ಭಾನುವಾರ, ಜೂಲೈ 12, 2020
23 °C

ಸಂಪಾದಕೀಯ | ಕೋವಿಡ್ ಬಾಧೆಗೆ ಪತಂಜಲಿ ಔಷಧ: ಆತಂಕದ ಲಾಭ ಪಡೆಯುವುದು ಅಕ್ಷಮ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

ಜಗತ್ತಿನ ಎಲ್ಲ ಭಾಗಗಳಿಗೂ ವ್ಯಾಪಿಸಿರುವ ಕೋವಿಡ್‌–19 ಕಾಯಿಲೆ ಇರುವವರು ಸೇವಿಸಿದರೆ, ‘ಶೇಕಡ ನೂರರಷ್ಟು ಒಳ್ಳೆಯ ಫಲಿತಾಂಶ ನೀಡುವ’ ಔಷಧವನ್ನು ತಯಾರಿಸಿರುವುದಾಗಿ ಯೋಗಗುರು ರಾಮದೇವ್‌ ಮತ್ತು ಅವರ ಶಿಷ್ಯ ಆಚಾರ್ಯ ಬಾಲಕೃಷ್ಣ ಘೋಷಿಸಿದ್ದಾರೆ. ಮಾಧ್ಯಮಗಳ ಉಪಸ್ಥಿತಿಯಲ್ಲಿ ಕೊರೊನಿಲ್‌ ಎಂಬ ಹೆಸರಿನ ಔಷಧದ ಕಿಟ್‌ ಅನ್ನು ಅವರು ಅನಾವರಣ ಮಾಡಿದ್ದಾರೆ. ಈ ಇಬ್ಬರ ನೇತೃತ್ವದ ಪತಂಜಲಿ ಸಂಸ್ಥೆಯ ಅಧೀನದಲ್ಲಿರುವ ದಿವ್ಯ ಫಾರ್ಮಸಿಯಲ್ಲಿ ಈ ಔಷಧಗಳು ತಯಾರಾಗಿವೆ ಎಂದು ಹೇಳಲಾಗಿದೆ. ಈ ಔಷಧಗಳನ್ನು ಎಲ್ಲ ರೀತಿಯ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ ಮತ್ತು ಕ್ಲಿನಿಕಲ್‌ ಟ್ರಯಲ್‌ ಕೂಡ ನಡೆದಿದೆ ಎಂದು ರಾಮದೇವ್‌ ಹೇಳಿದ್ದಾರೆ. ಕೊರೊನಾ ವೈರಾಣು ಮತ್ತು ಅದರಿಂದ ಬರುವ ಕೋವಿಡ್‌–19 ಬಗ್ಗೆ ವೈದ್ಯ ಮತ್ತು ವಿಜ್ಞಾನ ಜಗತ್ತಿಗೆ ತಿಳಿದಿಲ್ಲದ ವಿಚಾರಗಳೇ ಹೆಚ್ಚು. ಇದು ಹೊಸ ವೈರಾಣು ಮತ್ತು ರೋಗ. ವ್ಯಕ್ತಿಯಿಂದ ವ್ಯಕ್ತಿಗೆ ತ್ವರಿತವಾಗಿ ಹರಡುವ ಮತ್ತು ವೃದ್ಧರು ಹಾಗೂ ಬೇರೆ ಗಂಭೀರ ರೋಗಗಳು ಇರುವ ಕೆಲವರಿಗೆ ಮಾರಣಾಂತಿಕವೂ ಆಗಬಲ್ಲ ರೋಗ ಇದು. ಔಷಧ ತಯಾರಿಕಾ ಕಂಪನಿಗಳು ಜಗತ್ತಿನ ವಿವಿಧೆಡೆ ಈ ರೋಗಕ್ಕೆ ಲಸಿಕೆ, ಔಷಧ ಅಭಿವೃದ್ಧಿಪಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿವೆ. ಕೆಲವು ಲಸಿಕೆಗಳು ಹಲವು ಪ್ರಯೋಗಗಳನ್ನು ದಾಟಿ, ಕ್ಲಿನಿಕಲ್‌ ಟ್ರಯಲ್‌ ಹಂತಕ್ಕೂ ಬಂದಿವೆ. ಇಂತಹ ಸಂದರ್ಭದಲ್ಲಿ, ಕೋವಿಡ್‌ಗೆ ಔಷಧ ತಯಾರಿಸಿರುವುದಾಗಿ ಪತಂಜಲಿ ಕಂಪನಿಯು ಹೇಳಿಕೊಂಡಿದೆ. ಯಾವುದೇ ಔಷಧವನ್ನು ಬಳಕೆಗೆ ಬಿಡುಗಡೆ ಮಾಡುವ ಮುನ್ನ ವ್ಯಾಪಕ ಮತ್ತು ಕಟ್ಟುನಿಟ್ಟಿನ ಪ್ರಯೋಗ ಮತ್ತು ಪರೀಕ್ಷೆಗಳನ್ನು ನಡೆಸಲೇಬೇಕು. ಇನ್ನೂ ಸರಿಯಾಗಿ ಗೊತ್ತಿಲ್ಲದ ರೋಗವೊಂದಕ್ಕೆ ಮದ್ದನ್ನು ಇನ್ನೂ ಹೆಚ್ಚಿನ ಪ್ರಯೋಗ ಮತ್ತು ಪರೀಕ್ಷೆಗಳಿಗೆ ಒಳಪಡಿಸಬೇಕು. ಕೊರೊನಿಲ್‌ ಎಂಬ ಔಷಧ ಕಿಟ್‌ ಬಗ್ಗೆ ಈ ರೀತಿಯ ಪರೀಕ್ಷೆ ನಡೆಸಲಾಗಿದೆ ಎಂಬುದಕ್ಕೆ ಸೂಕ್ತ ಪುರಾವೆಯನ್ನು ಕಂಪನಿ ನೀಡಿಲ್ಲ. ನೂರು ರೋಗಿಗಳಿಗೆ ಈ ಔಷಧ ನೀಡಿ ಪರೀಕ್ಷಿಸಲಾಗಿದೆ ಎಂದು ಹೇಳಲಾಗಿದೆ. ಈ ಎಲ್ಲರೂ ಯುವಕರು ಮತ್ತು ಬೇರೆ ಯಾವುದೇ ಅನಾರೋಗ್ಯ ಸ್ಥಿತಿ ಇಲ್ಲದವರು ಎಂದೂ ವರದಿಯಾಗಿದೆ. ಹಾಗಾಗಿ, ಪತಂಜಲಿ ನಡೆಸಿರುವ ಪ್ರಯೋಗ ಮತ್ತು ಪರೀಕ್ಷೆಗಳೆರಡೂ ಪರಿಪೂರ್ಣ ಅನ್ನಿಸುವುದಿಲ್ಲ. 

ಈ ಔಷಧ ತಯಾರಿಗೆ ಪರವಾನಗಿ ಪಡೆದು ಕೊಳ್ಳಲಾಗಿದೆ ಎಂಬುದೇ ಅನುಮಾನಾಸ್ಪದ. ‘ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧ ವೊಂದನ್ನು ತಯಾರಿಸಲು ಪತಂಜಲಿ ಕಂಪನಿಗೆ ಜೂನ್‌ 12ರಂದು ಪರವಾನಗಿ ನೀಡಲಾಗಿದೆ. ಈ ಪರವಾನಗಿಯಲ್ಲಿ ಕೋವಿಡ್‌ ಔಷಧದ ಪ್ರಸ್ತಾಪವೇ ಇಲ್ಲ’ ಎಂದು ಉತ್ತರಾಖಂಡ ಸರ್ಕಾರ ಹೇಳಿದೆ. ಈ ಔಷಧದ ‍‍ಪ್ರಾಯೋಗಿಕ ಪರೀಕ್ಷೆಗೆ ಇಂದೋರ್‌ ಜಿಲ್ಲಾಧಿಕಾರಿಯು ಮೇ 22ರಂದು ಅನುಮತಿ ನೀಡಿದ್ದರು. ಆದರೆ, ಅದನ್ನು ಮೇ 24ರಂದು ರದ್ದುಪಡಿಸಲಾಗಿದೆ. ‘ಈ ಔಷಧದ ಬಗ್ಗೆ ನಾವು ಯಾವುದೇ ಜಾಹೀರಾತು ನೀಡಿಲ್ಲ. ಅದರ ಪ್ರಯೋಜನಗಳ ಬಗ್ಗೆ ಜನರಿಗೆ ಮಾಹಿತಿಯನ್ನಷ್ಟೇ ನೀಡಿದ್ದೇವೆ. ಯಾವ ತಪ್ಪನ್ನೂ ಮಾಡಿಲ್ಲ’ ಎಂದು ಬಾಲಕೃಷ್ಣ ಹೇಳಿದ್ದಾರೆ. ಪತಂಜಲಿ ಎಂಬುದು ಒಂದು ಮಟ್ಟಿಗೆ ಜನಪ್ರಿಯವಾಗಿರುವ ಬ್ರ್ಯಾಂಡ್‌. ಈ ಬ್ರ್ಯಾಂಡ್‌ ಬಗ್ಗೆ ವಿಶ್ವಾಸ ಹೊಂದಿರುವ ಜನರಿದ್ದಾರೆ. ಕೊರೊನಿಲ್‌ ಕಿಟ್‌ನಿಂದ ಕೋವಿಡ್‌ ಗುಣ ಆಗುತ್ತದೆ ಎಂದು ಈ ಜನರು ನಂಬಬಹುದು. ‘ಈ ಔಷಧದ ಬಗ್ಗೆ ಜಾಹೀರಾತು ನೀಡಬಾರದು; ಔಷಧದ ವಿವರಗಳನ್ನು ಸಲ್ಲಿಸಬೇಕು’ ಎಂದು ಆಯುಷ್‌ ಸಚಿವಾಲಯವು ಪತಂಜಲಿಗೆ ನೋಟಿಸ್‌ ನೀಡಿದೆ. ಲಸಿಕೆ ಮತ್ತು ಔಷಧ ಇಲ್ಲದ ರೋಗದ ಬಗ್ಗೆ ಜನರಲ್ಲಿ ಆತಂಕ ಇರುತ್ತದೆ. ಅಂತಹ ಸಂದರ್ಭದಲ್ಲಿ, ‘ಔಷಧ’ ಎಂದು ಹೇಳುವ ಯಾವುದನ್ನೇ ಆದರೂ ಜನರು ತೆಗೆದುಕೊಳ್ಳಬಹುದು. ಜನರ ಆತಂಕದ ಲಾಭ ಪಡೆದುಕೊಳ್ಳಲು ಯತ್ನಿಸುವುದು ವಂಚನೆಯಾದೀತು. ಹಾಗಾಗಿ, ಕೊರೊನಿಲ್‌ ವಿಚಾರದಲ್ಲಿ ಸಮಗ್ರವಾದ ತನಿಖೆಯನ್ನು ಸರ್ಕಾರ ನಡೆಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು