ಜಾರಿ ನಿರ್ದೇಶನಾಲಯವು (ಇ.ಡಿ) ತಮಿಳುನಾಡಿನಲ್ಲಿ ಕೈಗೊಂಡ ಕೆಲವು ಕ್ರಮಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ಆಡಿರುವ ಟೀಕೆಯ ಮಾತುಗಳು, ಇ.ಡಿ.ಯ ಮೇಲೆ ನೇರವಾಗಿ ತಪ್ಪು ಹೊರಿಸಿದಂತೆ ಇವೆ. ಆ ಮಾತುಗಳನ್ನು ಒಂದು ಎಚ್ಚರಿಕೆ ಎಂದೂ ಪರಿಗಣಿಸಬಹುದು. ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದಲ್ಲಿ (ಟಾಸ್ಮಾಕ್) ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ಇ.ಡಿ ನಡೆಸುತ್ತಿದ್ದ ತನಿಖೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಇ.ಡಿ ಕ್ರಮಗಳ ಬಗ್ಗೆ ಗಂಭೀರ ಕಳವಳವನ್ನೂ ಕೋರ್ಟ್ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠ, ಮೂಲ ಅಪರಾಧದಲ್ಲಿ ಟಾಸ್ಮಾಕ್ ಭಾಗಿಯಾಗದೆ ಇದ್ದರೂ ಮಾರ್ಚ್ 6ರಿಂದ 8ನೆಯ ತಾರೀಕಿನ ನಡುವೆ ಇ.ಡಿ ಅಧಿಕಾರಿಗಳು ಚೆನ್ನೈನಲ್ಲಿರುವ ಟಾಸ್ಮಾಕ್ ಕಚೇರಿಯಲ್ಲಿ ಬಲವಂತದಿಂದ ಶೋಧ ಕಾರ್ಯಾಚರಣೆ ಹಾಗೂ ಮುಟ್ಟುಗೋಲು ಪ್ರಕ್ರಿಯೆಗಳನ್ನು ನಡೆಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಅಕ್ರಮ ವರ್ಗಾವಣೆಗೆ ಬಳಸಲಾದ ಹಣವನ್ನು ಸೃಷ್ಟಿಸಿಕೊಡುವ ಅಪರಾಧವನ್ನು ‘ಮೂಲ ಅಪರಾಧ’ ಎಂದು ಗುರುತಿಸಲಾಗುತ್ತದೆ. ಭ್ರಷ್ಟಾಚಾರ, ಟೆಂಡರ್ನಲ್ಲಿ ಕಾನೂನಿನ ಉಲ್ಲಂಘನೆ ಹಾಗೂ ಮದ್ಯದ ಬಾಟಲಿಗಳ ಮೇಲೆ ಬೆಲೆಯನ್ನು ಹೆಚ್ಚಿನ ಮಟ್ಟದಲ್ಲಿ ನಮೂದಿಸಿದ್ದರ ಬಗ್ಗೆ ತಮಿಳುನಾಡು ಸರ್ಕಾರವೇ ಪ್ರಕರಣ ದಾಖಲು ಮಾಡಿದೆ. ರಾಜ್ಯ ಸರ್ಕಾರವು ಅದಾಗಲೇ ತನಿಖೆ ನಡೆಸುತ್ತಿದ್ದರೂ ಇ.ಡಿ ಅಲ್ಲಿ ಮಧ್ಯಪ್ರವೇಶ ಮಾಡಿದ್ದು ಏಕೆ ಎಂದು ಕೇಳಿರುವ ಪೀಠ, ಇ.ಡಿ ತನ್ನ ಎಲ್ಲ ಮಿತಿಗಳನ್ನೂ ಮೀರುತ್ತಿದೆ ಎಂದು ಹೇಳಿದೆ. ಕ್ರಿಮಿನಲ್ ವಿಚಾರದಲ್ಲಿ ನಿಗಮವೊಂದರ ವಿರುದ್ಧ ಪ್ರಕರಣ ದಾಖಲು ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನೂ ಕೋರ್ಟ್ ಕೇಳಿದೆ. ಇ.ಡಿಯನ್ನು ಉದ್ದೇಶಿಸಿ ಕೋರ್ಟ್ ‘ನೀವು ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದೀರಿ’ ಎಂದು ಖಾರವಾಗಿ ಹೇಳಿದೆ. ಇ.ಡಿ ನಡೆಸಿದ ಶೋಧವನ್ನು ಪ್ರಶ್ನಿಸಿ ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರ ಹಾಗೂ ಟಾಸ್ಮಾಕ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಈ ಮಾತುಗಳನ್ನು ಹೇಳಿದೆ.

ನ್ಯಾಯಾಲಯವು ಈ ಹಿಂದೆಯೂ ಕೆಲವು ಪ್ರಕರಣ ಗಳಲ್ಲಿ ಇ.ಡಿ ನಡೆಯನ್ನು ಟೀಕಿಸಿದೆ. ಕೇಂದ್ರ ಸರ್ಕಾರದ ಈ ಏಜೆನ್ಸಿಯು ಆಧಾರ ಇಲ್ಲದೆ ಆರೋಪಗಳನ್ನು ಹೊರಿಸುವುದು ಒಂದು ಪದ್ಧತಿಯಂತೆ ಆಗಿಬಿಟ್ಟಿದೆ ಎಂದು ಕೋರ್ಟ್ ಹೇಳಿತ್ತು. ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಈ ಮಾತನ್ನು ಅದು ಹೇಳಿತ್ತು. ಜಾರಿ ನಿರ್ದೇಶನಾಲಯವು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯನ್ನು ಜನರಿಗೆ ಕಿರುಕುಳ ನೀಡಲು, ಆರೋಪಿಗಳನ್ನು ಜೈಲಿನಲ್ಲಿ ಇರಿಸಲು ಬಳಸಿಕೊಳ್ಳುತ್ತಿದೆ, ಏಜೆನ್ಸಿಯು ಅತಿಯಾಗಿ ವರ್ತಿಸುತ್ತಿದೆ, ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ ಎಂದು ಕೂಡ ಕೋರ್ಟ್ ಹೇಳಿತ್ತು.

ಬಿಜೆಪಿಯನ್ನು ರಾಜಕೀಯವಾಗಿ ವಿರೋಧಿಸುವ ಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜ್ಯಗಳಲ್ಲಿನ ಸಂಸ್ಥೆಗಳನ್ನು ಗುರಿಯಾಗಿಸಲು, ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ನಾಯಕರನ್ನು ಗುರಿಯಾಗಿಸಲು ಇ.ಡಿ ಹೊಂದಿರುವ ಉತ್ಸಾಹಕ್ಕೆ ಟಾಸ್ಮಾಕ್ ಪ್ರಕರಣ ಇನ್ನೊಂದು ನಿದರ್ಶನವಾಗಿ ಕಾಣುತ್ತಿದೆ. ನ್ಯಾಯಾಲಯ ಆಡಿರುವ ಮಾತುಗಳನ್ನು ಈ ನೆಲೆಯಲ್ಲಿಯೇ ಅರ್ಥ ಮಾಡಿಕೊಳ್ಳಬೇಕು. ಕೇಂದ್ರದಲ್ಲಿ ಬಿಜೆಪಿಯು ಆಡಳಿತದ ಚುಕ್ಕಾಣಿ ಹಿಡಿದ 2014ರ ನಂತರದಲ್ಲಿ, ಇ.ಡಿ.ಯು ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸುವುದು ಹಲವು ಪಟ್ಟು ಹೆಚ್ಚಾಗಿದೆ. ಬಿಜೆಪಿ ಯನ್ನು ವಿರೋಧಿಸುವ ರಾಜಕೀಯ ಮುಖಂಡರನ್ನು ಕಿರುಕುಳಕ್ಕೆ ಗುರಿಪಡಿಸಲು ಇರುವ ಅಸ್ತ್ರಗಳಾಗಿ ಇ.ಡಿ ಮತ್ತು ಸಿಬಿಐ ಪರಿವರ್ತನೆ ಕಂಡಿವೆ. ಇ.ಡಿ ತನಿಖೆಯನ್ನು ಎದುರಿಸಿದ ಹಲವರು ಬಿಜೆಪಿ ಸೇರಿದ ನಂತರದಲ್ಲಿ ತನಿಖೆಯ ಬಿಸಿಯಿಂದ ಪಾರಾಗಿರುವುದೂ ಇದೆ. ಇ.ಡಿ ದಾಖಲಿಸುವ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವು ಬಹಳ ಕಡಿಮೆ ಇದೆ. 2023ರ ಜನವರಿವರೆಗೆ ಇ.ಡಿ ದಾಖಲಿಸಿದ 5,906 ಪ್ರಕರಣಗಳ ಪೈಕಿ 25ರಲ್ಲಿ ಮಾತ್ರ ಶಿಕ್ಷೆ ಆಗಿದೆ. ಅಂದರೆ, ಬಹುತೇಕ ಪ್ರಕರಣಗಳನ್ನು ದಾಖಲು ಮಾಡಿದ್ದು ಕಿರುಕುಳ ನೀಡುವ ಉದ್ದೇಶದಿಂದ ಎಂಬುದು ಗೊತ್ತಾಗುತ್ತದೆ. ಸರ್ಕಾರದ ಸಂಸ್ಥೆಗಳನ್ನು ಪ್ರಜೆಗಳಿಗೆ ಕಿರುಕುಳ ನೀಡುವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದು ಪ್ರಜಾಸತ್ತಾತ್ಮಕ ನಡೆ ಅಲ್ಲ. ಇಂತಹ ಏಜೆನ್ಸಿಗಳನ್ನು ರಾಜಕೀಯ ವಿರೋಧಿಗಳ ನೇತೃತ್ವದ ಸರ್ಕಾರಗಳ ವಿರುದ್ಧ ಬಳಕೆ ಮಾಡುವುದು ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಒಡ್ಡಿದಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.