ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕನಸುಗಳ ಕಣ್ಕಟ್ಟು ಸಾಕು ಸಮಸ್ಯೆಗಳಿಗೆ ಮುಕ್ತಿ ಬೇಕು

Last Updated 20 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ರಾಜಧಾನಿಯನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವ ಆಶಯದ ‘ಬೆಂಗಳೂರು ಮಿಷನ್‌–2022’ ಅನ್ನು ರಾಜ್ಯ ಸರ್ಕಾರ ಇದೀಗ ಬಿಡುಗಡೆ ಮಾಡಿದೆ. ಸುಗಮ ಸಂಚಾರ, ಜನ ಸಂಪರ್ಕ, ಸ್ವಚ್ಛ ಹಾಗೂ ಹಸಿರು ಬೆಂಗಳೂರು ಎಂಬ ಆದ್ಯತಾ ವಲಯಗಳನ್ನು ಅದರಲ್ಲಿ ಗುರುತಿಸಲಾಗಿದೆ. ಕಳೆದ ಎರಡು ದಶಕಗಳಲ್ಲಿ ಏನಾಗಿದೆ ನೋಡಿ. ಯದ್ವಾತದ್ವಾ ಬೆಳೆದ ಬೆಂಗಳೂರಿನ ಯಾವುದೇ ಭಾಗದಲ್ಲೂ ಸುಗಮ ಸಂಚಾರಕ್ಕೆ ಆಸ್ಪದವೇ ಇಲ್ಲದೆ ಜನ ಏದುಸಿರು ಬಿಡುವಂತಾಗಿದೆ.

ಇಲ್ಲಿನ ಬನ್ನೇರುಘಟ್ಟ ರಸ್ತೆಯನ್ನಂತೂ ‘ಜಗತ್ತಿನ ಅತಿದೊಡ್ಡ ಪಾರ್ಕಿಂಗ್‌ ಪ್ರದೇಶ’ವೆಂದು ಕುಹಕವಾಡಲಾಗುತ್ತದೆ. ಮಂಡೂರಿನ ತ್ಯಾಜ್ಯದ ಬೆಟ್ಟದಂತೆಯೇ ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಕೂಡ ಕರಗದೆ ಹಾಗೇ ಉಳಿದಿದೆ. ಕೆರೆ–ಕಾಲುವೆಗಳ ಒತ್ತುವರಿ ಕೂಡ ನಿರಾತಂಕವಾಗಿ ಮುಂದುವರಿದಿದೆ. ಬಿಬಿಎಂಪಿಯಿಂದ ಯಾವುದೇ ನಾಗರಿಕ ಸೇವೆಯನ್ನು ಪಡೆಯುವುದು ಎಷ್ಟೊಂದು ದುಸ್ತರ ಎನ್ನುವುದು ಅನುಭವಿಸಿದವರಿಗೆ ಮಾತ್ರ ಗೊತ್ತು. 2000ದಿಂದ ಈಚೆಗೆ ರಾಜ್ಯದ ಆಡಳಿತದ ಹೊಣೆ ಹೊತ್ತವರ ಘೋಷಣೆಗಳಲ್ಲಿ ‘ವಿಷನ್‌’ ಹಾಗೂ ‘ಮಿಷನ್‌’ ಎಂಬ ಪದಗಳು ಕ್ಲೀಷೆ ಎನಿಸುವಷ್ಟು ಬಳಕೆಯಾಗಿವೆ.

ಜಾಗತಿಕ ಮಟ್ಟದ ಸೌಕರ್ಯಗಳ ಕನಸುಗಳನ್ನು ತೇಲಿಬಿಡುವುದು, ಸಮಸ್ಯೆಗಳು ಬಿಗಡಾಯಿಸಿದಾಗ ಅಸಹಾಯಕರಾಗಿ ಕೈಚೆಲ್ಲುವುದು ರಾಜಕೀಯ ನಾಯಕರಿಗೆ ಹೊಸದೇನಲ್ಲ. ಈ ಹಿಂದೆ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ನಾಯಕರೊಬ್ಬರು ನಗರದ ನಾಲ್ಕೂ ದಿಕ್ಕುಗಳನ್ನು ಶರವೇಗದಲ್ಲಿ ತಲುಪಲು ಸಾಧ್ಯವಾಗುವಂತಹ ಸುರಂಗ ರಸ್ತೆಜಾಲವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಆ ಸುರಂಗ ರಸ್ತೆಜಾಲದ ಯೋಜನೆ ಎಲ್ಲಿಗೆ ಬಂತು ಎಂಬುದನ್ನು ಜನರೀಗ ಲಾಂದ್ರ ಹಿಡಿದು ಜಾಲಾಡಬೇಕು. ಕಳೆದ 20 ವರ್ಷಗಳಲ್ಲಿ ಆಡಳಿತ ನಡೆಸಿದ ಎಲ್ಲ ಮುಖ್ಯಮಂತ್ರಿಗಳು ಬೆಂಗಳೂರಿಗೆ ಘೋಷಿಸಿದ ಯೋಜನೆಗಳು, ಒದಗಿಸಿದ ಅನುದಾನದ ವಿವರಗಳ ಮೇಲೆ ಕಣ್ಣಾಡಿಸಿದರೆ, ಈ ಊರು ನಿಜಕ್ಕೂ ಸಿಂಗಪುರವೇ ಆಗಬೇಕಿತ್ತು. ಆದರೆ, ವಾಸ್ತವ ಏನೆಂಬುದು ಜನರ ಸಂಕಷ್ಟಗಳನ್ನು ನೋಡಿದಾಗ ಅರ್ಥವಾಗುತ್ತದೆ.

‘ಬೆಂಗಳೂರು ಮಿಷನ್‌–2022’ ವಿವರಗಳಲ್ಲಿ ಗಮನ ಸೆಳೆಯುವಂತಹ ಹೊಸ ಅಂಶಗಳು ಕಡಿಮೆ ಇವೆ. ಈ ನಗರ ಎದುರಿಸುತ್ತಿರುವ ಸಮಸ್ಯೆಗಳನ್ನೆಲ್ಲ ಕ್ರೋಡೀಕರಿಸಿ, ಎಲ್ಲದಕ್ಕೂ ಎರಡು ವರ್ಷಗಳಲ್ಲಿ ಪರಿಹಾರ ಒದಗಿಸುವ ಭರವಸೆಯನ್ನು ನೀಡಲಾಗಿದೆ. ಕಸದ ಸಮಸ್ಯೆ ಶುರುವಾಗಿ ಹತ್ತು ವರ್ಷಗಳಿಗೂ ಮೇಲಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಯ ಕುರಿತು ನಾವಿನ್ನೂ ಮಾತನಾಡುತ್ತಲೇ ಇದ್ದೇವೆ. ಕೆಲವು ಯೋಜನೆಗಳು ಬಂದಷ್ಟೇ ವೇಗದಲ್ಲಿ ಮಾಯವಾಗಿ ಹೋಗಿವೆ.

ಪ್ರತೀ ವಾರ್ಡ್‌ನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಸ್ಥಾಪನೆ ಅಂತಹ ಯೋಜನೆಗಳಲ್ಲಿ ಒಂದು. ಜೋರಾಗಿ ಮಳೆ ಸುರಿದರೆ ಸಾಕು, ಇಲ್ಲಿನ ರಸ್ತೆಗಳ ಬಣ್ಣ ಬಟಾ ಬಯಲಾಗುತ್ತದೆ. ರಸ್ತೆಗೆ ಹರಿಯುವ ಚರಂಡಿ ನೀರು ಒತ್ತುವರಿಯ ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ. ಅತ್ಯಂತ ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಅನುಷ್ಠಾನಕ್ಕೆ ತರಬಹುದಾಗಿದ್ದ ಉಪನಗರ ರೈಲು ಯೋಜನೆಗೆ ಒಪ್ಪಿಗೆ ಪಡೆಯಲು ನಾಗರಿಕರು ಹೆಚ್ಚು–ಕಡಿಮೆ ಮೂರೂವರೆ ದಶಕ ಹೋರಾಟ ನಡೆಸಬೇಕಾಯಿತು ಎಂಬುದನ್ನು ಮರೆಯುವ ಹಾಗಿಲ್ಲ. ಅಲ್ಲಲ್ಲಿ ಪಾರ್ಕಿಂಗ್‌ ಕಾಂಪ್ಲೆಕ್ಸ್‌ ವ್ಯವಸ್ಥೆ ಮಾಡಬೇಕೆಂದು ಜನ ಕೇಳಿದರೆ, ರಸ್ತೆಯಲ್ಲೇ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಿ, ಹಣ ಸುಲಿಗೆ ಮಾಡುತ್ತಿದೆ ಬಿಬಿಎಂಪಿ.

ಕಸದ ಗಬ್ಬುನಾತದಿಂದ ನಗರದ ಬೀದಿಗಳನ್ನು ಮುಕ್ತ ಮಾಡುವಂತಹ, ತ್ಯಾಜ್ಯವನ್ನು ಸಂಸ್ಕರಿಸುವ ಘಟಕಗಳು ನಿರಂತರವಾಗಿ ಕಾರ್ಯ ನಿರ್ವಹಿಸುವಂತಹ, ರಸ್ತೆಯ ಮೇಲಿನ ಹೊರೆ ಕಡಿಮೆ ಮಾಡುವ ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವಂತಹ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವುದು ಬೆಂಗಳೂರಿಗೆ ತುರ್ತಾಗಿ ಬೇಕಿದೆ. ಶುಚಿಯಾದ ಹಾಗೂ ಸುಗಮ ಸಂಚಾರಕ್ಕೆ ಪೂರಕವಾದ ರಸ್ತೆಗಳು, ಕುಡಿಯಲು ಶುದ್ಧ ನೀರು ಹಾಗೂ ಅಗತ್ಯ ನಾಗರಿಕ ಸೇವೆಗಳನ್ನು ತ್ವರಿತವಾಗಿ ನೀಡುವಂತಹ ಆಡಳಿತ ವ್ಯವಸ್ಥೆ ಬೇಕಿದೆ. ಆ ದಿಸೆಯಲ್ಲಿ ‘ಮಿಷನ್‌–2022’ರ ಮೂಲಕ ನಾಲ್ಕಾರು ಹೆಜ್ಜೆಗಳನ್ನಾದರೂ ಮುಂದಿಡುವಂತಾಗಲಿ ಎನ್ನುವುದಷ್ಟೇ ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT