ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋರಿಚ್‌ ಎಸ್ಟೇಟ್‌ನಲ್ಲಿ ಚಿತ್ರನಗರಿ; ವ್ಯಾಪಾರಿ ಉದ್ದೇಶದ ಚಿಂತನೆ

Last Updated 24 ಸೆಪ್ಟೆಂಬರ್ 2019, 20:06 IST
ಅಕ್ಷರ ಗಾತ್ರ

ಬೆಂಗಳೂರಿನ ಕನಕಪುರ ರಸ್ತೆಯ ತಾತಗುಣಿ ಬಳಿ ಇರುವ ರೋರಿಚ್‌ ಮತ್ತು ದೇವಿಕಾರಾಣಿ ಎಸ್ಟೇಟ್‌ನಲ್ಲಿ ಚಿತ್ರನಗರಿ ನಿರ್ಮಿಸುವ ರಾಜ್ಯ ಸರ್ಕಾರದ ಚಿಂತನೆಯು ಬೌದ್ಧಿಕ ದಾರಿದ್ರ್ಯದಿಂದ ಕೂಡಿದ್ದು, ಈ ಯೋಚನೆಯ ಹಿಂದೆ ಸಿನಿಮಾರಂಗದ ಹಿತಾಸಕ್ತಿಗಿಂತಲೂ ವಾಣಿಜ್ಯೋದ್ದೇಶವೇ ಮುಖ್ಯವಾಗಿರುವಂತೆ ಕಾಣಿಸುತ್ತಿದೆ. 468 ಎಕರೆ ಪ್ರದೇಶದ ಈ ಎಸ್ಟೇಟ್‌, ಅಪರೂಪದ ಸಸ್ಯಸಂಕುಲ ಹಾಗೂ ಪಕ್ಷಿಗಳ ಆವಾಸಸ್ಥಾನ.

ಈ ಪ್ರದೇಶವು ಬನ್ನೇರುಘಟ್ಟ ಮತ್ತು ಸಾವನದುರ್ಗ ನಡುವಿನ ‘ಆನೆ ಕಾರಿಡಾರ್’ಗೆ ಕೊಂಡಿಯೂ ಹೌದು. ಇಂಥ ಸೂಕ್ಷ್ಮ ಜೈವಿಕ ಪರಿಸರದಲ್ಲಿ ಚಿತ್ರನಗರಿ ನಿರ್ಮಿಸುವ ಮೂಲಕ ವನ್ಯಜೀವಿಗಳ ಬದುಕಿನಲ್ಲಿ ಹಸ್ತಕ್ಷೇಪ ಮಾಡುವುದು ಪರಿಸರನಾಶದ ಪ್ರಯತ್ನ ಮಾತ್ರವಲ್ಲ, ಅನೈತಿಕತೆಯೂ ಹೌದು. ನಗರಪ್ರದೇಶಕ್ಕೆ ಹೊಂದಿಕೊಂಡಿರುವ ಅರಣ್ಯಪ್ರದೇಶಗಳು ಒಂದೊಂದಾಗಿ ಇಲ್ಲವಾಗುತ್ತಿರುವ ಸಂದರ್ಭದಲ್ಲಿ, ರಾಜಧಾನಿಯ ಶ್ವಾಸಕೋಶದ ರೂಪದಲ್ಲಿ ಕಾರ್ಯನಿರ್ವಹಿಸುವ ಹಸಿರುತಾಣಗಳನ್ನು ಕಾಂಕ್ರೀಟೀಕರಣಗೊಳಿಸುವ ಸರ್ಕಾರದ ಚಿಂತನೆಯು ನಗರದ ಭವಿಷ್ಯಕ್ಕೆ ಮಾರಕವಾದುದು. ಪರಿಸರ ಮಹತ್ವದ ಜೊತೆಗೆ ರೋರಿಚ್‌–ದೇವಿಕಾರಾಣಿ ಎಸ್ಟೇಟ್‌ಗೆ ಸಾಂಸ್ಕೃತಿಕ ಆಯಾಮವೂ ಇದೆ.

ರಷ್ಯಾ ಮೂಲದ ಜನಪ್ರಿಯ ಕಲಾವಿದ ಸ್ವೆಟೊಸ್ಲಾವ್‌ ರೋರಿಚ್‌ ಹಾಗೂ ಅವರ ತಾರಾಪತ್ನಿ ದೇವಿಕಾರಾಣಿ ಅವರ ಕರ್ಮಭೂಮಿಯಾಗಿದ್ದ ಎಸ್ಟೇಟ್‌, ಬಯಲು ಸ್ಮಾರಕದಂತೆ ನಮ್ಮೊಂದಿಗಿರಬೇಕೇ ಹೊರತು, ಚಿತ್ರನಗರಿಯಾಗಿ ಅಲ್ಲ. ಇಂತಹ ಸಾಂಸ್ಕೃತಿಕ ಮಹತ್ವದ ಸ್ಥಳಗಳನ್ನು ಜತನವಾಗಿಡುವ ಕರ್ತವ್ಯ ಸರ್ಕಾರದ್ದು.

ಕರ್ನಾಟಕದ ಮಟ್ಟಿಗೆ ಚಿತ್ರನಗರಿಯ ಕನಸು ನನಸಾಗದಿರುವುದಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯ ಜೊತೆಗೆ ಹುಚ್ಚು ನಿರ್ಧಾರಗಳೂ ಕಾರಣವಾಗಿವೆ. 1970ರ ದಶಕದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಚಿತ್ರನಗರಿಯ ಪ್ರಸ್ತಾವ ಟಿಸಿಲೊಡೆಯಿತು. ರಾಮಕೃಷ್ಣ ಹೆಗಡೆ ಅವರ ಆಡಳಿತ ಅವಧಿಯಲ್ಲಿ ಹೆಸರಘಟ್ಟ ಬಳಿ 300 ಎಕರೆಗೂ ಹೆಚ್ಚು ಜಮೀನು ಗುರುತಿಸಲಾಯಿತು. ವೀರಪ್ಪ ಮೊಯಿಲಿ, ಎಸ್‌.ಎಂ. ಕೃಷ್ಣ ಅವರ ಆಡಳಿತದ ಅವಧಿಯಲ್ಲೂ ಚಿತ್ರನಗರಿಯ ಪ್ರಸ್ತಾವಗಳು ಮಾತುಗಳಲ್ಲೇ ಉಳಿದವು. 2017ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನ ಹೊರವಲಯದಲ್ಲಿ ಚಿತ್ರನಗರಿ ನಿರ್ಮಿಸುವ ಪ್ರಯತ್ನ ನಡೆದು, 110 ಎಕರೆ ಜಮೀನನ್ನೂ ಗುರುತಿಸಲಾಗಿತ್ತು.

ತದನಂತರ ಮುಖ್ಯಮಂತ್ರಿಯಾದ ಎಚ್‌.ಡಿ. ಕುಮಾರಸ್ವಾಮಿ, ‘ಹೈದರಾಬಾದ್‌ನ ರಾಮೋಜಿರಾವ್ ಸ್ಟುಡಿಯೊ ಮಾದರಿಯಲ್ಲಿ ರಾಮನಗರದ ಸಮೀಪ ಬೃಹತ್ ಚಿತ್ರನಗರಿ ನಿರ್ಮಿಸುವುದು ನನ್ನ ಕನಸು’ ಎಂದು ಹೇಳಿದರು. ಈಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಮೈಸೂರು, ರಾಮನಗರಗಳನ್ನು ಕೈಬಿಟ್ಟು ಬೆಂಗಳೂರಿನ ರೋರಿಚ್‌ ಎಸ್ಟೇಟ್‌ನಲ್ಲಿ ಫಿಲ್ಮ್‌ಸಿಟಿ ನಿರ್ಮಿಸುವ ಚಿಂತನೆ ಹರಿಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ, ಅದರಲ್ಲೂ ರೋರಿಚ್‌ ಎಸ್ಟೇಟ್‌ನಲ್ಲಿಯೇ ಚಿತ್ರನಗರಿ ಏಕೆ ಎನ್ನುವ ಪ್ರಶ್ನೆಗೆ ಅವರು ಉತ್ತರ ಕೊಡಬೇಕಾಗಿದೆ. ಹಾಗೆ ನೋಡಿದರೆ, ಚಿತ್ರನಗರಿ ಮೈಸೂರಿನಲ್ಲಿ ರೂಪುಗೊಳ್ಳುವುದು ಎಲ್ಲ ರೀತಿಯಿಂದಲೂ ಸರಿ.

ಹತ್ತಾರು ಅರಮನೆಗಳು–ಕನ್ನಂಬಾಡಿಯ ಸುತ್ತ ಪ್ರೇಕ್ಷಣೀಯ ಸ್ಥಳಗಳು ಸೇರಿದಂತೆ ಚಿತ್ರೀಕರಣಕ್ಕೆ ಸೂಕ್ತವಾದ ಪ್ರಾಕೃತಿಕ, ಸಾಂಸ್ಕೃತಿಕ ಮಹತ್ವದ ಸ್ಥಳಗಳು ಮೈಸೂರಿನ ಸುತ್ತಮುತ್ತ ಬಹಳಷ್ಟಿವೆ. ಬೆಂಗಳೂರಿಗೆ ಕೂಡ ಅದು ಸಮೀಪದ ನಗರ. ವಾಹನ ದಟ್ಟಣೆಯು ಅಲ್ಲಿ ದೊಡ್ಡ ಸಮಸ್ಯೆಯಲ್ಲ. ಹಾಗಾಗಿ ಚಿತ್ರನಗರಿಗೆ ಬೆಂಗಳೂರಿನ ಬದಲು ಮೈಸೂರು ಸೂಕ್ತ ಎನ್ನುವುದನ್ನು ರಾಜ್ಯ ಸರ್ಕಾರ ಅರಿಯಬೇಕು. ಎಲ್ಲವೂ ಬೆಂಗಳೂರಿನಲ್ಲಿಯೇ ಆಗಬೇಕೆನ್ನುವ ಹಟವೂ ಸರಿಯಾದುದಲ್ಲ. ಚಿತ್ರನಗರಿ ಹೆಸರಿನಲ್ಲಿ ಬೆಂಗಳೂರಿನ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸುವುದು ವಿವೇಕದ ನಿರ್ಧಾರವಾಗಲಾರದು.

ರಾಜಧಾನಿಯ ಬೊಜ್ಜನ್ನು ಇನ್ನೆಷ್ಟು ಹೆಚ್ಚಿಸುವುದು? ಹೊಸ ಉದ್ಯಮಗಳನ್ನು–ಘಟಕಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಬೆಂಗಳೂರಿನಾಚೆಯ ಸ್ಥಳಗಳನ್ನು ಯೋಚಿಸುವುದು ಬೆಂಗಳೂರಿಗೇ ಒಳ್ಳೆಯದು. ಅಭಿವೃದ್ಧಿ ಚಟುವಟಿಕೆಗಳನ್ನು ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದಲೂ ಇದು ಸರಿಯಾದ ನಿಲುವು ಆಗಲಿದೆ. ರಿಯಲ್‌ ಎಸ್ಟೇಟ್‌ ಲಾಬಿಗೆ ಮಣಿಯಬಾರದು. ಚಿತ್ರನಗರಿಯನ್ನು ರೋರಿಚ್‌ ಎಸ್ಟೇಟ್‌ನಲ್ಲಿ ನಿರ್ಮಿಸುವ ಚಿಂತನೆಯನ್ನು ಸರ್ಕಾರ ಕೈಬಿಡಬೇಕು. ಹಾಗೆ ನೋಡಿದರೆ, ಸದ್ಯದಮಟ್ಟಿಗೆ ನೆರೆ ಸಂತ್ರಸ್ತರಿಗೆ ಪುನರ್ವಸತಿ ಒದಗಿಸುವುದು ಸರ್ಕಾರಕ್ಕೆ ಆದ್ಯತೆಯಾಗಬೇಕೇ ವಿನಾ ಚಿತ್ರನಗರಿಯ ಕನಸಲ್ಲ. ಸಂತ್ರಸ್ತರ ಸಂಕಟ ತೀರಿದ ನಂತರವೂ ಸಿನಿಮಾರಂಗದ ಕುರಿತು ಸರ್ಕಾರದ ಉತ್ಸಾಹ ಮುಂದುವರಿದಲ್ಲಿ, ತಜ್ಞರೊಂದಿಗೆ ಸಮಾಲೋಚಿಸಿ ಚಿತ್ರನಗರಿಯ ಸ್ಥಳವನ್ನು ನಿರ್ಣಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT