ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ದ್ವೇಷ ಭಾಷಣಗಳಿಗೆ ‘ಸುಪ್ರೀಂ’ ಚಾಟಿ: ಧಾರ್ಮಿಕ ಮುಖಂಡರೇ ದಾಳ

Last Updated 3 ಮೇ 2022, 19:30 IST
ಅಕ್ಷರ ಗಾತ್ರ

ದೇಶದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರನ್ನು ಉದ್ದೇಶಿಸಿ ಕೆಲವರು ಮಾಡುತ್ತಿರುವ ದ್ವೇಷದ ಭಾಷಣಗಳನ್ನು ಸುಪ್ರೀಂ ಕೋರ್ಟ್‌ ತೀಕ್ಷ್ಣವಾಗಿ ಖಂಡಿಸಿದೆ. ದ್ವೇಷದ ಭಾಷಣಗಳು ಮತ್ತೆ ಮತ್ತೆ ಕೇಳಲಾರಂಭಿಸಿವೆ, ತೀರಾ ಒರಟು ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ‘ಧಾರ್ಮಿಕ’ ಎಂದು ಕರೆಸಿಕೊಂಡ ವೇದಿಕೆಗಳಿಂದ ವಿಷಕಾರಿ ಮಾತುಗಳನ್ನು ಆಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್‌ ಹೇಳಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ದ್ವೇಷ ಭಾಷಣ ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸುವಂತೆ ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳಿಗೆ ಹೇಳಿದೆ. ಕೋರ್ಟ್‌ ಮಧ್ಯಪ್ರವೇಶವು ಒಂದಿಷ್ಟು ಪರಿಣಾಮ ಉಂಟುಮಾಡಿರುವುದು ಕಾಣಿಸುತ್ತಿದೆ. ಕೋರ್ಟ್‌ ಸೂಚನೆಯ ನಂತರದಲ್ಲಿ, ಉತ್ತರಾಖಂಡದ ರೂರ್ಕಿ ಎಂಬಲ್ಲಿ ಧರ್ಮ ಸಂಸತ್ ಆಯೋಜನೆಗೆ ಅಲ್ಲಿನ ಆಡಳಿತವು ಅವಕಾಶ ಕೊಟ್ಟಿಲ್ಲ. ನ್ಯಾಯಾಲಯವು ಈ ಎರಡು ರಾಜ್ಯಗಳ ಸರ್ಕಾರಗಳಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ದ್ವೇಷದ ಭಾಷಣ ತಡೆಯಲು ಮುಂಚಿತವಾಗಿಯೇ ಏಕೆ ಕ್ರಮ ಕೈಗೊಳ್ಳಲಿಲ್ಲ ಹಾಗೂ ಅಂತಹ ಭಾಷಣ ಮಾಡಿದವರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ಕೋರ್ಟ್‌ ಪ್ರಶ್ನಿಸಿದೆ. ಇಂತಹ ‍ಪ್ರಕರಣಗಳಲ್ಲಿ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಲೇಬೇಕು ಎಂದು ಕೂಡ ಕೋರ್ಟ್‌ ಸ್ಪಷ್ಟಪಡಿಸಿದೆ.

ಡಿಸೆಂಬರ್‌ನಲ್ಲಿ ಹರಿದ್ವಾರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಗಾಜಿಯಾಬಾದ್‌ನ ದೇವಸ್ಥಾನವೊಂದರ ಮುಖ್ಯ ಅರ್ಚಕ ನರಸಿಂಹಾನಂದ ಸರಸ್ವತಿ ಅವರು ಮುಸ್ಲಿಮರ ಹತ್ಯೆಗೆ ಕರೆ ನೀಡಿದ್ದರು. ಪೊಲೀಸರು ಬಹಳಷ್ಟು ಹಿಂದೆ–ಮುಂದೆ ನೋಡಿ ನಂತರ ನರಸಿಂಹಾನಂದ ಅವರನ್ನು ಬಂಧಿಸಿದರು. ಆದರೆ, ಜಾಮೀನು ಪಡೆದು ಹೊರಬಂದ ನಂತರವೂ ನರಸಿಂಹಾನಂದ ಅವರು ಉದ್ರೇಕಕಾರಿ ಭಾಷಣ ಮಾಡುತ್ತಿದ್ದಾರೆ. ಈ ರೀತಿ ಪ್ರಚೋದನಕಾರಿಯಾಗಿ ಭಾಷಣ ಮಾಡುತ್ತಿರುವವರು ಹಲವರಿದ್ದಾರೆ. ಹಿಂದೂ ಧರ್ಮವು ಅಪಾಯದಲ್ಲಿದೆ, ಧರ್ಮವನ್ನು ರಕ್ಷಿಸಲು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಬೇಕು ಎಂದು ಕರೆ ನೀಡುತ್ತಿದ್ದಾರೆ. ಬಹುಸಂಖ್ಯಾತರಲ್ಲಿ ತಾವು ಬಲಿಪಶುಗಳಾಗಿದ್ದೇವೆ ಎಂಬ ಭಾವನೆ ಮೂಡಿಸುವ, ಎಲ್ಲರನ್ನೂ ಸಮಾನವಾಗಿ ಕಾಣುವ ಸಂವಿಧಾನವನ್ನು ಪರೋಕ್ಷವಾಗಿ ಹಾಗೂ ನೇರವಾಗಿ ದೂಷಿಸುವ ಕೆಲಸ ಆಗುತ್ತಿದೆ. ದ್ವೇಷ ಹರಡುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರು ಮುಂದಾಗುತ್ತಿಲ್ಲ. ಡಿಸೆಂಬರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಯಾವುದೇ ಸಮುದಾಯದ ವಿರುದ್ಧ ನಿರ್ದಿಷ್ಟವಾಗಿ ಯಾವುದೇ ಮಾತು ಆಡಿಲ್ಲ’ ಎಂದು ದೆಹಲಿ ಪೊಲೀಸರು ಈಚೆಗೆ ಸುಪ್ರೀಂ ಕೋರ್ಟ್‌ಗೆ ಹೇಳಿದ್ದರು. ಆದರೆ ಆ ಕಾರ್ಯಕ್ರಮದಲ್ಲಿ ಆಡಿದ ಬಹುತೇಕ ಮಾತುಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದವು ಎಂಬುದು ಸ್ಪಷ್ಟ. ಹೆಚ್ಚು ಸಮರ್ಪಕವಾಗಿರುವ ಪ್ರಮಾಣಪತ್ರ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯವೇ ಹೇಳಬೇಕಾಯಿತು.

ಕೋಮು ಪ್ರಚೋದನಕಾರಿ ಭಾಷಣಗಳನ್ನು ಧಾರ್ಮಿಕ ವೇದಿಕೆಗಳಿಂದ ಮಾತ್ರವೇ ಮಾಡುತ್ತಿಲ್ಲ. ಧರ್ಮವು ಅಪಾಯದಲ್ಲಿ ಇದೆ ಎಂಬ ಮಾತುಗಳನ್ನು ಶುದ್ಧ ಧಾರ್ಮಿಕ ಮನಸ್ಸಿನ ವ್ಯಕ್ತಿಗಳು ಹೇಳುತ್ತಿಲ್ಲ. ಧರ್ಮ ಆಧಾರಿತ ರಾಜಕಾರಣದಲ್ಲಿ ತೊಡಗಿರುವವರುಇಂತಹ ಮಾತುಗಳನ್ನು ಹೇಳುತ್ತಿದ್ದಾರೆ. ಕೆಲವು ಧಾರ್ಮಿಕ ನಾಯಕರು ರಾಜಕೀಯ ನಾಯಕರಿಂದ ಒಂದಿಷ್ಟು ಪ್ರೇರಣೆ ಪಡೆದಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ದ್ವೇಷ ಮೂಡಿಸುವುದು ಕೂಡ ಒಂದು ರಾಜಕೀಯ ಉದ್ದೇಶ ಹೊಂದಿದೆ. ಧಾರ್ಮಿಕ ವೇದಿಕೆಗಳಿಂದ ನಡೆಯುವ ದ್ವೇಷ ಭಾಷಣಗಳಿಗೆ ಬರುವ ರಾಜಕೀಯ ಪ್ರತಿಕ್ರಿಯೆಗಳು ಇದನ್ನು ಸ್ಪಷ್ಟಪಡಿಸುತ್ತವೆ. ನೂರಕ್ಕೂ ಹೆಚ್ಚು ಮಂದಿ ನಿವೃತ್ತ ಅಧಿಕಾರಿಗಳು ಮತ್ತು ಮಾಜಿ ರಾಯಭಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ದ್ವೇಷ ಭಾಷಣದ ವಿಚಾರದಲ್ಲಿ ಪ್ರಧಾನಿಯವರ ಮೌನವು ಸರಿಯಲ್ಲ ಎಂದೂ ಅವರು ಹೇಳಿದ್ದಾರೆ. ಧರ್ಮದ ಆಧಾರದಲ್ಲಿ ಮಾಡುವ ರಾಜಕಾರಣವು ಯಾರಿಗೂ ಒಳಿತು ಮಾಡುವುದಿಲ್ಲ. ಬಹುಸಂಖ್ಯಾತರನ್ನು ರಕ್ಷಿಸುತ್ತೇವೆ ಎಂದು ಹೇಳಿಕೊಳ್ಳುತ್ತ, ಅಲ್ಪಸಂಖ್ಯಾತರನ್ನು ಕೆಟ್ಟದ್ದಾಗಿ ಚಿತ್ರಿಸುವ ರಾಜಕಾರಣದಿಂದ ಬಹುಸಂಖ್ಯಾತ ಸಮುದಾಯದವರಿಗೆ ವಾಸ್ತವದಲ್ಲಿ ಯಾವ ಪ್ರಯೋಜನವೂ ಆಗುವುದಿಲ್ಲ. ಇಂತಹ ರಾಜಕಾರಣವು ಸಮಾಜವನ್ನು ಇನ್ನಷ್ಟು ಒಡೆಯುತ್ತದೆಯೇ ವಿನಾ, ಸಮಾಜದ ಅಗತ್ಯಗಳನ್ನು ಈಡೇರಿಸುವುದಿಲ್ಲ. ಹೇಳಿಕೊಳ್ಳಲು ಯಾವ ಸಾಧನೆಯೂ ಇಲ್ಲದ ರಾಜಕಾರಣಿಗಳು ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಾರೆ. ಕೆಲವು ಧಾರ್ಮಿಕ ವ್ಯಕ್ತಿಗಳು ಇಂತಹ ರಾಜಕಾರಣಿಗಳ ಕೈಯಲ್ಲಿ ದಾಳವಾಗುತ್ತಿದ್ದಾರೆ. ಇದು ಪ್ರಸ್ತುತ ಕಾಲಘಟ್ಟದ ಅತ್ಯಂತ ವಿಷಾದಕರ ವಿದ್ಯಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT