ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ; ಪುನಶ್ಚೇತನಕ್ಕೆ ಒಂದು ಅವಕಾಶ

Published : 24 ಸೆಪ್ಟೆಂಬರ್ 2024, 21:52 IST
Last Updated : 24 ಸೆಪ್ಟೆಂಬರ್ 2024, 21:52 IST
ಫಾಲೋ ಮಾಡಿ
Comments

ಜನತಾ ವಿಮುಕ್ತಿ ಪೆರುಮುನ (ಜೆವಿಪಿ) ನೇತೃತ್ವದ ನ್ಯಾಷನಲ್‌ ಪೀಪಲ್ಸ್‌ ಪವರ್‌ ಮೈತ್ರಿಕೂಟದ ನಾಯಕ ಅನುರಾ ಕುಮಾರ ದಿಸ್ಸನಾಯಕೆ ಅವರು ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಅನಿರೀಕ್ಷಿತವೇನೂ ಅಲ್ಲ. ಎ.ಕೆ.ಡಿ. ಎಂದೇ ಜನಪ್ರಿಯರಾಗಿರುವ ಅನುರಾ ಅವರು ‘ವ್ಯವಸ್ಥೆ ಬದಲಾವಣೆ’ಗಾಗಿ ತಮ್ಮನ್ನು ಆಯ್ಕೆ ಮಾಡಿ ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮನವಿ ಮಾಡಿದ್ದರು. ರಾಜಪಕ್ಸ ಸಹೋದರರಾದ ಅಂದಿನ ಅಧ್ಯಕ್ಷ ಗೊಟಬಯ ಮತ್ತು ಅಂದಿನ ಪ್ರಧಾನಿ ಮಹಿಂದಾ ಅವರು ಆರ್ಥಿಕತೆಯನ್ನು ಹಾಳುಗೆಡವಿದ್ದರ ವಿರುದ್ಧ 2022ರಲ್ಲಿ ನಡೆದ ದಂಗೆಯ ಸಂದರ್ಭದಲ್ಲಿಯೇ ‘ವ್ಯವಸ್ಥೆ ಬದಲಾವಣೆ’ಯ ಕಹಳೆ ಮೊಳಗಿತ್ತು. ಈ ಇಬ್ಬರ ಉಚ್ಚಾಟನೆಯ ಬಳಿಕ, ನಾಯಕತ್ವದಲ್ಲಿ ನಿಜವಾದ ಬದಲಾವಣೆ ಆಗಬೇಕು ಎಂದು ಜನರು ಬಯಸಿದ್ದರು. ನಿರ್ಗಮಿತ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಅವರು ಜನರು ಬಯಸಿದ್ದ ಬದಲಾವಣೆಯನ್ನು ಪ್ರತಿನಿಧಿಸುತ್ತಿರಲಿಲ್ಲ. ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದ್ದ ಶ್ರೀಲಂಕಾಕ್ಕೆ 290 ಕೋಟಿ ಡಾಲರ್‌ ಸಾಲ ನೀಡುವಾಗ ಐ.ಎಂ.ಎಫ್‌. ವಿಧಿಸಿದ್ದ ಕಠಿಣ ಷರತ್ತುಗಳ ಹೊರೆಯನ್ನು ಇಳಿಸುವುದಾಗಿ ಅನುರಾ ಅವರು ಜನರಿಗೆ ಭರವಸೆ ಕೊಟ್ಟಿದ್ದಾರೆ. ಈ ಸಾಲದ ಹೊರೆಯು ಜನರ ಆರ್ಥಿಕ ಮುಗ್ಗಟ್ಟನ್ನು ಇನ್ನಷ್ಟು ಹೆಚ್ಚಿಸಿದೆ. ಈಗ, ಅನುರಾ ಅವರು ತಮ್ಮ ಭರವಸೆಯನ್ನು ಈಡೇರಿಸಬೇಕಾಗಿದೆ. 225 ಸದಸ್ಯ ಬಲದ ಸಂಸತ್ತನ್ನು ವಿಸರ್ಜಿಸುವುದು ಅವರ ಮುಂದಿನ ಹೆಜ್ಜೆ ಆಗಿರಬಹುದು. ಸಂಸತ್ತಿನಲ್ಲಿ ಈಗ ಜೆವಿಪಿ ಹೊಂದಿರುವುದು ಮೂವರು ಸದಸ್ಯರನ್ನು ಮಾತ್ರ. ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಅನುರಾ ಅವರು ಅರ್ಥ ವ್ಯವಸ್ಥೆಯನ್ನು ಸರಿಪಡಿಸುವ ಸ್ಪಷ್ಟ ಯೋಜನೆಯನ್ನು ಜನರ ಮುಂದೆ ಇರಿಸಿರಲಿಲ್ಲ. ಹೆಚ್ಚು ವ್ಯಾವಹಾರಿಕ ರಾಜಕಾರಣಿಯಂತೆ ಅವರು ಕಾಣಿಸುತ್ತಿದ್ದಾರೆ; ಜೆವಿಪಿಯ ಕ್ರಾಂತಿಕಾರಿ ಎಡಪಂಥೀಯ ನಿಲುವು ಮತ್ತು ಪಕ್ಷದ ಸಿಂಹಳೀಯ ಅಸ್ಮಿತೆ ಈ ಎರಡನ್ನೂ ಅವರು ಬದಿಗೆ ಸರಿಸಬಹುದು. 

ಜೆವಿಪಿಗೆ ಭಾರತ ವಿರೋಧಿ ನಿಲುವಿನ ಇತಿಹಾಸವೇ ಇದೆ. ಜೊತೆಗೆ ಪಕ್ಷವು ಚೀನಾ ಪರ ವಾಲಿಕೊಂಡಿದೆ. ಈ ಎರಡೂ ಅಂಶಗಳನ್ನು ಜೆವಿಪಿ ಎಂದೂ ಅಡಗಿಸಿಟ್ಟಿಲ್ಲ. ಹಾಗಾಗಿ ಅನುರಾ ಅವರ ಆಯ್ಕೆಯು ಭಾರತದಲ್ಲಿ ಕಳವಳ ಮೂಡಿಸಬಹುದು. ಆದರೆ, ಅನುರಾ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ ನೀಡಿದ ಹಲವು ಸಂದರ್ಶನಗಳಲ್ಲಿ, ದಕ್ಷಿಣ ಏಷ್ಯಾದ ಅತ್ಯಂತ ದೊಡ್ಡ ಅರ್ಥ ವ್ಯವಸ್ಥೆ ಮತ್ತು ಅತೀ ಹತ್ತಿರದ ನೆರೆ ದೇಶವಾದ ಭಾರತವು ಶ್ರೀಲಂಕಾಕ್ಕೆ ಎಷ್ಟು ಮುಖ್ಯ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಶ್ರೀಲಂಕಾಕ್ಕೆ ಭಾರತದ ಜೊತೆಗೆ ಭೌಗೋಳಿಕವಾಗಿ ಅಥವಾ ರಾಜಕೀಯವಾಗಿ ಯಾವುದೇ ತಗಾದೆ ಇಲ್ಲ ಎಂದೂ ಅವರು ಹೇಳಿದ್ದಾರೆ. ಆರ್ಥಿಕವಾಗಿ ಅವಲಂಬಿತವಾಗಿರುವ ಚೀನಾದ ಜೊತೆಗಿನ ಜೆವಿಪಿಯ ಸಂಬಂಧವನ್ನು ಅನುರಾ ಹೇಗೆ ನಿರ್ವಹಿಸಲಿದ್ದಾರೆ ಎಂಬುದರ ಮೇಲೆ ಅವರ ಬಗೆಗಿನ ಭಾರತದ ಗ್ರಹಿಕೆಯು ರೂಪುಗೊಳ್ಳಲಿದೆ. ಜೊತೆಗೆ ಭಾರತದ ಭದ್ರತಾ ಲೆಕ್ಕಾಚಾರವೂ ಅದನ್ನು ಆಧರಿಸಿದೆ. ಅನುರಾ ಅವರ ಆಯ್ಕೆ ಆಗುತ್ತಿದ್ದಂತೆಯೇ ಭಾರತವು ಅವರನ್ನು ಸಂಪರ್ಕಿಸಿ ಶುಭ ಹಾರೈಸಿದೆ. ಈ ವರ್ಷದ ಮಾರ್ಚ್‌ನಲ್ಲಿ ಅನುರಾ ಅವರೂ ಭಾರತಕ್ಕೆ ಬಂದಿದ್ದರು. ಹಾಗಾಗಿ, ಅವರ ಜೊತೆಗೆ ಒಂದು ರೀತಿಯ ಸೌಹಾರ್ದ ಸಂಬಂಧ ಈಗಾಗಲೇ ಸ್ಥಾಪಿತವಾಗಿದೆ. 

ಶ್ರೀಲಂಕಾದಲ್ಲಿರುವ ತಮಿಳರ ಹಕ್ಕುಗಳ ಕುರಿತ ಪ್ರಶ್ನೆಯು ತೆರೆಮರೆಗೆ ಸರಿದು ಬಹಳ ಕಾಲವೇ ಆಗಿದೆ. ಅದರ ಬದಲಿಗೆ, ದ್ವೀಪರಾಷ್ಟ್ರದ ಮೇಲೆ ಚೀನಾದ ಪ್ರಭಾವವು ಭಾರತಕ್ಕೆ ಹೆಚ್ಚು ಚಿಂತೆಯ ವಿಷಯವಾಗಿದೆ. ಹೊಸ ಸಂವಿಧಾನ ರಚಿಸುವ ಇಂಗಿತವನ್ನು ಅನುರಾ ವ್ಯಕ್ತಪಡಿಸಿದ್ದಾರೆ. ಈ ವಿಚಾರವು ಭಾರತಕ್ಕೆ ಹೆಚ್ಚು ಕಳವಳ ಮೂಡಿಸಬಹುದು. ಶ್ರೀಲಂಕಾದ ಸಂವಿಧಾನಕ್ಕೆ ಭಾರತದ ಒತ್ತಾಸೆ ಮೇರೆಗೆ 1987ರಲ್ಲಿ 13ನೇ ತಿದ್ದುಪಡಿ ಮಾಡಲಾಗಿತ್ತು. ಈ ತಿದ್ದುಪಡಿಯನ್ನು ರದ್ದು ಮಾಡಬೇಕು ಎಂಬ ಬೇಡಿಕೆ ಜೆವಿಪಿ ಸೇರಿ ಹಲವು ವರ್ಗಗಳಿಂದ ಬಂದಿದೆ. ಸಂವಿಧಾನ ಬದಲಾವಣೆಯು ಶ್ರೀಲಂಕಾದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಬಹುದು. ತಮಿಳು ಭಾಷಿಕರ ಜೊತೆಗೆ ಅಧಿಕಾರ ಹಂಚಿಕೆಗೆ ಇರುವ ಏಕೈಕ ಮಾರ್ಗ ಇದಾಗಿದೆ. ಸಂವಿಧಾನದಲ್ಲಿಯೇ ಈ ವಿಚಾರ ಇದ್ದರೂ ಅದನ್ನು ಪೂರ್ಣವಾಗಿ ಜಾರಿಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ತಮಿಳು ಭಾಷಿಕರಿಗೆ ಸಂಬಂಧಿಸಿದ ಈ ವಿಚಾರದಲ್ಲಿ ಆಗುವ ಯಾವುದೇ ಬದಲಾವಣೆಯು ತಮಿಳು ‍ಪ್ರಶ್ನೆಯನ್ನು ಮುನ್ನೆಲೆಗೆ ತರುತ್ತದೆ; ಭಾರತದ ಜೊತೆಗಿನ ಸಂಬಂಧದ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಶ್ರೀಲಂಕಾದ ಜನರು ಅನುರಾ ಅವರನ್ನು ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಜನರ ಆಯ್ಕೆಯನ್ನು ಭಾರತವು ಗೌರವಿಸಲೇಬೇಕು. ಚಾರಿತ್ರಿಕವಾದ ಈಗಿನ ಪಲ್ಲಟವು ಅತ್ಯಂತ ಶಾಂತಿಯುತ ರೀತಿಯಲ್ಲಿಯೇ ನಡೆದಿದೆ ಎಂಬುದೂ ಗಮನಾರ್ಹ. ಭಾರತ–ಶ್ರೀಲಂಕಾ ಸಂಬಂಧದಲ್ಲಿ ಏರುಪೇರುಗಳು ಕಾಣಿಸಿಕೊಳ್ಳಬಹುದು. ಆದರೆ, ಪರಿಸ್ಥಿತಿಯು ವಿಷಮಗೊಳ್ಳದಂತೆ ರಾಜತಾಂತ್ರಿಕ ದಾರಿಯ ಮೂಲಕ ನೋಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT