ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಜಾಗತಿಕ ಜನಸಂಖ್ಯೆ; ಸಂಪನ್ಮೂಲ ಹಂಚಿಕೆ ನ್ಯಾಯ ಸಮ್ಮತವಾಗಿರಲಿ

Last Updated 20 ನವೆಂಬರ್ 2022, 19:30 IST
ಅಕ್ಷರ ಗಾತ್ರ

ವಿಶ್ವದ ಒಟ್ಟು ಜನಸಂಖ್ಯೆಯು 800 ಕೋಟಿಯ ಗಡಿಯನ್ನು ದಾಟಿದೆ ಎಂದು ವಿಶ್ವಸಂಸ್ಥೆಯು ಕಳೆದ ವಾರ ಘೋಷಿಸಿತು. ವಿಶ್ವದ ಜನಸಂಖ್ಯೆಯ ಬೆಳವಣಿಗೆಯ ಮೇಲೆ ಒಂದು ಕಣ್ಣು ಇರಿಸಿರುವವರಿಗೆ ಈ ಘೋಷಣೆಯು ಆಶ್ಚರ್ಯವನ್ನೇನೂ ಮೂಡಿಸಿಲ್ಲ. ಮಾನವ ಜನಾಂಗದ ಬೆಳವಣಿಗೆಯ ದೃಷ್ಟಿಯಿಂದ ನೋಡಿದರೆ, ಜನಸಂಖ್ಯೆ ಈ ಗಡಿಯನ್ನು ದಾಟಿರುವುದು ಮಹತ್ವದ್ದು. ಜನಸಂಖ್ಯೆಯು ಹಿಂದಿನಿಂದಲೂ ಹೆಚ್ಚುತ್ತಲೇ ಇದೆ. ಅದು ದೊಡ್ಡ ಪ್ರಮಾಣದಲ್ಲಿ ಕಡಿಮೆ ಆದ ನಿದರ್ಶನ ಸಿಗುವುದಿಲ್ಲ. ಆದರೆ, ಈಗ ಜನಸಂಖ್ಯೆಯ ಬೆಳವಣಿಗೆಯ ವೇಗ ತಗ್ಗಿದೆ. ಜನಸಂಖ್ಯೆಯು 700 ಕೋಟಿ ಇದ್ದಿದ್ದು, 800 ಕೋಟಿಗೆ ತಲುಪಲು (ಅಂದರೆ, 100 ಕೋಟಿಯಷ್ಟು ಹೆಚ್ಚಾಗಲು) 11 ವರ್ಷಗಳು ಬೇಕಾದವು. ಆದರೆ, ಜನಸಂಖ್ಯೆಯು ಇನ್ನೂ 100 ಕೋಟಿ ಹೆಚ್ಚಾಗಲು 15 ವರ್ಷಗಳು ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿ ಈಗ ಜನಸಂಖ್ಯೆಯ ಹೆಚ್ಚಳ ಪ್ರಮಾಣವು ಶೇಕಡ 1ಕ್ಕಿಂತ ಕಡಿಮೆ ಇದೆ. ಹಿಂದಿನ ಒಂದು ದಶಕದಲ್ಲಿ ಜನಸಂಖ್ಯೆಯಲ್ಲಿ ಆಗಿರುವ ಹೆಚ್ಚಳಕ್ಕೆ ಜಾಸ್ತಿ ಕೊಡುಗೆ ಇದ್ದಿದ್ದು ಭಾರತದ್ದು. ಒಂದು ದಶಕದಲ್ಲಿ ಭಾರತದಲ್ಲಿ ಅಂದಾಜು 18 ಕೋಟಿ ಜನ ಜನಿಸಿದ್ದಾರೆ. ಒಂದು ದಶಕದಲ್ಲಿ ಜನಿಸಿದವರಲ್ಲಿ ಏಷ್ಯನ್ನರ ಸಂಖ್ಯೆ ಅಂದಾಜು 70 ಕೋಟಿ. ಭಾರತವು ಮುಂದಿನ ವರ್ಷದಲ್ಲಿ ‘ವಿಶ್ವದ ಅತ್ಯಂತ ಹೆಚ್ಚಿನ ಜನಸಂಖ್ಯೆ ಯುಳ್ಳ ದೇಶ’ ಎಂಬ ಹಣೆಪಟ್ಟಿ ಹೊತ್ತುಕೊಳ್ಳಲಿದೆ, ಚೀನಾವನ್ನು ಜನಸಂಖ್ಯೆ ವಿಚಾರದಲ್ಲಿ ಹಿಂದಿಕ್ಕಲಿದೆ. ವಿಶ್ವದ ಜನಸಂಖ್ಯೆಯು 2080ರ ಸುಮಾರಿಗೆ ಅಂದಾಜು ಒಂದು ಸಾವಿರ ಕೋಟಿಗೆ ತಲುಪಲಿದ್ದು, ಜನಸಂಖ್ಯೆಯು ಆ ಮಟ್ಟದಿಂದ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ವಿಶ್ವಸಂಸ್ಥೆಯ ವರದಿಯು ಹೇಳಿದೆ. 2100ರವರೆಗೂ ಜನಸಂಖ್ಯೆಯು ಒಂದು ಸಾವಿರ ಕೋಟಿಯಲ್ಲಿ ಸ್ಥಿರವಾಗಲಿದೆ.

ಮುಂದಿನ ದಶಕಗಳಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಚರ್ಚೆಗಳು, ಆದ್ಯತೆಗಳು ಆಫ್ರಿಕಾ ಖಂಡದಲ್ಲಿ ಕೇಂದ್ರೀಕೃತವಾಗಲಿವೆ. ಏಕೆಂದರೆ, ಜನಸಂಖ್ಯೆ ಹೆಚ್ಚಳವು ಆ ಭಾಗದಲ್ಲಿ ಜಾಸ್ತಿ ಇರಲಿದೆ. ಅಲ್ಲಿನ ಜನರಿಗೆ ಉತ್ತಮ ಶಿಕ್ಷಣ, ಆಹಾರ, ಶುದ್ಧ ಗಾಳಿ, ನೀರು ಮತ್ತು ಆರೋಗ್ಯಸೇವೆಗಳ ಲಭ್ಯತೆ ಇಲ್ಲದಿರುವುದು ಕಳವಳಕ್ಕೆ ಕಾರಣವಾಗಲಿದೆ. ಸಹಾರಾ ಮರುಭೂಮಿಯ ದಕ್ಷಿಣಕ್ಕೆ ಇರುವ ಹಲವು ದೇಶಗಳಲ್ಲಿ ಆಹಾರದ ಕೊರತೆ ಈಗಾಗಲೇ ಇದೆ. ಅಲ್ಲಿನ ಜನಸಂಖ್ಯೆಯು ಮುಂದಿನ ಮೂರು ದಶಕಗಳಲ್ಲಿ ಎರಡು ಪಟ್ಟು ಹೆಚ್ಚಾಗಲಿದೆ. ಆದರೆ ಅದೇ ಪ್ರಮಾಣದಲ್ಲಿ ಅಲ್ಲಿನ ಸಂಪನ್ಮೂಲಗಳಲ್ಲಿ ಹೆಚ್ಚಳ ಆಗುವುದಿಲ್ಲ. ಜನಸಂಖ್ಯೆ ಏರಿಕೆ ಕಂಡಮಾತ್ರಕ್ಕೇ ಅದೊಂದು ಸಮಸ್ಯೆ ಆಗುವುದಿಲ್ಲ. ಆದರೆ ಜನಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಸಂಪನ್ಮೂಲಗಳು ಲಭ್ಯವಾಗದಿದ್ದರೆ ಸಮಸ್ಯೆ ತಲೆದೋರುತ್ತದೆ. ಅಭಿವೃದ್ಧಿ ಹೊಂದಿರುವ ಬಹುತೇಕ ದೇಶಗಳಲ್ಲಿ ಜನಸಂಖ್ಯೆ ಕಡಿಮೆ ಆಗುತ್ತಿದೆ. ಹಲವು ದೇಶಗಳು ತಮ್ಮಲ್ಲಿನ ಜನಸಂಖ್ಯೆಯ ಹೆಚ್ಚಳಕ್ಕೆ ಪ್ರಯತ್ನ ನಡೆಸಿವೆಯಾದರೂ, ಜಗತ್ತಿನ ಸಂಪನ್ಮೂಲಗಳನ್ನು ನ್ಯಾಯಸಮ್ಮತವಾಗಿ, ಸಮಾನವಾಗಿ ಮರುಹಂಚಿಕೆ ಮಾಡುವ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಎಲ್ಲಿಯೂ ನಡೆದಿಲ್ಲ. ಜಾರಿಯಲ್ಲಿರುವ ಕೆಲವು ಯೋಜನೆಗಳು ಸಮಸ್ಯೆಯನ್ನು ತೃಣಮಾತ್ರವೂ ಬಗೆಹರಿಸುವುದಿಲ್ಲ.

ಈಗ ಇರುವ 800 ಕೋಟಿ ಜನರನ್ನು ಹಾಗೂ ಮುಂದೆ ಜನಿಸಬಹುದಾದ 200 ಕೋಟಿ ಜನರನ್ನು ಸಲಹಲು ಅಗತ್ಯವಿರುವಷ್ಟು ಸಂಪನ್ಮೂಲವು ಭೂಮಿಯ ಮೇಲೆ ಇದೆ. ಆದರೆ ಆ ಸಂಪನ್ಮೂಲದ ಮರುಹಂಚಿಕೆ ಆಗಬೇಕಷ್ಟೇ. ಈಗ ಸಂಪನ್ಮೂಲಗಳನ್ನು ಕೆಲವರು ಮಾತ್ರ ಬಳಸುತ್ತಿದ್ದಾರೆ. ಇದು ಮುಂದಿನ ವರ್ಷಗಳಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸಂಘರ್ಷಗಳಿಗೆ ಕಾರಣವಾಗಬಹುದು. ಸಮಾನ ಅಭಿವೃದ್ಧಿ ಸಾಧ್ಯವಾಗದಿದ್ದರೆ ದೇಶಗಳ ಒಳಗೂ ಅಸಮಾನ ಜನಸಂಖ್ಯಾ ಬೆಳವಣಿಗೆ ಆಗಬಹುದು. ಇದಕ್ಕೆ ಬಹುದೊಡ್ಡ ನಿದರ್ಶನ ಭಾರತದಲ್ಲೇ ಇದೆ. ಭಾರತದ ಕೆಲವು ರಾಜ್ಯಗಳಲ್ಲಿ ಮರಣ ಪ್ರಮಾಣವು ಜನನ ಪ್ರಮಾಣಕ್ಕಿಂತ ಹೆಚ್ಚಿದ್ದರೆ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಜನನ ಪ್ರಮಾಣವು ಮರಣ ಪ್ರಮಾಣಕ್ಕಿಂತ ಹೆಚ್ಚಿದೆ. ಅಭಿವೃದ್ಧಿಯ ಅಸ್ತ್ರದಿಂದ ಮಾತ್ರ ಜನಸಂಖ್ಯೆಯ ಹೆಚ್ಚಳವನ್ನು ನಿಯಂತ್ರಿಸಲು ಸಾಧ್ಯ. ಜನಸಂಖ್ಯೆಯ ನಿಯಂತ್ರಣಕ್ಕೆ ಚೀನಾದಲ್ಲಿ ಜಾರಿಯಲ್ಲಿದ್ದ ಕ್ರಮಗಳು ಒಳಿತಿಗಿಂತ ಹೆಚ್ಚು ಕೆಡುಕನ್ನು ಉಂಟುಮಾಡುತ್ತವೆ. ಇದೇ ವೇಳೆ, ಲಭ್ಯ ಸಂಪನ್ಮೂಲಗಳನ್ನು ಯಾರೂ ಅತಿಯಾಗಿ ಬಳಕೆ ಮಾಡಿಕೊಳ್ಳದಂತೆ ಹಾಗೂ ಸಂಪನ್ಮೂಲಗಳನ್ನು ದುರ್ಬಳಕೆ, ಪೋಲು ಮಾಡದಂತೆ ನಿಗಾ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT