ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಹುವಾಗಿ ಕಾಡಿದ ನಿರುದ್ಯೋಗದ ವಿಷಯ ಹಾಗೂ ಚುನಾವಣೆ ಹೊರಹೊಮ್ಮಿಸಿದ ಫಲಿತಾಂಶ– ಈ ಎರಡೂ ಸಂಗತಿಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ 2024–25ನೇ ಸಾಲಿನ ಬಜೆಟ್ ಮೇಲೆ ಗಾಢ ಪರಿಣಾಮ ಬೀರಿದಂತಿವೆ. ಲೋಕಸಭೆ ಚುನಾವಣಾ ಪ್ರಚಾರದ ಉದ್ದಕ್ಕೂ ನಿರುದ್ಯೋಗದ ಸಮಸ್ಯೆ ಬಹು ಆಯಾಮದಲ್ಲಿ ಚರ್ಚೆಗೆ ಒಳಪಟ್ಟಿತ್ತು. ಈಗಿನ ಎನ್ಡಿಎ ನೇತೃತ್ವದ ಸರ್ಕಾರವನ್ನು ಮುನ್ನಡೆಸುತ್ತಿರುವ ಬಿಜೆಪಿ ನೇತಾರರು, ದೇಶದಲ್ಲಿ ನಿರುದ್ಯೋಗದ ಸಮಸ್ಯೆಯೇ ಇಲ್ಲ ಎಂದು ಆಗ ಬಲವಾಗಿ ಪ್ರತಿಪಾದಿಸಿದ್ದರು. ಈಗ ಉದ್ಯೋಗ ಸೃಷ್ಟಿಗೆ ಬಜೆಟ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ತೇಜಕ ಕ್ರಮಗಳನ್ನು ಘೋಷಿಸುವಂತೆ ನೋಡಿಕೊಳ್ಳುವ ಮೂಲಕ ದೇಶದಲ್ಲಿ ನಿರುದ್ಯೋಗ ಸಮಸ್ಯೆ ವ್ಯಾಪಕವಾಗಿದೆ ಎಂಬುದನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಚುನಾವಣೆಯಲ್ಲಿ ತಮ್ಮ ಪಕ್ಷ ಅನುಭವಿಸಿದ ಹಿನ್ನಡೆಗೆ ಕಾರಣ ಹುಡುಕುವ ಪ್ರಯತ್ನವನ್ನೂ ವಿತ್ತ ಸಚಿವರು ಮಾಡಿದ್ದಾರೆ. ಯುವಸಮೂಹವು ಬಿಜೆಪಿಯಿಂದ ದೂರ ಸರಿಯುತ್ತಿರುವುದನ್ನು ತಡೆಯುವ ಭಾಗವಾಗಿಯೇ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಂತಹ ಯೋಜನೆಗಳಿಗೆ ಅವರು ಮಣೆ ಹಾಕಿದ್ದಾರೆ. ಲೋಕಸಭೆಯಲ್ಲಿ ಬದಲಾದ ರಾಜಕೀಯ ಚಿತ್ರಣದ ಪ್ರಭಾವ ಕೂಡ ಬಜೆಟ್ನಲ್ಲಿ ದಟ್ಟವಾಗಿದೆ. ಎನ್ಡಿಎ ನೇತೃತ್ವದ ಈಗಿನ ಸರ್ಕಾರವು ಟಿಡಿಪಿ ಹಾಗೂ ಜೆಡಿಯು ಮರ್ಜಿಗೆ ಒಳಪಟ್ಟಿದೆ. ಹೀಗಾಗಿ, ಈ ಎರಡೂ ಪಕ್ಷಗಳ ತವರು ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಅಗ್ರತಾಂಬೂಲ ದೊರೆತಿದೆ. ‘ಇದೊಂದು ಕುರ್ಚಿ ಉಳಿಸಿಕೊಳ್ಳುವ ಬಜೆಟ್’ ಎಂಬ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಟೀಕೆ ಸಕಾರಣದಿಂದ ಕೂಡಿದೆ ಎಂಬ ಅಭಿಪ್ರಾಯ ಮೂಡಿಸುವಂತಿದೆ ಈ ಎರಡೂ ರಾಜ್ಯಗಳಿಗೆ ಸಿಕ್ಕಿರುವ ಪ್ರಾಧಾನ್ಯ. ನಿರ್ಮಲಾ ಅವರು ಬಜೆಟ್ನ 165 ಪ್ಯಾರಾಗಳ ಪೈಕಿ 12 ಪ್ಯಾರಾಗಳನ್ನು ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ನೀಡಿರುವ ಕೊಡುಗೆಗಳ ಕುರಿತು ವಿವರಿಸಲು ಮೀಸಲಿಟ್ಟಿದ್ದಾರೆ. ಈ ಎರಡೂ ರಾಜ್ಯಗಳಲ್ಲದೆ ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ ಒಳಗೊಂಡ ದೇಶದ ಪೂರ್ವಭಾಗದ ಸಮಗ್ರ ಅಭಿವೃದ್ಧಿ ಕಡೆಗೆ ಸರ್ಕಾರದ ಚಿತ್ತ ಹರಿದಿದೆ. ಆಂಧ್ರಪ್ರದೇಶವನ್ನು ಹೊರತುಪಡಿಸಿ ಕರ್ನಾಟಕ ಸೇರಿದಂತೆ ದಕ್ಷಿಣದ ಬೇರೆ ಯಾವ ರಾಜ್ಯವೂ ವಿತ್ತ ಸಚಿವರ ಕಣ್ಣಿಗೆ ಬಿದ್ದಿಲ್ಲ. ಇನ್ನೇನು ಚುನಾವಣೆಗೆ ಹೋಗಲಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳೂ ಕಡೆಗಣನೆಗೆ ಒಳಗಾಗಿರುವುದು ಆಶ್ಚರ್ಯದ ಸಂಗತಿ. ಮಹಾರಾಷ್ಟ್ರದ ಕಡೆಗಿನ ಕೇಂದ್ರದ ಈ ಉದಾಸೀನ ನಿಗೂಢವಾಗಿದೆ. ಅಲ್ಲಿನ ವಿಧಾನಸಭೆಯ ಚುನಾವಣಾ ಗಾಳಿ ಎತ್ತ ಬೀಸುತ್ತಿದೆ ಎಂಬುದನ್ನು ಗ್ರಹಿಸಿಯೇ ಈ ಅಲಕ್ಷ್ಯ ಮಾಡಿರಬಹುದು ಎಂಬ ಶಂಕೆ ಮೂಡದಿರದು. ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿ ಕಳೆದುಕೊಂಡ ನೆಲೆಯನ್ನು ಪೂರ್ವದ ರಾಜ್ಯಗಳಲ್ಲಿ ಹೊಸ ನೆಲೆ ಸೃಷ್ಟಿಸುವ ಮೂಲಕ ಸರಿದೂಗಿಸುವ ರಾಜಕೀಯ ದೂರಾಲೋಚನೆ ಇಲ್ಲಿ ಕೆಲಸ ಮಾಡಿದಂತಿದೆ.

ಬಡವರು, ಮಹಿಳೆಯರು, ಯುವಜನ ಮತ್ತು ರೈತರ ಜಪ ಮಾಡುತ್ತಲೇ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಶಕ್ತಿ ತುಂಬುವ ಮಾತುಗಳನ್ನೂ ಬಜೆಟ್ನಲ್ಲಿ ಆಡಲಾಗಿದೆ. ಕೃಷಿ ಮತ್ತು ಕೈಗಾರಿಕೆಗೆ ಸಮಾನ ಪ್ರಾಶಸ್ತ್ಯ ನೀಡುವ ಆಶಯ ಬಜೆಟ್ನಲ್ಲಿ ವ್ಯಕ್ತವಾಗಿದೆ. ಒಟ್ಟು ದೇಶಿ ಉತ್ಪಾದನೆಯಲ್ಲಿ ಶೇ 45ರಷ್ಟು ಕೊಡುಗೆ ನೀಡುತ್ತಿದ್ದರೂ ಜಾಗತೀಕರಣದ ನಂತರದ ಕಾಲಘಟ್ಟದಲ್ಲಿ ಸಣ್ಣ ಕೈಗಾರಿಕೆಗಳು ಮೂಲೆಗುಂಪಾಗುತ್ತಲೇ ಬಂದಿದ್ದವು. ಅಂತಹ ನಿರ್ಲಕ್ಷಿತ ವಲಯದ ಪುನಶ್ಚೇತನಕ್ಕೆ ಈ ಸಲ ಉತ್ತೇಜನಕಾರಿ ಘೋಷಣೆಗಳನ್ನು ಮಾಡಿರುವುದು ಸ್ವಾಗತಾರ್ಹ. ವಿತ್ತೀಯ ಕೊರತೆಯನ್ನು ನಿವ್ವಳ ಆಂತರಿಕ ಉತ್ಪನ್ನದ ಶೇ 4.9ಕ್ಕೆ ಮಿತಿಗೊಳಿಸಲು ಗುರಿ ಹಾಕಿಕೊಂಡಿರುವುದು ಕೂಡ ಒಳ್ಳೆಯ ನಿರ್ಧಾರ. ಆದಾಯ ತೆರಿಗೆ ಸ್ತರಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ, ಮಧ್ಯಮ ವರ್ಗದವರ ತೆರಿಗೆ ಹೊರೆಯನ್ನು ಸಣ್ಣ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವಂತಹ ನಿರ್ಧಾರ ಕೈಗೊಂಡಿದ್ದರಿಂದ ಜನಸಾಮಾನ್ಯರ ಮೊಗದಲ್ಲಿ ಒಂದು ಸಣ್ಣ ನಗು ಅರಳುವಂತಾಗಿದೆ. ಆರೋಗ್ಯ ಇಲಾಖೆಯ ಕಡೆಗೂ ಬಜೆಟ್ ಗಮನಹರಿಸಿದ್ದು, ಅನುದಾನದ ಮೊತ್ತವನ್ನು ಹೆಚ್ಚಿಸಲಾಗಿದೆ. ಆರ್ಥಿಕ ನೀತಿಗಳ ನಿರಂತರತೆ ಈ ಆಯವ್ಯಯದ ಹೆಗ್ಗುರುತುಗಳಲ್ಲಿ ಒಂದು. ಬಂಡವಾಳ ವೆಚ್ಚದ ತನ್ನ ಈ ಹಿಂದಿನ ಆದ್ಯತೆಯನ್ನು ಸರ್ಕಾರ ಮುಂದುವರಿಸಿದೆ. ಸಾರ್ವಜನಿಕ ಉದ್ದಿಮೆಗಳ ಭವಿಷ್ಯದ ಬಗೆಗೆ ಯಾವುದೇ ಖಚಿತ ನೀಲನಕ್ಷೆ ಇಲ್ಲ. ಶಿಕ್ಷಣದ ಮೇಲಿನ ವೆಚ್ಚ ಹೆಚ್ಚಳಕ್ಕೆ ತೀರ್ಮಾನಿಸಿ, ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದರೂ ಮೂಲಸೌಕರ್ಯ ವೃದ್ಧಿಗೆ ಕೊಟ್ಟಿರುವ ಗಮನ ಕಡಿಮೆ ಆದಂತಿದೆ. ಉದ್ಯೋಗ ಸೃಷ್ಟಿಯ ಆಸೆಯನ್ನು ಚಿಗುರಿಸಿದ್ದರೂ ಈ ಉದ್ದೇಶಕ್ಕಾಗಿ ಖಾಸಗಿ ವಲಯವನ್ನೇ ಸರ್ಕಾರ ಅವಲಂಬಿಸ
ಬೇಕಿದೆ. ಹೀಗಾಗಿ, ಖಾಸಗಿ ವಲಯ ಹೇಗೆ ಸ್ಪಂದಿಸಲಿದೆ ಎಂಬುದರ ಮೇಲೆ ಈ ಯೋಜನೆಯ ಯಶಸ್ಸು ನಿಂತಿದೆ. ತೆರಿಗೆದಾತರು ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುವಂತೆ ಹೂಡಿಕೆಯ ಲಾಭದ ಮೇಲೆ ವಿಧಿಸುವ ತೆರಿಗೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಆದ್ಯತಾ ವಲಯಗಳನ್ನು ಒಂಬತ್ತು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಆದರೆ, ಅನುದಾನದ ಹಂಚಿಕೆ ಯಾವ ರೀತಿ ಆಗಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ನೆಲದ ವಾಸ್ತವದ ‘ಬಿಸಿ’ಯನ್ನು ತಾಗಿಸಿಕೊಂಡು, ರಾಜಕೀಯ ಒತ್ತಡಗಳಿಗೆ ಬಾಗಿದ ಬಜೆಟ್ ಇದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.