್ಯವಿರುವ ಹೊತ್ತಿನಲ್ಲಿ ಸಿಕ್ಕಿರುವ ದೊಡ್ಡ ಇಡುಗಂಟು ಇದು. ಚುನಾವಣೆ ಮುಗಿದ ನಂತರ ರಚನೆಯಾಗಲಿರುವ ಸರ್ಕಾರವು ಈ ಮೊತ್ತದ ಪ್ರಯೋಜನ ಪಡೆದುಕೊಳ್ಳಲಿದೆ. ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ಕಡೆಯಿಂದ ಡಿವಿಡೆಂಡ್ ರೂಪದಲ್ಲಿ ಸಿಕ್ಕ ಹಣ ₹ 87,416 ಕೋಟಿ ಮಾತ್ರ. 2024–25ನೇ ಹಣಕಾಸು ವರ್ಷಕ್ಕೆ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ತನಗೆ ಆರ್‌ಬಿಐ, ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ಸಿಗುವ ಮೊತ್ತ ₹1.02 ಲಕ್ಷ ಕೋಟಿ ಎಂದಷ್ಟೇ ಅಂದಾಜು ಮಾಡಿದೆ. ಈಗ ಕೇಂದ್ರವು ತನ್ನದೇ ಅಂದಾಜಿನ ಎರಡು ಪಟ್ಟು ಹೆಚ್ಚಿನ ಮೊತ್ತವನ್ನು ಆರ್‌ಬಿಐನಿಂದಲೇ ಪಡೆಯಲಿದೆ. ಸರ್ಕಾರದ ಹಣಕಾಸಿನ ಚಿಂತೆಯನ್ನು ಈ ಮೊತ್ತವು ಒಂದಿಷ್ಟುಮಟ್ಟಿಗೆ ತಗ್ಗಿಸಲಿದೆ.

ಕೇಂದ್ರೀಯ ಬ್ಯಾಂಕ್‌ನ ದೇಶಿ ಹಾಗೂ ವಿದೇಶಿ ಆಸ್ತಿಗಳಿಂದ ಸಿಗುವ ಬಡ್ಡಿ ವರಮಾನದಲ್ಲಿ ಏರಿಕೆ ಹಾಗೂ ವಿದೇಶಿ ವಿನಿಮಯ ವಹಿವಾಟಿನಲ್ಲಿ ಆದ ಏರಿಕೆಯು ವರ್ಗಾವಣೆ ಮಾಡಬಹುದಾದ ಮಿಗತೆ ಹಣವು ಹೆಚ್ಚಳ ಕಂಡಿದ್ದಕ್ಕೆ ಕಾರಣ. ಅನಿರೀಕ್ಷಿತವಾಗಿ ಎದುರಾಗಬಹುದಾದ ಹಣಕಾಸಿನ ತುರ್ತು ಸಂದರ್ಭಗಳನ್ನು ನಿಭಾಯಿಸಲು, ಅರ್ಥ ವ್ಯವಸ್ಥೆಗೆ ಎದುರಾಗಬಹುದಾದ ಅಪಾಯಗಳನ್ನು ಎದುರಿಸಲು ಆರ್‌ಬಿಐ ತೆಗೆದಿರಿಸುವ ಮೊತ್ತದಲ್ಲಿ (ಸಿಆರ್‌ಬಿ) ಹೆಚ್ಚಳ ಆಗಿರುವುದು ಕೇಂದ್ರೀಯ ಬ್ಯಾಂಕ್‌ ಹಣಕಾಸಿನ ನಿರ್ವಹಣೆಯಲ್ಲಿ ಬಹಳ ಶಿಸ್ತಿನ ನಡೆ ಇರಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಈ ಹಿಂದೆ ಆರ್‌ಬಿಐನ ಒಟ್ಟು ಜಮಾಖರ್ಚು ಪಟ್ಟಿಯ (ಬ್ಯಾಲನ್ಸ್‌ ಷೀಟ್‌) ಶೇಕಡ 6ರಷ್ಟು ಮೊತ್ತವನ್ನು ಸಿಆರ್‌ಬಿ ಉದ್ದೇಶಕ್ಕೆ ಮೀಸಲು ಇಡಲಾಗುತ್ತಿತ್ತು. 2024–25ಕ್ಕೆ ಅದನ್ನು ಶೇ 6.5ಕ್ಕೆ ಹೆಚ್ಚಿಸಲಾಗಿದೆ. ಇದು ಅರ್ಥ ವ್ಯವಸ್ಥೆಯಲ್ಲಿ ಆರ್‌ಬಿಐ ಹೊಂದಿರುವ ವಿಶ್ವಾಸವನ್ನು ತೋರಿಸುತ್ತದೆ. ಸಿಆರ್‌ಬಿ ಮೊತ್ತವನ್ನು ಹೆಚ್ಚಿಸುವ ಮೂಲಕ ಆರ್‌ಬಿಐ ಯಾವುದೇ ಕೆಟ್ಟ ಪರಿಸ್ಥಿತಿಯನ್ನು, ಅದರಲ್ಲೂ ಮುಖ್ಯವಾಗಿ ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯಲ್ಲಿನ ಸಮಸ್ಯೆಗಳ ಕಾರಣದಿಂದಾಗಿ ಸೃಷ್ಟಿಯಾಗುವ ಅಪಾಯಗಳನ್ನು ನಿಭಾಯಿಸಲು ದೇಶದ ಅರ್ಥ ವ್ಯವಸ್ಥೆಗೆ ಹೆಚ್ಚಿನ ಶಕ್ತಿಯನ್ನು ನೀಡಿದಂತೆ ಆಗಿದೆ. ಆರ್‌ಬಿಐ ಗವರ್ನರ್ ಆಗಿದ್ದ ಬಿಮಲ್ ಜಲನ್ ನೇತೃತ್ವದ ಸಮಿತಿಯು ರೂಪಿಸಿದ್ದ ಸೂತ್ರಕ್ಕೆ ಅನುಗುಣವಾಗಿ ಸಿಆರ್‌ಬಿ ಮೊತ್ತವನ್ನು ಲೆಕ್ಕಹಾಕಲಾಗಿದೆ.

ಆರ್‌ಬಿಐ ಕಡೆಯಿಂದ ಸಿಕ್ಕಿರುವ ಹೆಚ್ಚಿನ ಮೊತ್ತವು ಮುಂದೆ ರಚನೆ ಆಗಲಿರುವ ಸರ್ಕಾರಕ್ಕೆ ಹಣಕಾಸಿನ ದೃಷ್ಟಿಯಿಂದ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಿಕೊಡಲಿದೆ. ಇದು ಬಜೆಟ್ ಮಂಡನೆಯ ಸಂದರ್ಭದಲ್ಲಿ ಅರಿವಿಗೆ ಬರಲಿದೆ. ಹೆಚ್ಚಿನ ಡಿವಿಡೆಂಡ್ ವರಮಾನವನ್ನು ನೆಚ್ಚಿಕೊಂಡು ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಅವಕಾಶ ಇದೆ. ವಿತ್ತೀಯ ಕೊರತೆಯು 2023–24ನೇ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇ 5.8ರಷ್ಟು ಇದ್ದಿದ್ದನ್ನು, 2024–25ನೇ ಆರ್ಥಿಕ ವರ್ಷಕ್ಕೆ ಶೇ 5.1ಕ್ಕೆ ತಗ್ಗಿಸಲಾಗುವುದು ಎಂದು ಕೇಂದ್ರವು ಈಗಾಗಲೇ ಭರವಸೆ ನೀಡಿದೆ. ಅಲ್ಲದೆ, ಅಭ್ಯುದಯ ಕಾರ್ಯಕ್ರಮಗಳಿಗೆ ಅಥವಾ ಬಂಡವಾಳ ವೆಚ್ಚಕ್ಕೆ ಕೂಡ ಈ ಹಣವನ್ನು ಬಳಸಿಕೊಳ್ಳಲು ಕೇಂದ್ರಕ್ಕೆ ಅವಕಾಶ ಇದೆ. ನಿರೀಕ್ಷಿತ ಇತರ ವರಮಾನಗಳಲ್ಲಿ ಆಗಬಹುದಾದ ಯಾವುದೇ ಕೊರತೆಯನ್ನು ಭರ್ತಿ ಮಾಡಿಕೊಳ್ಳಲು ಅಥವಾ ಬಂಡವಾಳ ಹಿಂತೆಗೆತದ ಗುರಿಯನ್ನು ತಲುಪಲು ಆಗದೇ ಇದ್ದುದರಿಂದ ಉಂಟಾಗುವ ವರಮಾನದ ಕೊರತೆಯನ್ನು ಒಂದಿಷ್ಟು ನೀಗಿಸಿಕೊಳ್ಳಲು ಈ ಡಿವಿಡೆಂಡ್ ನೆರವಾಗಬಹುದು. ವಿತ್ತೀಯ ಕೊರತೆಯ ಮೇಲೆ ಹಿಡಿತ ಸಾಧಿಸಿದಾಗ ಕೇಂದ್ರಕ್ಕೆ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸಲಿಕ್ಕೂ ಸಾಧ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT