ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಚೀತಾ ಯೋಜನೆಯಲ್ಲಿ ಪ್ರತಿಷ್ಠೆಯ ಪ್ರದರ್ಶನ: ಸಿಂಹದ ಸಂರಕ್ಷಣೆಯಲ್ಲಿ ಸಂಕುಚಿತ ಭಾವ'

ಸಂಪಾದಕೀಯ
Last Updated 20 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಚೀತಾ ಸಂತತಿ ಅಳಿದು 75‌ಕ್ಕೂ ಹೆಚ್ಚು ವರ್ಷಗಳಾದ ಬಳಿಕ, ಈ ಪ್ರಾಣಿಯನ್ನು ಮತ್ತೆ ತಂದು ಕಾಡಿಗೆ ಬಿಟ್ಟಿರುವುದರ ಕುರಿತು ಹಲವು ಪ್ರಶ್ನೆಗಳು ಮತ್ತು ಆತಂಕಗಳು ಇವೆ. ನಮೀಬಿಯಾದಿಂದ ತಂದ ಎಂಟು ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟಿದ್ದಾರೆ. ಮುಂದಿನ ವರ್ಷಗಳಲ್ಲಿ ದೇಶದಲ್ಲಿ ಚೀತಾ ಸಂತತಿ ಬೆಳೆಯಬೇಕು ಎಂಬುದು ಇದರ ಉದ್ದೇಶ. ಈ ಚೀತಾಗಳು ದೇಶದ ಅತಿಥಿಗಳು, ಅವುಗಳನ್ನು ಚೆನ್ನಾಗಿ ನೋಡಿಕೊಳ್ಳ ಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂರಕ್ಷಣಾ ಪ್ರಯತ್ನಗಳು ಜೀವವೈವಿಧ್ಯವನ್ನು ಮತ್ತು ಸಮತೋಲನವನ್ನು ಮರುಸ್ಥಾಪಿಸುವುದು ಅಥವಾ ಈ ದಿಸೆಯಲ್ಲಿ ಪ್ರಯತ್ನಿಸುವುದು ಸದಾ ಸ್ವಾಗತಾರ್ಹ. ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ಜೀವಿಗಳಿಗೆ ಸಂಬಂಧಿಸಿ ಇಂತಹ ಪ್ರಯತ್ನಗಳು ನಡೆಯುತ್ತಲೇ ಇವೆ. ಅಮೆರಿಕದ ಯೆಲ್ಲೋಸ್ಟೋನ್‌ ಪಾರ್ಕ್‌ನಲ್ಲಿ ಬೂದು ತೋಳಗಳನ್ನು 1995ರಲ್ಲಿ ಬಿಡಲಾಗಿದೆ. ಇದು, ಯಶಸ್ವೀ ಯೋಜನೆ ಎಂದೇ ಪರಿಗಣಿತವಾಗಿದೆ. ಚೀತಾದ ರೀತಿಯಲ್ಲಿಯೇ ಬೂದು ತೋಳಗಳು ಕೂಡ 20ನೇ ಶತಮಾನದಲ್ಲಿ ಬೇಟೆಯ ಕಾರಣದಿಂದಾಗಿಯೇ ನಿರ್ನಾಮವಾಗಿದ್ದವು.

ವಿವಿಧ ಪ್ರಾಣಿಗಳಿಗೆ ವಿವಿಧ ವಾತಾವರಣಗಳಲ್ಲಿ ಭಿನ್ನವಾದ ಸವಾಲುಗಳು ಇರುತ್ತವೆ. ಭಾರತಕ್ಕೆ ಚೀತಾಗಳನ್ನು ತರುವುದು ಕಾರ್ಯಸಾಧುವೇ ಮತ್ತು ಅದರ ಅಗತ್ಯ ಇದೆಯೇ ಎಂಬ ವಿಚಾರದಲ್ಲಿ ಪರಿಣತರಲ್ಲಿ ಭಿನ್ನ ಅಭಿಪ್ರಾಯಗಳಿವೆ. ಇದು ಕೋಟ್ಯಂತರ ರೂಪಾಯಿ ವೆಚ್ಚವಾಗುವ ಯೋಜನೆ. ಇನ್ನಷ್ಟು ಚೀತಾಗಳನ್ನು ತರುವ ಅಂಶವೂ ಇದರಲ್ಲಿ ಸೇರಿದೆ. ಅಳಿವಿನ ಅಂಚಿನಲ್ಲಿರುವ ಪ್ರಭೇದವೊಂದಕ್ಕೆ ಆವಾಸಸ್ಥಾನ ಕಲ್ಪಿಸಿಕೊಟ್ಟಿರುವುದರಿಂದ ದೇಶವು ಹೆಮ್ಮೆಪಡಬಹುದು. ಈ ಯೋಜನೆಯಿಂದಾಗಿ ಪ್ರವಾಸೋದ್ಯಮ ಅಭಿವೃದ್ಧಿಯೂ ಸೇರಿದಂತೆ ಹಲವು ಅನುಕೂಲಗಳೂ ಇವೆ. ಆದರೆ, ಇದನ್ನು ವಿರೋಧಿಸುವವರು ಪ್ರತಿಪಾದಿಸುವ ವಿಚಾರಗಳು ಗಂಭೀರವೇ ಆಗಿದ್ದು, ಆ ಬಗ್ಗೆ ಗಮನ ಹರಿಸಬೇಕಾದುದು ಬಹಳ ಮುಖ್ಯ. ಕುನೊ ರಾಷ್ಟ್ರೀಯ ಉದ್ಯಾನದ ವಾತಾವರಣವು ಆಫ್ರಿಕಾದ ಚೀತಾಗಳಿಗೆ ಪೂರಕವಲ್ಲ ಎಂದು ತಜ್ಞರಲ್ಲಿ ಕೆಲವರು ಹೇಳಿದ್ದಾರೆ. ಈ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳಿಗೆ ಸಾಕಾಗುವಷ್ಟು ಸ್ಥಳಾವಕಾಶವಾಗಲೀ ಬಲಿಪ್ರಾಣಿ ನೆಲೆಯಾಗಲೀ ಇಲ್ಲ ಎಂದೂ ಹೇಳಲಾಗುತ್ತಿದೆ. ಚಿರತೆಗಳಂತಹ ಇತರ ಪ್ರಾಣಿಗಳ ದಾಳಿಗೆ ಚೀತಾಗಳು ಒಳಗಾಗುವ ಅಪಾಯವೂ ಇದೆ. 40 ವರ್ಷ ಕಳೆದರೂ ಚೀತಾ ಯೋಜನೆಯು ಕಾರ್ಯಸಾಧುವಾಗುವ ಹಂತಕ್ಕೆ ಬರುವುದು ಸಾಧ್ಯವಿಲ್ಲ ಎಂಬ ಪ್ರತಿಪಾದನೆಯೂ ಇದೆ.

ಚೀತಾಗಳನ್ನು ಸಂರಕ್ಷಿಸುವ ಯೋಜನೆಯಲ್ಲಿ ಸಂರಕ್ಷಣೆಗಿಂತ ಪ್ರತಿಷ್ಠೆಯ ಪ್ರದರ್ಶನದ ಹಂಬಲವೇ ಹೆಚ್ಚು ಇದ್ದಂತಿದೆ. ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಮತ್ತು ಸಂರಕ್ಷಣೆಯ ಅಗತ್ಯವಿರುವ ಹಲವು ಪ್ರಭೇದಗಳು ಇವೆ. ಗುಜರಾತ್‌ನ ಗಿರ್‌ ಅರಣ್ಯದಲ್ಲಿ ಮಾತ್ರ ಇರುವ ಏಷ್ಯಾ ಸಿಂಹಗಳಿಗೆ ಇನ್ನಷ್ಟು ಆವಾಸಸ್ಥಾನಗಳನ್ನು ಕಲ್ಪಿಸಿಕೊಡುವ ಜರೂರು ಇದೆ. ಚೀತಾಗಳನ್ನು ತರುವ ಬದಲಿಗೆ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಗಿರ್‌ನಿಂದ ಕೆಲವು ಸಿಂಹಗಳನ್ನು ಒಯ್ದು ಬಿಡಬೇಕಿತ್ತು. ಏಷ್ಯಾ ಸಿಂಹಗಳಿಗೆ ಎರಡನೇ ಆವಾಸ ಅಭಿವೃದ್ಧಿ ಯೋಜನೆಗೆ 1986ರಲ್ಲಿಯೇ ಚಾಲನೆ ನೀಡಲಾಗಿದೆ. ಆದರೆ, ನರೇಂದ್ರ ಮೋದಿ ಅವರೇ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತ್ ಸರ್ಕಾರ ತೋರಿದ ಅಸಹಕಾರದಿಂದಾಗಿಯೇ ಈ ಯೋಜನೆಯ ಅನುಷ್ಠಾನ ಸಾಧ್ಯವಾಗಿಲ್ಲ. ‘ಗುಜರಾತ್‌ನ ಹೆಮ್ಮೆಯಾಗಿರುವ ಸಿಂಹಗಳನ್ನು ಬೇರೆ ರಾಜ್ಯಗಳಿಗೆ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವಿಜಯ್‌ ರೂಪಾಣಿ ಅವರು ಹೇಳಿದ್ದು ವರದಿಯಾಗಿತ್ತು. ಗಿರ್‌ನ ಕೆಲವು ಸಿಂಹಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಒಯ್ದು ಆರು ತಿಂಗಳೊಳಗೆ ಬಿಡಬೇಕು ಎಂದು ಸುಪ್ರೀಂ ಕೋರ್ಟ್‌ 2013ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪಿನ ಪಾಲನೆಯೇ ಆಗಿಲ್ಲ. ಅಳಿವಿನ ಅಂಚಿನಲ್ಲಿರುವ ಪ್ರಾಣಿಯು ಒಂದೇ ಆವಾಸ ಸ್ಥಾನದಲ್ಲಿ ಇರುವುದು ಸರಿಯಲ್ಲ ಎಂದು ವನ್ಯಜೀವಿ ಪ‍ರಿಣತರು ಹೇಳುತ್ತಾರೆ. ಸಾಂಕ್ರಾಮಿಕ ರೋಗಗಳು ಅಥವಾ ಪ್ರಕೃತಿ ವಿಕೋಪದ ಕಾರಣದಿಂದಾಗಿ ಇವು ಅಳಿದುಹೋಗುವ ಅಪಾಯ ಇದೆ. ಈ ಅಂಶವನ್ನು ಸುಪ್ರೀಂ ಕೋರ್ಟ್‌ ಕೂಡ ಒತ್ತಿ ಹೇಳಿತ್ತು. ಇಷ್ಟೆಲ್ಲ ಆದರೂ ಸಿಂಹಗಳನ್ನು ಮಧ್ಯ ಪ‍್ರದೇಶದ ಕಾಡಿಗೆ ಬಿಡಲು ಗುಜರಾತ್ ಸರ್ಕಾರ ಸಿದ್ಧವಿಲ್ಲ. 2020ರಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ‘ಪ್ರಾಜೆಕ್ಟ್‌ ಲಯನ್‌’ನಲ್ಲಿ ಕೂಡ ಸಿಂಹಗಳಿಗೆ ಬೇರೊಂದು ಆವಾಸ ಸ್ಥಾನ ಕಲ್ಪಿಸಿಕೊಡುವ ಪ್ರಸ್ತಾವ ಇಲ್ಲ. ಬದಲಿಗೆ, ಬೇರೆಡೆಗೆ ಅವುಗಳನ್ನು ಕಳುಹಿಸುವುದಿಲ್ಲ ಎಂಬ ಅಂಶಕ್ಕೇ ಒತ್ತು ಕೊಡಲಾಗಿದೆ. ವಿನಾಶದ ಅಂಚಿನಲ್ಲಿರುವ ಸಿಂಹವನ್ನು ರಕ್ಷಿಸಲು ಬೇಕಾದ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡಿಲ್ಲ. ಚೀತಾ ಯೋಜನೆಯಲ್ಲಿ ಪ್ರತಿಷ್ಠೆಯ ಪ್ರದರ್ಶನದ ಪಾಲೇ ಹೆಚ್ಚು ಎಂಬುದಕ್ಕೆ ಇವೆಲ್ಲವೂ ಪುಷ್ಟಿ ಕೊಡುತ್ತವೆ. ಅದೇನೇ ಇರಲಿ, ಚೀತಾ ಸಂತತಿಯನ್ನು ಭಾರತದಲ್ಲಿ ಸಂರಕ್ಷಿಸುವ ಪ್ರಯೋಗ ಆರಂಭವಾಗಿದೆ. ನಿಕಟ ನಿಗಾ ಇರಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಬೇಕಿದೆ. ಹಾಗೆಯೇ, ಸಿಂಹದ ಸಂರಕ್ಷಣೆಯ ಬಗ್ಗೆ ತೋರುತ್ತಿರುವ ಸಂಕುಚಿತ ಮನೋಭಾವವನ್ನು ಕೈಬಿಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT