ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪಠ್ಯ ಪರಿಷ್ಕರಣೆಯಷ್ಟೇ ಸಾಲದು, ಸಮಗ್ರ ಶಿಕ್ಷಣ ನೀತಿಯೂ ಅಗತ್ಯ

Published 28 ಸೆಪ್ಟೆಂಬರ್ 2023, 0:30 IST
Last Updated 28 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಪಠ್ಯಪುಸ್ತಕಗಳು ಆಡಳಿತ ಪಕ್ಷದ ಮರ್ಜಿಗೆ ತಕ್ಕಂತಿರದೆ, ಮಕ್ಕಳ ಮನೋವಿಕಾಸದ ಸಾಧ್ಯತೆಯನ್ನೇ ಮುಖ್ಯವಾಗಿಟ್ಟುಕೊಂಡಿರಬೇಕು

ಆರರಿಂದ ಹತ್ತನೇ ತರಗತಿಯವರೆಗಿನ ‘ರಾಜ್ಯ ಪಠ್ಯಕ್ರಮ’ದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರ್ಕಾರ ಐದು ಸಮಿತಿಗಳನ್ನು ರಚಿಸಿದೆ. ಈ ಮೂಲಕ, ಚುನಾವಣಾ ಪ್ರಣಾಳಿಕೆ ಹಾಗೂ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದ ಪ್ರಮುಖ ಅಂಶವೊಂದನ್ನು ಕಾರ್ಯರೂಪಕ್ಕೆ ತರುವ ದಿಸೆಯಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕನ್ನಡ ಪ್ರಥಮ ಭಾಷೆ, ಕನ್ನಡ ದ್ವಿತೀಯ ಭಾಷೆ, ಕನ್ನಡ ತೃತೀಯ ಭಾಷೆ ಹಾಗೂ ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಲಾಗಿದೆ.

ಈ ಸಮಿತಿಗಳು ಮೂರು ತಿಂಗಳ ಅವಧಿಯಲ್ಲಿ ತಮ್ಮ ಶಿಫಾರಸುಗಳನ್ನು ಸಲ್ಲಿಸಲಿದ್ದು, ಅವುಗಳನ್ನು 2024–25ನೇ ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಶಿಕ್ಷಣ ಇಲಾಖೆ ಹೇಳಿದೆ. ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಪಠ್ಯಪುಸ್ತಕಗಳ ಪರಿಷ್ಕರಣೆ ವಿವಾದಕ್ಕೆ ಕಾರಣವಾಗಿತ್ತು. ಪರಿಷ್ಕೃತ ಪಠ್ಯಭಾಗಗಳ ವಿರುದ್ಧ ವಿವಿಧ ಸಮುದಾಯಗಳು ಧ್ವನಿಯೆತ್ತಿದ್ದವು. ಸಾಹಿತಿಗಳು, ಮಠಾಧೀಶರು ಹಾಗೂ ಶಿಕ್ಷಣ ತಜ್ಞರು ಕೂಡ ತಮ್ಮ ಭಿನ್ನಾಭಿಪ್ರಾಯಗಳನ್ನು ದಾಖಲಿಸಿದ್ದರು. ಪರಿಷ್ಕರಣೆಯ ನೆಪದಲ್ಲಿ ಅವೈಜ್ಞಾನಿಕ, ಅಸಾಂವಿಧಾನಿಕ ಹಾಗೂ ಇತಿಹಾಸದ ವಿಷಯಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವಂತಹ ಸಂಗತಿಗಳನ್ನು ಮಕ್ಕಳ ಪಠ್ಯಗಳಲ್ಲಿ ಸೇರಿಸಲಾಗಿದೆ ಎಂದು ಆಪಾದಿಸಿದ್ದ ಕಾಂಗ್ರೆಸ್‌, ತಾನು ಅಧಿಕಾರಕ್ಕೆ ಬಂದಲ್ಲಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವುದಾಗಿ ಹೇಳಿತ್ತು.

ಆ ಮಾತಿಗೆ ತಕ್ಕಂತೆ ಅಧಿಕಾರಕ್ಕೆ ಬಂದ ನಂತರ, ಪಠ್ಯಪುಸ್ತಕಗಳಲ್ಲಿನ ಕೆಲವು ಭಾಗಗಳಿಗೆ ಬದಲಾವಣೆ ಸೂಚಿಸಿ ತಿದ್ದೋಲೆ ಹೊರಡಿಸಿತ್ತು. ಆ ಸಮಯದಲ್ಲೇ ಪರಿಷ್ಕರಣಾ ಸಮಿತಿ ರಚಿಸುವುದಾಗಿ ಹೇಳಿದ್ದ ಸರ್ಕಾರವು ವಿಳಂಬವಾಗಿಯಾದರೂ ತನ್ನ ಮಾತನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡಿದೆ. ಸಮಿತಿಗಳನ್ನು ನೇಮಿಸಿದ ಮಾತ್ರಕ್ಕೆ ಸರ್ಕಾರದ ಹೊಣೆಗಾರಿಕೆ ಪೂರ್ಣಗೊಳ್ಳುವುದಿಲ್ಲ. ಯಾವುದೇ ಹಸ್ತಕ್ಷೇಪ ಮಾಡದೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅವಕಾಶವನ್ನು ಸಮಿತಿಗಳಿಗೆ ಕಲ್ಪಿಸಿದಾಗಷ್ಟೇ ಗುಣಮಟ್ಟದ ಪಠ್ಯ ರೂಪುಗೊಳ್ಳಲಿಕ್ಕೆ ಸಾಧ್ಯ.

ಮಕ್ಕಳಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವವನ್ನು ರೂಢಿಸಲು ಪೂರಕವಾಗುವ ಹಾಗೂ ಸಂವಿಧಾನದ ಆಶಯಗಳನ್ನು ಪ್ರತಿಫಲಿಸುವ ದಿಸೆಯಲ್ಲಿ ಪಠ್ಯಗಳು ರೂಪುಗೊಳ್ಳಬೇಕು. ಅದೇ ಕಾಲಕ್ಕೆ ಈ ಪಠ್ಯಗಳು ನಾಡು–ನುಡಿಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಪ್ರೀತಿ ಹುಟ್ಟಿಸುವಂತಿರಬೇಕು. ಪಠ್ಯಪುಸ್ತಕಗಳು ಆಡಳಿತ ಪಕ್ಷದ ಮರ್ಜಿಗೆ ತಕ್ಕಂತಿರದೆ, ಮಕ್ಕಳ ಮನೋವಿಕಾಸದ ಸಾಧ್ಯತೆಯನ್ನೇ ಮುಖ್ಯವಾಗಿಟ್ಟುಕೊಂಡಿರಬೇಕು. ಮಕ್ಕಳಲ್ಲಿ ಗೊಂದಲ ಮೂಡಿಸುವಂತಹ ಅಂಶಗಳು ಪಠ್ಯದಲ್ಲಿ ನುಸುಳದಂತೆ ನೋಡಿಕೊಳ್ಳುವುದು ಸಮಿತಿಯ ಕರ್ತವ್ಯ. 

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಒಂದಷ್ಟು ಗೊಂದಲಗಳೂ ಇವೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಹಲವು ಪ್ರತಿನಿಧಿಗಳು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿದ್ದಾರೆ. ಆದರೆ, ಈ ನಿರಾಕರಣೆ ಈವರೆಗೆ ಮಾತಿನ ಮಟ್ಟದಲ್ಲೇ ಇದೆ. ಹಾಗಾಗಿ, 2005ರ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆಸುವುದು ಎಷ್ಟು ಸರಿ ಎನ್ನುವ ಜಿಜ್ಞಾಸೆಯಿದೆ. ಪ್ರಸಕ್ತ ಪಠ್ಯ ಪರಿಷ್ಕರಣೆಗೆ ಮೊದಲು ರಾಜ್ಯ ತನ್ನದೇ ಆದ ಶಿಕ್ಷಣ ನೀತಿಯೊಂದನ್ನು ರೂಪಿಸಬೇಕಿತ್ತು ಎನ್ನುವ ಅಭಿಪ್ರಾಯವಿದೆ.

ಈಗ ಅಗತ್ಯವಿರುವುದು ಪಠ್ಯಗಳ ಪುನರ್‌ ರಚನೆಯೇ ಹೊರತು ಪರಿಷ್ಕರಣೆಯಲ್ಲ ಎನ್ನುವ ಮಾತುಗಳೂ ಇವೆ. ಈ ಅಭಿಪ್ರಾಯಗಳಲ್ಲಿ ಹುರುಳಿಲ್ಲದಿಲ್ಲ. ಆದರೆ, ಹೊಸ ಶಿಕ್ಷಣ ನೀತಿ ರೂ‍ಪಿಸಲಿಕ್ಕೆ ಸಂಬಂಧಿಸಿದ ಆಯೋಗದ ನೇಮಕ, ಶಿಫಾರಸುಗಳು, ಪಠ್ಯಕ್ರಮದ ಕರಡು, ಚರ್ಚೆ, ಇವೆಲ್ಲದರ ನಂತರ ಹೊಸ ಪಠ್ಯಕ್ರಮ ರಚನೆಯಾಗುವುದಕ್ಕೆ ಬಹಳಷ್ಟು ಸಮಯ ಹಿಡಿಯಲಿದೆ. ಅಲ್ಲಿಯವರೆಗೆ ಪಠ್ಯಪುಸ್ತಕಗಳನ್ನು ಯಥಾಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಪ್ರಾಯೋಗಿಕವಲ್ಲ. ಹಾಗಾಗಿ, ಈಗಿನ ಪರಿಷ್ಕರಣೆ ತಾತ್ಕಾಲಿಕವಾದುದಾದರೂ ಅಗತ್ಯವೆಂದು ಭಾವಿಸಬಹುದು. ಸದ್ಯದ ಪರಿಷ್ಕರಣಾ ಸಮಿತಿಗಳು ಸಮಗ್ರ ಪರಿಷ್ಕರಣೆಗೆ ಕೈಹಾಕದೆ, ಪಠ್ಯಗಳಲ್ಲಿನ ಸಾಮಾಜಿಕ, ಶೈಕ್ಷಣಿಕ ಹಾಗೂ ಪ್ರಾದೇಶಿಕ ಅಸಮತೋಲನವನ್ನು ಸರಿ ಮಾಡುವ ಕೆಲಸ ಮಾಡಲಿವೆ ಹಾಗೂ ವಿವಾದ ಉಂಟುಮಾಡುವ ವಿವರಗಳಿದ್ದರೆ ತಿದ್ದಲಿವೆ ಎಂದು ಹೇಳಲಾಗುತ್ತಿದೆ.

ಪರಿಷ್ಕರಣೆಯ ಸ್ವರೂಪ ಯಾವುದೇ ಇರಲಿ, ಹೊಸ ವಿವಾದಗಳಿಗೆ ಆಸ್ಪದ ಕಲ್ಪಿಸದಂತೆ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗೊಂದಲಕ್ಕೀಡು ಮಾಡದಂತೆ ಸಮಿತಿಗಳು ಕಾರ್ಯನಿರ್ವಹಿಸಬೇಕಾಗಿದೆ. ಶಿಕ್ಷಣನೀತಿಯನ್ನು ಬದಲಿಸುವ ಹುಮ್ಮಸ್ಸಿನಲ್ಲಿರುವ ಸರ್ಕಾರ, ತನ್ನ ಉತ್ಸಾಹವನ್ನು ಮಾತುಗಳಿಗೆ ಸೀಮಿತಗೊಳಿಸದೆ, ರಾಜ್ಯ ಶಿಕ್ಷಣನೀತಿಯನ್ನು ರೂಪಿಸುವುದಕ್ಕಾಗಿ ತಜ್ಞರ ಸಮಿತಿಯನ್ನೋ ಅಥವಾ ಆಯೋಗವನ್ನೋ ವಿಳಂಬವಿಲ್ಲದೆ ರಚಿಸಬೇಕಾಗಿದೆ. ಇದು ಮುಂದಕ್ಕೆ ಹೋದಷ್ಟೂ ಗೊಂದಲಗಳು ಹೆಚ್ಚುತ್ತಲೇ ಹೋಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT