ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ವಿಶ್ವವಿದ್ಯಾಲಯ: ಗುಣಮಟ್ಟ ಹೆಚ್ಚಳಕ್ಕೆ ಸಿಗಲಿ ಆದ್ಯತೆ

Last Updated 23 ಮಾರ್ಚ್ 2023, 22:42 IST
ಅಕ್ಷರ ಗಾತ್ರ

ರಾಜ್ಯದ ಏಳು ನೂತನ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಿರುವ ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಉನ್ನತ ಶಿಕ್ಷಣದ ಹಿತಾಸಕ್ತಿಗಿಂತಲೂ ಹೊಸ ಹುದ್ದೆಗಳನ್ನು ಸೃಷ್ಟಿಸುವಲ್ಲಿ ಇರುವ ರಾಜಕೀಯ ಹಿತಾಸಕ್ತಿಯೇ ಎದ್ದುಕಾಣಿಸುವಂತಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದ ಕ್ಕಿಂತಲೂ ಸಂಸ್ಥೆಗಳನ್ನು ಹುಟ್ಟುಹಾಕುವುದರಲ್ಲಿ ಸರ್ಕಾರಗಳಿಗೆ ಯಾವಾಗಲೂ ಮುತುವರ್ಜಿ ಎನ್ನುವುದಕ್ಕೆ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ರಾಜ್ಯದ ವಿಶ್ವವಿದ್ಯಾಲಯಗಳು ಉದಾಹರಣೆ ಯಂತಿವೆ. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಮೂಲ ಸೌಕರ್ಯಗಳು ಹಾಗೂ ಬೋಧಕ ಸಿಬ್ಬಂದಿಯ ಕೊರತೆಯನ್ನು ಬಗೆಹರಿಸುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸದ ಸರ್ಕಾರ, ಹೊಸ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುತ್ತಿದೆ ಹಾಗೂ ಅವುಗಳಿಗೆ ಕುಲಪತಿಗಳನ್ನು ನೇಮಿಸುವುದರಲ್ಲಿ ಆಸಕ್ತಿ ತೋರಿಸುತ್ತಿದೆ. ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಹಾಗೂ ಬಾಗಲಕೋಟೆಯಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ನಿರ್ಧಾರ ಹೊರಬಿದ್ದ ಐದಾರು ತಿಂಗಳ ನಂತರ ಕುಲಪತಿಗಳನ್ನು ನೇಮಿಸಲಾಗಿದೆ. ಹೊಸ ವಿಶ್ವವಿದ್ಯಾಲಯಗಳ ಬಗ್ಗೆ ಸರ್ಕಾರಕ್ಕೆ ನಿಜವಾಗಿಯೂ ಕಾಳಜಿಯಿದ್ದಲ್ಲಿ, ಈ ನೇಮಕಗಳನ್ನು ಚುನಾವಣೆ ಸಂದರ್ಭದವರೆಗೂ ಕಾಯದೆ ಮೊದಲೇ ಮಾಡಬಹುದಿತ್ತು. ಆದರೆ, ಸರ್ಕಾರಕ್ಕೆ ವಿಶ್ವವಿದ್ಯಾಲಯ ಗಳ ಸಂಖ್ಯೆ ಹೆಚ್ಚಿಸುವುದರಲ್ಲಿ ಉತ್ಸಾಹವಿದೆಯೇ ಹೊರತು, ಇರುವ ವಿಶ್ವವಿದ್ಯಾಲಯಗಳ ಗುಣಮಟ್ಟ ಸುಧಾರಣೆಯ ಬಗ್ಗೆ ಹೆಚ್ಚಿನ ಆಸಕ್ತಿಯಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ರೂಪಿಸುವುದಾಗಿ ಸರ್ಕಾರ ಹೇಳಿಕೊಂಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉನ್ನತ ಶಿಕ್ಷಣದ ವಿಕೇಂದ್ರೀಕರಣ ಸ್ವಾಗತಾರ್ಹ. ಆದರೆ, ಈ ವಿಕೇಂದ್ರೀಕರಣ ಸಮರ್ಪಕ ರೀತಿಯಲ್ಲಿ ಜಾರಿಗೊಳ್ಳದೇ ಹೋದರೆ, ಉನ್ನತ ಶಿಕ್ಷಣ ವ್ಯವಸ್ಥೆ ಮಹತ್ವ ಕಳೆದುಕೊಂಡು, ವಿಶ್ವವಿದ್ಯಾಲಯಗಳು ಜಡ ಸ್ಥಾವರಗಳಾಗಿಯಷ್ಟೇ ಉಳಿಯುತ್ತವೆ.

ವಿಶ್ವವಿದ್ಯಾಲಯವೊಂದರ ಮಹತ್ವ ಇರುವುದು ವಿದ್ಯಾರ್ಥಿಗಳಿಗೆ ನೀಡುವ ಪದವಿಗಳಲ್ಲಿ ಅಲ್ಲ. ಜ್ಞಾನವನ್ನು ಸೃಷ್ಟಿಸುವುದು ಹಾಗೂ ವಿತರಿಸುವುದು ವಿಶ್ವವಿದ್ಯಾಲಯಗಳ ಪ್ರಾಥಮಿಕ ಉದ್ದೇಶ. ಈ ಜ್ಞಾನಕೇಂದ್ರಿತ ಚಟುವಟಿಕೆಗಳ ಒಂದು ರೂಪದಲ್ಲಿ ಪದವಿಗಳನ್ನು ನೀಡಬೇಕೆ ವಿನಾ ಪ್ರಮಾಣಪತ್ರಗಳನ್ನು ನೀಡುವುದಕ್ಕೆ ಮಾತ್ರ ವಿಶ್ವವಿದ್ಯಾಲಯಗಳು ಸೀಮಿತಗೊಳ್ಳಬಾರದು. ದುರದೃಷ್ಟವಶಾತ್‌, ರಾಜ್ಯದ ಈಗಿನ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಕೈತೊಳೆದುಕೊಳ್ಳುವ ಕೆಲಸವನ್ನಷ್ಟೇ ಮಾಡುತ್ತಿವೆ. ಸಂವಾದ ಸಂಸ್ಕೃತಿ ಮತ್ತು ವಿಚಾರಧಾರೆಗಳನ್ನು ರೂಪಿಸುವ ವಿಶ್ವವಿದ್ಯಾಲಯಗಳ ಪರಂಪರೆ ಈಗ ಮಸುಕಾಗಿದೆ. ನಾಡು–ನುಡಿ ಹಾಗೂ ವಿವಿಧ ಜ್ಞಾನಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನೆಗಳು ಮತ್ತು ಚಟುವಟಿಕೆಗಳಿಂದ ಗಮನಸೆಳೆಯುತ್ತಿದ್ದ ವಿಶ್ವವಿದ್ಯಾಲಯ
ಗಳು ವಿವಾದಗಳಿಂದ ಹಾಗೂ ಭ್ರಷ್ಟಾಚಾರ ಪ್ರಕರಣಗಳಿಂದ ಸುದ್ದಿಯಲ್ಲಿವೆ. ನಾಡು–ನುಡಿಗೆ ಗಣನೀಯ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ನೀಡುವ ಗೌರವ ಡಾಕ್ಟರೇಟ್‌ ಪದವಿಗಳು ಕೂಡ ಹೊಳಪು ಕಳೆದುಕೊಂಡಿವೆ. ಸಂಸ್ಕೃತ, ಜಾನಪದ, ಮಹಿಳೆ, ಸಂಗೀತ, ತೋಟಗಾರಿಕೆ ಸೇರಿದಂತೆ ವಿಷಯವಾರು ವಿಶ್ವವಿದ್ಯಾಲಯಗಳು ರಾಜ್ಯದಲ್ಲಿವೆ; ಹಂಪಿಯ ಕನ್ನಡ ವಿಶ್ವವಿದ್ಯಾಲಯ ಸಂಶೋಧನೆಯನ್ನೇ ಮುಖ್ಯ ಉದ್ದೇಶವನ್ನಾಗಿಸಿಕೊಂಡಿದೆ. ಆದರೆ, ಈ ವಿಶ್ವವಿದ್ಯಾಲಯಗಳು ಎಷ್ಟರಮಟ್ಟಿಗೆ ಸೃಜನಶೀಲವಾಗಿವೆ ಎನ್ನುವುದರ ಮೌಲ್ಯಮಾಪನವೇ ಸರಿಯಾಗಿ ನಡೆದಿಲ್ಲ. ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ಬಹುತೇಕ ವಿಶ್ವವಿದ್ಯಾಲಯಗಳು ಅನುದಾನದ ಕೊರತೆಯಿಂದ ಬಳಲುತ್ತಿದ್ದು ಅಪೌಷ್ಟಿಕ ಮಕ್ಕಳಂತಿವೆ.

ಪಿಎಚ್‌.ಡಿ. ವಿದ್ಯಾರ್ಥಿಗಳಿಗೆ ಕಾಯಂ ಬೋಧಕರಷ್ಟೇ ಮಾರ್ಗದರ್ಶನ ಮಾಡಲಿಕ್ಕೆ ಅವಕಾಶ ವಿರುವುದರಿಂದ, ಸಂಶೋಧನೆಯಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳು ಮಾರ್ಗದರ್ಶಕರ ಕೊರತೆ ಎದುರಿಸುತ್ತಿದ್ದಾರೆ. ಕುಲಪತಿಗಳನ್ನು ನೇಮಿಸುವಲ್ಲಿ ಸರ್ಕಾರಕ್ಕಿರುವ ಹುಮ್ಮಸ್ಸು, ಬೋಧಕ ಸಿಬ್ಬಂದಿಯ ನೇಮಕಾತಿಯಲ್ಲಿ ಕಾಣಿಸುತ್ತಿಲ್ಲ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಕಾಯಂ ಬೋಧಕ ಸಿಬ್ಬಂದಿಯ ಕೊರತೆ ಎದುರಿಸುತ್ತಿವೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಅಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರನ್ನು ನೆಚ್ಚಿಕೊಂಡು ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಕೆಲವು ವಿಭಾಗಗಳಲ್ಲಿ ಮುಖ್ಯಸ್ಥರೇ ಇಲ್ಲ; ಮುಖ್ಯಸ್ಥರಿದ್ದಲ್ಲಿ ಬೋಧಕ ಸಿಬ್ಬಂದಿ ಇರುವುದಿಲ್ಲ. ಅತಿಥಿ ಉಪನ್ಯಾಸಕರಿಗೆ ವೇತನ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲು ವಿಶ್ವವಿದ್ಯಾಲಯಗಳು ಹಣದ ಕೊರತೆ ಎದುರಿಸಿರುವ ಉದಾಹರಣೆಗಳಿವೆ. ನಿರ್ದಿಷ್ಟ ಸಂಖ್ಯೆಯ ಕಾಯಂ ಉಪನ್ಯಾಸಕರು ಇಲ್ಲದ ಕಾರಣದಿಂದಾಗಿ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳು ‘ನ್ಯಾಕ್‌’ ಮಾನ್ಯತೆಯಲ್ಲಿ ಹಿನ್ನಡೆ ಎದುರಿಸಿವೆ. ವಿಶ್ವವಿದ್ಯಾಲಯಗಳ ಈ ಅಪೌಷ್ಟಿಕತೆ ಮತ್ತು ನಿಷ್ಕ್ರಿಯತೆಯ ಹೊಣೆಗಾರಿಕೆಯನ್ನು ಸರ್ಕಾರವೇ ಹೊರಬೇಕು. ಸಮರ್ಥ ಬೋಧಕರೇ ಇಲ್ಲದ ಮೇಲೆ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ನಡೆಯುವುದು ಹೇಗೆ? ಮಾರ್ಗದರ್ಶನ ಮಾಡುವವರ ಕೊರತೆಯಿದ್ದಾಗ ಸಂಶೋಧನಾ ಚಟುವಟಿಕೆಗಳು ನಡೆಯುವುದು ಹೇಗೆ ಸಾಧ್ಯ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT