ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ‘ಗ್ರೀನ್‌ ಕ್ರೆಡಿಟ್‌’ ಯೋಜನೆ ಕಳವಳಕ್ಕೆ ಕಿವಿಗೊಡುವುದು ಒಳಿತು

Published 9 ಮೇ 2024, 23:50 IST
Last Updated 9 ಮೇ 2024, 23:50 IST
ಅಕ್ಷರ ಗಾತ್ರ

ಈ ಯೋಜನೆಯು ಅರಣ್ಯವನ್ನು ಹಾಳು ಮಾಡುವುದಕ್ಕೆ, ಪರಿಸರ ಸಂರಕ್ಷಣೆಗೆ ಅಡ್ಡಿ ಉಂಟುಮಾಡುವುದಕ್ಕೆ ಇನ್ನೊಂದು ಕಾನೂನುಬದ್ಧ ಮಾರ್ಗ ಆಗದಿರಲಿ

ಕೇಂದ್ರ ಸರ್ಕಾರವು ಈಚೆಗೆ ‘ಗ್ರೀನ್‌ ಕ್ರೆಡಿಟ್‌’ ಯೋಜನೆಯನ್ನು ಆರಂಭಿಸಿದೆ. ಇದು, ಪರಿಸರಕ್ಕೆ ಪೂರಕವಾದ ಕ್ರಮಗಳಾದ ಅರಣ್ಯೀಕರಣ, ನೀರಿನ ಸಂರಕ್ಷಣೆ, ಬರಡಾಗಿರುವ ಜಮೀನಿನ ಸ್ಥಿತಿಯನ್ನು ಸುಧಾರಿಸುವುದು, ವಾಯುಮಾಲಿನ್ಯ ತಗ್ಗಿಸುವಂತಹ ಕಾರ್ಯಗಳನ್ನು ಕೈಗೊಳ್ಳುವವರಿಗೆ ಉತ್ತೇಜನ ನೀಡುವ ಯೋಜನೆ. ಆದರೆ ಈ ಯೋಜನೆಯ ವಿಚಾರವಾಗಿ ಹಲವು ವಲಯಗಳಿಂದ ಟೀಕೆಗಳು ವ್ಯಕ್ತವಾಗಿವೆ. ಪರಿಸರವಾದಿಗಳು ಹಾಗೂ ವಿಷಯ ತಜ್ಞರು ಕೂಡ ಈ ಯೋಜನೆಯ ಬಗ್ಗೆ ತಕರಾರುಗಳನ್ನು ದಾಖಲಿಸಿದ್ದಾರೆ. ವಿವಿಧ ವಲಯಗಳು ಸ್ವಯಂಪ್ರೇರಣೆಯಿಂದ ಪರಿಸರಕ್ಕೆ ಪೂರಕವಾಗುವ ಕ್ರಮಗಳನ್ನು ಕೈಗೊಳ್ಳುವುದನ್ನು ಉತ್ತೇಜಿಸುವ ಉದ್ದೇಶದ, ಮಾರುಕಟ್ಟೆ ಆಧಾರಿತ ಹೊಸ ಬಗೆಯ ಕ್ರಮ ಇದು ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಈ ಯೋಜನೆಯ ಅಡಿಯಲ್ಲಿ ಕೈಗಾರಿಕೆಗಳು, ಸಮುದಾಯಗಳು ಹಾಗೂ ವ್ಯಕ್ತಿಗಳು ಅರಣ್ಯೀಕರಣ, ಅರಣ್ಯ ಸಂರಕ್ಷಣೆಯಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ ಅವರಿಗೆ ‘ಗ್ರೀನ್‌ ಕ್ರೆಡಿಟ್‌’ ಸಿಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದು ‘ಕಾರ್ಬನ್‌ ಕ್ರೆಡಿಟ್‌’ ಯೋಜನೆಯ ಮಾದರಿಯಲ್ಲಿಯೇ ಇದೆ. ಆದರೆ ಇದು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ನಿಯಮಗಳನ್ನು ದುರ್ಬಲಗೊಳಿಸುವಂತೆ ಇದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯು ಪರಿಸರ ಸಂರಕ್ಷಣೆಗಿಂತಲೂ ಕಾರ್ಪೊರೇಟ್ ಕಂಪನಿಗಳ ಅನುಕೂಲಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆಯಾದ ಕಾರಣ, ಈ ಯೋಜನೆಯನ್ನು ರದ್ದುಪಡಿಸಬೇಕು ಎಂಬ ಆಗ್ರಹದೊಂದಿಗೆ 91 ಮಂದಿ ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳು ಈಚೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪರಿಸರಪರ ಹಲವಾರು ಸಂಘಟನೆಗಳು ಹಾಗೂ ಮಾನವ ಹಕ್ಕುಗಳ ಪರ ಸಂಘಟನೆಗಳು ಕೂಡ ಇದೇ ಬಗೆಯ ಆಗ್ರಹವನ್ನು ಸರ್ಕಾರದ ಮುಂದೆ ಇರಿಸಿವೆ.

ಈ ಯೋಜನೆಯಲ್ಲಿ ಹಲವು ನಕಾರಾತ್ಮಕ ಅಂಶಗಳು ಇವೆ ಎಂದು ಟೀಕಾಕಾರರು ಹೇಳಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಸಸಿ ನೆಡುವ ಕಾರ್ಯಕ್ರಮದ ಭಾಗವಾಗಿ, ಏಕಜಾತಿಯ ಸಸಿಗಳನ್ನೇ ಹೆಚ್ಚಾಗಿ ನೆಡಲಾಗುತ್ತದೆ; ಅದು, ಕಂಪನಿಗಳಿಗೆ ತಮ್ಮ ಯೋಜನೆಗಳಿಗೆ ದಟ್ಟ ಅಡವಿಯನ್ನು ಕಡಿದು, ಅಲ್ಲಿನ ಜೀವವೈವಿಧ್ಯವನ್ನು ನಾಶ ಮಾಡಲು ಅವಕಾಶ ಕಲ್ಪಿಸಿಕೊಡಲಿದೆ ಎಂಬ ಟೀಕೆ ಇದೆ. ‘ಬರಡಾಗಿರುವ ಜಮೀನು’ ಎಂಬ ಪದಗಳಿಗೆ ನಿರ್ದಿಷ್ಟವಾದ ವ್ಯಾಖ್ಯಾನ ಇಲ್ಲ. ಹೀಗಾಗಿ, ಈ ಯೋಜನೆಯು ಬುಡಕಟ್ಟು ಸಮುದಾಯಗಳ ಕೈಯಲ್ಲಿರುವ ಮತ್ತು ಸಮುದಾಯಗಳು ಒಟ್ಟಾಗಿ ಮೇವಿಗೆ, ಪಶುಪಾಲನೆಗೆ ಬಳಸುತ್ತಿರುವ ಜಮೀನಿನ ಕಬಳಿಕೆಗೆ ದಾರಿ ಮಾಡಿಕೊಡಬಹುದು.

ಈ ಯೋಜನೆಯ ಕಾರಣದಿಂದಾಗಿ, ಕಂಪನಿಗಳು ತಮ್ಮ ಪಾಲಿನ ಹೊಣೆಯನ್ನು ಸರಿಯಾಗಿ ಪೂರ್ಣಗೊಳಿಸದೇ ಇದ್ದಾಗಲೂ ಪರಿಸರ ಅನುಮತಿ ಪಡೆದುಕೊಳ್ಳಲು ಸಾಧ್ಯವಾಗಬಹುದು. ಈ ಯೋಜನೆಯು ಅವೈಜ್ಞಾನಿಕ ಎಂದು ಕೂಡ ಹೇಳಲಾಗಿದೆ. ಇಂಗಾಲವನ್ನು ಪ್ರತ್ಯೇಕಿಸಲು ಅರಣ್ಯೀಕರಣವೇ ಎಲ್ಲ ಸಂದರ್ಭಗಳಲ್ಲಿಯೂ ಅತ್ಯುತ್ತಮ ಮಾರ್ಗ ಅಲ್ಲ ಎಂದು ತಜ್ಞರು ಹೇಳಿದ್ದಾರೆ. ಬೇರೆ ಬೇರೆ ಸ್ಥಳಗಳಿಗೆ ಬೇರೆ ಬೇರೆ ಬಗೆಯ ಜೀವವೈವಿಧ್ಯದ ಅಗತ್ಯ ಇರುತ್ತದೆ ಎಂದು ಕೂಡ ಅವರು ಹೇಳಿದ್ದಾರೆ. ಏಕಜಾತಿಯ ಅರಣ್ಯೀಕರಣವು ಅರಣ್ಯದಲ್ಲಿ ವಾಸಿಸುವ ಹಲವು ಬಗೆಯ ಜೀವಿಗಳ ಅಂತ್ಯಕ್ಕೆ ಕಾರಣವಾಗಬಹುದು ಎಂಬ ಭೀತಿಯೂ ವ್ಯಕ್ತವಾಗಿದೆ. ಸರ್ಕಾರವು ಉದ್ಯಮಿಗಳಿಗೆ ಅರಣ್ಯ ಜಮೀನನ್ನು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಸುಲಭವಾಗಿಸುತ್ತಿದೆ ಎಂದು ನಾಗರಿಕ ಸೇವೆಗಳ ನಿವೃತ್ತ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ನೆಡಬೇಕಿರುವ ಸಸಿಗಳ ಸಂಖ್ಯೆ, ಅರಣ್ಯಪ್ರದೇಶದ ವಿಸ್ತೀರ್ಣ ಮತ್ತು ತೋಟಗಾರಿಕಾ ಪ್ರಭೇದಗಳ ಬಗ್ಗೆ ಯೋಜನೆಯ ಕರಡು ಪ್ರತಿಯಲ್ಲಿ ಉಲ್ಲೇಖ ಇತ್ತು. ಆದರೆ ಅಂತಿಮಗೊಂಡಿರುವ ಯೋಜನೆಯಲ್ಲಿ ಆ ಉಲ್ಲೇಖ ಇಲ್ಲ. ಯಾವ ಬಗೆಯ ಸಸಿಗಳನ್ನು ನೆಡಲಾಗಿದೆ ಎಂಬುದನ್ನು ಪರಿಗಣಿಸಿ ‘ಕ್ರೆಡಿಟ್‌’ ನೀಡುವ ಬದಲು, ಎಷ್ಟು ಸಸಿಗಳನ್ನು ನೆಡಲಾಗಿದೆ ಎನ್ನುವುದನ್ನು ಪರಿಗಣಿಸಿ ‘ಕ್ರೆಡಿಟ್‌’ ಕೊಡಲಾಗುತ್ತದೆ. ಅರಣ್ಯ ಎಂದರೆ ಅದೊಂದು ಜೀವಪರಿಸರ ವ್ಯವಸ್ಥೆ. ಕೆಲವು ಸಸಿಗಳು ಅಥವಾ ಮರಗಳು ಅರಣ್ಯಕ್ಕೆ ಪರ್ಯಾಯ ಆಗಲಾರವು. ಸಸಿಗಳು ಉಳಿಯುವ ಪ್ರಮಾಣವನ್ನು ಆಧರಿಸಿ 10 ವರ್ಷಗಳ ಅವಧಿಯಲ್ಲಿ ‘ಕ್ರೆಡಿಟ್‌’ ಕೊಡಬೇಕು ಎಂದು ಮೂಲ ಯೋಜನೆಯಲ್ಲಿ ಹೇಳಲಾಗಿತ್ತು. ಆದರೆ ಈ ಉಲ್ಲೇಖ ಹಾಗೂ ಇನ್ನೂ ಹಲವು ವಿವರಗಳನ್ನು ನಂತರದಲ್ಲಿ ಕೈಬಿಡಲಾಗಿದೆ. ಯೋಜನೆಯು ಈಗಿನ ಸ್ವರೂಪದಲ್ಲೇ ಉಳಿದರೆ ದುರ್ಬಳಕೆ ಆಗುವ ಸಾಧ್ಯತೆ ಹೆಚ್ಚು. ಅಲ್ಲದೆ, ಅರಣ್ಯವನ್ನು ಹಾಳು ಮಾಡುವುದಕ್ಕೆ, ಪರಿಸರ ಸಂರಕ್ಷಣೆಗೆ ಅಡ್ಡಿ ಉಂಟುಮಾಡುವುದಕ್ಕೆ ಇದು ಇನ್ನೊಂದು ಕಾನೂನುಬದ್ಧ ಮಾರ್ಗವಾಗಿ ಪರಿಣಮಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT