ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಸಲಿಂಗ ವಿವಾಹ: ವಿಚಾರಣೆಗೆ ಕೈಗೆತ್ತಿಕೊಂಡ ನಡೆ ಸ್ವಾಗತಾರ್ಹ

Last Updated 29 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ತಮ್ಮ ಇಚ್ಛೆಯ ವ್ಯಕ್ತಿಯನ್ನು ವಿವಾಹವಾದರೆ ಅದಕ್ಕೆ ಶಾಸನಾತ್ಮಕ ಬೆಂಬಲ ಇರಬೇಕು ಹಾಗೂ ಅದಕ್ಕೆ ಕಾನೂನಿನ ಮಾನ್ಯತೆ ಇರಬೇಕು ಎಂಬ ಬೇಡಿಕೆ ಯನ್ನು ಹೊಂದಿರುವ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಮ್ಮತಿಸುವ ಮೂಲಕ ಸುಪ್ರೀಂ ಕೋರ್ಟ್‌ ಸ್ವಾಗತಾರ್ಹ ಕೆಲಸ ಮಾಡಿದೆ. ತಮಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ವಿವಾಹ ಆಗಲು ಸಾಧ್ಯವಿಲ್ಲದವರು 1954ರ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮದುವೆ ಆದರೆ ಅದನ್ನು ಕಾನೂನುಬದ್ಧಗೊಳಿಸಬೇಕು ಎಂಬ ಬೇಡಿಕೆ ಹೊಂದಿರುವ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರು ಇರುವ ನ್ಯಾಯಪೀಠವು ಸೂಚಿಸಿದೆ. ಬೇರೆ ಬೇರೆ ಹೈಕೋರ್ಟ್‌ಗಳಲ್ಲಿ ಈ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾವಣೆ ಮಾಡುವಂತೆಯೂ ನ್ಯಾಯಪೀಠ ಸೂಚಿಸಿದೆ. ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ತೀರ್ಮಾನವೇ ಸಕಾರಾತ್ಮಕ ನಡೆ. 2018ರಲ್ಲಿ ನವತೇಜ್ ಸಿಂಗ್ ಜೋಹರ್ ಪ್ರಕರಣದಲ್ಲಿ, ಸಲಿಂಗಕಾಮ ಅಪರಾಧವಲ್ಲ ಎಂದು ಹೇಳಿದ್ದು ಹಾಗೂ 2017ರಲ್ಲಿ ಪುಟ್ಟಸ್ವಾಮಿ ಪ್ರಕರಣದಲ್ಲಿ, ಖಾಸಗಿತನದ ಹಕ್ಕನ್ನು ಎತ್ತಿಹಿಡಿದಿದ್ದರ ನೆಲೆಯಲ್ಲಿಯೇ ಕೋರ್ಟ್‌ ಈ ಅರ್ಜಿಗಳನ್ನೂ ಪರಿಗಣಿಸಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ.

ಕೇಂದ್ರ ಸರ್ಕಾರವು ಸಲಿಂಗ ವಿವಾಹವನ್ನು ಈ ಹಿಂದೆ ವಿರೋಧಿಸಿದೆ. ‘ಭಾರತದಲ್ಲಿ ವಿವಾಹವು ಹಿಂದಿನಿಂದಲೂ ಬಂದಿರುವ ಸಂಪ್ರದಾಯಗಳು, ಆಚರಣೆಗಳು, ವಿಧಿಗಳು, ಸಾಂಸ್ಕೃತಿಕ ಮೌಲ್ಯಗಳು ಮತ್ತು ಸಾಮಾಜಿಕ ಮೌಲ್ಯಗಳ ಮೇಲೆ ನಿಂತಿರುತ್ತದೆ’ ಎಂದು ಸರ್ಕಾರ ಹೇಳಿತ್ತು. ಸಲಿಂಗ ವಿವಾಹವನ್ನು ಕಾನೂನಿನ ಅಡಿಯಲ್ಲಿ ಮಾನ್ಯ ಮಾಡುವ ರೀತಿಯಲ್ಲಿ ಯಾವ ಮೂಲಭೂತ ಹಕ್ಕಿನ ವ್ಯಾಪ್ತಿಯನ್ನೂ ವಿಸ್ತರಿ ಸಲು ಆಗದು ಎಂದು ಅದು ಹೇಳಿತ್ತು. ಆದರೆ, ಸಮಾಜದ ವರ್ತನೆಗಳು ಹಾಗೂ ಸಮಾಜದ ಬಯಕೆಗಳನ್ನು ಮುಂದಿಟ್ಟುಕೊಂಡು, ದೇಶದ ಇತರ ಯಾವುದೇ ಪ್ರಜೆಗೆ ಸಮನಾಗಿರುವ ಒಂದು ನಿರ್ದಿಷ್ಟ ವರ್ಗದವರ ವಿರುದ್ಧದ ತಾರತಮ್ಯವನ್ನು ಸಮರ್ಥಿಸಿಕೊಳ್ಳಲು ಆಗದು. ಅರ್ಜಿದಾರರ ಪರವಾಗಿ ಕೆಲವು ಮಹತ್ವದ ಅಂಶಗಳನ್ನು ನ್ಯಾಯಾಲಯದ ಮುಂದೆ ಇರಿಸಲಾಗಿದೆ. ಅಂತರ್ಜಾತಿ ಹಾಗೂ ಅಂತರ್‌ಧರ್ಮ ವಿವಾಹಿತರು ಸಮಾಜದಲ್ಲಿ ಹಲವು ಸಂದರ್ಭಗಳಲ್ಲಿ ಈಗಲೂ ವಿರೋಧ ಎದುರಿಸುತ್ತಾರೆ. ಅವರಿಗೆ ಕಾನೂನಿನ ಅಡಿಯಲ್ಲಿ ಇರುವಂತಹ ರಕ್ಷಣೆಯನ್ನೇ ತಮಗೂ ನೀಡಬೇಕು ಎಂದು ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಅರ್ಜಿ ಸಲ್ಲಿಸಿರುವವರು ಕೋರ್ಟ್‌ ಮುಂದೆ ಮನವಿ ಮಾಡಿದ್ದಾರೆ. ತಮ್ಮ ಬೇಡಿಕೆ ಇರುವುದು 1954ರ ಕಾಯ್ದೆಯನ್ನು ಲಿಂಗ ನಿರಪೇಕ್ಷ ಆಗಿಸಬೇಕು ಎಂಬುದಷ್ಟೇ ಎಂದು ಅವರು ಕೋರ್ಟ್‌ ಮುಂದೆ ವಿವರಣೆ ನೀಡಿದ್ದಾರೆ.

2018ರಲ್ಲಿ ಸುಪ್ರೀಂ ಕೋರ್ಟ್‌ ಸಲಿಂಗಕಾಮದ ವಿಚಾರವಾಗಿ ನೀಡಿದ ತೀರ್ಪು, ಸಮಾಜದ ಧೋರಣೆಯನ್ನು ಬದಲಾಯಿಸುವಲ್ಲಿ ಹಾಗೂ ಸಮಾನತೆಯ ಸಂದೇಶವನ್ನು ಹರಡುವಲ್ಲಿ ನೆರವಾಗಿದೆ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು, ಘನತೆಯಿಂದ ಬದುಕುವ ಹಕ್ಕು ತಮಗೂ ಇದೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಇದು ನೆರವಾಗಿದೆ. ಲೈಂಗಿಕ ಅಲ್ಪಸಂಖ್ಯಾತರ ವಿವಾಹದ ಹಕ್ಕು ಗಳನ್ನು ನ್ಯಾಯಾಲಯಗಳು ಗುರುತಿಸಿವೆ. ಅವರ ಹಕ್ಕುಗಳನ್ನು ರಕ್ಷಿಸುವಂತೆ ಪಾಲಕರಿಗೆ, ನಾಗರಿಕ ಸಮುದಾಯದ ಸಂಸ್ಥೆಗಳಿಗೆ, ಪೊಲೀಸರಿಗೆ ಸೂಚನೆ ನೀಡಿವೆ. ಸಾಮಾಜಿಕ ಬದಲಾವಣೆಗಳು ಆಗುವು ದಕ್ಕೆ ಸಮಯ ಬೇಕು. ಆದರೆ, ಸುಪ್ರೀಂ ಕೋರ್ಟ್‌ ತನ್ನ ಪ್ರಗತಿಪರ ತೀರ್ಪುಗಳ ಮೂಲಕ ಅಂತಹ ಬದಲಾವಣೆಗಳಿಗೆ ವೇಗ ನೀಡಿದೆ. ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕು ಸೇರಿದಂತೆ ಹಲವು ಹಕ್ಕುಗಳು ಮತ್ತು ಸೌಲಭ್ಯಗಳಿಗೂ ಮದುವೆಯ ವಿಚಾರವಾಗಿ ಕಾನೂನಿನ ಮೂಲಕ ಸಿಗುವ ಹಕ್ಕಿಗೂ ಸಂಬಂಧ ಇದೆ. 2018ರಲ್ಲಿ, ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಸಾರಿದ ನ್ಯಾಯಪೀಠದಲ್ಲಿ ಈಗ ಸಿಜೆಐ ಆಗಿರುವ ಚಂದ್ರಚೂಡ್ ಅವರೂ ಇದ್ದರು. ಸಲಿಂಗಕಾಮವು ಅಪರಾಧ ಅಲ್ಲ ಎಂದಷ್ಟೇ ಹೇಳಿ ಸಮಾನತೆ ಸಾಧಿಸಲು ಆಗದು, ಸಮಾನತೆಯು ಮನೆ, ಕೆಲಸದ ಸ್ಥಳ ಸೇರಿದಂತೆ ಬದುಕಿನ ಎಲ್ಲ ವಲಯಗಳಿಗೂ ವಿಸ್ತರಿಸಬೇಕು ಎಂದು ಅವರು ಹೇಳಿದ್ದರು. ಅವರ ಮಾತುಗಳ ಹಿಂದಿನ ಚಿಂತನೆ ಬಹಳ ಸ್ಪಷ್ಟವಾದ ಸಂದೇಶವನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT