ಸೋಮವಾರ, ಜುಲೈ 4, 2022
24 °C

ಸಂ‍ಪಾದಕೀಯ: ಹುಲಿ ಉಪಟಳವನ್ನು ಬೇಗ ನಿವಾರಿಸಿ ಮಾನವ –ಪ್ರಾಣಿ ಸಂಘರ್ಷ ತಪ್ಪಿಸಿ

ಸಂ‍ಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೊಡಗಿನ ಪೊನ್ನಂಪೇಟೆ ಹಾಗೂ ಅದರ ಸುತ್ತಲಿನ ಹಲವು ಗ್ರಾಮಗಳು ನರಭಕ್ಷಕ ಹುಲಿಯ ಭೀತಿಯಿಂದ ತತ್ತರಿಸಿ ಹೋಗಿವೆ. ಹದಿನೈದು ದಿನಗಳ ಅಂತರದಲ್ಲಿ ಮೂವರು ಕಾರ್ಮಿಕರ ದುರ್ಮರಣಕ್ಕೆ ಕಾರಣವಾಗಿರುವ ಹುಲಿ, 25ಕ್ಕೂ ಅಧಿಕ ಜಾನುವಾರುಗಳನ್ನು ಸಹ ಬಲಿ ಪಡೆದಿದೆ. ಅದರ ದಾಳಿಗೆ ತುತ್ತಾದ ಇನ್ನೊಬ್ಬ ವ್ಯಕ್ತಿಯ ಸ್ಥಿತಿಯೂ ಚಿಂತಾಜನಕವಾಗಿದೆ.

ಹುಲಿ ಭೀತಿಯಿಂದಾಗಿ ಪೊನ್ನಂಪೇಟೆ ಸುತ್ತಲಿನ ಶ್ರೀಮಂಗಲ, ಮಂಚಳ್ಳಿ, ತೆರಾಲು, ತಾವಳಗೇರಿ, ಕುಮಟೂರು, ಬಾಡಗಕೇರಿ, ಬೆಳ್ಳೂರು, ನಿಟ್ಟೂರು, ಹುದಿಕೇರಿ ಮತ್ತಿತರ ಗ್ರಾಮಗಳ ಕಾಫಿ ಎಸ್ಟೇಟ್‌ಗಳಿಗೆ ಹೋಗಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಕಾಳುಮೆಣಸು ಕೊಯ್ಲಿನ ಕೆಲಸ ಬಹುತೇಕ ಸ್ಥಗಿತಗೊಂಡಿದೆ.

ರಾತ್ರೋರಾತ್ರಿ ದೊಡ್ಡಿಗಳಿಗೆ ಹುಲಿ ನುಗ್ಗುತ್ತಿರುವುದರಿಂದ ಎಷ್ಟೋ ರೈತರು ಜಾನುವಾರುಗಳನ್ನು ಇಟ್ಟುಕೊಳ್ಳುವುದು ಸುರಕ್ಷಿತವಲ್ಲ ಎಂದು ನಿರ್ಧರಿಸಿ ಮಾರಾಟ ಮಾಡಲು ಮುಂದಾ ಗಿದ್ದಾರೆ. ಬಾಧಿತ ಗ್ರಾಮಗಳಲ್ಲಿ ಹಲವು ದಿನಗಳಿಂದ ಸಂಜೆಯಾದೊಡನೆ ರಸ್ತೆ ಸಂಚಾರವೇ ಸ್ತಬ್ಧಗೊಳ್ಳು ತ್ತಿದೆ. ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ 150 ಜನರ ತಂಡ, ಸಾಕಾನೆ ಹಾಗೂ ಶ್ವಾನ ಪಡೆಯನ್ನೂ ಕಟ್ಟಿಕೊಂಡು ಗಸ್ತು ತಿರುಗುತ್ತಿದೆ.

ಕಾಡಂಚಿನ ಗ್ರಾಮಗಳಲ್ಲಿ ಬೋನುಗಳನ್ನು ಸಹ ಇಡಲಾಗಿದೆ. ಇಷ್ಟೆಲ್ಲ ಪ್ರಯತ್ನ ನಡೆದರೂ ನರಭಕ್ಷಕ ಇನ್ನೂ ಸೆರೆ ಸಿಕ್ಕಿಲ್ಲ. ಈ ಮಧ್ಯೆ, ಮನುಷ್ಯರ ಜೀವಕ್ಕೆ ಎರವಾದ ಹುಲಿಯನ್ನು ಗುಂಡಿಟ್ಟು ಕೊಲ್ಲಬೇಕೆಂಬ ಒತ್ತಡ ಕೂಡ ಹೆಚ್ಚಾಗಿದೆ. ಆ ಒತ್ತಡದ ಪರಿಣಾಮವೇನೋ ಎನ್ನುವಂತೆ, ‘ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲು ಸಾಧ್ಯವಾಗದಿದ್ದರೆ ಗುಂಡಿಟ್ಟು ಕೊಲ್ಲಬೇಕು’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶವನ್ನೂ ಹೊರಡಿಸಿದ್ದಾರೆ.

ಮಾನವ–ಪ್ರಾಣಿ ಸಂಘರ್ಷ ವರ್ಷದಿಂದ ವರ್ಷಕ್ಕೆ ತೀವ್ರ ಸ್ವರೂಪ ಪಡೆಯುತ್ತಲೇ ಹೊರಟಿದೆ. ಈಗ ನರಭಕ್ಷಕನ ಹಾವಳಿಗೆ ತುತ್ತಾಗಿರುವ ಕೊಡಗು ಜಿಲ್ಲೆಯ ದಕ್ಷಿಣದ ಭಾಗ ಕಾಡಾನೆಗಳ ಉಪಟಳವನ್ನೂ ಎದುರಿಸಿದ ಪ್ರದೇಶವಾಗಿದೆ. ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಧಾವಿಸಲು ಅವುಗಳ ಆವಾಸಸ್ಥಾನದಲ್ಲಿ ಹೆಚ್ಚಿರುವ ಮಾನವ ಚಟುವಟಿಕೆಗಳೇ ಕಾರಣ ಎಂಬುದು ಪರಿಸರತಜ್ಞರು ಹಲವು ವರ್ಷಗಳಿಂದ ಕೊಡುತ್ತಾ ಬಂದಿರುವ ಎಚ್ಚರಿಕೆ. ಅಂತಹ ಎಚ್ಚರಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಾ, ಸೂಕ್ಷ್ಮ ಪರಿಸರದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೂ ಕಾರಣವಾಗುತ್ತಾ ಬಂದ ಅಧಿಕಾರಸ್ಥರು, ಈಗಿನ ಸ್ಥಿತಿಗೆ ಮಾತ್ರ ವನ್ಯಜೀವಿಗಳತ್ತ ಬೊಟ್ಟು ಮಾಡುತ್ತಿದ್ದಾರೆ. ಕೊಡಗಿನಲ್ಲಿ ಕಾಡಿನ ವಿಸ್ತೀರ್ಣ ಕಡಿಮೆ ಆಗುತ್ತಾ ಬಂದಿರುವುದು, ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡ ಈ ಹಿಂದೆ ನಡೆಸಿದ ಸಮೀಕ್ಷೆಯಲ್ಲಿ ಎದ್ದುಕಂಡಿದೆ. ಕಾಫಿ ಎಸ್ಟೇಟ್‌ಗಳ ವಿಸ್ತೀರ್ಣ ಬೆಳೆಯುತ್ತಾ ಹೋಗಿರುವ ಮಾಹಿತಿಯೂ ಆ ವರದಿಯಲ್ಲಿದೆ. ನಾಗರಹೊಳೆ ರಾಷ್ಟ್ರೀಯ ರಕ್ಷಿತಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆವಾಸಸ್ಥಾನಗಳ ಮೇಲೆ ಬಿದ್ದ ಅಧಿಕ ಒತ್ತಡ ಕೂಡ ಅವುಗಳು ಕಾಡಿನಿಂದ ಹೊರಬೀಳಲು ಕಾರಣ ಎಂಬ ವಾದವೂ ಉಂಟು. ಕಾಡಂಚಿನ ಗ್ರಾಮಗಳಲ್ಲಿ ಈಗ ಶುರುವಾಗಿರುವ ಹುಲಿ ಹಾವಳಿಗೆ ಪ್ರಾಯಶಃ ಮೇಲಿನ ಎಲ್ಲ ಅಂಶಗಳೂ ಕಾರಣಗಳಾಗಿರಬಹುದು.

ಜೀವಗಳನ್ನು ಬಲಿ ಪಡೆದ ನರಭಕ್ಷಕನ ಹಾವಳಿ ನಿಲ್ಲಲೇಬೇಕು, ಜನರ ಜೀವ ರಕ್ಷಣೆ ಆಗಬೇಕು ಎಂಬುದರಲ್ಲಿ ಎರಡನೆಯ ಮಾತಿಲ್ಲ. ‌ದುರಂತ ಘಟನೆಗಳು ಒಂದರ ಮೇಲೊಂದು ನಡೆಯುತ್ತಿದ್ದರೂ ಹುಲಿಯ ಚಲನವಲನವನ್ನು ಇನ್ನೂ ಗುರುತಿಸಲು ಸಾಧ್ಯವಾಗದಿರುವುದು ಅರಣ್ಯ ಇಲಾಖೆಯು ಅಳವಡಿಸಿಕೊಂಡ ತಂತ್ರಜ್ಞಾನ ಎಷ್ಟೊಂದು ಕೆಳಮಟ್ಟದಲ್ಲಿದೆ ಎನ್ನುವುದರ ದ್ಯೋತಕ. ಇಲಾಖೆಯು ಎದುರಿಸುತ್ತಿರುವ ಸಿಬ್ಬಂದಿ ಹಾಗೂ ತಾಂತ್ರಿಕ ಸಲಕರಣೆಗಳ ಕೊರತೆಯನ್ನು ಸರ್ಕಾರ ಆದ್ಯತೆಯ ಮೇಲೆ ನೀಗಿಸಬೇಕು.

ಮನುಷ್ಯರ ಸುರಕ್ಷತೆಯಷ್ಟೇ ವನ್ಯಜೀವಿಗಳ ಸಂರಕ್ಷಣೆ ಕೂಡ ಮುಖ್ಯ. ಸಂಘರ್ಷದ ಇಂತಹ ಸಂದರ್ಭಗಳು ಎದುರಾಗುವವರೆಗೆ ಕುಂಭಕರ್ಣ ನಿದ್ರೆಗೆ ಜಾರದೆ, ಪರಿಸರದ ಆಗುಹೋಗುಗಳ ಮೇಲೆ ಅರಣ್ಯ ಇಲಾಖೆಯು ನಿರಂತರ ನಿಗಾ ಇಡಬೇಕು. ಎಲ್ಲ ಜೀವಗಳ ಸುರಕ್ಷತೆಯೂ ಮುಖ್ಯವಾದ್ದರಿಂದ ಇಂತಹ ಘಟನೆಗಳು ಮರುಕಳಿಸದಂತೆ ವಹಿಸಬೇಕಾದ ಮುನ್ನೆಚ್ಚ ರಿಕೆಗಳ ಕುರಿತು ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು