ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂಬಂಧವು ಸುದೀರ್ಘ ಕಾಲದಿಂದ ಹದಗೆಟ್ಟಿರುವ ಈ ಸಂದರ್ಭದಲ್ಲಿ
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದು ತಂಡವಾಗಿ ಕೆಲಸ ಮಾಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದು ಸ್ವಾಗತಾರ್ಹ. ಬಿಜೆಪಿಯ ಪ್ರತಿಸ್ಪರ್ಧಿ ಪಕ್ಷಗಳ ನೇತೃತ್ವದ ಸರ್ಕಾರ ಇರುವ ರಾಜ್ಯಗಳ ಜೊತೆಗೆ ಈ ಬಿಕ್ಕಟ್ಟು ಎದ್ದು ಕಾಣುವಂತಿದೆ. ಇಂತಹ ಸಂದರ್ಭದಲ್ಲಿ, ನೀತಿ ಆಯೋಗದ ಆಡಳಿತ ಮಂಡಳಿಯ 10ನೇ ಸಭೆಯಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಪ್ರಧಾನಿಯವರು ಆಡಿದ ಮಾತು ಸಮಂಜಸವಾಗಿದೆ. ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಕೇರಳದ ಮುಖ್ಯಮಂತ್ರಿಗಳು ಈ ಸಭೆಗೆ ಹಾಜರಾಗಿಲ್ಲ ಎನ್ನುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ವಿಷಮ ಸಂಬಂಧವನ್ನು ಸೂಚಿಸುತ್ತದೆ. ಭಾರತದ ಅಭಿವೃದ್ಧಿಗೆ ವೇಗ ತುಂಬಲು ಕೇಂದ್ರ ಮತ್ತು ರಾಜ್ಯಗಳು ಜೊತೆಯಾಗಿ
ಪ್ರಯತ್ನಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. 2047ರಲ್ಲಿ ಭಾರತವು ನೂರನೇ ಸ್ವಾತಂತ್ರ್ಯ ದಿನ ಆಚರಿಸುವ ಸಂದರ್ಭಕ್ಕೆ ‘ವಿಕಸಿತ ಭಾರತ’ದ ಗುರಿಯನ್ನು ದೇಶವು ಹಾಕಿಕೊಂಡಿದೆ. ಈ ಗುರಿ ಸಾಧನೆಗೆ ಕೇಂದ್ರ ಮತ್ತು ರಾಜ್ಯಗಳ ಕೊಡುಗೆ ಬೇಕೇ ಬೇಕು.

ದೇಶದ ಅಭಿವೃದ್ಧಿ ಎಂದರೆ ರಾಜ್ಯಗಳ ಅಭಿವೃದ್ಧಿ ಎಂಬ ಮೌಲಿಕ ವಿಚಾರವನ್ನು ಪ್ರಧಾನಿಯವರು ಹೇಳಿದ್ದಾರೆ. ಕೇಂದ್ರದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯಗಳು ಕೇಂದ್ರ ಸರ್ಕಾರದ ಜೊತೆಗೆ ಬಲವಾದ ನಂಟನ್ನು ಹೊಂದಿರಬೇಕು. ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಅನುಪಸ್ಥಿತಿ ಹಾಗೂ ಉಪಸ್ಥಿತರಿದ್ದ ಮುಖ್ಯಮಂತ್ರಿಗಳು ಮುಂದಿಟ್ಟ ಬೇಡಿಕೆಗಳಿಂದ ಕೇಂದ್ರ ಮತ್ತು ರಾಜ್ಯಗಳ ನಡುವಣ ನಂಟು ವಿಷಮ ಸ್ಥಿತಿಗೆ ತಲುಪಿದೆ ಎಂಬ ಅಂಶವು ಪ್ರಧಾನಿಯವರಿಗೆ ಮನದಟ್ಟಾಗಿರಬಹುದು. ಹಾಗಾಗಿಯೇ ಒಂದು ತಂಡವಾಗಿ ಇನ್ನೂ ಹೆಚ್ಚಿನ ಸಹಕಾರದಿಂದ ಕೆಲಸ ಮಾಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ತೆರಿಗೆ ವರಮಾನದಲ್ಲಿ ಹೆಚ್ಚಿನ ಪಾಲು ಬೇಕು ಎಂದು ತಮಿಳುನಾಡು ಮತ್ತು ಜಾರ್ಖಂಡ್ನ ಮುಖ್ಯಮಂತ್ರಿಗಳು ಆಗ್ರಹಿಸಿದ್ದಾರೆ. ರಾಜ್ಯಗಳು ಮತ್ತು ಕೇಂದ್ರದ ನಡುವೆ ಹಣಕಾಸಿನ ಹಂಚಿಕೆಯ ಕುರಿತಾದ ಕಳವಳಗಳನ್ನು ಅವರು ಪುನರುಚ್ಚರಿಸಿದ್ದಾರೆ. ಕೇಂದ್ರದಿಂದ ಹಣಕಾಸಿನ ಹಂಚಿಕೆಯು ಅಭಿವೃದ್ಧಿಯ ಗುರಿ ಸಾಧನೆಗೆ ಅತ್ಯಂತ ನಿರ್ಣಾಯಕವಾದುದು. ಕೇಂದ್ರ ಮತ್ತು ರಾಜ್ಯಗಳ ನಡುವೆ ಇರಬೇಕಾದ ಒಕ್ಕೂಟ ವ್ಯವಸ್ಥೆಯ ಸಂಬಂಧವು ಇತ್ತೀಚಿನ ಕೆಲವು ವರ್ಷಗಳಲ್ಲಿ ತೀರಾ ವಿಷಮ ಸ್ಥಿತಿಗೆ ತಲುಪಿದೆ ಎಂಬ ವಿಸ್ತೃತ ದೃಷ್ಟಿಕೋನ ದಲ್ಲಿಯೂ ಈ ಆಗ್ರಹವನ್ನು ನೋಡಬೇಕು.

ಈ ಅಪನಂಬಿಕೆಯ ಭಾವನೆಯು ಕೇಂದ್ರ ಮತ್ತು ರಾಜ್ಯಗಳ ಮೇಲೆ ಒಂದು ರೀತಿಯ ಮಿತಿಯನ್ನು ಹೇರಿದೆ. ಅಪನಂಬಿಕೆ ಸೃಷ್ಟಿ ಮತ್ತು ಅದು ಉಲ್ಬಣ ಗೊಳ್ಳಲು ಕೇಂದ್ರ ಸರ್ಕಾರವೇ ಕಾರಣ ಎಂದು ಬಿಜೆಪಿಯ ಪ್ರತಿಸ್ಪರ್ಧಿ ಪಕ್ಷಗಳ ನೇತೃತ್ವದ ಸರ್ಕಾರಗಳು ಹೇಳುತ್ತಿವೆ. ರಾಜ್ಯಪಾಲರ ಪ್ರತಿಕೂಲ ನಡವಳಿಕೆ, ಕೇಂದ್ರದ ಯೋಜನೆಗಳ ಹೇರಿಕೆ, ನಿಧಿ ಬಿಡುಗಡೆ ಮಾಡದಿರುವುದು, ಪ್ರತಿಸ್ಪರ್ಧಿ ಪಕ್ಷಗಳ ನೇತೃತ್ವದ ಸರ್ಕಾರಗಳು ಮತ್ತು ರಾಜಕಾರಣಿಗಳ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆಯಂತಹ ಕ್ರಮಗಳು ಒಕ್ಕೂಟ ಸಂಬಂಧವನ್ನು ತೀವ್ರವಾಗಿ ಹಾಳುಗೆಡವಿವೆ. ತಮ್ಮನ್ನು ತಾರತಮ್ಯದಿಂದ ನೋಡಲಾಗುತ್ತಿದೆ ಮತ್ತು ಕೇಂದ್ರವು ತಮಗೆ ಪ್ರತಿಕೂಲವಾಗಿದೆ ಎಂಬ ಭಾವನೆ ಕೆಲವು ರಾಜ್ಯಗಳಲ್ಲಿ ಇದೆ. ಕೇಂದ್ರ ಸರ್ಕಾರವು ವೈವಿಧ್ಯ ಮತ್ತು ಬಹುತ್ವವನ್ನು ಗೌರವಿಸುತ್ತಿಲ್ಲ ಹಾಗೂ ಇಡೀ ದೇಶದ ಮೇಲೆ ಏಕರೂಪತೆಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂಬ ಭಾವನೆಯೂ ಇದೆ. ರಾಜ್ಯಗಳು ಪರಸ್ಪರ ಮತ್ತು ಕೇಂದ್ರದ ಜೊತೆ ಮುಖಾಮುಖಿ ಆಗಬಹುದಾದ ವೇದಿಕೆಗಳ ಸಂಖ್ಯೆ ಹೆಚ್ಚಿಲ್ಲ. ಅಂತಹ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕಾದ ಅಗತ್ಯ ಇದೆ. ಅಭಿವೃದ್ಧಿಗಾಗಿ ರಾಜ್ಯಗಳು ಮತ್ತು ಕೇಂದ್ರ ಒಂದು ತಂಡವಾಗಿ ಕೆಲಸ ಮಾಡಬೇಕು ಎಂದು ಹೇಳುವಾಗ ಪ್ರಧಾನಿಯವರು ರಾಜ್ಯಗಳು ಎತ್ತಿರುವ ಕಳವಳಗಳ ನಿವಾರಣೆಗೂ ಪೂರಕವಾಗಿ ಸ್ಪಂದಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.