ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಬರ ಪರಿಹಾರ ಕಾರ್ಯಕ್ಕೆ ಚುರುಕು ಮುಟ್ಟಿಸಿ, ಜನರ ಬವಣೆ ನಿವಾರಿಸಿ

Published 8 ಮೇ 2024, 23:41 IST
Last Updated 8 ಮೇ 2024, 23:41 IST
ಅಕ್ಷರ ಗಾತ್ರ

ಬರದಿಂದ ಕಂಗೆಟ್ಟಿರುವ ಜನರಿಗೆ ಸಾಂತ್ವನ ಹೇಳುವ, ಧೈರ್ಯ ತುಂಬುವ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಎರಡು ತಿಂಗಳಿಂದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಚುನಾವಣೆ ಸಂಬಂಧದ ಕೆಲಸಗಳಲ್ಲಿ ನಿರತರಾಗಿದ್ದರು. ಈಗ ಬಹುತೇಕರಿಗೆ ಚುನಾವಣೆ ಕಾರ್ಯದಿಂದ ಮುಕ್ತಿ ಸಿಕ್ಕಿದೆ. ಇನ್ನು ತಡ ಮಾಡುವುದು ಸರಿಯಲ್ಲ. ಬರದಿಂದ ಬಸವಳಿದಿರುವ ಜನರಿಗೆ ಪರಿಹಾರ ಒದಗಿಸಲು ಆಡಳಿತದ ಚುಕ್ಕಾಣಿ ಹಿಡಿದವರು ಹಾಗೂ ಅಧಿಕಾರಿಗಳು ಮುಂದಾಗಬೇಕಿದೆ. ಕುಡಿಯುವ ನೀರು ಒದಗಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ. ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಚುನಾವಣಾ ನೀತಿ ಸಂಹಿತೆ ಅಡ್ಡಿ ಆಗುವುದಿಲ್ಲ
ವಾದರೂ ಚುನಾವಣೆ ಎನ್ನುವುದು ಒಂದು ನೆಪವಾಗಿತ್ತು. ಈಗ ಯಾವುದೇ ನೆಪ ಹೇಳದೆ ಜನರ ಸಮಸ್ಯೆಗಳನ್ನು ಆಲಿಸಬೇಕು ಮತ್ತು ಸಮಸ್ಯೆ ಪರಿಹಾರಕ್ಕೆ ಧಾವಿಸಬೇಕು. ರಾಜ್ಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಬಿಸಿಲಿನ ತಾಪ ಇದೆ. ಬಿಸಿ ಗಾಳಿಯಿಂದಲೂ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಶಾಖಾಘಾತದಿಂದ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಬರ ತೀವ್ರವಾಗಿದೆ. ಕುಡಿಯವ ನೀರು, ಮೇವು ಸಿಗದೆ ಜಾನುವಾರುಗಳು ಕಂಗೆಟ್ಟಿವೆ. ರೈತರ ಬೆಳೆಯೂ ನಾಶವಾಗಿದೆ. 29 ಜಿಲ್ಲೆಗಳ 149 ತಾಲ್ಲೂಕುಗಳ 1,084 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 1,920 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕೊಳವೆಬಾವಿಗಳು ಬತ್ತಿವೆ. ನೀರಿನ ಮೂಲಗಳಾದ ಕೆರೆಗಳು ಒಣಗಿವೆ. ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಬಹುತೇಕ ನಗರ, ಪಟ್ಟಣಗಳಿಗೆ ನೀರು ಒದಗಿಸುತ್ತಿದ್ದ ರಾಜ್ಯದ ಬಹುಪಾಲು ಜಲಾಶಯಗಳಲ್ಲಿಯೂ ನೀರಿನ ಸಂಗ್ರಹ ಮಟ್ಟ ಕುಸಿದಿದೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗಗಳು ಬಿಸಿಲಿನ ಬೇಗೆಗೆ ತತ್ತರಿಸಿಹೋಗಿವೆ. ಕಾದ ಹೆಂಚಿನ ಮೇಲೆ ಬದುಕು ಎಂಬಂತಾಗಿದೆ ಅಲ್ಲಿಯ ಜನರ ಸ್ಥಿತಿ. 22 ನಗರ ಸ್ಥಳೀಯ ಸಂಸ್ಥೆಗಳ 188 ವಾರ್ಡ್‌ಗಳಲ್ಲಿಯೂ ನೀರಿನ ಕೊರತೆ ಎದುರಾಗಿದ್ದು ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಕೆಲವು ಕಡೆ ಖಾಸಗಿ ಕೊಳವೆಬಾವಿಗಳನ್ನೂ ಬಾಡಿಗೆಗೆ ಪಡೆದು ನೀರು ಕೊಡಲಾಗುತ್ತಿದೆ. ಜಾನುವಾರುಗಳಿಗೆ ಮೇವು ಪೂರೈಸಲು ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿದ್ದರೂ ಅವು ಸಾಕಾಗುತ್ತಿಲ್ಲ. ಕೆಲವು ಗೋಶಾಲೆಗಳೂ ನೀರಿನ ಕೊರತೆ ಎದುರಿಸುತ್ತಿವೆ. ಸಮಸ್ಯಾತ್ಮಕ ಪ್ರದೇಶಗಳನ್ನುಚುನಾವಣೆಗೆ ಮೊದಲೇ ಗುರುತಿಸಲಾಗಿತ್ತು. ತಕ್ಷಣವೇ ನೀರು ಪೂರೈಸಲು ಟ್ಯಾಂಕರ್‌ಗಳಿಗೆ ಟೆಂಡರ್ ಕೂಡಾ ಕರೆಯಲಾಗಿತ್ತು. ಆದರೆ ಚುನಾವಣೆ ಕಾರಣಕ್ಕೆ ಕಾರ್ಯಾದೇಶ ನೀಡಿರಲಿಲ್ಲ. ಈಗ ತಕ್ಷಣವೇ ಕಾರ್ಯಾದೇಶ ನೀಡಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲೆಲ್ಲ ನೀರು ಒದಗಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ. ಜಾನುವಾರುಗಳಿಗೆ ಮೇವು ಒದಗಿಸಬೇಕಿದೆ. ಇನ್ನಷ್ಟು ಗೋಶಾಲೆ ಮತ್ತು ಮೇವು ಬ್ಯಾಂಕ್‌ಗಳನ್ನು ತೆರೆಯಬೇಕಿದೆ.

ಲೋಕಸಭಾ ಚುನಾವಣೆಗೆ ಮತದಾನ ಮುಗಿಯಿತು ಎಂದು ವಿಶ್ರಾಂತಿ ಪಡೆಯುವ ಸಮಯ ಇದಲ್ಲ. ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಈ ದಿಸೆಯಲ್ಲಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕಾರ್ಯವನ್ನು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರು ಮಾಡಬೇಕಾಗಿದೆ. ಬರದಿಂದ ಕಂಗೆಟ್ಟು, ನಿರಾಶೆಗೆ ಒಳಗಾಗಿರುವ ಜನರಿಗೆ ಸಾಂತ್ವನ ಹೇಳುವ, ಧೈರ್ಯ ತುಂಬುವ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ. ಬರ ಆವರಿಸುವ ಸೂಚನೆಗಳು ಮೊದಲೇ ಗೋಚರಿಸಿದ್ದವು. ಕಳೆದ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯೂ ಆಗಿರಲಿಲ್ಲ. ಆದರೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳದೇ ಇರುವುದು ಆಡಳಿತದ ವೈಫಲ್ಯವನ್ನು ತೋರುತ್ತದೆ. ಈಗಲಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಉಲ್ಬಣಿಸಿದಾಗ ಪರಿಹಾರೋಪಾಯಗಳನ್ನು ಹುಡುಕುವ ಬದಲು ಮುನ್ನೆಚ್ಚರಿಕೆ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಬರದಿಂದ ಕಂಗೆಟ್ಟಿರುವ ಜನರಿಗೆ ಅಗತ್ಯ ಸೌಲಭ್ಯ ಒದಗಿಸುವ ಜೊತೆಗೆ ಇದನ್ನೇ ಒಂದು ಅವಕಾಶ ಎಂದು ಅರಿತು ಮಳೆಗಾಲ ಬರುವುದರೊಳಗೆ ಕೆರೆಗಳ ಹೂಳು ತೆಗೆದು, ಮಳೆನೀರು ಸಂಗ್ರಹಕ್ಕೆ ಅವುಗಳನ್ನು ಅನುವಾಗಿಸುವುದು ಇಂದಿನ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT