ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ‌ | ಶಾಲಾ ಶುಲ್ಕ: ಪೋಷಕರ ಸಂಕಷ್ಟ ಕಾಣದಾಯಿತೇ?

Last Updated 10 ಜೂನ್ 2020, 1:11 IST
ಅಕ್ಷರ ಗಾತ್ರ

ದೇಶದಾದ್ಯಂತ ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಯಾವಾಗ ಆರಂಭಿಸಬೇಕು ಎಂಬ ವಿಷಯವಾಗಿ ಇನ್ನೂ ಗೊಂದಲ ಮುಂದುವರಿದಿದೆ. ಕಳೆದ ಶೈಕ್ಷಣಿಕ ಸಾಲಿನ ಎಷ್ಟೋ ಪರೀಕ್ಷೆಗಳನ್ನು ನಡೆಸುವುದು ಕೂಡ ಬಾಕಿ ಇದೆ. ಅಷ್ಟರಲ್ಲಾಗಲೇ ಹೊಸ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿಬಿಟ್ಟಿರುವ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು, ಕಳೆದ ಸಲಕ್ಕಿಂತ ಹೆಚ್ಚಿನ ಶುಲ್ಕ ಆಕರಿಸುತ್ತಿರುವ ಕುರಿತು ವರದಿಯಾಗಿದೆ.

ರಾಜ್ಯ ಸರ್ಕಾರವು ಇತ್ತೀಚೆಗೆ ನೀಡಿದ್ದ ಸೂಚನೆಯನ್ನೂ ಕಡೆಗಣಿಸಿ, ಈ ರೀತಿ ಅಧಿಕ ಶುಲ್ಕ ಸಂಗ್ರಹ ಮಾಡುತ್ತಿರುವುದು ಅಮಾನವೀಯ ಕ್ರಮ. ಪ್ರತಿವರ್ಷ ಶೇ 15ರಷ್ಟು ಬೋಧನಾ ಶುಲ್ಕವನ್ನು ಹೆಚ್ಚಿಸಲು ಶಾಲಾ ಆಡಳಿತ ಮಂಡಳಿಗಳಿಗೆ ನಿಯಮಾವಳಿಯಲ್ಲೇನೋ ಅವಕಾಶ ಇದೆ. ಆದರೆ, ಲಾಕ್‌ಡೌನ್‌ನಿಂದ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪೋಷಕರ ಮೇಲೆ ಅಧಿಕ ಹೊರೆಯನ್ನು ಹೊರಿಸದಂತೆ ಸರ್ಕಾರವೇ ಸ್ಪಷ್ಟ ನಿರ್ದೇಶನ ನೀಡಿದೆ.

ಏರಿಕೆಯ ಯೋಚನೆಯನ್ನು ಕೈಬಿಟ್ಟು, ಶಾಲಾ ಶುಲ್ಕವನ್ನು ಕಡಿಮೆ ಮಾಡಲು ಯಾರಾದರೂ ಇಚ್ಛಿಸಿದಲ್ಲಿ ಅವರು ಸ್ವತಂತ್ರರು ಎಂದೂ ಸ್ಪಷ್ಟಪಡಿಸಿದೆ. ಅಸಾಧಾರಣವಾದ ಈ ಸಂದರ್ಭದಲ್ಲಿ ಶುಲ್ಕ ಕಡಿಮೆ ಮಾಡುವಂತಹ ಕ್ರಮಗಳ ಮೂಲಕ ಹೃದಯವಂತಿಕೆ ಮೆರೆಯಬೇಕಿದ್ದ ಶಾಲಾ ಆಡಳಿತ ಮಂಡಳಿಗಳು ಈಗ ಹಿಡಿದಿರುವ ಹಾದಿಯು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಕೊರೊನಾ ಬಿಕ್ಕಟ್ಟಿನ ಈ ಸಂದರ್ಭವನ್ನೇ ಬಳಸಿಕೊಂಡುಕೆಲವು ಸಂಸ್ಥೆಗಳು ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲೂ ಶುಲ್ಕ ಸಂಗ್ರಹಕ್ಕೆ ಇಳಿದಿರುವುದು, ಅವುಗಳ ಧನದ ದಾಹಕ್ಕೆ ದ್ಯೋತಕ.

ಶುಲ್ಕ ಪಾವತಿಸಲು ಸಾಮರ್ಥ್ಯವಿಲ್ಲದ ಪೋಷಕರನ್ನು ಯಾವ ಕಾರಣಕ್ಕೂ ಒತ್ತಾಯಿಸುವಂತಿಲ್ಲ ಎಂದು ಸಹ ನಿರ್ದೇಶನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಈ ನಿರ್ದೇಶನವನ್ನು ಉಲ್ಲಂಘನೆ ಮಾಡಿಲ್ಲ ಎಂಬಂತೆ ತೋರಿಸಿಕೊಳ್ಳುತ್ತಲೇ ರಂಗೋಲಿ ಕೆಳಗೆ ನುಸುಳುವ ಯತ್ನ ಮಾಡುತ್ತಿವೆ ಎಂಬ ದೂರುಗಳೂ ಇವೆ. ಪಠ್ಯಕ್ರಮವನ್ನು ಎಷ್ಟು ಉಳಿಸಿಕೊಳ್ಳಬೇಕು ಎನ್ನುವುದು ಇನ್ನೂ ನಿರ್ಧಾರವಾಗದ ಈ ಹಂತದಲ್ಲೇ ‘ಕೂಡಲೇ ಶಾಲೆಗೆ ಬಂದು ಪಠ್ಯಪುಸ್ತಕ ಖರೀದಿಸಬೇಕು’ ಎಂಬ ಸಂದೇಶಗಳು ಪೋಷಕರಿಗೆ ಹೋಗುತ್ತಿವೆ.

ಪುಸ್ತಕ ಖರೀದಿಗೆ ಹೋದವರಿಗೆ, ಶುಲ್ಕ ಭರಿಸದಿದ್ದರೆ ಮುಂದೆ ಪ್ರವೇಶ ಪ್ರಕ್ರಿಯೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂಬ ಭೀತಿಯನ್ನೂ ಹುಟ್ಟಿಸಲಾಗುತ್ತಿದೆ. ಸಾಲ ಮಾಡಿಯಾದರೂ ಶುಲ್ಕ ಭರಿಸುವಂತಹ ಪ್ರಮೇಯ ಎದುರಾಗಿದೆ ಎಂದು ಕೆಲವು ಪೋಷಕರೇ ಹೇಳಿಕೊಂಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಇಂತಹ ನಡೆಯೂ ಅಕ್ಷಮ್ಯ. ಆಡಳಿತ ವೆಚ್ಚ, ಸಿಬ್ಬಂದಿ ವೇತನ ಪಾವತಿಯಂತಹ ಹೊಣೆಯನ್ನು ಆಡಳಿತ ಮಂಡಳಿಗಳು ಹೊರಲೇಬೇಕಾಗುತ್ತದೆ ನಿಜ. ಅದಕ್ಕೆ ಸಂಪನ್ಮೂಲ ಕ್ರೋಡೀಕರಣ ಮಾಡುವುದೂ ಮುಖ್ಯ.

ಹಾಗೆಂದು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪೋಷಕರ ಸುಲಿಗೆಗೆ ನಿಲ್ಲುವಷ್ಟು ಕಲ್ಲು ಹೃದಯವನ್ನು ಅವು ತೋರಬಾರದು. ಶುಲ್ಕ ಹೆಚ್ಚಳದ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು. ಸ್ವಯಂಪ್ರೇರಿತರಾಗಿ ಶುಲ್ಕ ಭರಿಸಲು ಬಂದ ಪೋಷಕರಿಂದ ಮಾತ್ರ ಹಣ ಪಾವತಿಸಿಕೊಳ್ಳಬೇಕು. ಉಳಿದವರಿಗೆ ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ನೀಡಬೇಕು. ಶಿಕ್ಷಣವು ಈಗ ಉದ್ಯಮವಾಗಿದೆ ಎನ್ನುವುದು ಪದೇ ಪದೇ ಕೇಳಿಬರುತ್ತಿರುವ ಮಾತು. ಈ ವಲಯವು ಉದ್ಯಮವಾದರೂ ವಿವೇಕವನ್ನೇನೂ ಕಳೆದುಕೊಂಡಿಲ್ಲ ಎಂಬುದನ್ನು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ತಮ್ಮ ಮಾನವೀಯ ನಡೆಗಳಿಂದ ನಿರೂಪಿಸಬೇಕು. ಶಿಕ್ಷಣ ಇಲಾಖೆಯೂ ಅಷ್ಟೆ. ನಿರ್ದೇಶನ ಹೊರಡಿಸಿ ಕೈಕಟ್ಟಿ ಕುಳಿತರೆ ಸಾಲದು. ಪೋಷಕರಿಂದ ದೂರುಗಳ ಸ್ವೀಕಾರ ಹಾಗೂ ಅಂತಹ ದೂರುಗಳಿಗೆ ತಕ್ಷಣ ಪರಿಹಾರ ಒದಗಿಸಲು ಸಮರ್ಥ ವ್ಯವಸ್ಥೆಯೊಂದನ್ನು ರೂಪಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪೋಷಕರು ಹಿಂಸೆಗೆ ಒಳಗಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾರ್ಗೋಪಾಯಗಳನ್ನೂ ಕಂಡುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT