ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜನಸಂಖ್ಯೆ ಏರಿಕೆ ಸವಾಲು ಎದುರಿಸಲು ಮಾನವ ಅಭಿವೃದ್ಧಿಗೆ ಆದ್ಯತೆ ಬೇಕು

Published 21 ಏಪ್ರಿಲ್ 2023, 21:22 IST
Last Updated 21 ಏಪ್ರಿಲ್ 2023, 21:22 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯ ಪಾಪ್ಯುಲೇಷನ್‌ ಫಂಡ್‌ ಮಾಡಿರುವ ಅಂದಾಜಿನ ಪ್ರಕಾರ, ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ. ದೇಶದ ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ. ಇಂತಹುದೊಂದು ‘ಹಿರಿಮೆ’ಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋಮಾನದವರು ಎಷ್ಟಿದ್ದಾರೆ, ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ.

ಒಟ್ಟು ಜನಸಂಖ್ಯೆಯ ಜೊತೆಗೆ ಈ ಎಲ್ಲ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳ ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರ ವಹಿಸುತ್ತವೆ. ಭಾರತದಲ್ಲಿ ಗರಿಷ್ಠ ಸಂಖ್ಯೆಯ ಯುವಜನರಿದ್ದಾರೆ ಮತ್ತು ಇದು ಹಾಗೆಯೇ ಮುಂದುವರಿಯಲಿದೆ. 15ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ. ಇನ್ನೂ ದೀರ್ಘ ಕಾಲ ಭಾರತವು ಈ ಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ. 

ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು ಗೌರವವೇನೂ ಅಲ್ಲ. ಬದಲಿಗೆ, ಇದು ದೇಶಕ್ಕೆ ಹಲವು ಸವಾಲುಗಳನ್ನು ಒಡ್ಡುತ್ತದೆ. ಜೊತೆಗೆ, ಅವಕಾಶಗಳ ಬಾಗಿಲುಗಳನ್ನೂ ತೆರೆಯುತ್ತದೆ. ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳದೇ ಇದ್ದರೆ ಜನಸಂಖ್ಯೆಯೇ ಶಾಪವಾಗಿ, ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶವು ವರ್ಷ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ, ಬಟ್ಟೆ, ಶಿಕ್ಷಣ, ಆರೋಗ್ಯ ಸೇವೆ, ಉದ್ಯೋಗ ಅವಕಾಶಗಳನ್ನು ಒದಗಿಸಬೇಕಾಗುತ್ತದೆ.

ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೆ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಆದುದರಿಂದ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರಗಳಿಗೆ ಸಂಬಂಧಿಸಿ ವಿಶೇಷ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೇ ಹೋಗಬಹುದು ಮತ್ತು ಅದುವೇ ಒಂದು ಹೊರೆಯೂ ಆಗಬಹುದು. ಯುವಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಆರೈಕೆಗೂ ವ್ಯವಸ್ಥೆ ಮಾಡಬೇಕಿದೆ. 

ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊಣೆಗಾರಿಕೆ. ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ಅತೃಪ್ತಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗ
ಬಹುದು. ಈಗಿನ ಸನ್ನಿವೇಶದಲ್ಲಿ ಸಂಪನ್ಮೂಲಗಳ ದಕ್ಷ ಮತ್ತು ಪರಿಣಾಮಕಾರಿ ಬಳಕೆಗೆ ಬಹಳ ಮಹತ್ವ ಇದೆ. ಮೀಸಲಾತಿ, ವಲಸೆ, ರಾಜಕೀಯ ಪ್ರಾತಿನಿಧ್ಯ, ಸಂಪನ್ಮೂಲ ಹಂಚಿಕೆ ಮತ್ತು ಇತರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ.

ಸಮಾಜದ ಎಲ್ಲ ವರ್ಗಗಳನ್ನೂ ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ, ಜನಸಂಖ್ಯೆ ಏರಿಕೆಯು ಸವಾಲಾಗಿ ಪರಿಣಮಿಸದು. ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ. ಇದರಿಂದ ಜನಸಂಖ್ಯೆ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು. ಜನಸಂಖ್ಯೆ ಹೆಚ್ಚಳಕ್ಕೆ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದ ಆಧಾರ ಇಲ್ಲದ ಪೂರ್ವಗ್ರಹ ಕಾರಣ ಮತ್ತು ಇದು ತಪ್ಪು ನಡವಳಿಕೆ. ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ‘ಭಾರತದ ಶತಮಾನ’ವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT