ಸೋಮವಾರ, ಜೂನ್ 27, 2022
24 °C

ಸಂಪಾದಕೀಯ | ಜಿಡಿಪಿ ಕುಸಿತ: ಹೂಡಿಕೆ, ಬೇಡಿಕೆಗೆ ಸಿಕ್ಕೀತೇ ಉತ್ತೇಜನ?

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಅತಿಕೆಟ್ಟ ಸಾಂಕ್ರಾಮಿಕವೊಂದನ್ನು, ತೀವ್ರವಾದ ಆರೋಗ್ಯ ಬಿಕ್ಕಟ್ಟನ್ನು ಕಂಡ ಆರ್ಥಿಕ ವರ್ಷವಾದ 2020–21ರಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಎಷ್ಟಿತ್ತು ಎಂಬುದನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಬಹಿರಂಗಪಡಿಸಿದೆ. ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ಜಿಡಿಪಿಯು ಒಂದಿಡೀ ವರ್ಷದಲ್ಲಿ ಶೂನ್ಯಕ್ಕಿಂತ ಕೆಳಗಿನ ಮಟ್ಟ (ಶೇಕಡ –7.3) ತಲುಪಿದೆ. ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲಿ ಜಿಡಿಪಿ ಕುಸಿದಿದೆ, ನಂತರದ ಎರಡು ತ್ರೈಮಾಸಿಕ ಗಳಲ್ಲಿ ಅಲ್ಪ ಏರಿಕೆ ದಾಖಲಿಸಿದೆ. ಲಾಕ್‌ಡೌನ್‌, ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧ, ಸಾಂಕ್ರಾಮಿಕವು ತೀವ್ರಗತಿಯಲ್ಲಿ ಹರಡಿದ್ದು, ಅದನ್ನು ನಿಭಾಯಿಸಲು ಅಗತ್ಯವಿರುವ ಆರೋಗ್ಯ ಮೂಲಸೌಕರ್ಯ ದೇಶದಲ್ಲಿ ಇಲ್ಲದಿದ್ದುದು... ಇವೆಲ್ಲವೂ ಜಿಡಿಪಿಯ ಈ ಪರಿ ಕುಸಿತಕ್ಕೆ ಕಾರಣಗಳು. ಸಾಂಕ್ರಾಮಿಕವೊಂದು ದಿಢೀರ್ ಎಂದು ಎದುರಾದ ಕಾರಣಕ್ಕೇ ಜಿಡಿಪಿ ಹೀಗೆ ಕುಸಿಯಿತೇ ಅಥವಾ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿನ ವೈಫಲ್ಯಗಳು ಈ ಸ್ಥಿತಿಗೆ ಕಾರಣವಾದವೇ, ನಿಭಾಯಿಸುವ ಬಗೆ ಇನ್ನಷ್ಟು ವೈಜ್ಞಾನಿಕವಾಗಿ ಇದ್ದಿದ್ದರೆ ಜಿಡಿಪಿ ಕುಸಿತ ಈ ಪ್ರಮಾಣದಲ್ಲಿ ಇರುತ್ತಿತ್ತೇ ಎಂಬುದನ್ನು ಇತಿಹಾಸವು ನಿಕಷಕ್ಕೆ ಒಡ್ಡಲಿದೆ. ಈಗಿನ ಕುಸಿತವು ನಿರೀಕ್ಷಿತ. ಅದರಲ್ಲಿ ಅಚ್ಚರಿಗೆ ಕಾರಣವಾಗುವಂಥದ್ದು ಮೇಲ್ನೋಟಕ್ಕೆ ಏನೂ ಕಾಣುತ್ತಿಲ್ಲ. ಈಗ ಕೋವಿಡ್‌ನ ಎರಡನೆಯ ಅಲೆಯು ದೇಶದಾದ್ಯಂತ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿ ಉಂಟುಮಾಡಿದೆ. ಇದರ ಪರಿಣಾಮಗಳು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿವೆ. ಉದ್ಯೋಗ ನಷ್ಟ, ವೇತನ ಕಡಿತದ ವರದಿಗಳು ಕೆಲವು ಕಡೆಗಳಿಂದ ಈಗಾಗಲೇ ಬಂದಿವೆ. 2020–21ರಲ್ಲಿನ ಸರಿ–ತಪ್ಪುಗಳನ್ನು ವಿಮರ್ಶಿಸುತ್ತಲೇ, ಅರ್ಥವ್ಯವಸ್ಥೆಯಲ್ಲಿ ಹೊಸ ಚೈತನ್ಯ ಮೂಡುವಂತೆ ಮಾಡಬೇಕಿರುವ ಸಂದರ್ಭ ಇದು. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈಚೆಗೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಈ ವಿಚಾರವಾಗಿ ಕೆಲವೊಂದಿಷ್ಟು ಹೊಳಹುಗಳು ಸಿಗುತ್ತವೆ. ‘ಸಾಂಕ್ರಾಮಿಕದ ಅಲೆಯು ತಗ್ಗಿದ ನಂತರದಲ್ಲಿ ಆರ್ಥಿಕ ಬೆಳವಣಿಗೆ ಸುಸ್ಥಿರ ಆಗಬೇಕು ಎಂದಾದರೆ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗಬೇಕು’ ಎಂದು ಆರ್‌ಬಿಐ ಹೇಳಿದೆ. ಆರ್ಥಿಕ ಕುಸಿತವನ್ನು ಅನುಭವಿಸುತ್ತಿದ್ದೇವೆ. ಈಗ ಪುನಶ್ಚೇತನದ ಕಡೆ ಮುಖ ಮಾಡಲೇಬೇಕು.

ಆದರೆ, ವಾಸ್ತವದಲ್ಲಿ ಬೇಡಿಕೆ ಹೆಚ್ಚಬಹುದೇ ಎಂಬ ಪ್ರಶ್ನೆ ಇದೆ. ಕೋವಿಡ್‌ನ ಮೂರನೆಯ ಅಲೆ ಬರುತ್ತದೆ ಎಂದು ಕೆಲವು ವರ್ಗಗಳಿಂದ ಅಭಿಪ್ರಾಯ ಬಂದಿದೆ. ಮೂರನೆಯ ಅಲೆಯು ಒಂದು ವೇಳೆ ಅಪ್ಪಳಿಸಿದರೆ, ಆಗ ಸರ್ಕಾರಗಳು ಅಥವಾ ಸ್ಥಳೀಯ ಆಡಳಿತಗಳು ಮತ್ತೆ ಲಾಕ್‌ಡೌನ್‌ ಮೊರೆ ಹೋಗುವುದಿಲ್ಲವೇ? ಕೋವಿಡ್‌ ತಡೆಯಲು ಮತ್ತೆ ಮತ್ತೆ ಲಾಕ್‌ಡೌನ್‌ ಮೊರೆ ಹೋಗುವುದಾದಲ್ಲಿ ಆರ್ಥಿಕ ಪುನಶ್ಚೇತನ ಎಂಬ ಮಾತಿಗೆ ಹೆಚ್ಚಿನ ಅರ್ಥ ಇರುವುದಿಲ್ಲ. ಸಾಂಕ್ರಾಮಿಕ  ತಡೆಯಲು ಲಾಕ್‌ಡೌನ್‌ ಹೊರತಾದ ಮಾರ್ಗೋಪಾಯಗಳನ್ನು ರೂಪಿಸಲೇಬೇಕು. ನಾವು ರೂಪಿಸಿಕೊಂಡಿರುವ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಲಾಕ್‌ಡೌನ್‌ ಅತ್ಯಂತ ಮಾರಕ ಎಂಬ ಅರಿವು ನೀತಿ ನಿರೂಪಕರಿಗೆ ಬರಬೇಕು. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸುವುದು ಮಾತ್ರವೇ ಅಲ್ಲದೆ, ಹೂಡಿಕೆಯನ್ನು ಹೆಚ್ಚು ಮಾಡುವ ಮೂಲಕ ಕೂಡ ಅರ್ಥ ವ್ಯವಸ್ಥೆಯಲ್ಲಿ ಶಕ್ತಿಸಂಚಯ ಸಾಧ್ಯ. ಈಗಿನ ಸಂದರ್ಭದಲ್ಲಿ ಖಾಸಗಿ ವಲಯದಿಂದ ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸಲಾಗದು. ಹೂಡಿಕೆಗಳು ಸರ್ಕಾರಗಳ ಕಡೆಯಿಂದಲೇ ಆಗಬೇಕಿರುವುದು ಅಪೇಕ್ಷಣೀಯ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಷ್ಟರಮಟ್ಟಿಗೆ ಹೂಡಿಕೆಗೆ ಮುಂದಾಗುತ್ತವೆ ಎಂಬುದನ್ನು ಆಧರಿಸಿ ಆರ್ಥಿಕ ಪುನಶ್ಚೇತನದ ಪ್ರಮಾಣ ತೀರ್ಮಾನವಾಗುತ್ತದೆ. ಸಾಮಾನ್ಯರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ ಆಗಬೇಕು ಎಂದಾದರೆ ಹಣದುಬ್ಬರ ನಿಯಂತ್ರಣಕ್ಕೆ ಬರಲೇಬೇಕು, ಜನರಿಗೆ ತಮ್ಮ ಆರ್ಥಿಕ ಜೀವನ ಸುಭದ್ರವೆಂದು ಅನ್ನಿಸಬೇಕು. ಆದರೆ, ತೈಲ ಬೆಲೆ ಪ್ರತಿದಿನವೂ ಜಾಸ್ತಿ ಆಗುತ್ತಿದೆ. ಅದನ್ನು ಹಿತಕರ ಮಟ್ಟದಲ್ಲಿ ಇರಿಸುವ ಮನಸ್ಸು ಕೇಂದ್ರ ಸರ್ಕಾರಕ್ಕೂ ರಾಜ್ಯ ಸರ್ಕಾರಗಳಿಗೂ ಇದ್ದಂತೆ ಕಾಣುತ್ತಿಲ್ಲ. ಹೀಗಿರುವಾಗ ಹಣದುಬ್ಬರ ನಿಯಂತ್ರಣಕ್ಕೆ ಬರುವ ಸಾಧ್ಯತೆ ಕ್ಷೀಣ. ಹಣದುಬ್ಬರವನ್ನು ನಿಯಂತ್ರಿಸುವುದು ಆರ್‌ಬಿಐನ ಕೆಲಸ ಎಂದು ಸರ್ಕಾರಗಳು ಭಾವಿಸಿರುವಂತಿದೆ. ಇದು ಪ್ರಗತಿಗೆ ಪೂರಕವಾದ ಕ್ರಮವಲ್ಲ. ಕೋವಿಡ್‌ ಎರಡನೆಯ ಅಲೆಯಿಂದಾಗಿ ದೇಶದ ಉದ್ಯಮ ವಲಯದ ವಿಶ್ವಾಸ ಕುಂದಿದೆ. ಕಾರ್ಮಿಕ, ಉದ್ಯಮಿ, ಕೃಷಿಕ, ವರ್ತಕ ವರ್ಗಗಳಲ್ಲಿ ವಿಶ್ವಾಸ ಹೆಚ್ಚಿಸಿ, ಆ ಮೂಲಕ ಹಣದ ಚಲಾವಣೆ ಹೆಚ್ಚುವಂತೆ ಮಾಡುವುದು ಸದ್ಯದ ತುರ್ತುಗಳಲ್ಲಿ ಒಂದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು